ಯುವ ದಸರಾಗೆ ವರ್ಣರಂಜಿತ ತೆರೆ
ಮೈಸೂರು

ಯುವ ದಸರಾಗೆ ವರ್ಣರಂಜಿತ ತೆರೆ

October 7, 2019

ಮೈಸೂರು, ಅ.6(ಎಸ್‍ಬಿಡಿ)- ಆರು ದಿನಗಳಿಂದ ಯುವ ಜನತೆ ಯನ್ನು ಸೂಜಿಗಲ್ಲಿನಂತೆ ಸೆಳೆದು ಮನರಂಜಿಸಿದ ಯುವ ದಸರಾಗೆ ಯಶಸ್ವಿ ತೆರೆ ಬಿದ್ದಿತು. ಮೈಸೂರು ದಸರಾ ಅಂಗವಾಗಿ ಮಹಾ ರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಯುವ ದಸರಾದ ಕಡೆಯ ದಿನವಾದ ಇಂದು ಬಾಲಿವುಡ್‍ನ ಖ್ಯಾತ ಸಂಗೀತ ನಿರ್ದೇಶಕ ಪ್ರೀತಮ್ ಚಕ್ರವರ್ತಿ, ಹಲವು ಜನಪ್ರಿಯ ಗೀತೆ ಗಳನ್ನು ಪ್ರಸ್ತುತಪಡಿಸಿ, ಪ್ರೇಕ್ಷಕರ ರಂಜಿಸಿದರು. ಕಿಕ್ಕಿರಿದಿದ್ದ ಯುವ ಜನತೆ ಕೇಕೆ, ಶಿಳ್ಳೆಯೊಂದಿಗೆ ಕಾರ್ಯಕ್ರಮವನ್ನು ಆಸ್ವಾದಿಸಿದರು.

ಮೈಸೂರಿನ ಯುವ ಡ್ಯಾನ್ಸ್ ಅಕಾಡೆಮಿ ಕಲಾವಿದರು ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯಿಸಿರುವ ಚಿತ್ರಗಳ `ಓ ಬಳ್ಳಿ ಬಾಲೆಯರೇ ನೀವಿದ್ದರೇ ಕೋಲಾಟ…’, `ಇದು ಹೂವಿನಾ ಲೋಕವೇ ಇಲ್ಲಿ ಗೆಳತಿಯರಿಲ್ಲವೇ…’, `ಯಾರೆ ನೀನು
ರೋಜಾ ಹೂವೆ…’, `ದಸರಾ ಬೊಂಬೆ ನಿನ್ನನು ನೋಡಲು…’ ಗೀತೆಗಳ ತುಣುಕಿಗೆ ಆಕರ್ಷಕ ನೃತ್ಯ ಪ್ರದರ್ಶಿಸಿ, ಯುವ ದಸರಾಗೆ ಮತ್ತಷ್ಟು ರಂಗು ನೀಡಿದರು. ಮುಂಬೈನ ಕಿಂಗ್ಸ್ ಯುನೈಟೆಡ್ ತಂಡ, ಕೆ.ಎಂ.ದೊಡ್ಡಿಯ ರೆಬೆಲ್ಸ್ ಡ್ಯಾನ್ಸ್ ಅಕಾಡೆಮಿ, ಮೈಸೂರಿನ ಡಿ-2 ಡ್ಯಾನ್ಸ್ ಅಕಾಡೆಮಿ, ನಿರಂತರ ಹಾಗೂ ರಾಜೇಶ್ ಮತ್ತು ತಂಡದ ನೃತ್ಯ ಪ್ರದರ್ಶನ ಎಲ್ಲರ ಮನ ಸೆಳೆಯಿತು.

ಮೈಸೂರಿನ ಭರತ್ ಮತ್ತು ತಂಡ ನಡೆಸಿಕೊಟ್ಟ ಫ್ಯಾಷನ್ ಶೋ ಆಕ ರ್ಷಕವಾಗಿತ್ತು. ಮಂಡ್ಯದ ಐಶ್ವರ್ಯಗೌಡ ಸೇರಿದಂತೆ ಅನೇಕ ರೂಪ ದರ್ಶಿಗಳು ವಿಭಿನ್ನ ಬಗೆಯ ಉಡುಪಿನೊಂದಿಗೆ ಹೆಜ್ಜೆ ಹಾಕಿ ರಂಜಿಸಿದರು. ನಿಶ್ಚಿತ ಗೌಡ `ಕಳ್ಳಾ ಚಂದಮಾಮ…’ ಹಾಡಿನ ಮೂಲಕ ಪ್ರೇಕ್ಷಕರನ್ನು ಕುಣಿಸಿ ದರು. ಜೆಎಸ್‍ಎಸ್ ಮಹಿಳಾ ಕಾಲೇಜು ವಿದ್ಯಾರ್ಥಿನಿಯರು ವೇದಿಕೆಯಲ್ಲಿ ಕೈಲಾಸವನ್ನೇ ಸೃಷ್ಟಿಸಿ, ಶ್ರೀ ಮಂಜುನಾಥ ಚಿತ್ರದ ಹಾಡುಗಳ ತುಣುಕು, ಸಂಭಾಷಣೆಗೆ ನೃತ್ಯ ಪ್ರದರ್ಶಿಸುವ ಮೂಲಕ ಶಿವ ಸ್ಮರಣೆ ಮಾಡಿದರು. ಪೂಜಾ ಭಾಗವತ್ ಮಹಾಜನ ಸ್ನಾತಕೋತ್ತರ ಕಾಲೇಜು, ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮೈಸೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ತಂಡಗಳು ನೃತ್ಯ ಪ್ರದರ್ಶಿಸಿದವು.

ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ನಿರ್ಮಾಣದ `ಭೈರಾ ದೇವಿ’ ಚಿತ್ರದ ಹಾಡೊಂದು ಯುವ ದಸರಾ ವೇದಿಕೆಯಲ್ಲಿ ಬಿಡುಗಡೆಯಾ ಯಿತು. ಸಂಸದ ಪ್ರತಾಪ್ ಸಿಂಹ, ನಟ ರಮೇಶ್ ಅರವಿಂದ್, ನಟಿ ರಾಧಿಕಾ ಕುಮಾರಸ್ವಾಮಿ, ಚಿತ್ರದ ನಿರ್ದೇಶಕ ಶ್ರೀಜಯ್, ಸಂಗೀತ ನಿರ್ದೇಶಕ ಸೆಂದಿಲ್, ಚಿತ್ರತಂಡದ ರವಿ, ಮೋಹನ್ ಇನ್ನಿತರರು ಈ ವೇಳೆ ಉಪಸ್ಥಿ ತರಿದ್ದರು. ರಾಧಿಕಾ ಕುಮಾರಸ್ವಾಮಿ ಮಾತನಾಡಿ, ಎಷ್ಟೋ ವರ್ಷಗಳ ನಂತರ ಇಷ್ಟೊಂದು ಜನ ಸಮೂಹವಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ರುವುದರಿಂದ ಅತೀವ ಸಂತೋಷವಾಗಿದೆ. ಪ್ರತಿ ವರ್ಷ ದಸರಾವನ್ನು ಟಿವಿಯಲ್ಲಿ ಲೈವ್ ನೋಡುತ್ತಿದ್ದೆ. ಈ ಬಾರಿ ದಸರಾ ಕಾರ್ಯಕ್ರಮದ ವೇದಿಕೆಯಲ್ಲಿ `ಭೈರಾದೇವಿ’ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿದ್ದು ಅವಿಸ್ಮರಣೀಯ ಸಂಗತಿ. ಇದಕ್ಕೆ ಅವಕಾಶ ಕಲ್ಪಿಸಿಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವ ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ರಮೇಶ್ ಅರವಿಂದ ಮಾತನಾಡಿ, 409 ವರ್ಷದಿಂದ ನಡೆದು ಬರುತ್ತಿರುವ ನಾಡಹಬ್ಬದ ಮೂಲಕ ಜಗತ್ತಿನ ಗಮನ ಸೆಳೆಯುವುದರ ಜೊತೆಗೆ ಇದು ನಮ್ಮ ಹಬ್ಬ, ನಮ್ಮೂರ ಹಬ್ಬ ಎಂದು ಸಾಮೂಹಿಕವಾಗಿ ಸೇರಿರುವು ದಕ್ಕಿಂತ ದೊಡ್ಡ ಸಾಧನೆ ಮತ್ತೇನಿದೆ. ಆಗಸದಲ್ಲಿದ್ದ ನಕ್ಷತ್ರಗಳು ಮೈಸೂರಿಗೆ ಇಳಿದಂತೆ ವಿದ್ಯುತ್ ದೀಪಾಲಂಕಾರ ಕಂಗೊಳಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಮೋಹನ್ ಮತ್ತು ತಂಡದ ಕಲಾವಿದರು `ಭೈರಾದೇವಿ’ ಹಾಡಿಗೆ ಅಮೋಘ ನೃತ್ಯ ಪ್ರದರ್ಶಿಸಿದರು.

`ನಟ ಭಯಂಕರ’ ಚಿತ್ರ ನಿರ್ದೇಶಕ ಬಿಗ್‍ಬಾಸ್ ಖ್ಯಾತಿಯ ಪ್ರಥಮ್, ಕನ್ನಡ ಸಿನಿಮಾ ನೋಡಿ, ಪುಸ್ತಕ ಓದಿ, ಕನ್ನಡ ಬಳಸಿ, ಉಳಿಸಿ. ಕನ್ನಡ ಚಿತ್ರಗಳನ್ನು ಚಿತ್ರಮಂದಿರಗಳಲ್ಲೇ ವೀಕ್ಷಿಸಿ, ಪ್ರೋತ್ಸಾಹಿಸಿ. ಹಾಗೆಯೇ ಬಹು ತಾರಾ ಗಣದ, ಬಿಗ್ ಬಜೆಟ್‍ನ ಹಾರರ್, ಕಾಮಿಡಿ `ನಟಭಯಂ ಕರ’ ಚಿತ್ರಕ್ಕೂ ಬೆಂಬಲ ನೀಡಿ ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಚಿತ್ರದ ಟ್ರೇಲರ್ ಪ್ರಸಾರ ಮಾಡಲಾಯಿತು. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ದಂಪತಿ, ಸಂಸದ ಪ್ರತಾಪ್ ಸಿಂಹ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಇನ್ನಿತರ ಅಧಿಕಾರಿ ಗಳು, ಪದಾಧಿ ಕಾರಿಗಳು ಹಾಗೂ ಪೌರಕಾರ್ಮಿಕರನ್ನು ಯುವ ದಸರಾ ಉಪಸಮಿತಿ ಯಿಂದ ಅಭಿನಂದಿಸಲಾಯಿತು. ಅ.1ರಿಂದ ಇಂದಿನವರೆಗೆ 6 ದಿನಗಳ ಕಾಲ ಬಾಲಿವುಡ್ ಗಾಯಕರು, ಸಂಗೀತ ನಿರ್ದೇಶಕರು, ಸ್ಯಾಂಡಲ್‍ವುಡ್ ತಾರೆಯರು, ರ್ಯಾಪ್ ಸಿಂಗರ್‍ಗಳು, ನೃತ್ಯ ಕಲಾವಿದರು ಭರಪೂರ ಮನರಂಜನೆ ನೀಡಿದರು. ನಿತ್ಯ ಯುವ ಜನತೆ ಸೇರಿದಂತೆ ಎಲ್ಲಾ ವಯೋಮಾನದ ಪ್ರೇಕ್ಷಕರು ಕಿಕ್ಕಿರಿದು, ಈ ಬಾರಿಯ ಯುವ ದಸರಾವನ್ನು ಯಶಸ್ವಿಗೊಳಿಸಿದರು.

Translate »