ಮೈಸೂರು, ಅ.4(ಎಸ್‍ಬಿಡಿ)-ಕನ್ನಡದ ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ, ನವಿರು ಧ್ವನಿಯ ಸಂಚಿತ್ ಹೆಗ್ಡೆ ಗಾಯನ ಮೋಡಿ, ರೂಪದರ್ಶಿಯರ ಮಾರ್ಜಾಲ ನಡಿಗೆಯ ಸೊಬಗು, ಆಕರ್ಷಕ ನೃತ್ಯ ಪ್ರದರ್ಶನದಿಂದ ಇಂದಿನ ಯುವ ದಸರಾ ರಂಗು ಪಡೆದಿತ್ತು.
ತಡವಾಗಿ ರಾತ್ರಿ 10.30ಕ್ಕೆ ವೇದಿಕೆಗೆ ಬಂದ ರ್ಯಾಪರ್ ಚಂದನ್ ಶೆಟ್ಟಿ, `ಪವರ್’ ಚಿತ್ರದ `ಧಮ್ ಪವರೇ…’ ಹಾಡುವ ಮೂಲಕ ಕಾದು ಬೇಸರದಲ್ಲಿದ್ದ ಪ್ರೇಕ್ಷಕರ ಉತ್ಸಾಹ ಹೆಚ್ಚಿಸುವಲ್ಲಿ ಸಫಲರಾದರು. ತಮ್ಮದೇ ಆಲ್ಬಂನ ‘ಮೂರೇ ಮೂರು ಪೆಗ್ಗಿಗೆ ತಲೆ ಗಿರಗಿರ ಗಿರ ಅಂತಿದೆ…’ ಜನಪ್ರಿಯ ಗೀತೆಯನ್ನು ಹಾಡುತ್ತಿದ್ದಂತೆ ಯುವ ಜನತೆ ಕೋರಸ್ ಜೊತೆಗೆ ಕುಣಿದು ಕುಪ್ಪಳಿಸಿತು. ವಾದ್ಯಗಳ ಅಬ್ಬರದ ನಡುವೆ ಚಂದನ್ ಶೆಟ್ಟಿಯ ರ್ಯಾಪ್ ಗಾಯನ ಸಂಚಲನ ಮೂಡಿಸಿತು. ‘ಪಕ್ಕಾ ಚಾಕ್‍ಲೇಟ್ ಗರ್ಲ್ ಇವಳು ಪಕ್ಕಾ ಚಾಕ್‍ಲೇಟ್ ಗರ್ಲ್’ ಸೇರಿದಂತೆ ಹಲವು ಹಾಡುಗಳೊಂದಿಗೆ ರಂಜಿಸಿದರು.
ಸಂಚಿತ್ ಸಂಚಲನ: ಚಿಕ್ಕವಯಸ್ಸಿನಲ್ಲೇ ವಿಶಿಷ್ಟ ಗಾಯ ನದ ಮೂಲಕ ಕನ್ನಡ, ತಮಿಳು, ತೆಲುಗು ಚಿತ್ರರಂಗದ ಬೇಡಿಕೆ ಸಿಂಗರ್ ಆಗಿ ಬೆಳೆಯುತ್ತಿರುವ ಸಂಚಿತ್ ಹೆಗ್ಡೆ ತಮ್ಮ ಮೀಡಿಯಾ ಸ್ಟೇಷನ್ ತಂಡದೊಂದಿಗೆ ವಿಭಿನ್ನ ಹಾಡುಗಳನ್ನು ನಿರಂತರವಾಗಿ ಹಾಡಿ, ಪ್ರೇಕ್ಷಕರ ಹೃದಯ ತಟ್ಟಿದರು. ‘ತಾಯಿಗೆ ತಕ್ಕ ಮಗ’ ಚಿತ್ರದ ‘ಹೃದಯಕೆ ಹೆದರಿಕೆ ಹೇಗೆ ಮೂಡುತ್ತಿದೆ…’ ಭಾವ ಪ್ರಧಾನ ಗೀತೆಯನ್ನು ಮೊದಲ ಬಾರಿಗೆ ಯುವ ದಸರಾ ವೇದಿಕೆಯಲ್ಲಿ ಹಾಡಿದ್ದು ವಿಶೇಷ. ‘ನಡುವೆ ಅಂತರವಿರಲಿ’ ಸಿನಿಮಾದ ‘ಶಾಕುಂತಲೆ ಸಿಕ್ಕಳು, ಸುಮ್ ಸುಮ್ನೆ ನಕ್ಕಳು…’ ಹಾಡುವಾಗ ಪ್ರೇಕ್ಷಕರೂ ಕೋರಸ್ ನೀಡಿ, ಸಂಭ್ರಮಿಸಿದರು. ‘ನಟ ಸಾರ್ವಭೌಮ’ ಸಿನಿಮಾದ `ಡ್ಯಾನ್ಸ್ ವಿತ್ ಅಪ್ಪು…’, ‘ಪೈಲ್ವಾನ್’ ಚಿತ್ರದ ‘ಕನ್ಯಮಣಿಯೇ ಕಣ್ಣ ಹೊಡಿಯೇ ಕೈಯ ಹಿಡಿಯೇ…’, ‘ನಿಗೂಢ ನಿಗೂಢ ಪ್ರಯಾಣ…’, ‘ಒಂದು ಮಳೆಬಿಲ್ಲು ಒಂದು ಮಳೆ ಮೋಡ…’, ‘ಓ ನಂದಿನಿ ಓ ನಂದಿನಿ ನೀ ನನ್ನ ಪ್ರಾಣ ಕಣೇ…’ ಸೇರಿದಂತೆ ಹಲವು ಗೀತೆಗಳನ್ನು ಎಡೆಬಿಡದೆ ಹಾಡಿದರು. ಸಂಚಿತ್ ವೇದಿಕೆಗೆ ಬಂದಾಗಿನಿಂದ ಕಾರ್ಯಕ್ರಮ ಮುಗಿಸುವವರೆಗೂ ಪ್ರೇಕ್ಷಕರ ಕೇಕೆ, ಶಿಳ್ಳೆ ಮುಗಿಲು ಮುಟ್ಟಿತ್ತು.
ರೂಪದರ್ಶಿಗಳ ಮೋಡಿ: ಬೆಂಗಳೂರಿನ ಡ್ರೀಮ್ಸï ಫ್ಯಾಶನ್ ತಂಡದ ಯುವತಿಯರು ವಿಭಿನ್ನ ಬಗೆಯ ಉಡುಪಿನೊಂದಿಗೆ ರ್ಯಾಂಪ್ ವಾಕ್ ಮಾಡಿದರು. ಎಲಿಕ್ಸರ್ ತಂಡದ ರೂಪದರ್ಶಿಗಳು ಪಾರಂಪರಿಕ ಉಡುಗೆಯೊಂದಿಗೆ ವೇದಿಕೆಯಲ್ಲಿ ಹೆಜ್ಜೆ ಹಾಕಿದರು. ಎಸ್‍ಎಪಿ ಗ್ರೂಪ್ ಹಾಗೂ ಡ್ರೀಮ್ಸ್ ಫ್ಯಾಷನ್ ತಂಡಗಳ ರೂಪದರ್ಶಿಗಳು ಮಾರ್ಜಾಲ ನಡಿಗೆಯಿಂದ ಎಲ್ಲರ ಗಮನ ಸೆಳೆದರು.
ರಂಜಿಸಿದ ಟಾಕೀಸ್: ಬೆಂಗಳೂರಿನ ಎಸ್.ಬಿ ಟಾಕೀಸ್ ಹಾಡು, ನೃತ್ಯದ ಮೂಲಕ ಪ್ರೇಕ್ಷಕರ ರಂಜಿಸಿದರು. ಪುಟ್ಟಗೌರಿ ಖ್ಯಾತಿಯ ನಮೃತ, ಮಂಗಳಗೌರಿ ಖ್ಯಾತಿಯ ಸ್ನೇಹ ಅಲಿಯಾಸ್ ಯಶಸ್ವಿನಿ, ಪ್ಯಾಟೆ ಹಡ್ಗೀರ್ ಹಳ್ಳಿ ಲೈಫು ಖ್ಯಾತಿಯ ಕೋಳಿ ರಮ್ಯಾ ಆಕರ್ಷಕ ನೃತ್ಯ ಪ್ರದರ್ಶಿಸಿದರು. ಸರಿಗಮಪ ಖ್ಯಾತಿಯ ಸುಹಾನಾ `ನೀನೆ ರಾಮ ನೀನೆ ಶಾಮ, ನೀನೆ ಅಲ್ಲಾ ನೀನೆ ಏಸು…’, ಇಂಪನ `ನಾಟಿ ಗರ್ಲ್ ವೆರಿ ನಾಟಿ ಗರ್ಲ್…’ ಸುಪ್ರಿತ್ ಪಲ್ಗುಣ `ಬೆಳಗೆದ್ದು ಯಾರಾ ಮುಖವಾ ನಾನು ನೋಡಿದೆ…’, `ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು…’ ಗೀತೆಯನ್ನು ಮನಮುಟ್ಟುವಂತೆ ಹಾಡಿದರು. ಕಲರ್ಸ್ ಡ್ಯಾನ್ಸ್ ಅಕಾಡೆಮಿ ಮೂಲಕ ನಟಿ ಆಶಿಕಾ ರಂಗನಾಥ್ ಹಲವು ಗೀತೆಗಳ ತುಣುಕಿಗೆ ಕುಣಿದು, ನೆರೆದಿದ್ದವರನ್ನೂ ಕುಣಿಸಿದರು.
ವಿಶೇಷ ಮಕ್ಕಳ ನೃತ್ಯ: ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ಅರುಣೋದಯ ವಿಶೇಷ ಮಕ್ಕಳು ಮನೋಜ್ಞ ನೃತ್ಯದ ಮೂಲಕ ದೇಶಭಕ್ತಿ, ಯೋಧರ ತ್ಯಾಗ ಬಲಿದಾನ ಸ್ಮರಿಸಿದರು. ಈ ವೇಳೆ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುವುದರ ಜೊತೆಗೆ ಮೊಬೈಲ್ ಟಾರ್ಚ್ ಆನ್ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಯುಎಸ್‍ಎ ಡ್ಯಾನ್ಸ್ ಅಕಾಡೆಮಿ ತಂಡದ ಕಲಾವಿದರು ವಿವಿಧ ಗೀತೆ ಗಳಿಗೆ ನೃತ್ಯ ಪ್ರದರ್ಶಿಸಿ, ಚಪ್ಪಾಳೆ ಗಿಟ್ಟಿಸಿದರು. ನಟ, ನಿರ್ದೇಶಕ, ನಿರ್ಮಾಪಕ ವಿ.ರವಿಚಂದ್ರನ್ ಪುತ್ರ, `ತ್ರಿವಿಕ್ರಮ’ ನಾಯಕ ನಟ ವಿಕ್ರಂ ರವಿಚಂದ್ರನ್ ಮಾತನಾಡಿ, ಮೈಸೂರು ದಸರಾ ನೋಡಬೇಕೆಂಬ ಆಸೆಯಿತ್ತು. ಅದನ್ನು ನಮ್ಮ ನಿರ್ದೇಶಕರಿಗೆ ಹೇಳಿದ್ದೆ. ಈಗ ಭಾಗವಹಿಸಿದ್ದೇನೆ. ನನಗೆ ಹೀರೋ ಪಟ್ಟ ಬೇಡ, ನಿಮ್ಮ ಹೃದಯದಲ್ಲಿ ಒಂದಿಷ್ಟು ಜಾಗ ಕೊಡಿ. ನಿಮ್ಮ ನಂಬಿಕೆ ಉಳಿಸಿಕೊಳ್ಳುತ್ತೇನೆ ಎಂದರು. ವಿಕ್ರಂ ಚಿತ್ರದ ನಿರ್ದೇಶಕ ಸಹನಮೂರ್ತಿ ಇದ್ದರು.