ತೆರೆದ ಬಸ್‍ನಲ್ಲಿ ಸಿಎಂ ಕುಮಾರಸ್ವಾಮಿ ದಸರಾ ದರ್ಶನ
ಮೈಸೂರು, ಮೈಸೂರು ದಸರಾ

ತೆರೆದ ಬಸ್‍ನಲ್ಲಿ ಸಿಎಂ ಕುಮಾರಸ್ವಾಮಿ ದಸರಾ ದರ್ಶನ

October 13, 2018

ಮೈಸೂರು:  ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತೆರೆದ ಬಸ್ (ಓಪನ್ ಟಾಪ್ ಬಸ್)ನಲ್ಲಿ ಮೈಸೂರು ಸುತ್ತು ಹಾಕಿ, ದೀಪಾಲಂಕಾರವನ್ನು ಕಣ್ತುಂಬಿ ಕೊಂಡರಲ್ಲದೆ, ಮಹಾರಾಜ  ಮೈದಾನದವರೆಗೂ ಅದೇ ಬಸ್‍ನಲ್ಲಿ ತೆರಳಿ, ಯುವ ದಸರಾ ಉದ್ಘಾಟಿಸಿದರು.

ಸರ್ಕಾರಿ ಅತಿಥಿ ಗೃಹದಿಂದ ಇರ್ವಿನ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಕೆ.ಆರ್.ವೃತ್ತ, ಚಾಮರಾಜ ಒಡೆಯರ್ ವೃತ್ತ, ಜಯ ಚಾಮರಾಜ ಒಡೆಯರ್ ವೃತ್ತ, ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಕಾಲೇಜುವೃತ್ತ(ಗನ್‍ಹೌಸ್), ಚಾಮರಾಜ ನೂರಡಿ ಜೋಡಿ ರಸ್ತೆ, ರಾಮ ಸ್ವಾಮಿ ವೃತ್ತದ ಮೂಲಕ ಮಹಾರಾಜ ಕಾಲೇಜು ಮೈದಾನಕ್ಕೆ ತೆರೆದ ಬಸ್‍ನಲ್ಲಿ ಆಗಮಿಸಿದರು.

ವಿದ್ಯುತ್ ಬೆಳಕಿನಲ್ಲಿ ಜಗ ಮಗಿಸುತ್ತಿದ್ದ ಅಂಬಾವಿಲಾಸ ಅರಮನೆ ಸೇರಿದಂತೆ ಮಾರ್ಗದುದ್ದಕ್ಕೂ ದಸರಾ ದೀಪಾಲಂಕಾರವನ್ನು ಕಣ್ತುಂಬಿಕೊಂಡು, ಸಂತಸ ಗೊಂಡರು. ಇವರೊಂದಿಗೆ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್, ಕೃಷಿ ಸಚಿವ ಶಿವಶಂಕರ್ ರೆಡ್ಡಿ, ವಿಧಾನ ಪರಿಷತ್ ಸಭಾಪತಿ ಬಸವ ರಾಜ ಹೊರಟ್ಟಿ ಮತ್ತಿತರ ಗಣ್ಯರೂ ಪ್ರಯಾಣಿಸಿ, ಬೆಳಕಿನ ವೈಭವವನ್ನು ಕಣ್ತುಂಬಿಕೊಂಡರು.

ಆದರೆ ಇದರಿಂದ ಕೆಲ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಸಾರ್ವಜನಿಕರು ಪರ ದಾಡುವಂತಾಗಿತ್ತು. ಫಲಪುಷ್ಪ ಪ್ರದರ್ಶನ, ಕುಸ್ತಿ ಪಂದ್ಯಾವಳಿ, ಅರಮನೆ, ಪುರಭವನ, ಜಗನ್ಮೋಹನ ಅರಮನೆ, ಚಿಕ್ಕಗಡಿಯಾರ ವೃತ್ತದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ದೀಪಾಲಂಕಾರ ವೀಕ್ಷಣೆಗೆ ಬಂದಿದ್ದವರು ಹೈರಾಣಾಗಿದ್ದರು. ಸಿಎಂ ನಗರ ಪ್ರದಕ್ಷಿಣೆಯಿಂದಾಗಿ ಸಾರ್ವಜನಿಕರು ಪರದಾಡುವಂತಾಗಿತ್ತು. ವಾಹನ ದಟ್ಟಣೆ ನಡುವೆ ಸಿಲುಕಿದ್ದ ಆಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ಪೊಲೀಸರು ಹೆಣಗಾಡಬೇಕಾಯಿತು.

Translate »