ಮೈಸೂರು: ಮೈಸೂರು ದಸರಾ ಮಹೋತ್ಸವದಲ್ಲಿ ಯುವ ಸಮೂಹ ವನ್ನು ಒಗ್ಗೂಡಿಸಿ ರಸದೌತಣ ನೀಡುವ ಸಂಭ್ರಮದ `ಯುವ ದಸರಾ’ಗೆ ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ, ವಿದ್ಯುಕ್ತ ಚಾಲನೆ ನೀಡಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಭವ್ಯ ವೇದಿಕೆಯಲ್ಲಿ ಇಂದಿನಿಂದ ಅ.17ರವರೆಗೆ ನಡೆಯಲಿರುವ `ಯುವ ದಸರಾ’ಗೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದ ಸಿಎಂ ಕುಮಾರ ಸ್ವಾಮಿ, ತಾಯಿ ಚಾಮುಂಡೇಶ್ವರಿ ನಾಡಿನ ಎಲ್ಲಾ ಕುಟುಂಬಗಳಿಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸಿ, ದಸರಾ ಹಬ್ಬದ ಶುಭಾಶಯ ಕೋರಿದರು.
ಉನ್ನತ ಶಿಕ್ಷಣ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ದಸರಾ ಉದ್ಘಾಟಿಸಿದ ಇನ್ಫೋಸಿಸ್ ಫೌಂಡೇಷನ್‍ನ ಮುಖ್ಯಸ್ಥೆ ಸುಧಾಮೂರ್ತಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು, ಕೃಷಿ ಸಚಿವ ಶಿವಶಂಕರರೆಡ್ಡಿ, ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‍ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.
ವಿಜಯಪ್ರಕಾಶ್ ಹಾಡಿನ ಮೋಡಿ: `ರಾಜಕುಮಾರ’ ಸಿನಿಮಾದ ಜನಪ್ರಿಯ ‘ಗೊಂಬೆ ಹೇಳುತ್ತೈತೆ…’ ಗೀತೆಯೊಂದಿಗೆ ವೇದಿಕೆ ಏರಿದ ವಿಜಯಪ್ರಕಾಶ್ ಪ್ರೇಕ್ಷಕರಲ್ಲಿ ಸಂಚಲನ ಮೂಡಿಸಿದರು. ಎರಡೂವರೆ ತಾಸಿಗಿಂತಲೂ ಹೆಚ್ಚು ಕಾಲ ವಿಜಯ ಪ್ರಕಾಶ್ ಆಗಮನಕ್ಕೆ ಕಾದು ಕುಳಿತಿದ್ದ ಯುವ ಸಮೂಹ ಕೇಕೆ, ಶಿಳ್ಳೆ, ಚಪ್ಪಾಳೆ ಯೊಂದಿಗೆ ಸಂಭ್ರಮ ವ್ಯಕ್ತಪಡಿಸಿದರು.
‘ಕಿರಿಕ್ ಪಾರ್ಟಿ’ ಚಿತ್ರದ ‘ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ…’, `ಅಯೋಗ್ಯ’ ಸಿನಿಮಾದ `ಏನಮ್ಮಿ ಏನಮ್ಮಿ ಯಾರಮ್ಮಿ ನೀನಮ್ಮಿ ಆಗೋಯ್ತು ನನ್ನ ಬಾಳು ಹೆಚ್ಚು ಕಮ್ಮಿ…’, ‘ಕೋಟಿಗೊಬ್ಬ’ ಚಿತ್ರದ ಯುವಕ-ಯುವತಿಯರು ಸದಾ ಗುನುಗುವ `ಸಾಲುತ್ತಿಲ್ಲವೇ ಸಾಲುತ್ತಿಲ್ಲವೇ…’ ಗೀತೆಯನ್ನು ಹಾಡಿ ರಂಜಿಸಿದರು. `ಚೌಕ’ ಚಿತ್ರದ `ಅಲ್ಲಾಡ್ಸು ಅಲ್ಲಾಡ್ಸು..’ ಗೀತೆ ಹಾಡುವುದರೊಂದಿಗೆ ನೆರೆದಿದ್ದವರನ್ನು ಕುಣಿಸಿದ ಅವರು `ಮಗಳು ಜಾನಕಿ’ ಧಾರಾವಾಹಿ ಶೀರ್ಷಿಕೆ ಗೀತೆ ಕವಿ ಎಚ್.ಎಸ್.ವೆಂಕಟೇಶ್ ಮೂರ್ತಿ ರಚನೆಯ ‘ಊರ ಸೇರಬಹುದೇ ನೀನು ದಾರಿ ಮುಗಿಯದೆ..’ ಎಂದು ಭಾವಪ್ರಧಾನವಾಗಿ ಹಾಡಿ ಕುಣಿದು ಕುಪ್ಪಳಿಸುತ್ತಿದ್ದ ಯುವ ಹೃದಯಗಳಲ್ಲಿ ಭಾವ ಸಂಚಲನ ಮೂಡಿಸಿದರು.
ಬಾವುಕರಾದ ಸಿಎಂ: ಮೊದಲಿಗೆ ಗಾನಗಾರುಡಿಗ ದಿವಂಗತ ಸಿ.ಅಶ್ವತ್ಥ್ ಅವರ ಕಂಠಸಿರಿಯಿಂದ ಮೂಡಿಬಂದು, ಇಂದಿಗೂ ಬೇಡಿಕೆಯ ಗೀತೆಯಾಗಿರುವ `ಒಳಿತು ಮಾಡು ಮನುಸಾ, ನೀ ಇರೋದು ಮೂರು ದಿವಸ…’ ಹಾಡನ್ನು ವಿಜಯ ಪ್ರಕಾಶ್ ಹಾಗೂ ಸಹಗಾಯಕ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗಾಗಿ ಹಾಡಿದರು. ಕೈಗಳಿಂದ ಮುಖವನ್ನು ಮರೆಮಾಚಿಕೊಂಡು ಮೈಮರೆತು ಹಾಡು ಕೇಳುತ್ತಿದ್ದ ಕುಮಾರಸ್ವಾಮಿ, ಬಾವುಕರಾದರು. ಅವರ ಕಣ್ಣಲ್ಲಿ ನೀರು ಜಿನುಗಿತ್ತು.
ನಟಿಯರ ನೃತ್ಯಕ್ಕೆ ಫಿದಾ: ಯುವ ದಸರಾದ ಮೊದಲ ದಿನವಾದ ಇಂದು ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಾನ್ವಿ ಶ್ರೀವಾತ್ಸವ್ ಮೋಹಕ ನೃತ್ಯಕ್ಕೆ ಮೈದಾನದಲ್ಲಿ ಕಿಕ್ಕಿರಿದಿದ್ದ ಯುವ ಸಮೂಹ ಫಿದಾ ಆಗಿತ್ತು. `ತರತರ ಹಿಡಿಸಿದೆ ಮನಸಿಗೆ ನೀನು…’ ಹಾಡಿಗೆ ಹೆಜ್ಜೆ ಹಾಕುತ್ತಾ ವೇದಿಕೆಗೆ ಆಗಮಿಸಿದ ರಾಗಿಣಿ, ಹಲವು ಗೀತೆಗಳ ತುಣುಕುಗಳಿಗೆ ನರ್ತಿಸಿದರು. ಇನ್ನೋರ್ವ ನಟಿ ಸಾನ್ವಿ ಶ್ರೀವಾತ್ಸವ್, ವಿವಿಧ ಹಾಡುಗಳ ತುಣುಕುಗಳಿಗೆ ಹೆಜ್ಜೆ ಹಾಕಿ, ನೆರೆದಿದ್ದ ಯುವಕರಲ್ಲಿ ಸಂಚಲನ ಮೂಡಿಸಿದರು. ನಟಿಯರ ಮನಮೋಹಕ ನೃತ್ಯವನ್ನು ಕಣ್ತುಂಬಿಕೊಂಡ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆ ಮಳೆಗರೆದು ಸಂಭ್ರಮಿಸಿದರು.
ಬೆಳಕಿನ ರಂಗಿನಾಟ: ವೇದಿಕೆ ಸೇರಿದಂತೆ ಮೈದಾನದಲ್ಲಿ ಅಳವಡಿಸಿರುವ ಎಲ್ಲಾ ವಿದ್ಯುತ್ ದೀಪಗಳನ್ನು ಆರಿಸಿ, ಕಗ್ಗತ್ತಲಲ್ಲಿ ಮೂಡಿಸಿದ ಲೇಸರ್ ಬೆಳಕಿನ ರಂಗಿನಾಟ ವಿಶೇಷವಾಗಿತ್ತು. ವೇದಿಕೆ ಕಡೆಯಿಂದ ಹೊರಹೊಮ್ಮಿದ ಬಣ್ಣ ಬಣ್ಣದ ತೀಕ್ಷ್ಣ ಬೆಳಕು ವರ್ಣಲೋಕ ಸೃಷ್ಟಿಸಿತ್ತು. ಬೆಳಕಿನ ಆಟ, ಚೆಲ್ಲಾಟ ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಿದಂತಿತ್ತು. ಎಲ್ಲರೂ ತಮ್ಮ ಮೊಬೈಲ್‍ಗಳಲ್ಲಿ ಲೇಸರ್ ಬೆಳಕಿನಾಟವನ್ನು ಸೆರೆ ಹಿಡಿದುಕೊಂಡು ಸಂಭ್ರಮಿಸಿದರು. ಇದಕ್ಕೂ ಮುನ್ನ ಮೈಸೂರು ವಿಶ್ವವಿದ್ಯಾನಿಲಯ ಲಲಿತಕಲಾ ಕಾಲೇಜಿನ ವಿದ್ಯಾರ್ಥಿಗಳ ತಂಡ ಹಾಗೂ ಮಂಗಳೂರಿನ ಬಾಯ್ಸ್ ಜೋನ್ ತಂಡದ ಕಲಾವಿದರು ಶಿವತಾಂಡವ ನೃತ್ಯವನ್ನು ಪ್ರತ್ಯೇಕವಾಗಿ ಪ್ರದರ್ಶಿಸಿದರು.
ತಡವಾದ ಕಾರ್ಯಕ್ರಮ: ನಿಗಧಿತ ಸಮಯದಲ್ಲಿ ಯುವ ದಸರಾ ಆರಂಭವಾಗಲಿಲ್ಲ. ಸಂಜೆ 6.30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಿದ್ದ ಸಿಎಂ, ಎರಡೂವರೆ ಗಂಟೆ ತಡವಾಗಿ ಆಗಮಿಸಿದರು. ಕೆಲ ನೃತ್ಯಗಳು ಹಾಗೂ ಲೇಸರ್ ಶೋ ವೀಕ್ಷಿಸಿದ ಬಳಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಜಯಪ್ರಕಾಶ್ ಗಾಯನಕ್ಕೆ ಕಾದು ಕುಳಿತಿದ್ದ ಪ್ರೇಕ್ಷಕರ ಉತ್ಸಾಹ ಕುಗ್ಗಿತ್ತು. ತೆರೆದ ಬಸ್‍ನಲ್ಲಿ ಆಗಮಿಸಿದ್ದರಿಂದ ತಡವಾಯಿತು. ಅನಾನುಕೂಲವಾಗಿದ್ದಕ್ಕೆ ವಿಷಾಧಿಸುತ್ತೇನೆಂದು ಸಿಎಂ ಭಾಷಣದ ವೇಳೆ ತಿಳಿಸಿದರು. ಆದರೆ ತಡವಾಗಿ ಬಂದರೂ ವಿಜಯಪ್ರಕಾಶ್, ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದರು. ತಡವಾಯಿತೆಂದು ಬೇಸರದಲ್ಲಿದ್ದ ಯುವ ಸಮೂಹ, ವಿಜಯಪ್ರಕಾಶ್ ಗಾಯನ ಮೋಡಿಯಲ್ಲಿ ಕೊಚ್ಚಿ ಹೋದಂತಿತ್ತು. ಪ್ರೇಕ್ಷಕರ ಅನುಕೂಲಕ್ಕಾಗಿ ಅಳವಡಿಸಿರುವ ಸ್ಕ್ರೀನ್ ತಾಂತ್ರಿಕ ದೋಷದಿಂದ ಕೈಕೊಟ್ಟಿದ್ದು, ಸಂಭ್ರಮದಲ್ಲಿದ್ದವರಿಗೆ ಬೇಸರ ತಂದಿತ್ತು.