ಪುಟಾಣಿಗಳ ಹಾಡು, ಕುಣಿತ: ನೆರೆದವರ ಕಣ್ಣಿಗೆ ಹಬ್ಬ
ಮೈಸೂರು, ಮೈಸೂರು ದಸರಾ

ಪುಟಾಣಿಗಳ ಹಾಡು, ಕುಣಿತ: ನೆರೆದವರ ಕಣ್ಣಿಗೆ ಹಬ್ಬ

October 13, 2018

ಮೈಸೂರು:  ದೊಡ್ಡ ವೇದಿಕೆಯಲ್ಲಿ ಪುಟಾಣಿಗಳ ಕಲರವ, ಚಿಣ್ಣರ ನೃತ್ಯೋತ್ಸವಕ್ಕೆ ಮನಸೋತ ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆ ಮೂಲಕ ಪ್ರೋತ್ಸಾಹ ನೀಡಿದರು. ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಜೆಕೆ ಮೈದಾನದಲ್ಲಿ ಆಯೋಜಿಸಿದ್ದ ಚಿಣ್ಣರ ಮೇಳದಲ್ಲಿ ವಿಶೇಷ ಉಡುಗೆ ತೊಟ್ಟ ಚಿಣ್ಣರು ಜಾನಪದ, ಸಿನಿಮಾ ಹಾಡುಗಳಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರೆ, ಪ್ರೇಕ್ಷಕರು ಮಕ್ಕಳ ನೃತ್ಯವನ್ನು ಕಣ್ತುಂಬಿಕೊಂಡು ಸಂತೋಷಪಟ್ಟರು.

ಮೊದಲಿಗೆ ಬಿಳಿಕೆರೆ ತಂಡವು ‘ಚನ್ನಪ್ಪ ಚನ್ನೇಗೌಡ ಕುಂಬಾರ ಮಾಡಿದ ಕೊಡನವ್ವ’ ಜಾನಪದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದರು. ಎಚ್.ಡಿ.ಕೋಟೆಯ ತುಂಬಸೋಗೆ ಕೇಂದ್ರದ ಮಕ್ಕಳು ‘ರ್ಯಾಂಬೋ 2’ ಚಿತ್ರದ ‘ಚುಟು ಚುಟು ಅಂತ್ತೈತಿ ನನಗೆ ಚುಮುಚುಮು ಆಗೈತಿ’ ಹಾಡಿನ ಸಮೂಹ ನೃತ್ಯಕ್ಕೆ ಪ್ರೇಕ್ಷಕರು ಚಪ್ಪಾಳೆ ತಟ್ಟಿ, ಸಿಳ್ಳೇ ಹಾಕಿ ಸಂಭ್ರಮಿಸಿದರು.

ತಿ.ನರಸೀಪುರದ ಕೋಗಳ್ಳಿಯ ಮಕ್ಕಳು ‘ಆಡೋಣ ಬಾ, ಹಾಡೋಣ ಬಾ ಒಂದಾಗಿ ನಾವೆಲ್ಲ ಈಗ’ ಹಾಡಿಗೆ ನೃತ್ಯ ಮಾಡುವ ಮೂಲಕ ಪ್ರೇಕ್ಷಕರಿಗೆ ಬಾಲ್ಯದ ಸಿಹಿ ನೆನಪುಗಳನ್ನು ನೆನಪಿಸುವಲ್ಲಿ ಯಶಸ್ವಿಯಾದರು. ನಂಜನಗೂಡಿನ ನಾಗಲಾಪುರದ ಮಕ್ಕಳು ಮಹದೇ ಶ್ವರನ ಗೀತೆಗೆ ವಿಶೇಷ ವೇಷವನ್ನು ತೊಟ್ಟು ನೃತ್ಯ ಮಾಡಿ ಭಕ್ತಿಪರವಶತೆಯನ್ನು ಸಾರಿದರು.

ಕೇವಲ ಸಿನಿಮಾ, ಜಾನಪದ ಹಾಡಿಗಲ್ಲದೇ, ಈ ಹಾಡುಗಳ ಜೊತೆಗೆ ಪರಿಸರ ರಕ್ಷಣೆ, ದೇಶಭಕ್ತಿ ಸಂದೇಶವನ್ನು ಸಾರುವಲ್ಲಿ ಯಶಸ್ವಿಯಾದರು. ಪೊಲೀಸ್, ರಾಜ, ಒನಕೆ ಓಬವ್ವ, ಗ್ರಾಮೀಣ ಮಹಿಳೆಯರಂತೆ ಸಿಂಗಾರ ಗೊಂಡು ಹುಡುಗಿಯರು ಪ್ರದರ್ಶನದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರೆ, ವಿಶೇಷ ಉಡುಗೆ ತೊಟ್ಟ ಚಿಣ್ಣರು ವೇದಿಕೆ ಮೇಲೆ ಪ್ರದರ್ಶನ ನೀಡಿದರು.

ಇದಕ್ಕೂ ಮೊದಲು ಚಿಣ್ಣರ ದಸರಾವನ್ನು ಕರ್ನಾ ಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ವೈ.ಮರಿಸ್ವಾಮಿ ಬಲೂನ್ ಹಾರಿ ಬಿಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮೈಸೂರು ಪ್ರತಿಯೊಬ್ಬರು ಮೆಚ್ಚುವಂತಹ ಸ್ಥಳ ವಾಗಿದ್ದು, ಮೈಸೂರು ಮಲ್ಲಿಗೆ, ಮೈಸೂರ್ ಪಾಕ್ ಹೀಗೆ ಹಲವು ವಿಶೇಷತೆಗಳಿಂದಲೂ ಗುರುತಿಸಿ ಕೊಂಡಿದೆ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮೈಸೂರು ಉತ್ತಮ ಸ್ಥಳವಾಗಿದೆ. ಹಾಗಾಗಿ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ. ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಲು, ಚಿಣ್ಣರ ದಸರಾ ಉತ್ತಮ ವೇದಿಕೆಯಾಗಿದೆ ಎಂದರು.
ಮಕ್ಕಳಿಗೆ ವಿಶೇಷ ಹಕ್ಕುಗಳಿದ್ದು, ಅವುಗಳನ್ನು ಅರಿತು ಪೋಷಕರು ನಡೆಯಬೇಕು. ಅವರನ್ನು ಶಿಕ್ಷಿಸುವ ಹಕ್ಕು ಪೋಷಕರಿಗಿಲ್ಲ. ರಕ್ಷಣೆ ಜತೆಗೆ ಗುಣಮಟ್ಟ ಶಿಕ್ಷಣ ನೀಡಬೇಕು. ಇದರಿಂದ ಮಾತ್ರವೇ ಉತ್ಕøಷ್ಟ ಮಾನವ ಸಂಪನ್ಮೂಲ ನಿರ್ಮಾಣಕ್ಕೆ ಸಾಧ್ಯ. ಮಕ್ಕಳನ್ನು ಯಾಂತ್ರಿಕವಾಗಿ ಬೆಳೆಸುತ್ತಿರುವುದು ಸರಿಯಲ್ಲ. ಪ್ರಸ್ತುತ ಅಂಕಗಳ ಆಧಾರದ ಮೇಲೆ ಮಕ್ಕಳ ಪ್ರತಿಭೆಯನ್ನು ಗುರುತಿಸುವುದು. ಇತರೆ ಮಕ್ಕಳೊಂದಿಗೆ ತಮ್ಮ ಮಕ್ಕ ಳನ್ನು ಹೋಲಿಕೆ ಮಾಡುವುದು ಹೆಚ್ಚಾಗುತ್ತಿದೆ. ಮಕ್ಕಳಿಗೆ ಅಭಿವೃದ್ಧಿಗೆ ಒತ್ತು ನೀಡಿ, ಒತ್ತಾಯ ಮಾಡಬೇಡಿ ಎಂದು ಸಲಹೆ ನೀಡಿದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಇಲಾಖೆ ನಿರ್ದೇಶಕಿ ರಾಧ, ಕ್ರೀಡಾಪಟು ಶಿವಲಿಂಗಪ್ಪ ಇನ್ನಿತರರು ಉಪಸ್ಥಿತರಿದ್ದರು.

Translate »