ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯನಿಂದ  ಗುಂಡಿಕ್ಕಿ ಬಿಜೆಪಿ ಮುಖಂಡನ ಹತ್ಯೆ
ಕೊಡಗು

ಜೆಡಿಎಸ್ ಬೆಂಬಲಿತ ಗ್ರಾಪಂ ಸದಸ್ಯನಿಂದ  ಗುಂಡಿಕ್ಕಿ ಬಿಜೆಪಿ ಮುಖಂಡನ ಹತ್ಯೆ

October 2, 2018

ಮಡಿಕೇರಿ: ರಾಜಕೀಯ ದ್ವೇಷಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ನೋರ್ವ ಪಿಸ್ತೂಲ್‍ನಿಂದ ಗುಂಡಿಕ್ಕಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮರಗೋಡುವಿನಲ್ಲಿ ನಡೆದಿದೆ.

ಮರಗೋಡು ನಿವಾಸಿ, ಸ್ಥಳೀಯ ಬಿಜೆಪಿ ಸ್ಥಾನೀಯ ಸಮಿತಿ ಕಾರ್ಯ ದರ್ಶಿ ಕಾನಡ್ಕ ತಿಲಕರಾಜ್ (40) ಗುಂಡಿಗೆ ಬಲಿಯಾದ ವ್ಯಕ್ತಿ. ಆರೋಪಿ ಜೆಡಿಎಸ್ ಬೆಂಬಲಿತ ಗ್ರಾ.ಪಂ ಸದಸ್ಯ ಮುಂಡೋಡಿ ನಂದಾ ನಾಣಯ್ಯ ತಲೆ ಮರೆಸಿಕೊಂಡಿದ್ದಾನೆ.

ಸೋಮವಾರ ಸಂಜೆ 6.30 ಗಂಟೆ ಸುಮಾರಿಗೆ ಮರಗೋಡು ಜಂಕ್ಷನ್ ಬಳಿ ನಂದಾ ನಾಣಯ್ಯ ಮತ್ತು ಚಿದಂಬರ ಎಂಬುವರು ಮಾತನಾಡುತ್ತ ನಿಂತಿದ್ದ ಸಂದರ್ಭ ತಿಲಕ್‍ರಾಜ್ ತಮ್ಮ ಬೈಕಿನಲ್ಲಿ ಅತ್ತ ಕಡೆ ತೆರಳಿದ್ದಾರೆ. ಈ ಸಂದರ್ಭ ನಂದಾ ನಾಣಯ್ಯ
‘ತನ್ನನ್ನು ಹೊರ ಊರಿನಿಂದ ಬಂದವನು ಎಂದು ಅವಹೇಳನ ಮಾಡಿಕೊಂಡು ತಿರುಗುತ್ತಿದ್ದೀಯಾ. ನೀನು ಬದುಕಿದ್ದರೆ ತಾನೆ ಹೀಗೆ ಹೇಳಲು ಸಾಧ್ಯ’ ಎಂದು ಹೇಳಿ ಪಿಸ್ತೂಲ್‍ನಿಂದ ತಿಲಕ್ ರಾಜ್ ಎದೆಗೆ ಗುಂಡು ಹಾರಿಸಿದ್ದಾನೆ. ನಂದಾ ನಾಣಯ್ಯ ಹಾರಿಸಿದ ಗುಂಡಿನಿಂದ ತಿಲಕ್‍ರಾಜ್ ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆತರುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮೃತ ತಿಲಕ್ ರಾಜ್ ಪತ್ನಿ, 10 ವರ್ಷದ ಮಗ, 8 ವರ್ಷದ ಮಗಳು ಹಾಗೂ ತಂದೆ ತಾಯಿಯನ್ನು ಅಗಲಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆ ಎದುರು ಜಮಾಯಿಸಿದ್ದರು.

ರಾಜಕೀಯ ವೈಷಮ್ಯವೇ ಕೃತ್ಯಕ್ಕೆ ಕಾರಣವೆಂದು ಹೇಳಲಾಗುತ್ತಿದ್ದು, ಸ್ಥಳಕ್ಕೆ ಎಸ್.ಪಿ. ಸುಮನ.ಡಿ, ಡಿವೈಎಸ್‍ಪಿ ಸುಂದರ್ ರಾಜ್, ಗ್ರಾಮಾಂತರ ಠಾಣಾಧಿಕಾರಿ ಚೇತನ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ನಂದಾ ನಾಣಯ್ಯನ ಪತ್ತೆಗಾಗಿ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.

ಪ್ರಕರಣವನ್ನು ಭೇದಿಸಲು 2 ತಂಡಗಳನ್ನು ರಚಿಸಲಾಗಿದ್ದು, ಆರೋಪಿಯ ಬಂಧನದ ಬಳಿಕ ಕೊಲೆಯ ಹಿಂದಿನ ಉದ್ದೇಶ ಬಯಲಾಗಲಿದೆ. ಬಂದೂಕಿನ ಪೂರ್ವಾಪರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‍ಪಿ ಸುಮನ ಡಿ. ತಿಳಿಸಿದ್ದಾರೆ.

ಶಾಸಕರ ಭೇಟಿ: ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ನಿಷ್ಠಾವಂತ ಕಾರ್ಯಕರ್ತನನ್ನು ಕಳೆದುಕೊಂಡಿರುವುದಾಗಿ ಬೇಸರ ವ್ಯಕ್ತಪಡಿಸಿದರು. ರಾಜಕೀಯ ವೈಷಮ್ಯದಿಂದ ಹತ್ಯೆ ನಡೆದಿರುವುದು ಅತ್ಯಂತ ಖಂಡನೀಯ ಮತ್ತು ಆತಂಕಕಾರಿ ಬೆಳವಣಿಗೆಯಾಗಿದೆ. ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್, ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್ ಈ ಸಂದರ್ಭ ಹಾಜರಿದ್ದರು.

Translate »