ಔಷಧೀಯ ಗಿಡಗಳಿಂದ ಉತ್ತಮ ಆದಾಯ ಗಳಿಸಬಹುದು
ಮೈಸೂರು

ಔಷಧೀಯ ಗಿಡಗಳಿಂದ ಉತ್ತಮ ಆದಾಯ ಗಳಿಸಬಹುದು

October 2, 2018

ಮೈಸೂರು: ಔಷಧೀಯ ಸಸ್ಯಗಳಿಗೆ ಉತ್ತಮ ಬೇಡಿಕೆ ಇದ್ದು, ಸೂಕ್ತ ಬೆಲೆಯೂ ಲಭ್ಯವಾಗುವ ಹಿನ್ನೆಲೆಯಲ್ಲಿ ರೈತರು ಈ ಸಸ್ಯಗಳ ಕೃಷಿಗೆ ಮುಂದಾಗುವ ಮೂಲಕ ಉತ್ತಮ ಆದಾಯ ಗಳಿಸಲು ಸಾಧ್ಯವಿದೆ ಎಂದು ಕೇರಳ ಅರಣ್ಯ ಇಲಾಖೆಯ ಅರಣ್ಯ ಪಡೆಯ ನಿವೃತ್ತ ಮುಖ್ಯಸ್ಥ ಹಾಗೂ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ.ಹೆಚ್.ನಾಗೇಶ್ ಪ್ರಭು ಅಭಿಪ್ರಾಯಪಟ್ಟರು.

ಕೇಂದ್ರದ ಆಯುಷ್ ಸಚಿವಾಲಯದ ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿಯ ಪ್ರಾದೇಶಿಕ ಹಾಗೂ ಸಹಾಯಪ್ರಧಾನ ಕೇಂದ್ರ (ದಕ್ಷಿಣ ವಲಯ/ಎನ್‍ಎಂಪಿಬಿ), ಮೈಸೂರು ವಿವಿ ಸಸ್ಯಶಾಸ್ತ್ರ ಅಧ್ಯಯನ ವಿಭಾಗದ ಆಶ್ರಯದಲ್ಲಿ `ಔಷಧೋದ್ಯಮಕ್ಕೆ ಗುಣ ಮಟ್ಟದ ಔಷಧೀಯ ಸಸ್ಯಗಳ ನಿರಂತರ ಪೂರೈಕೆ ಮೂಲಕ ಔಷಧೀಯ ಸಸ್ಯಗಳ ಕೃಷಿಯನ್ನು ಲಾಭದಾಯಕಗೊಳಿಸುವುದು’ ವಿಷಯ ಕುರಿತಂತೆ ಮೈಸೂರಿನ ಮಾನಸ ಗಂಗೋತ್ರಿಯ ಮೈಸೂರು ವಿವಿ ವಿಜ್ಞಾನ ಭವನದ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶಾದ್ಯಂತ ರೈತರು ಬೆಳೆ ನಷ್ಟದಿಂದ ಬೇಸತ್ತು ಆತ್ಮಹತ್ಯೆ ಹಾದಿ ತುಳಿಯುವುದು ಆಗಾಗ್ಗೆ ವರದಿ ಆಗುತ್ತಲೇ ಇರುತ್ತದೆ. ಉತ್ತಮ ಬೆಲೆ ದೊರೆಯುತ್ತದೆ ಎಂದು ಬೆಳೆದ ಧಾನ್ಯ, ತರಕಾರಿಗಳಿಗೆ ಸೂಕ್ತ ಬೆಲೆ ಸಿಗದೇ ಕಂಗಾಲಾಗುವ ಸನ್ನಿವೇಶವೂ ಅಪರೂಪವೇನಲ್ಲ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬ ರೈತನೂ ಇದೇ ಬೆಳೆಗೆ ಗಂಟು ಬೀಳದೇ ಔಷಧೀಯ ಸಸ್ಯಗಳಿಗೂ ಆದ್ಯತೆ ನೀಡಿದರೆ, ಆದಾಯ ಗಳಿಸಲು ಸಾಧ್ಯವಿದೆ ಎಂದು ತಿಳಿಸಿದರು.

ಚಿಕ್ಕ ಜಮೀನುಗಳಲ್ಲಿ ಒಬ್ಬರೇ ರೈತರು ಔಷಧೀಯ ಸಸ್ಯಗಳನ್ನು ಬೆಳೆದರೆ ಅದು ಅಂತಹ ಪ್ರಯೋಜನಕಾರಿ ಆಗಲಾರದು. ಈ ಹಿನ್ನೆಲೆಯಲ್ಲಿ ರೈತರು ಗುಂಪುಗೂಡಿ ಬೃಹತ್ ಪ್ರಮಾಣದಲ್ಲಿ ಈ ಸಸ್ಯಗಳ ಕೃಷಿಗೆ ಕೈ ಹಾಕಬೇಕು. ಸಸ್ಯಗಳನ್ನು ಪಾಲನೆ-ಪೋಷಣೆ ಮಾಡುವುದು ಫಾಸ್ಟ್ ಫುಡ್ ಮಾಡಿದಂತಲ್ಲ. ಆಯಾಯ ಸಸ್ಯಗಳ ಬಗ್ಗೆ ಅರಿತು ಅವುಗಳನ್ನು ಬೆಳೆಸಬೇಕಾಗುತ್ತದೆ. ಅಕೇಷಿಯಾ ಹಾಗೂ ನೀಲಗಿರಿ ಮರಗಳು ಇರುವ ಪ್ರದೇಶದಲ್ಲಿ ಭೂಮಿಯಲ್ಲಿ ನೀರು ಇಂಗದೇ ಅಂತರ್ಜಲ ಕುಸಿತವಾಗುತ್ತದೆ ಎಂದು ಹೇಳಲಾಗಿದೆ. ಇಂತಹ ಪ್ರದೇಶದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಯುವುದು ಸೂಕ್ತವಾಗುತ್ತದೆ ಎಂದು ಹೇಳಿದರು.

ಅಶೋಕ ಮರ ಹುಡುಕುವಂತಾಗಿದೆ: ಔಷಧೀಯ ಗುಣವುಳ್ಳ ಅಶೋಕ ಮರಕ್ಕೆ ಭಾರತ ಹೆಸರುವಾಸಿಯಾಗಿತ್ತು. ಅಷ್ಟರ ಮಟ್ಟಿಗೆ ಹೆಚ್ಚಿನ ಪ್ರಮಾಣದಲ್ಲಿ ಕಾಣ ಸಿಗುತ್ತಿದ್ದ ಅಶೋಕ ಮರ ಇಂದು ನಶಿಸುವ ಹಂತಕ್ಕೆ ಬಂದಿದೆ. ಕರ್ನಾಟಕ ಸೇರಿದಂತೆ ಮತ್ತಿತರ ರಾಜ್ಯ ಗಳಲ್ಲಿ ಶೇ.1ರಷ್ಟು ಅಶೋಕ ಮರಗಳಿವೆ. ಆಂಧ್ರಪ್ರದೇಶದಲ್ಲಿ ಹೆಚ್ಚಾಗಿ ಬೆಳೆಯುತ್ತಿದ್ದ ರಕ್ತ ಚಂದನವು ನಶಿಸುತ್ತಿದೆ. ಚಂದನ ಬೆಳೆಗೆ ಪ್ರಖ್ಯಾತಿಗೊಂಡಿದ್ದ ಭಾರತದಲ್ಲಿ ಇಂದು ಚಂದನವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವಂತಹ ಸ್ಥಿತಿ ಎದುರಾಗಿದೆ. ಭಾರತೀಯ ಮೂಲದವರೇ ವಿದೇಶದಲ್ಲಿ ನೆಲೆಸಿ ಅಲ್ಲಿ ಗಂಧದ ಮರವನ್ನು ಬೆಳೆದು ಭಾರತ ಮತ್ತು ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದಾರೆ. ಇದೊಂದು ರೀತಿಯ ವಿಪರ್ಯಾಸ ಎಂದು ವಿಷಾದಿಸಿದರು.

ಔಷಧೀಯ ಸಸ್ಯ ಬಳಕೆಗೆ ಕಾನೂನು ಅಡ್ಡಿ: ಕಾರ್ಯಾಗಾರದ ಉದ್ಘಾಟನೆ ನೆರವೇರಿ ಸಿದ ಆಯುಷ್ ಇಲಾಖೆ ನಿರ್ದೇಶಕಿ ಹಾಗೂ ನವದೆಹಲಿಯ ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿ ಮಾಜಿ ಸಿಇಓ ಮೀನಾಕ್ಷಿ ನೇಗಿ ಮಾತನಾಡಿ, ಭಾರತದ ಅರಣ್ಯ ಪ್ರದೇಶ ಗಳಲ್ಲಿ ಅಪಾರ ಪ್ರಮಾಣದಲ್ಲಿ ಔಷಧೀಯ ಸಸ್ಯಗಳ ಸಂಪತ್ತು ಇಂದಿಗೂ ಲಭ್ಯವಿವೆ. ಆದರೆ ಅವುಗಳನ್ನು ಔಷಧ ಉತ್ಪಾದನೆಗೆ ಬಳಸಿ ಕೊಳ್ಳಲು ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದ ನೂರಾರು ಕಾನೂನು ಕಟ್ಟಳೆಗಳು ಅಡ್ಡಿ ಯಾಗಿವೆ. ಆದರೆ ಈ ಸಸ್ಯಗಳ ಅಕ್ರಮ ಸಾಗಾ ಣಿಕೆ ಮತ್ತು ಮಾರಾಟ ನಿಯಂತ್ರಿಸಲು ಮಾತ್ರ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಪಂಚದಲ್ಲೇ ಅತಿ ಹೆಚ್ಚು ಔಷಧಿಯ ಸಸ್ಯ ಪ್ರಬೇಧಗಳು ಭಾರತದಲ್ಲಿ ಕಾಣಬ ಹುದು. 12 ಸಾವಿರ ವಿವಿಧ ಜಾತಿಯ ಔಷಧೀಯ ಸಸ್ಯಗಳು ದೇಶದಲ್ಲಿವೆ. ಹೀಗಿದ್ದರೂ ಕಾನೂನು ಅಡ್ಡಿ ಸೇರಿದಂತೆ ನಾನಾ ಕಾರಣ ಗಳಿಂದ ಔಷಧ ತಯಾರಿಕೆಗೆ ಅವುಗಳನ್ನು ಬಳಸಿಕೊಳ್ಳಲಾಗದ ಸನ್ನಿವೇಶವಿದೆ. ಈ ಹಿನ್ನೆಲೆಯಲ್ಲಿ ಸಸ್ಯಗಳ ಔಷಧೋದ್ಯಮ ಪ್ರಗತಿಗೆ ಕುಂಠಿತ ಉಂಟಾಗಿದೆ ಎಂದರು.

`ಗಗ್ಗಲ್’ ಎಂಬ ಔಷಧೀಯ ಸಸ್ಯ ದೇಶದ ಯಾವುದೇ ಮೂಲೆಯಲ್ಲೂ ಯಥೇಚ್ಛ ವಾಗಿ ಕಂಡು ಬರುತ್ತಿತು. ಆದರೆ ಇತ್ತೀಚೆಗೆ ಇದು ಕಣ್ಮರೆಯಾಗಿದ್ದು, ಈಗ ಇದಕ್ಕಾಗಿ ಬೇರೆ ದೇಶಗಳನ್ನು ಅವಲಂಬಿಸಬೇಕಾಗಿದೆ. ಅದೇ ರೀತಿ `ಮೂಲಾಟಿ’ ಔಷಧಿ ಸಸ್ಯವನ್ನು ನಮ್ಮ ಅಜ್ಜಿಅಜ್ಜಂದಿರು ಕೆಮ್ಮು, ನೆಗಡಿ ಸೇರಿದಂತೆ ಮೊದಲಾದ ಕಾಯಿಲೆ ನಿವಾರಣೆಗೆ ಔಷಧಿ ಯಾಗಿ ಬಳಕೆ ಮಾಡುತ್ತಿದ್ದರು. ಈಗ ಇದಕ್ಕಾಗಿಯೂ ಪರದೇಶಗಳತ್ತ ನೋಡು ವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೃಷಿಕರು, ಔಷಧೋದ್ಯಮಿಗಳು, ಸಸ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 300ಕ್ಕೂ ಹೆಚ್ಚು ಮಂದಿ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ನವದೆಹಲಿಯ ಎನ್‍ಎಂ ಪಿಬಿ ಸಹಾಯಕ ಸಲಹೆಗಾರ ಡಾ.ಎನ್. ಪದ್ಮಕುಮಾರ್, ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ.ಆಯಿಷಾ ಎಂ.ಶರೀಫ್, ಮೈಸೂರು ವಿವಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಎಸ್.ಲೀಲಾವತಿ ಮತ್ತಿತ ರರು ಹಾಜರಿದ್ದರು.

Translate »