ಆಗಸದಲ್ಲಿ ಹಕ್ಕಿಗಳಾಗಿ ರೋಚಕ ಪ್ರದರ್ಶನ ನೀಡಿದ ವಾಯುಪಡೆ ಯೋಧರು…
ಮೈಸೂರು

ಆಗಸದಲ್ಲಿ ಹಕ್ಕಿಗಳಾಗಿ ರೋಚಕ ಪ್ರದರ್ಶನ ನೀಡಿದ ವಾಯುಪಡೆ ಯೋಧರು…

October 3, 2019

ಮೈಸೂರು,ಅ.2(ಎಂಟಿವೈ)- ಮೈಸೂರಿನ ಬನ್ನಿಮಂಟಪ ಪಂಜಿನ ಕವಾಯತು ಮೈದಾನ ಬುಧವಾರ ಭಾರೀ ಜನಸ್ತೋಮಕ್ಕೆ ಸಾಕ್ಷಿಯಾಯಿತು. ಉರಿ ಬಿಸಿಲನ್ನು ಲೆಕ್ಕಿಸದೇ ಜನ ಕಿಕ್ಕಿರಿದು ತುಂಬಿದ್ದ ಮೈದಾನದಲ್ಲಿ ಮುಗಿಲು ಮುಟ್ಟಿದ ಹರ್ಷೋದ್ಘಾರ. ಬಾನಂಗಳದಲ್ಲಿ ಜಿಗಿದು ಸಾಹಸ ಪ್ರದರ್ಶಿಸಿದ ಭಾರತೀಯ ಯೋಧರ ಧೈರ್ಯ – ಧೀರತನಕ್ಕೆ ನೆರೆದಿದ್ದ ವರು ಭಾವಪೂರ್ವಕವಾಗಿ ನಮಿಸಿದರು.

ದಸರಾ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ `ಏರ್ ಶೋ’ಗೆ ಬೆಳಿಗ್ಗೆ 9 ಗಂಟೆಯಿಂದಲೇ ತಂಡೋಪತಂಡವಾಗಿ ಆಗಮಿಸಿ, ಶೋ ಆರಂಭ ವಾಗುವಷ್ಟರಲ್ಲಿ ಮೈದಾನ ಕಿಕ್ಕಿರಿದು ತುಂಬಿತು. ಬೆಳಿಗ್ಗೆ 11.30ಕ್ಕೆ ಏರ್ ಶೋ ಆರಂಭವಾಗ ಬೇಕಾಗಿತ್ತು. ಆದರೆ ತಾಂತ್ರಿಕ ಕಾರಣದಿಂದ 12.20ಕ್ಕೆ ಆರಂಭವಾಯಿತು. ಆರಂಭದಲ್ಲಿ ಹೆಲಿಕಾಪ್ಟರ್‍ವೊಂದು ಮೈದಾನದಲ್ಲಿ ಪುಷ್ಪಾ ರ್ಚನೆ ಮಾಡಿ, ನೆರೆದಿದ್ದವರಲ್ಲಿ ಕುತೂಹಲ ಹೆಚ್ಚಿಸಿತು. ಸುಡು ಬಿಸಿಲನ್ನು ಲೆಕ್ಕಿಸದೆ ಆಗಸ ದತ್ತ ದೃಷ್ಟಿ ನೆಟ್ಟು ಕಾದು ಕುಳಿತಿದ್ದ ಪ್ರೇಕ್ಷಕರ ಕಣ್ಣಿಗೆ ಪ್ರವಾಹ ಸಂತ್ರಸ್ತರ ರಕ್ಷಣೆಗೆ ಬಳಸಲಾ ಗುವ ಸೇನೆಯ ಬೃಹತ್ ಹೆಲಿಕಾಪ್ಟರ್ ಕಂಡಿತು. ಮೈದಾನದತ್ತ ಧಾವಿಸಿ ಬಂದ ಆ ಹೆಲಿಕಾಪ್ಟರ್ ಕೇವಲ 60 ಅಡಿ ಎತ್ತರದಲ್ಲಿ ಹಾರಾಡುತ್ತಿತ್ತು. ಹಿಂಬಾಗಿಲಿನಿಂದ ಹಗ್ಗವೊಂದನ್ನು ನೆಲಕ್ಕೆ ಬಿಟ್ಟ ಕೂಡಲೇ `ಡೇರ್ ಡೆವಿಲ್’ ತಂಡದ ಶಸ್ತ್ರಸಜ್ಜಿತ 8 ಯೋಧರು ಸರಸರನೆ ಧರೆಗೆ ಧುಮುಕಿದರು. ಹೀಗೆ ಧುಮುಕಿದವರು ಕ್ಷಣ ಮಾತ್ರದಲ್ಲಿ ಎಲ್ಲಾ ಎಂಟು ಮಂದಿ ಯೋಧರು ಶತ್ರುಗಳೊಂದಿಗೆ ಸೆಣಸಾಡಲು ವಿವಿಧ ದಿಕ್ಕುಗಳತ್ತ ತೀಕ್ಷ್ಣ ದೃಷ್ಟಿ ಹಾಯಿಸಿ ಪೊಸಿಷನ್ ತೆಗೆದುಕೊಂಡರು. ಸ್ಟಿಂಗ್ ಆಪರೇಷನ್ ಹಾಗೂ ಕಟ್ಟಡದೊಳಗೆ ಅಡಗಿರುವ ಉಗ್ರರನ್ನು ನಿಗ್ರಹಿಸಲು ಅನುಸರಿಸುವ ವಿಧಾನದ ಅಣುಕು ಪ್ರದರ್ಶನ ನೆರೆದವರಲ್ಲಿ ರೋಮಾಂಚನವನ್ನುಂಟು ಮಾಡಿತು. ಯೋಧರೆಲ್ಲಾ ಧುಮುಕಿದ ಕೂಡಲೇ ಆ ಹೆಲಿಕಾಪ್ಟರ್ ಅಲ್ಲಿಂದ ನಿರ್ಗಮಿಸಿತು. ನಂತರ ಯೋಧರು ನೆಲದಲ್ಲಿ ತೆವಳುತ್ತಾ ಸಾಗಿ ಕಾರ್ಯಾಚರಣೆ ನಡೆಸುವ ಭಂಗಿಯನ್ನು ಪ್ರದರ್ಶಿಸಿದರು.

ಕಲವೇ ನಿಮಿಷದ ಬಳಿಕ `ಎಂಐ -17’ ಹೆಲಿಕಾಪ್ಟರ್ ಆಗಸದಲ್ಲಿ ಪ್ರತ್ಯಕ್ಷವಾಯಿತು. ಈ ಹೆಲಿಕಾಪ್ಟರ್‍ನಲ್ಲಿ ವೀಕ್ಷಕರ ಎದೆ ಬಡಿತ ಹೆಚ್ಚಿಸುವ ರೋಮಾಂಚನಕಾರಿ ಸಾಹಸ ಪ್ರದರ್ಶನಕ್ಕೆ ಸಜ್ಜಾಗಿರುವ `ಆಕಾಶ ಗಂಗಾ’ ತಂಡ ಸದಸ್ಯರಿರುವುದನ್ನು ಧ್ವನಿವರ್ಧಕದಲ್ಲಿ ಪ್ರಕಟಿಸುತ್ತಿದ್ದಂತೆ ಮೈದಾನದಲ್ಲಿ ನೆರೆದಿದ್ದ ಎಲ್ಲರೂ ಕುತೂಹಲದಿಂದ ಆಗಸದತ್ತ ಕಣ್ಣಾಯಿಸಿದರು. ಒಂದು ಸುತ್ತು ಹಾಕಿದ ಆ ಹೆಲಿಕಾಪ್ಟರ್ 9 ಸಾವಿರ ಅಡಿ ಎತ್ತರದಲ್ಲಿ ಮತ್ತೊಂದು ಸುತ್ತು ಹಾಕುತ್ತಿದ್ದಂತೆ ಅದರಿಂದ 10 ಮಂದಿ ಸಾಹಸಿ ಯೋಧರು ವಿವಿಧ ಬಣ್ಣದ ಪ್ಯಾರಾಚೂಟ್‍ನೊಂದಿಗೆ ಧರೆಗೆ ಧುಮುಕಿದರು. ಹೀಗೆ ಜಿಗಿದ ಯೋಧರು ಕಣ್ಣಿಗೆ ಬೀಳುತ್ತಿದ್ದಂತೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ, ಭಾರೀ ಉದ್ಘಾರ ಗೈಯ್ದರು.

ಈ ವೇಳೆ ಕಾರ್ಯಕ್ರಮದ ನಿರೂಪಕರು `ಆಕಾಶ ಗಂಗಾ’ ತಂಡದ ಪರಿಚಯ ಮಾಡಿಕೊಡುತ್ತಾ, ಇದುವರೆಗೆ ಅದು ನೀಡಿರುವ ಪ್ರದರ್ಶನಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಇದರಲ್ಲಿ ಮೊದಲು ಭೂ ಸ್ಪರ್ಶ ಮಾಡುತ್ತಿರುವವರು ಕನ್ನಡಿಗ ಯೋಧ, ಹಾಸನದ ಎಸ್.ಅವಿನಾಶ್ ಎಂದು ಹೆÉೀಳುತ್ತಿದ್ದಂತೆ ಮೈದಾನದ ಎಲ್ಲಾ ದಿಕ್ಕುಗಳಿಂದ ಭಾರೀ ಚಪ್ಪಾಳೆ ಸದ್ದು ಕೇಳಿ ಬಂದಿತು. ಪ್ಯಾರಾಚೂಟ್ ಬ್ಯಾಲೆನ್ಸ್ ಮಾಡಿಕೊಂಡು ಭೂ ಸ್ಪರ್ಶಿಸುತ್ತಿದ್ದಂತೆ ಜೈಕಾರ ಕೇಳಿಬಂದಿತು. ನಂತರ ಒಬ್ಬೊಬ್ಬರು ಸುರಕ್ಷಿತವಾಗಿ ಮೈದಾನಕ್ಕಿಳಿದರು. ಇಬ್ಬರು ಕೈ ಕೈ ಹಿಡಿದು ಆಗಸದಲ್ಲಿ ಹಾರಾಡಿ ರೋಮಾಂಚನ ಉಂಟು ಮಾಡಿದರು. ಇವರ ಸಾಹಸದ ಪ್ಯಾರಾಚೂಟ್ ತ್ರಿವರ್ಣ ಧ್ವಜದಂತೆ ವಿನ್ಯಾಸಗೊಳಿ ಸಲಾಗಿತ್ತು. `ಆಕಾಶ ಗಂಗಾ’ ವಿಂಗ್ ಕಮಾಂಡರ್ ಮಂಗಳೂರು ಮೂಲದ ಬಾಳಿಗ ನೇತೃತ್ವದಲ್ಲಿ ಮೂವರು ಯೋಧರು ಒಬ್ಬೊಬ್ಬರ ಪಾದ ಹಿಡಿದು ಹಾರಾಡುತ್ತಿದ್ದರು. ಇವರಲ್ಲಿ ಒಬ್ಬರು ಕೇಸರಿ, ಮತ್ತೊಬ್ಬರದ್ದು ಬಿಳಿ ಹಾಗೂ ಇನ್ನೊಬ್ಬರದ್ದು ಹಸಿರು ಬಣ್ಣದ ಪ್ಯಾರಾಚೂಟ್ ಆಗಿದ್ದು ರಾಷ್ಟ್ರಧ್ವಜ ಸಂಕೇತಿಸುವಂತಿತ್ತು. ಭೂಮಿ ಸಮೀಪಿಸುತ್ತಿದ್ದಂತೆ ಈ ಮೂವರು ಪ್ರತ್ಯೇಕಗೊಂಡು ಭೂ ಸ್ಪರ್ಶ ಮಾಡಿದರು.

ಜನ ಸ್ನೇಹಿ ಯೋಧರು: ತಾಲೀಮಿನ ವೇಳೆ ಪೊಲೀಸರ ಭದ್ರ ಕೋಟೆಯಿಂದ ಪ್ರೇಕ್ಷಕರಿಂದ ದೂರವೇ ಇದ್ದ ಯೋಧರು, ಇಂದು ಜನರೊಂದಿಗೆ ಬೆರೆತರು. ಡೇರ್ ಡೆವಿಲ್ ಹಾಗೂ ಆಕಾಶ ಗಂಗಾ ತಂಡದ ಯೋಧರು ಪ್ರದರ್ಶನದ ಬಳಿಕ ಮೈದಾನದಲ್ಲಿ ಕಿಕ್ಕಿರಿದು ಸೇರಿದ್ದ ಜನರತ್ತ ಕೈ ಬೀಸಿ ಒಂದು ಸುತ್ತು ಹಾಕಿದರು. ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಏರ್ ಶೋ ನೇತೃತ್ವ ವಹಿಸಿದ್ದ ವಿಂಗ್ ಕಮಾಂಡರ್ ಬಾಳಿಗಾ ಹಾಗೂ ವಿಂಗ್ ಕಮಾಂಡರ್ ಶ್ರೀಕುಮಾರ್ ಸಮ್ಮುಖದಲ್ಲಿ ಈ ಯೋಧರಿಗೆ ನೆನಪಿನ ಕಾಣಿಕೆ ನೀಡಿ, ಗೌರವಿಸಿದರು.

ಬಳಿಕ ಎಲ್ಲಾ ಯೋಧರು ಜನರೊಂದಿಗೆ ಬೆರೆತರು. ಫೋಟೊ ತೆಗೆಸಿಕೊಳ್ಳಲು ಸಮ್ಮತಿಸಿದರು. ಹಲವು ಮಂದಿಗೆ ಯೋಧರೇ ಸೆಲ್ಫಿ ತೆಗೆದುಕೊಟ್ಟರು. ಅದರಲ್ಲಿ ಕನ್ನಡಿಗರಾದ ವಿಂಗ್ ಕಮಾಂಡರ್ ಬಾಳಿಗಾ ಹಾಗೂ ಎಸ್.ಅವಿನಾಶ್ ಕೇವಲ ಫೋಟೋ ತೆಗೆಸಿಕೊಳ್ಳಲು ಮಾತ್ರ ಸೀಮಿತಗೊಳಿಸಬೇಡಿ. ಭಾರತೀಯ ಸೇನೆಗೆ ಹೆಚ್ಚು-ಹೆಚ್ಚು ಮಂದಿ ಸೇರುವಂತೆ ಪ್ರೇರೇಪಿಸಿ ಎಂದು ಸಲಹೆ ನೀಡಿದರು. ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಉಪಸ್ಥಿತರಿದ್ದರು. ಡಿಸಿಪಿ ಮುತ್ತುರಾಜು, ಎನ್.ಆರ್. ವಿಭಾಗದ ಎಸಿಪಿ ಗೋಪಾಲ್ ನೇತೃತ್ವದಲ್ಲಿ ಮೈದಾನದ ಸುತ್ತಲೂ ಬಿಗಿ ಭದ್ರತೆ ಒದಗಿಸಲಾಗಿತ್ತು.

ತಾಂತ್ರಿಕ ದೋಷ ತುರ್ತು ಭೂ ಸ್ಪರ್ಶ..: ದಸರಾ ಏರ್ ಶೋ ಗೆ ಇಂದು ಬೆಳಿಗ್ಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಿಂದ ಮೈಸೂರಿನತ್ತ ಬರುತ್ತಿದ್ದ ಹೆಲಿಕಾಪ್ಟರ್‍ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಪೈಲಟ್ ಮುನ್ನೆಚ್ಚರಿಕೆ ವಹಿಸಿ ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಬಳಿ ತುರ್ತು ಭೂ ಸ್ಪರ್ಶ ಮಾಡಿದ್ದರಿಂದ ನಂತರ ಬೆಂಗಳೂರಿನಿಂದ ಬಂದ ಮತ್ತೊಂದು ಹೆಲಿಕಾಪ್ಟರ್ ಈ ಹೆಲಿಕಾಪ್ಟರ್‍ನಲ್ಲಿದ್ದ ಯೋಧರನ್ನು ಮೈಸೂರಿಗೆ ಏರ್‍ಶೋಗೆ ಕರೆತಂದಿತು. ಈ ಕಾರಣಕ್ಕೆ 45 ನಿಮಿಷ ಏರ್ ಶೋ ವಿಳಂಬವಾಯಿತು.

ವರ್ಷಕ್ಕೆ 5 ಪ್ರದರ್ಶನ..: ಮೂರನೇ ಬಾರಿ ದಸರಾ ಮಹೋತ್ಸವದಲ್ಲಿ `ಆಕಾಶ ಗಂಗಾ’ ತಂಡ ಪ್ರದರ್ಶನ ನೀಡಿದೆ. ಮೈಸೂರಿನ ಜನತೆ ನಿರೀಕ್ಷೆಗೂ ಮೀರಿ ಬೆಂಬಲ ನೀಡಿದ್ದಾರೆ. ಅವಿನಾಶ್ ಕೇವಲ 4 ಸಾವಿರ ಅಡಿ ಎತ್ತರದಲ್ಲಿದ್ದಾಗ ಪ್ಯಾರಾಚೂಟ್ ತೆರೆದರು. ವರ್ಷಕ್ಕೆ 5 ಪ್ರದರ್ಶನ ನೀಡುತ್ತೇನೆ. ಏರ್‍ಫೋರ್ಸ್ ಅಧಿಕಾರಿಗಳ ಪಾಸ್ ಔಟ್ ಪೆರೇಡ್‍ನಲ್ಲಿ, ಏರ್‍ಫೋರ್ಸ್ ದಿನಾಚರಣೆ ಸಂದರ್ಭದಲ್ಲಿ ತಪ್ಪದೇ ಪ್ರದರ್ಶನ ನೀಡುತ್ತೇವೆ. ಉಳಿದಂತೆ ದಸರಾ ಹಾಗೂ ವಡೋದರದಲ್ಲಿ ಪ್ರದರ್ಶನ ನೀಡುತ್ತೇವೆ. ಭಾರತೀಯ ವಾಯುಸೇನೆ, ಭೂ ಸೇನೆ, ನೌಕಾದಳದಲ್ಲಿ ಕರ್ನಾಟಕದ ಸೈನಿಕರ ಸಂಖ್ಯೆ ಕಡಿಮೆಯಿದೆ. ಮೂರು ವಿಭಾಗವೂ ತುಂಬಾ ಚೆನ್ನಾಗಿದೆ. ಯುವಕರು ಸೇನಾ ನೇಮಕಾತಿ ರ್ಯಾಲಿಯಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ಸಾಕಷ್ಟು ಮಾಹಿತಿ ವೆಬ್‍ಸೈಟ್‍ನಲ್ಲಿದೆ. ಹೆಚ್ಚು ಹೆಚ್ಚು ಮಂದಿ ಸೈನ್ಯಕ್ಕೆ ಸೇರಲು ಮುಂದಾಗಬೇಕು. ಕಳೆದ 10 ವರ್ಷದಿಂದ ಸೈನ್ಯದ ವ್ಯವಸ್ಥೆ ಬದಲಾಗಿದೆ.  -ಬಾಳಿಗಾ, ವಿಂಗ್ ಕಮಾಂಡರ್(ಮಂಗಳೂರಿನ ಪುತ್ತೂರು ನಿವಾಸಿ)

Translate »