ನಾವು ಹೋಗಿ ಬರ್ತೇವೆ, ಬೈ ಬೈ…
ಮೈಸೂರು

ನಾವು ಹೋಗಿ ಬರ್ತೇವೆ, ಬೈ ಬೈ…

October 22, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಯಶಸ್ವಿಯಾಗಿ ಪಾಲ್ಗೊಂಡು ಕಳೆದ ಎರಡು ದಿನಗಳಿಂದ ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ಅರ್ಜುನ ನೇತೃತ್ವದ ಗಜಪಡೆಯ 12 ಆನೆಗಳಲ್ಲಿ 9 ಆನೆಗಳು ಭಾನುವಾರ ಮಧ್ಯಾಹ್ನ ಸ್ವಸ್ಥಾನಗಳಿಗೆ ಜಿಲ್ಲಾಡಳಿತ ನೀಡಿದ ಬೀಳ್ಕೊಡುಗೆ ಸ್ವೀಕರಿಸಿ ಪ್ರಯಾಣ ಬೆಳೆಸಿದವು.

ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವುದಕ್ಕೆ ಈ ಬಾರಿ ವಿವಿಧ ಆನೆ ಕ್ಯಾಂಪ್‍ಗಳಿಂದ ಒಟ್ಟು 12 ಆನೆಗಳನ್ನು ಕರೆತರಲಾಗಿತ್ತು. ಕಳೆದ 45 ದಿನಗಳಿಂದ ಅರಮನೆಯ ಅಂಗಳದಲ್ಲಿ ಬೀಡುಬಿಟ್ಟಿದ್ದ ದಸರಾ ಆನೆಗಳು ಇಂದು ಮಾವುತರು, ಕಾವಾಡಿಗಳ ಕುಟುಂಬದ ಸದಸ್ಯರೊಂದಿಗೆ ತಾವು ವಾಸಿಸುವ ಆನೆ ಕ್ಯಾಂಪ್‍ಗಳಿಗೆ ತೆರಳಿದವು.

12 ಆನೆಗಳಲ್ಲಿ ಇಂದು 9 ಆನೆಗಳು ಸ್ವಸ್ಥಾನಗಳಿಗೆ ತೆರಳಿ ದರೆ, ಪಟ್ಟದ ಆನೆ ವಿಕ್ರಮ, ನಿಶಾನೆ ಆನೆ ಗೋಪಿ ಹಾಗೂ ವಿಜಯ ಆನೆಗಳನ್ನು ಅರಮನೆಯಲ್ಲಿ ಇರಿಸಲಾಗಿದೆ. ಮಹಾರಾಣಿ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ಶ್ರೀಕಂಠದತ್ತನರಸಿಂಹರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷಿದೇವಿ ಅವರ ನಿಧನದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ವಜ್ರಮುಷ್ಠಿ ಕಾಳಗ, ವಿಜಯಯಾತ್ರೆ, ಶಮಿ ಪೂಜೆ ಸೇರಿದಂತೆ ಕೆಲವು ಧಾರ್ಮಿಕ ಕಾರ್ಯಗಳು ಸೋಮವಾರ(ಅ.22) ಅರಮನೆ ಯಲ್ಲಿ ನಡೆಯುವುದರಿಂದ ಪಟ್ಟದ ಆನೆ ವಿಕ್ರಮ, ನಿಶಾನೆ ಆನೆ ಗೋಪಿ ಹಾಗೂ ವಿಜಯ ಆನೆಯನ್ನು ಅರಮನೆ ಯಲ್ಲಿಯೇ ಉಳಿಸಿಕೊಳ್ಳಲಾಗಿದೆ. ನಾಳೆ ಬೆಳಿಗ್ಗೆ ನಡೆಯಲಿರುವ ವಿಜಯದಶಮಿಯಲ್ಲಿ ಈ ಮೂರು ಆನೆಗಳು ಪಾಲ್ಗೊಂಡು, ಮಂಗಳವಾರ ತಮ್ಮ ಸ್ವಸ್ಥಾನಗಳಿಗೆ ಪಯಣಿಸಲಿವೆ.

ಬೀಳ್ಕೊಡುಗೆ: ಅರಮನೆಯ ಆವರಣದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಅರ್ಜುನ ನೇತೃತ್ವದ ಗಜಪಡೆಗೆ ಪೂಜೆ ಸಲ್ಲಿಸಲಾಯಿತು. ಅರ್ಚಕ ಎಸ್.ವಿ. ಪ್ರಹ್ಲಾದರಾವ್ ಅವರು ಎಲ್ಲಾ ಆನೆಗಳ ಪಾದ ತೊಳೆದು ಹರಿಶಿನ, ಕುಂಕುಮ, ಗಂಧ ಹಚ್ಚಿ, ವಿವಿಧ ಹೂವನ್ನು ಸಮರ್ಪಿಸಿ ಸಂಕಲ್ಪ ಮಾಡಿ, ಶೋಡಷೋಪಚಾರ ಪೂಜೆ, ಗಣಪತಿ ಪೂಜೆ, ಮಂತ್ರಪುಷ್ಪ, ಅರ್ಚನೆ ಮಾಡಿ, ನೈವೇದ್ಯ ಹಾಗೂ ವಿವಿಧ ಬಗೆಯ ಹಣ್ಣುಗಳನ್ನು ಅರ್ಪಿಸಿ ದರು. ಬಳಿಕ ಎಲ್ಲಾ ಆನೆಗಳಿಗೆ ದೃಷ್ಟಿ ತೆಗೆಯಲಾಯಿತು. ಸಚಿವ ಸಾ.ರಾ.ಮಹೇಶ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಡಿಸಿಎಫ್‍ಗಳಾದ ಸಿದ್ರಾಮಪ್ಪ ಚಳ್ಕಾಪುರೆ, ಡಾ.ಹನುಮಂತಪ್ಪ, ಆರಮನೆಯ ಆಡಳಿತ ಮಂಡಳಿಯ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಸೇರಿದಂತೆ ಇನ್ನಿತರರು ಹಣ್ಣುಗಳನ್ನು ನೀಡಿ ಶುಭಕೋರಿದರು.

ಯಾರ್ಯಾರು ಎಲ್ಲಿಗೆ: ಜಿಲ್ಲಾಡಳಿತ ಬೀಳ್ಕೊಟ್ಟ ನಂತರ ಬೆಳಿಗ್ಗೆ 11 ಗಂಟೆಯಿಂದ ಒಂದೊಂದೇ ಆನೆಯನ್ನು ಲಾರಿಗೆ ಹತ್ತಿಸುವ ಕೆಲಸ ಆರಂಭಿಸಲಾಯಿತು. 3 ಆನೆಗಳನ್ನು ಹೊರತುಪಡಿಸಿ 9 ಆನೆಗಳನ್ನು ಲಾರಿಗೆ ಹತ್ತಿಸಲಾಯಿತು. ಬಳಿಕ ಮಧ್ಯಾಹ್ನ 12.35ರಲ್ಲಿ ಜಯಮಾರ್ತಾಂಡ ಗೇಟ್‍ನಿಂದ ಪೊಲೀಸ್ ಬೆಂಗಾವಲು ಪಡೆಯ ಕಾವಲಿನಲ್ಲಿ ಆನೆಗಳಿದ್ದ ಲಾರಿಗಳು ಹಾರ್ಡಿಂಗ್ ವೃತ್ತ ಬಳಸಿಕೊಂಡು ಗನ್‍ಹೌಸ್, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತದ ಮೂಲಕ ವಿವಿಧ ಕ್ಯಾಂಪ್‍ಗಳತ್ತ ಪ್ರಯಾಣ ಬೆಳೆಸಿದವು. ಗಜಪಡೆಯ ನಾಯಕ ಅರ್ಜುನ ಬಳ್ಳೆ ಆನೆ ಕ್ಯಾಂಪ್‍ಗೆ ತೆರಳಿದರೆ, ಮತ್ತಿಗೋಡು ಆನೆ ಕ್ಯಾಂಪ್‍ಗೆ ಬಲರಾಮ, ಅಭಿಮನ್ಯು, ವರಲಕ್ಷ್ಮಿ, ದ್ರೋಣ, ದುಬಾರೆ ಆನೆ ಕ್ಯಾಂಪ್‍ಗೆ ಕಾವೇರಿ, ಪ್ರಶಾಂತ, ಧನಂಜಯ ಹಾಗೂ ಬಂಡೀಪುರ ಕ್ಯಾಂಪ್‍ಗೆ ಚೈತ್ರ ಆನೆಗಳು ಪ್ರಯಾಣ ಬೆಳೆಸಿದವು.

ಉಪಾಹಾರ: ದಸರಾ ಮಹೋತ್ಸವದ ಆನೆಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಯಶಸ್ವಿಯಾಗಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಇಂದು ದಸರಾ ಆನೆಗಳ ಮಾವುತರು ಮತ್ತು ಕಾವಾಡಿಗಳು ಹಾಗೂ ಅವರ ಕುಟುಂಬದ ಸದಸ್ಯರಿಗೆ ಉಪಾಹಾರ ಕೂಟ ಏರ್ಪಡಿಸಿತ್ತು. ಇಡ್ಲಿ, ವಡೆ, ಪೊಂಗಲ್ ಉಣಬಡಿಸಲಾಯಿತು. ದಸರಾ ಆನೆಗಳ ಮಾವುತರು ಮತ್ತು
ಕಾವಾಡಿಗಳಿಗೆ ಅರಮನೆ ಮಂಡಳಿಯಿಂದ ತಲಾ 8.500 ರೂ ನೀಡಲಾಯಿತು. ಮಾವುತರು, ಕಾವಾಡಿಗಳು ಹಾಗೂ ವಿಶೇಷ ಮಾವುತರು ಸೇರಿದಂತೆ ಒಟ್ಟು 50 ಮಂದಿಗೆ ಗೌರವಧನ ನೀಡಲಾಯಿತು. ಪ್ರತಿ ವರ್ಷವೂ ಅರಣ್ಯ ಇಲಾಖೆಯ ವತಿಯಿಂದಲೂ ಗೌರವ ಧನ ನೀಡಲಾಗುತ್ತಿತ್ತು. ಆದರೆ ಈ ಬಾರಿ ಅರಣ್ಯ ಇಲಾಖೆ ಯಿಂದ ಗೌರವಧನ ನೀಡದೆ ಇದ್ದುದ್ದರಿಂದ ಎಲ್ಲಾ ಆನೆಗಳ ಮಾವುತರು ಹಾಗೂ ಕಾವಾಡಿಗಳು ಇಲಾಖೆಯಿಂದ ಹಣ ನೀಡುವಂತೆ ಕೋರಿದರು. ಇದಕ್ಕೆ ಸ್ಪಂಧಿಸಿದ ಡಿಸಿಎಫ್ ಸಿದ್ರಾಮಪ್ಪ ಚಳ್ಕಾಪುರೆ ಅವರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಲಾರಿಗಳ ಪರಿಶೀಲನೆ: ಆನೆಗಳನ್ನು ಸ್ವಸ್ಥಾನಗಳಿಗೆ ಕಳುಹಿಸಲು ಪ್ರತಿ ವರ್ಷದಂತೆ ಸದರನ್ ಗ್ರೂಪ್ಸ್ ಮೈಸೂರು ಸಂಸ್ಥೆಯ ಮೌಂಟ್ ಹಿರಾ ಎಂಟರ್ ಪ್ರೈಸಸ್‍ನಿಂದ 9 ಲಾರಿಗಳನ್ನು ಕರೆಸಲಾಗಿತ್ತು. ಎಲ್ಲಾ ಲಾರಿಗಳನ್ನು ಪರಿಶೀಲಿಸಲಾಯಿತು. ಗುತ್ತಿಗೆದಾರ ಶಕೀಬ್ ಅಹ್ಮದ್ ಅವರು ಲಾರಿಗಳಿರುವ ಲಾರಿಗಳೊಂದಿಗೆ ತೆರಳಿ, ಎಲ್ಲಾ ಚಾಲಕರುಗಳಿಗೆ ಸುರಕ್ಷತೆಯ ಬಗ್ಗೆ ಎಚ್ಚರಿಕೆ ನೀಡಿದರು.

ಇಷ್ಟು ದಿನ: ಸೆ.2ರಂದು ಹುಣಸೂರು ತಾಲೂಕಿನ ನಾಗರಹೊಳೆ ಅಭಯಾರಣ್ಯಕ್ಕೆ ಹೊಂದಿಕೊಂಡಂತಿರುವ ವೀರನಹೊಸಳ್ಳಿಯಿಂದ ಆರು ಆನೆಗಳು ಮೊದಲ ತಂಡದಲ್ಲಿ ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಬಂದು ವಾಸ್ತವ್ಯ ಹೂಡಿ ದ್ದವು. ಅ.5ರಂದು ಮೈಸೂರು ಅರಮನೆಯ ಅಂಗಳವನ್ನು ಪ್ರವೇಶಿಸಿದ್ದವು. ಅ.6ರಿಂದ ಅರಮನೆಯಿಂದ ಬನ್ನಿಮಂಟಪದ ತಾಲೀಮು ಆರಂಭಿಸಿದ್ದವು. ಸೆ.14ರಂದು 2ನೇ ಹಂತದಲ್ಲಿ ಆರು ಆನೆಗಳನ್ನು ಕರೆತರಲಾಗಿತ್ತು. ಸುಮಾರು 45 ದಿನಗಳ ಕಾಲ ಅರಮನೆಯ ಅಂಗಳದಲ್ಲಿ ಬೀಡುಬಿಟ್ಟಿದ್ದ ಆನೆಗಳು ಇಂದು ಕಾಡಿಗೆ ತೆರಳುವ ಮೂಲಕ ನೆರೆದಿದ್ದ ಅಪಾರ ಸಂಖ್ಯೆ ಜನರ ಕಂಗಳಲ್ಲಿ ನೀರು ಬರುವಂತೆ ಮಾಡಿದವು.

ಈ ಸಂದರ್ಭದಲ್ಲಿ ಪ್ರವಾಸೊಧ್ಯಮ ಸಚಿವ ಸಾ.ರಾ.ಮಹೇಶ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಡಿಸಿಎಫ್‍ಗಳಾದ ಸಿದ್ರಾಮಪ್ಪ ಚಳ್ಕಾಪುರೆ, ಡಾ.ಹನು ಮಂತಪ್ಪ, ಮೃಗಾಲಯದ ಕಾರ್ಯನರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ, ಆರ್‍ಎಫ್‍ಒ ಅನನ್ಯಕುಮಾರ್, ಅರಮನೆ ಆಡಳಿತ ಮಂಡಳಿಯ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಪಶುವೈಧ್ಯ ಡಾ.ಡಿ.ಎನ್.ನಾಗರಾಜು, ಆನೆಯ ಉಸ್ತುವಾರಿ ಗಳಾದ ರಂಗರಾಜು, ಅಕ್ರಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »