ನೆರೆ ಪರಿಹಾರಕ್ಕಾಗಿ ಪೂರಕ ಬಜೆಟ್
ಮೈಸೂರು

ನೆರೆ ಪರಿಹಾರಕ್ಕಾಗಿ ಪೂರಕ ಬಜೆಟ್

October 4, 2019

ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಹೊಸ ದಾಗಿ ಮಂಡಿಸಲು ಉದ್ದೇಶಿಸಿದ್ದ ಬಜೆಟ್ ಕೈಬಿಟ್ಟು ನೆರೆ ಪೀಡಿತ ಪ್ರದೇಶಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಪ್ರತ್ಯೇಕ ಪೂರಕ ಬಜೆಟ್ ಮಂಡಿಸಲು ಇಂದಿಲ್ಲಿ ಸೇರಿದ್ದ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.

ರಾಜ್ಯದಲ್ಲಿ ಉಂಟಾದ ನೆರೆಗೆ ಕೇಂದ್ರ ಸರ್ಕಾರ ಇದು ವರೆಗೂ ಪರಿಹಾರ ನೀಡದಿರುವ ಹಿನ್ನೆಲೆಯಲ್ಲಿ ರಾಜ್ಯ ತನ್ನ ಬಾಬ್ತಿನಿಂದಲೇ ಆರ್ಥಿಕ ಕ್ರೋಢೀಕರಣಕ್ಕಾಗಿ ಈ ವಿಶೇಷ ಬಜೆಟ್ ಮಂಡನೆ ಮಾಡಲಿದೆ. ವಿವಿಧ ಇಲಾಖೆಗಳಿಗೆ ನೀಡಲಾಗಿರುವ ಅನುದಾನ ಕಡಿತಗೊಳಿಸಿ, ಆ ಹಣವನ್ನು ನೆರೆ ಪೀಡಿತ ಪ್ರದೇಶಗಳ ಪರಿಹಾರ ಮತ್ತು ಪುನರ್ ವಸತಿಗೆ ಬಳಕೆ ಮಾಡಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಅನುಮತಿ ಪಡೆಯುವುದರ ಜೊತೆಗೆ ಕುಮಾರಸ್ವಾಮಿ ನೇತೃತ್ವದಲ್ಲಿ ಮಂಡಿಸಿದ ಮುಂಗಡ ಪತ್ರಕ್ಕೆ ಪೂರ್ಣ ಪ್ರಮಾಣದಲ್ಲಿ ಅನುಮತಿ ಪಡೆಯಲಿದ್ದಾರೆ.

ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, ಈಗಾಗಲೇ ಜಲಪ್ರಳಯದಿಂದ ಹಾನಿಗೀಡಾದ ಪ್ರದೇಶಗಳಲ್ಲಿ ನಾವು ತುರ್ತು ಪರಿಹಾರ ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. ಇದಕ್ಕಾಗಿ ವಿವಿಧ ಇಲಾಖೆ ಹಣ ಬಳಕೆ ಮಾಡಿಕೊಂಡಿದ್ದು, ಆ ವೆಚ್ಚಕ್ಕೆ ಸದನದ ಅನುಮತಿ ಪಡೆಯಬೇಕಾಗಿದೆ, ಅಲ್ಲದೆ, ಇದೇ ಬಾಬ್ತಿಗಾಗಿ ಹೆಚ್ಚುವರಿ ಹಣ ಕ್ರೋಢೀಕರಿಸುವ ಉದ್ದೇಶದಿಂದ ಪೂರಕ ಬಜೆಟ್ ಮಂಡನೆ ಮಾಡಲಾಗುತ್ತಿದೆ ಎಂದರು.

ನೆರೆಪರಿಹಾರ ಕಾಮಗಾರಿಗಾಗಿ ಕೇಂದ್ರ ದಿಂದ ಸೂಕ್ತ ನೆರವು ದೊರೆಯುವ ಆಶಾಭಾವನೆ ಇದೆ. ಈ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಅವರು, ರಾಜ್ಯದ ಇಬ್ಬರು ಹಿರಿಯ ಅಧಿಕಾರಿಗಳನ್ನು ಕರೆಸಿಕೊಂಡು ಪ್ರವಾಹಕ್ಕೆ ಸಂಬಂಧಿಸಿದಂತೆ ಮಾಹಿತಿ ಮತ್ತು ಪರಿಹಾರಕ್ಕೆ ಅಗತ್ಯ ಹಣದ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಇದರಿಂದ ನಮಗೆ ಮುಂದಿನ ಎರಡು ಮೂರು ದಿನ ಗಳಲ್ಲಿ ಕೇಂದ್ರದಿಂದ ಪರಿಹಾರ ದೊರೆಯಬಹುದೆಂಬ ಆಶಾಭಾವನೆ ಇದೆ. ಇದರ ನಡುವೆಯೇ ಸರ್ಕಾರ ತನ್ನ ಇತಿಮಿತಿಯಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಲು ಇಂತಹ ನಿರ್ಧಾರ ಕೈಗೊಳ್ಳ ಲಾಗಿದೆ ಎಂದರು. ಪರಿಶಿಷ್ಟ ಜಾತಿ, ಪಂಗಡಗಳಿಗೆ ಮೀಸಲಿಟ್ಟ ಹಣದಲ್ಲಿ 1150 ಕೋಟಿ ರೂ. ಹಣವನ್ನು ನೆರೆಪೀಡಿತ ಪ್ರದೇಶಗಳಲ್ಲಿರುವ ಆ ಸಮುದಾಯ ದವರಿಗೇ ಖರ್ಚು ಮಾಡಬೇಕು ಎಂದು ಹೇಳಲಾಗಿದೆ.

ಸೇತುವೆ, ರಸ್ತೆಗಳ ಕಾಮಗಾರಿಗೆ ಅನು ಕೂಲವಾಗಲಿ ಎಂದು ಲೋಕೋಪಯೋಗಿ ಇಲಾಖೆಯಿಂದ 500 ಕೋಟಿ ರೂ. ನೀಡಲಾಗಿದೆ. ಸಣ್ಣ ನೀರಾವರಿ ಇಲಾಖೆ ಯಿಂದ 300 ಕೋಟಿ ರೂ. ಹಾಗೂ ರಸ್ತೆಗಳಿಗಾಗಿ ಲೋಕೋಪಯೋಗಿ ಇಲಾಖೆಯ ಪ್ರತ್ಯೇಕ ಖಾತೆಯಿಂದ 1000 ಕೋಟಿ ನೀಡಲಾಗಿದೆ. ಅಕ್ಟೋಬರ್ 10ರಿಂದ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ನೆರೆ ಪರಿಹಾರ ಕಾರ್ಯಕ್ಕಾಗಿಯೇ ಪೂರಕ ಬಜೆಟ್ ಮಂಡಿಸಿ ಹೆಚ್ಚುವರಿ ಹಣ ಒದಗಿಸುವುದಾಗಿ ವಿವರಿಸಿದರು.

Translate »