ಮೈಸೂರು: ಬೆಳಂಬೆಳಿಗ್ಗೆಯ ಪ್ರಶಾಂತಮಯ ವಾತಾವರಣದಲ್ಲಿ ನಾನಾ ಯೋಗಾಸನ ಭಂಗಿಗಳನ್ನು ಪ್ರದರ್ಶಿ ಸಿದ ನೂರಾರು ಮಂದಿ ಯೋಗದ ಮಹತ್ವವನ್ನು ಸಾರಿದರು. ಏಕ ಕಾಲದಲ್ಲಿ ಮೈಸೂರು ನಗರದ 13 ಸ್ಥಳಗಳಲ್ಲಿ ಪ್ರತ್ಯೇಕವಾಗಿ ಯೋಗಾ ಸನ ಪ್ರದರ್ಶಿಸಿಸುವ ವಿನೂತನ ಕಾರ್ಯಕ್ರಮವನ್ನು ಈ ಬಾರಿಯ ದಸರಾ ಮಹೋತ್ಸವ ಅಂಗವಾಗಿ ಯೋಗ ದಸರಾ ಉಪಸಮಿತಿ ವತಿ ಯಿಂದ ಆಯೋಜಿಸಿದ್ದು, ಇದಕ್ಕೆ ಶುಕ್ರವಾರ ಚಾಲನೆ ಪಡೆಯಿತು.
ಮೈಸೂರಿನ ಕುವೆಂಪುನಗರದ ಸೌಗಂಧಿಕ ಉದ್ಯಾನವನದಲ್ಲಿ ಇಂದು ಬೆಳಿಗ್ಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ (ಜಿಟಿಡಿ) ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿದೇಶಗಳಲ್ಲೂ ಇಂದು ಯೋಗ ಪ್ರಖ್ಯಾತಿ ಪಡೆಯುತ್ತಿದೆ. ಪ್ರಸ್ತುತದ ಒತ್ತಡಮಯ ಜೀವನ ಶೈಲಿ ಹಿನ್ನೆಲೆಯಲ್ಲಿ ಯೋಗಾಭ್ಯಾಸದಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಆರೋಗ್ಯ ಇಲ್ಲ ವಾದರೆ ಆಯಸ್ಸು ಇಲ್ಲವಾಗುತ್ತದೆ ಎಂದು ತಿಳಿಸಿದರು.
ಕಾಲೇಜುಗಳಲ್ಲಿ ಯೋಗ ಕಡ್ಡಾಯ: ಯೋಗ ಇಂದಿಗೆ ಅತ್ಯಗತ್ಯ ವಾಗಿದ್ದು, ಈ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಯೋಗ ಶಿಕ್ಷಣ ಕಡ್ಡಾಯ ಮಾಡುವ ಉದ್ದೇಶ ಹೊಂದಿದ್ದೇನೆ. ಹಿಂದೆ ನಮ್ಮ ಹಿರಿ ಯರು ದೈಹಿಕವಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಇದರಿಂದ ಅವರಿಗೆ ದೈಹಿಕ ವ್ಯಾಯಾಮ ದೊರೆಯುತ್ತಿತ್ತು. ಆದರೆ ಈಗ ಎಲ್ಲದಕ್ಕೂ ಯಂತ್ರಗಳನ್ನು ಬಳಸುತ್ತಿದ್ದೇವೆ. ಜೊತೆಗೆ ಒತ್ತಡದ ಬದುಕು ನಮ್ಮದಾಗಿದ್ದು, ಇಂತಹ ಸಂದರ್ಭದಲ್ಲಿ ಯೋಗಾಭ್ಯಾಸ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ಜಿಟಿಡಿ ಅಭಿಪ್ರಾಯಪಟ್ಟರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ಮಾಜಿ ಸಚಿವ ಎಸ್.ಎ.ರಾಮದಾಸ್ ಮಾತನಾಡಿ, ಯೋಗಾಭ್ಯಾಸ ಹಾಗೂ ಅಗ್ನಿಹೋತ್ರ ಎಂಬ ಭಾರತೀಯ ವೈದ್ಯಪದ್ಧತಿಯು ಮಾರಕ ಕಾಯಿಲೆ ಯಾದ ಏಡ್ಸ್‍ಗೆ ಔಷಧವಾಗಬಲ್ಲದೇ? ಎಂಬ ಸಂಶೋಧನೆಯನ್ನು ನಮ್ಮ ಟ್ರಸ್ಟ್ ಕೈಗೆತ್ತಿಕೊಂಡಿದ್ದು, ಯಶಸ್ಸು ಕಾಣುವ ಎಲ್ಲಾ ಲಕ್ಷಣ ಗಳೂ ಗೋಚರಿಸುತ್ತಿವೆ. ಟ್ರಸ್ಟ್‍ನ ಅಮ್ಮ ಮನೆ ಮಕ್ಕಳಲ್ಲಿ ನಾಲ್ವರನ್ನು ಯೋಗಾಭ್ಯಾಸ ಹಾಗೂ ಅಗ್ನಿಹೋತ್ರಕ್ಕೆ ಒಳಪಡಿಸುವ ಪ್ರಯೋಗ ನಡೆಸಿದ್ದು, ಧನಾತ್ಮಕ ಫಲಿತಾಂಶ ಲಭ್ಯವಾಗಿದೆ. 6 ತಿಂಗಳ ಬಳಿಕ ಈ ಮಕ್ಕಳ ರಕ್ತದ ಮಾದರಿಯನ್ನು ಅಮೇರಿಕದ ಪ್ರಾಯೋಗಾ ಲಯಕ್ಕೆ ಕಳುಹಿಸುತ್ತಿದ್ದು, ಇಲ್ಲಿನ ಫಲಿತಾಂಶದಲ್ಲೂ ಧನಾತ್ಮಕ ಅಂಶ ವ್ಯಕ್ತವಾಗುವ ವಿಶ್ವಾಸವಿದೆ ಎಂದು ನುಡಿದರು.
ಯೋಗ ಭಂಗಿ ಪುಳಕ: ಅರ್ಧ ಹಲಾಸನ, ಸೇತು ಬಂಧಾಸನ, ಪವನ ಮುಕ್ತಾಸನ, ಶವಾಸನ, ಪ್ರಾಣಾಯಾಮ ಸೇರಿದಂತೆ ಹಲವು ಯೋಗಾ ಸನದ ಭಂಗಿಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಬೆಂಗಳೂರಿನ ಪತಂಜಲಿ ಯೋಗಾಶ್ರಮ ಟ್ರಸ್ಟ್‍ನ ಅಧ್ಯಕ್ಷ ಶ್ರೀ ಪ್ರಕಾಶ್ ಯೋಗಿ ಗುರೂಜಿ ಯೋಗಾಸನದ ಕ್ಲಿಷ್ಟ ಆಸನಗಳನ್ನು ಪ್ರದರ್ಶಿಸಿದರು. ಇದೇ ವೇಳೆ ಸಚಿವ ಜಿ.ಟಿ.ದೇವೇಗೌಡ, ಶಾಸಕ ರಾಮದಾಸ್ ಸೇರಿದಂತೆ ಅನೇಕ ಗಣ್ಯರು ವೇದಿಕೆಯಲ್ಲಿ ಯೋಗದ ಸಾಧಾರಣ ಆಸನಗಳನ್ನು ಮಾಡಿದರು. ಅಂತಾರಾಷ್ಟ್ರೀಯ ಯೋಗ ಪಟು ಮೈಸೂರಿನ ಖುಷಿ ಕೂಡ ಕ್ಲಿಷ್ಟ ಹಾಗೂ ರೋಚಕ ಎನ್ನಿಸುವಂತಹ ಯೋಗದ ಭಂಗಿಗಳಲ್ಲಿ ಪುಳಕವಿಟ್ಟರು.
ಪ್ರದರ್ಶನಗಳು ನಡೆಯುವ ಸ್ಥಳಗಳು: ಇಂದಿನಿಂದ ಅ.16ರವ ರೆಗೆ ಮೈಸೂರಿನ 13 ಸ್ಥಳಗಳಲ್ಲಿ ಬೆಳಿಗ್ಗೆ 6ರಿಂದ 7ರವರೆಗೆ ಯೋಗಾ ಸನ ಪ್ರದರ್ಶನ ನಡೆಯಲಿದೆ. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸೇರಿದಂತೆ ವಿವಿಧ ಯೋಗ ಶಿಕ್ಷಣ ಸಂಸ್ಥೆಗಳು ಈ ಪ್ರದರ್ಶನದಲ್ಲಿ ಪಾಲ್ಗೊಂಡಿವೆ. ಕುವೆಂಪುನಗರ ಸೌಗಂಧಿಕ ಉದ್ಯಾನ, ಸರಸ್ವತಿಪುರಂನ ಜವರೇಗೌಡ ಉದ್ಯಾನವನ, ಜೆಪಿ ನಗರದ ಪುಟ್ಟರಾಜ ಗವಾಯಿ ಕ್ರೀಡಾಂಗಣ, ಚಾಮುಂಡಿ ವಿಹಾರ ಕ್ರೀಡಾಂಗಣ, ಸಿದ್ಧಾರ್ಥನಗರ ಜೆಎಸ್‍ಎಸ್ ಪಬ್ಲಿಕ್ ಶಾಲೆ, ವಿಜಯನಗರ ಕ್ರೀಡಾಂಗಣ, ವಿಜಯ ನಗರ 2ನೇ ಹಂತದ ಪುಷ್ಕರಣಿ ಶಾಲೆ ಆವರಣ, ಗೋಕುಲಂ 3ನೇ ಹಂತದ ಮೈಸೂರು ಒನ್ ಆಟದ ಮೈದಾನ, ವಿವಿ ಮೊಹಲ್ಲಾದ ಚೆಲುವಾಂಬ ಉದ್ಯಾನವನ, ಬೋಗಾದಿಯ ಬೆಂಚ್‍ಕಟ್ಟೆ ಮಾರಮ್ಮನ ದೇವಸ್ಥಾನದ ಉದ್ಯಾನವನ, ವಿಜಯನಗರ ರೈಲ್ವೆ ಬಡಾವಣೆಯ ವಿದ್ಯಾವಿನಾಯಕ ದೇವಸ್ಥಾನ ಉದ್ಯಾನವನ, ಹೆಬ್ಬಾಳ್ 1ನೇ ಹಂತದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಬಳಿಯ ಬಸವಗುಡಿ ಉದ್ಯಾನವನ, ಆರ್‍ಎಸ್ ನಾಯ್ಡುನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಯೋಗಾಸಾನ ಪ್ರದರ್ಶನ ನಡೆಯಲಿದೆ. ಪಾಲಿಕೆ ಸದಸ್ಯ ರಮೇಶ್, ಜಿಪಂ ಸದಸ್ಯೆ ಚಂದ್ರಿಕಾ ಸುರೇಶ್, ಎಡಿಸಿ ಟಿ.ಯೋಗೇಶ್, ಜಿಎಸ್‍ಎಸ್ ಯೋಗ ಫೌಂಡೇಶನ್‍ನ ಶ್ರೀಹರಿ, ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಮುಖ್ಯಸ್ಥ ಸತ್ಯನಾರಾಯಣ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಯೋಗ ದಸರಾ ಉಪಸಮಿತಿ ಉಪವಿಶೇಷಾಧಿಕಾರಿ ಕೆ.ರಮ್ಯ ಇತರರಿದ್ದರು.