ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ `ಆಕಾಶ ಅಂಬಾರಿ’ ವಿಮಾನಯಾನ ಮುಂದುವರಿಕೆ
ಮೈಸೂರು

ಪ್ರಯಾಣಿಕರ ಪ್ರತಿಕ್ರಿಯೆ ಆಧರಿಸಿ `ಆಕಾಶ ಅಂಬಾರಿ’ ವಿಮಾನಯಾನ ಮುಂದುವರಿಕೆ

October 22, 2018

ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆ ಯಲ್ಲಿ ಮೈಸೂರು-ಬೆಂಗಳೂರು ನಡುವೆ ಸಂಚರಿಸುತ್ತಿರುವ `ಆಕಾಶ ಅಂಬಾರಿ’ ವಿಮಾನ ಯಾನಕ್ಕೆ ಜನರ ಪ್ರತಿ ಕ್ರಿಯೆ ಮನಗಂಡು ಸೇವೆ ಮುಂದುವರಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.

ದಸರಾ ಆನೆಗಳಿಗೆ ಭಾನುವಾರ ಪೂಜೆ ಸಲ್ಲಿಸಿ ಬೀಳ್ಕೊಟ್ಟ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಸರಾ ಹಿನ್ನೆಲೆಯಲ್ಲಿ ಮೈಸೂರು- ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಆಕಾಶ ಅಂಬಾರಿ ವಿಮಾನಯಾನಕ್ಕೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಯಾಣ ದರ ಒಬ್ಬರಿಗೆ 999 ರೂ ನಿಗದಿ ಮಾಡಲಾಗಿತ್ತು. ಇದರಿಂದ ಬೇಡಿಕೆ ಹೆಚ್ಚಾಗಿತ್ತು. ಮುಂದಿನ ದಿನಗಳಲ್ಲಿ ಉತ್ತಮ ಪ್ರತಿ ಕ್ರಿಯೆ ಕಂಡು ಬಂದರೆ ಸೇವೆ ಮುಂದುವರೆ ಸುವುದಕ್ಕೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದರು.

ಆನೆಗಳ ಪಾತ್ರ ಪ್ರಮುಖ: ನಾಡಹಬ್ಬ ದಸರಾ ಮಹೋತ್ಸವದ ಯಶಸ್ಸಿನಲ್ಲಿ ಆನೆಗಳು ಮತ್ತು ಮಾವುತರ ಪಾತ್ರ ಪ್ರಮುಖವಾಗಿದೆ. ಈ ಹಿನ್ನೆಲೆ ಯಲ್ಲಿ ಇಂದು ಜಿಲ್ಲಾಡಳಿತದ ವತಿಯಿಂದ ದಸರಾ ಆನೆಗಳ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬದ ಸದಸ್ಯರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಇಷ್ಟು ದಿನ ಅರಮನೆ ಯಲ್ಲಿದ್ದ ಆನೆಗಳನ್ನು ಮರಳಿ ಶಿಬಿರಗಳಿಗೆ ಕಳಿಸಿ ಕೊಡುವುದಕ್ಕೆ ಬೇಸರವಾಗುತ್ತದೆ. ಆದರೂ ಅನಿ ವಾರ್ಯವಾಗಿ ಆನೆಗಳನ್ನು ಕಳುಹಿಸಿಕೊಡಲೇ ಬೇಕಾಗಿದೆ. ಗೌರವಯುತವಾಗಿ ಆನೆಗಳು, ಮಾವು ತರು ಮತ್ತು ಕಾವಾಡಿಗಳು ಹಾಗೂ ಅವರ ಕುಟುಂ ಬದ ಸದಸ್ಯರನ್ನು ಬೀಳ್ಕೊಟ್ಟಿದ್ದೇವೆ ಎಂದರು.

ಮೈಸೂರಿನಲ್ಲಿ ದಸರಾ ಹಿನ್ನೆಲೆಯಲ್ಲಿ ಮಾಡಲಾಗಿರುವ ದೀಪಾಲಂಕಾರವನ್ನು ಜಂಬೂ ಸವಾರಿ ಮುಗಿದ ನಂತರ ಎರಡು ದಿನಗಳ ಕಾಲ ವಿಸ್ತರಿಸಲಾಗಿತ್ತು. ಶನಿವಾರ ಮತ್ತು ಭಾನುವಾರ ಸಂಜೆಯೂ ದೀಪಾಲಂಕಾರ ಮಾಡಲಾಗಿತ್ತು. ದೀಪಾಲಂಕಾರವನ್ನು ಇನ್ನಷ್ಟು ದಿನ ವಿಸ್ತರಿಸ ಬೇಕೇ ಎನ್ನುವುದನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದರು.

ಯಶಸ್ಸು ನನ್ನೊಬ್ಬನದ್ದೇ ಅಲ್ಲ: ಇದೇ ವೇಳೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಮಾತನಾಡಿ, ಈ ಬಾರಿಯ ದಸರಾ ಮಹೋತ್ಸವ ಸರ್ಕಾರ, ಸಚಿವರು, ಅಧಿಕಾರಿಗಳ ಸಹಕಾರದೊಂದಿಗೆ ತುಂಬಾ ಅಚ್ಚುಕಟ್ಟಾಗಿ ನಡೆದಿದೆ. ಇದು ನನ್ನೊಬ್ಬನ ಕೆಲಸವಲ್ಲ, ಎಲ್ಲರೂ ಕೈಜೋಡಿಸಿದ್ದಾರೆ ಎಂದರು. ದಸರಾ ಮಹೋತ್ಸವ ಆಚರಣೆ ಹಲವು ಸವಾಲುಗಳಿದ್ದವು. ಎಲ್ಲವನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದೇವೆ. ಸಾರ್ವಜನಿಕರು, ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಎಲ್ಲರ ಸಹಭಾಗಿತ್ವ ಹಾಗೂ ಸಹಕಾರ ದಿಂದ ದಸರಾ ಮಹೋತ್ಸವ ಯಶಸ್ವಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

Translate »