ಮೈಸೂರು ನಗರದಲ್ಲಿ ಗ್ರಾಮೀಣ ಸೊಗಡು ಬಿಂಬಿಸಿದ: ರೈತ ದಸರಾ ಮೆರವಣಿಗೆ
ಮೈಸೂರು

ಮೈಸೂರು ನಗರದಲ್ಲಿ ಗ್ರಾಮೀಣ ಸೊಗಡು ಬಿಂಬಿಸಿದ: ರೈತ ದಸರಾ ಮೆರವಣಿಗೆ

October 2, 2019

ಮೈಸೂರು: ಆಕರ್ಷಕ ಮೆರವಣಿಗೆಯೊಂದಿಗೆ ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಮೂರು ದಿನಗಳ ರೈತದಸರಾ ಕಾರ್ಯ ಕ್ರಮಗಳಿಗೆ ಚಾಲನೆ ದೊರೆಯಿತು. ಮೆರ ವಣಿಗೆಯಲ್ಲಿ ತಳಿರು ತೋರಣಗಳಿಂದ, ಹಸಿರಿನಿಂದ ಕೂಡಿದ ಅಲಂಕೃತ ಎತ್ತಿನ ಗಾಡಿಗಳು ಭಾಗವಹಿಸಿದ್ದವು. ಹಸಿರು ರುಮಾಲು ಧರಿಸಿದ್ದ ರೈತರು, ರೈತ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಮೆರವಣಿಗೆಗೆ ಗ್ರಾಮೀಣ ಮೆರಗು ನೀಡಿದರು.

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮೀನುಗಾರಿಕೆ, ಮುಜ ರಾಯಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮೆರವಣಿಗೆಗೆ ಚಾಲನೆ ನೀಡಿ ದರು. ಮೆರವಣಿಗೆಯಲ್ಲಿ ನಂದಿ ಕಂಬ, ಡೊಳ್ಳು ಕುಣಿತ, ಪೂಜಾ ಕುಣಿತ, ವೀರಭದ್ರ ಕುಣಿತ, ಕಂಸಾಳೆ, ಯಕ್ಷಗಾನ, ಹುಲಿವೇಷ, ಮರಗಾಲು ಮನುಷ್ಯ ಸೇರಿ ದಂತೆ ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗೆ ಸಂಬಂಧಿಸಿದ ಮಾಹಿತಿ ನೀಡುವ ಟ್ಯಾಬ್ಲೊಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಕೃಷಿ ಯಂತ್ರೋಪಕರಣ ಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ ಕೃಷಿ ಯಂತ್ರಧಾರೆ, ಬಂಡೂರು ಕುರಿ ತಳಿ ಗಳು ಮೆರವಣಿಗೆಯ ಪ್ರಮುಖ ಆಕರ್ಷಣೆ ಯಾಗಿತ್ತು. ಟ್ಯಾಬ್ಲೊಗಳಲ್ಲಿ ಆಧುನಿಕ ಕೃಷಿ ಯಲ್ಲಿ ಯಾಂತ್ರೀಕರಣ,

ಮಣ್ಣಿನ ಆರೋಗ್ಯ, ಕಾಲುಬಾಯಿ ರೋಗದ ಲಕ್ಷಣ ಮತ್ತು ಔಷಧೋಪಚಾರ, ಕೃಷಿ ಆರೋಗ್ಯ ಪ್ರೋತ್ಸಾಹ ಯೋಜನೆ, ಅರಣ್ಯ ಬೆಳೆಸಿ, ಮಳೆ ಉಳಿಸಿ, ರೇಷ್ಮೆ ಹುಳು ಸಾಕಾಣಿಕೆ, ತೋಟಗಾರಿಕೆಯಲ್ಲಿ ಆಧುನಿಕ ಯಂತ್ರಗಳ ಬಳಕೆ, ಕೈತೋಟ, ತೋಟದ ಬೆಳೆಗೆ ಪ್ರೋತ್ಸಾಹ ಇನ್ನಿತರೆ ರೈತರಿಗೆ ಮಾಹಿತಿ ನೀಡುವ ಫಲಕಗಳನ್ನು ಅಳವಡಿಸಲಾಗಿತ್ತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟ ರೈತದಸರಾ ಮೆರವಣಿಗೆ ಕೆ.ಆರ್.ವೃತ್ತ, ದೇವರಾಜ ಅರಸು ರಸ್ತೆ ಮೂಲಕ ಜೆ.ಕೆ.ಮೈದಾನ ತಲುಪಿತು. ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್, ಉಪಮೇಯರ್ ಶಫೀ ಅಹಮದ್, ರೈತ ದಸರಾ ಉಪಸಮಿತಿ ಅಧ್ಯಕ್ಷ ರಮೇಶ್ ಕುಮಾರ್, ಉಪಾಧ್ಯಕ್ಷರಾದ ಕೃಷ್ಣಮೂರ್ತಿ, ಹೊಸಹಳ್ಳಿ ವೆಂಕಟೇಶ್, ಧನರಾಜ್, ಉಪ ವಿಶೇಷಾಧಿಕಾರಿ ಡಾ.ಎಂ.ಕೃಷ್ಣರಾಜು, ಕಾರ್ಯಾಧ್ಯಕ್ಷ ಡಾ.ಎಂ.ಮಹದೇವಪ್ಪ, ಸದಸ್ಯ ಕಾರ್ಯದರ್ಶಿ ಡಾ.ಅಜಿತ್‍ಕುಮಾರ್ ಇನ್ನಿತರರು ಭಾಗವಹಿಸಿದ್ದರು.

Translate »