ಪ್ರವಾಸಿಗರಿಂದ ತುಂಬಿ ತುಳುಕಿದ ಮೈಸೂರು
ಮೈಸೂರು

ಪ್ರವಾಸಿಗರಿಂದ ತುಂಬಿ ತುಳುಕಿದ ಮೈಸೂರು

October 22, 2018

ಮೈಸೂರು: ದಸರಾ ಮಹೋತ್ಸವ ಮುಗಿದರೂ ಸಾಲು-ಸಾಲು ರಜೆಯ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರವೂ ಪ್ರವಾಸಿಗರ ದಂಡು ಹೆಚ್ಚಾಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಮೈಸೂರಿನಲ್ಲಿಯೇ ಬೀಡು ಬಿಟ್ಟಿರುವ ಪ್ರವಾಸಿಗರು ಇಂದು ಮೈಸೂರಿನ ವಿವಿಧ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದರು. ಪರಿಣಾಮ ಹಲವೆಡೆ ಜನಜಂಗುಳಿ ಹಾಗೂ ವಾಹನ ದಟ್ಟಣೆ ಕಂಡು ಬಂದಿತು.

ಶುಕ್ರವಾರ ಜಂಬೂ ಸವಾರಿ ವೀಕ್ಷಿಸಿ ಆನಂದಿಸಿದ್ದ ಪ್ರವಾಸಿಗರು ಶನಿವಾರ ಮತ್ತು ಭಾನುವಾರ ಅರಮನೆ, ಚಾಮುಂಡಿಬೆಟ್ಟ, ಚಾಮರಾಜೇಂದ್ರ ಮೃಗಾಲಯ, ಕೆಆರ್‍ಎಸ್, ನಂಜನಗೂಡು, ಶ್ರೀರಂಗಪಟ್ಟಣ, ಶಿಂಷಾ ಸೇರಿದಂತೆ ಮೈಸೂರು ಸಮೀಪದ ವಿವಿಧ ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಿ ಸಂಭ್ರಮಿಸಿದರು.

ಏಕಕಾಲಕ್ಕೆ ನೂರಾರು ವಾಹನಗಳಲ್ಲಿ ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಸೇರಿದಂತೆ ವಿವಿಧ ಸ್ಥಳಗಳಿಗೆ ಪ್ರವಾಸಿಗರು ಆಗಮಿಸಿದ್ದರಿಂದ ಅರಮನೆಯ ಸುತ್ತಲಿನ ರಸ್ತೆ, ಚಾಮುಂಡಿ ಬೆಟ್ಟದ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಭಾನುವಾರ ಬಹಳಷ್ಟು ಸಮಯ ಟ್ರಾಫಿಕ್ ಜಾಮ್ ಉಂಟಾಗಿತ್ತು. ಎಲ್ಲಾ ಪ್ರವಾಸಿ ತಾಣಗಳಲ್ಲೂ ಜನಸಂದಣಿ ಕಂಡುಬಂದಿತು.

ಮೃಗಾಲಯಕ್ಕೆ 10ದಿನದಲ್ಲಿ 1.50 ಕೋಟಿ ಆದಾಯ: ನವರಾತ್ರಿ, ವಿಜಯದಶಮಿ ಸೇರಿದಂತೆ ಕೇವಲ ಹತ್ತು ದಿನಗಳಲ್ಲಿಯೇ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ 1.53 ಲಕ್ಷ ಮಂದಿ ಭೇಟಿ ನೀಡಿದ್ದು, ಒಟ್ಟು 1.5 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ನವರಾತ್ರಿ ಹಾಗೂ ವಿಜಯದಶಮಿ ಸೇರಿದಂತೆ ಕಳೆದ 10 ದಿನಗಳಲ್ಲಿ ಮೈಸೂರಿಗೆ ದಾಖಲೆ ಪ್ರಮಾಣದಲ್ಲಿ
ಪ್ರವಾಸಿಗರು ಭೇಟಿ ನೀಡಿದ್ದಾರೆ. ವಿಜಯದಶಮಿ ದಿನದಂದೇ 32,301 ಪ್ರವಾಸಿಗರು ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿದ್ದು, ಪ್ರವೇಶ ಶುಲ್ಕದಿಂದಲೇ 25.40 ಲಕ್ಷ ರೂ. ಆದಾಯ ಸಂಗ್ರಹವಾಗಿದೆ. ಆಯುಧಪೂಜೆ ದಿನ 22,398 ಜನರ ಭೇಟಿ ನೀಡಿದ್ದು 17.74 ಲಕ್ಷ ರೂ. ಸಂಗ್ರಹವಾಗಿದೆ. ಕಳೆದ 4 ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದಸರೆಯ 10 ದಿನಗಳಲ್ಲಿ ಹೆಚ್ಚು ಮಂದಿ ಪ್ರವಾಸಿಗರು ಭೇಟಿ ನೀಡಿರುವುದು ದಾಖಲೆಯಾಗಿದೆ. 2015ನೇ ಸಾಲಿನಲ್ಲಿ 1.25 ಲಕ್ಷ ಜನರು ಭೇಟಿ ನೀಡಿ, 69.11 ಲಕ್ಷ ರೂ. ಆದಾಯ ಬಂದಿದ್ದರೆ, 2016ರಲ್ಲಿ 1.24 ಲಕ್ಷ ಜನ, 70.53 ಲಕ್ಷ ರೂ. ಆದಾಯ, 2017ರಲ್ಲಿ 1.23 ಲಕ್ಷ ಜನ ಭೇಟಿ ನೀಡಿದ್ದರಿಂದ 69.17 ಲಕ್ಷ ರೂ. ಬಂದಿತ್ತು.

ಅರಮನೆಯಲ್ಲೂ: ನವರಾತ್ರಿಯ 9 ದಿನ ಅರಮನೆಗೆ 1,11,900 ಮಂದಿ ಭೇಟಿ ನೀಡಿದ್ದಾರೆ. ಇದರಲ್ಲಿ 7680 ಮಕ್ಕಳು, 20,136 ವಿದ್ಯಾರ್ಥಿಗಳು, 884 ವಿದೇಶಿಗರು, 83,200 ವಯಸ್ಕರು ಇದ್ದಾರೆ. ವಾರಾಂತ್ಯ ದಿನಗಳಲ್ಲಿ, ಅಂದರೆ ಶನಿವಾರ 18,227, ಭಾನುವಾರ 18,010 ಮಂದಿ ಭೇಟಿ ನೀಡಿದ್ದಾರೆ. ಅ.19ರಂದು ಜಂಬೂ ಸವಾರಿ ಮೆರವಣಿಗೆ ಇದ್ದ ಕಾರಣ ಅರಮನೆ ವೀಕ್ಷಣೆಗೆ ಅವಕಾಶವಿರಲಿಲ್ಲ. ಕಳೆದ ಬಾರಿಗೆ (2017 ರಲ್ಲಿ 1,02479) ಹೋಲಿಕೆ ಮಾಡಿದರೆ ಈ ಬಾರಿ ನವರಾತ್ರಿಯಲ್ಲಿ 9.421 ಮಂದಿ ಹೆಚ್ಚಾಗಿ ಭೇಟಿ ನೀಡಿದ್ದಾರೆ.

ರೂಮುಗಳಿಲ್ಲ: ಮೈಸೂರು ನಗರದಲ್ಲಿ 250 ವಸತಿ ಗೃಹಗಳಿದ್ದು, ಅವುಗಳಲ್ಲಿ ವಿವಿಧ ಬಗೆಯ 7500ಕ್ಕೂ ಹೆಚ್ಚು ರೂಮ್‍ಗಳಿವೆ. ಅಲ್ಲದೆ 800ಕ್ಕೂ ಹೆಚ್ಚು ಹೋಟೆಲ್‍ಗಳು, ರೆಸ್ಟೋರೆಂಟ್‍ಗಳಿವೆ. ಎಲ್ಲಾ ವಸತಿ ಗೃಹಗಳಲ್ಲಿಯೂ ರೂಮುಗಳು ಬುಕ್ ಆಗಿವೆ. ಇನ್ನೂ ಎರಡು ವಾರ ಪ್ರವಾಸಿಗರು ಮೈಸೂರಿಗೆ ಆಗಮಿಸುವ ಸೀಜನ್ ಇರುತ್ತದೆ. ನಗರ ಪ್ರದೇಶದಲ್ಲಿರುವ ವಸತಿ ಗೃಹಗಳಲ್ಲಿ ರೂಮ್‍ಗಳು ಬುಕ್ ಆದ ನಂತರ, ಬಡಾವಣೆಗಳಲ್ಲಿರುವ ವಸತಿ ಗೃಹಗಳು, ರಿಂಗ್‍ರಸ್ತೆಯ ಸುತ್ತಮುತ್ತಲಿರುವ ವಸತಿ ಗೃಹಗಳು, ಕಲ್ಯಾಣ ಮಂಟಪಗಳಲ್ಲಿ, ಅತಿಥಿ ಗೃಹಗಳಲ್ಲಿ ಪ್ರವಾಸಿಗರು ವಾಸ್ತವ್ಯ ಹೂಡಿದ್ದಾರೆ.

ಸಣ್ಣ ವ್ಯಾಪಾರಿಗಳಿಗೂ ಭರ್ಜರಿ ವ್ಯಾಪಾರ: ಅರಮನೆ, ಮೃಗಾಲಯ, ಜಗನ್ಮೋಹನ ಅರಮನೆ, ಚಾಮುಂಡಿಬೆಟ್ಟ, ಕೆಆರ್‍ಎಸ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳ ಬಳಿ ಅಲಂಕಾರಿಕ ವಸ್ತುಗಳು ಸೇರಿದಂತೆ ಆಟಿಕೆಗಳನ್ನು ಮಾರಾಟ ಮಾಡುವ ವ್ಯಾಪಾರಿ ಗಳಲ್ಲಿ ಸಂತಸ ಮನೆ ಮಾಡಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಬಂದಷ್ಟೂ ನಮ್ಮ ಕುಟುಂಬದ ನಿರ್ವಹಣೆ ಸಲೀಸಾಗಲಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

Translate »