ಕಾಂಗ್ರೆಸ್‍ನ 8 ಮಂದಿ ಸಂಪುಟ ಸೇರ್ಪಡೆ
ಮೈಸೂರು

ಕಾಂಗ್ರೆಸ್‍ನ 8 ಮಂದಿ ಸಂಪುಟ ಸೇರ್ಪಡೆ

December 23, 2018

ಬೆಂಗಳೂರು: ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಮಂತ್ರಿ ಮಂಡಲ ಪುನರ್ ರಚಿಸಿದ್ದು, ತಮ್ಮ ಸರ್ಕಾ ರದ ಪಾಲುದಾರ ಪಕ್ಷ ಕಾಂಗ್ರೆಸ್‍ನ ಎಂಟು ಮಂದಿ ಸೇರ್ಪಡೆ ಮಾಡಿಕೊಂಡು, ಇಬ್ಬರು ಸಚಿವರನ್ನು ಕೈಬಿಟ್ಟಿದ್ದಾರೆ.

ಜೆಡಿಎಸ್ ಪಾಲಿನ ಎರಡು ಸ್ಥಾನಗಳನ್ನು ಕುಮಾರಸ್ವಾಮಿ ಹಾಗೇ ಉಳಿಸಿಕೊಂ ಡಿದ್ದು, ಎಂಟು ಮಂದಿ ಸೇರ್ಪಡೆಯಿಂದ ಮಂತ್ರಿ ಮಂಡಲದ ಗಾತ್ರ 32ಕ್ಕೆ ಏರಿಕೆಯಾಗಿದೆ.
ಸಂಪುಟ ದರ್ಜೆ ಸಚಿವರಾಗಿ ಎಂ.ಬಿ. ಪಾಟೀಲ್ (ವಿಜಯಪುರ), ಆರ್.ಬಿ. ತಿಮ್ಮಾ ಪುರ (ಬಾಗಲಕೋಟೆ), ಸತೀಶ್ ಜಾರಕಿ ಹೊಳಿ (ಬೆಳಗಾವಿ), ಪಿ.ಟಿ.ಪರಮೇಶ್ವರ್ ನಾಯಕ್ (ಬಳ್ಳಾರಿ). ಇದೇ ಮೊದಲ ಬಾರಿಗೆ ಸಿ.ಎಸ್.ಶಿವಳ್ಳಿ (ಧಾರವಾಡ), ಇ. ತುಕಾರಾಂ (ಬಳ್ಳಾರಿ), ರಹೀಂ ಖಾನ್ (ಬೀದರ್), ಎಂ.ಟಿ.ಬಿ. ನಾಗರಾಜ್ (ಬೆಂಗಳೂರು ನಗರ ಜಿಲ್ಲೆ) ಪ್ರಮಾಣವಚನ ಸ್ವೀಕರಿಸಿದರು.

ಸಂಜೆ ರಾಜಭವನದ ಗಾಜಿನಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯ ಪಾಲ ವಜೂಭಾಯ್ ವಾಲಾ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಹೊಸ ಮುಖಗಳನ್ನು ಸೇರ್ಪಡೆ ಮಾಡಿ ಕೊಳ್ಳುವ ಜೊತೆಗೆ ಹಾಲಿ ಸಚಿವರಲ್ಲಿ ಕೆಲವರ ಖಾತೆಗಳಲ್ಲಿ ಮಾರ್ಪಾಟಾಗಿದ್ದರೆ, ಮತ್ತೆ ಕೆಲವರಿಂದ ಹೆಚ್ಚುವರಿ ಖಾತೆಗಳನ್ನು ಕಸಿದು ಹೊಸಬರಿಗೆ ನೀಡಲಾಗಿದೆ. ತಮಗೆ ನೀಡಿದ ಕಾರ್ಯನಿರ್ವಹಿಸದೆ ಸದಾ ವಿವಾದಕ್ಕೆ ಸಿಲುಕಿ, ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದ ರಮೇಶ್ ಜಾರಕಿಹೊಳಿ ಹಾಗೂ ಸರ್ಕಾರ ರಚನೆ ಸಂದರ್ಭದಲ್ಲಿ ಬೆಂಬಲ ನೀಡಿ ನಂತರ

ಬಿಜೆಪಿ ಜೊತೆ ನಂಟು ಹೊಂದಿದ್ದ ಪಕ್ಷೇತರ ಸದಸ್ಯ ಆರ್.ಶಂಕರ್ ಅವರನ್ನು ಸಂಪುಟ ದಿಂದ ಕೈಬಿಡಲಾಗಿದೆ. ಉತ್ತರ ಕರ್ನಾಟಕ ಭಾಗದಿಂದ ಅತೀ ಹೆಚ್ಚು ಶಾಸಕರು ಗೆದ್ದಿದ್ದರೂ ಮಂತ್ರಿಮಂಡಲದಲ್ಲಿ ನಾಲ್ಕು ಸ್ಥಾನಗಳನ್ನು ಮಾತ್ರ ನೀಡಲಾಗಿದೆ ಎಂಬ ಅಸಮಾಧಾನ ಎದ್ದಿದ್ದಲ್ಲದೆ, ಹೀಗೇ ಮುಂದುವರಿದರೆ ಲೋಕಸಭೆಯಲ್ಲಿ ಮತದಾರರು ಪಕ್ಷಕ್ಕೆ ಬುದ್ಧಿ ಕಲಿಸುತ್ತಾರೆ ಎಂದು ಎಚ್ಚೆತ್ತುಕೊಂಡು ಖಾಲಿ ಇರುವ ಎಲ್ಲಾ ಸಚಿವ ಸ್ಥಾನಗಳನ್ನು ತಮಗೇ ನೀಡಬೇಕು ಎಂದು ಆ ಭಾಗದ ಶಾಸಕರು ಧಮಕಿ ಹಾಕಿದ್ದರು. ಇದಕ್ಕೆ ಬೆದರಿದ ವರಿಷ್ಠರು ಎಂಟರಲ್ಲಿ 7 ಸಚಿವ ಸ್ಥಾನವನ್ನು ಆ ಭಾಗಕ್ಕೆ ಮತ್ತು ನಿಗಮ-ಮಂಡಳಿಗಳ ಪೈಕಿ ಹೆಚ್ಚು ಸ್ಥಾನಗಳನ್ನೂ ನೀಡಿದ್ದಾರೆ. ರಾಜಭವನದ ಗಾಜಿನಮನೆಯಲ್ಲಿ ನಡೆದ ಸಮಾರಂಭಕ್ಕೆ ಪ್ರತಿಪಕ್ಷ ನಾಯಕರು ಗೈರುಹಾಜರಾಗಿದ್ದರು. ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಸೇರಿದಂತೆ ಸಂಪುಟದ ಸದಸ್ಯರು, ಸಿಎಲ್‍ಪಿ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಂಸದರು, ಶಾಸಕರು, ಅಧಿಕಾರಿಗಳು ಭಾಗವಹಿಸಿದ್ದರು.

ಸರ್ಕಾರಕ್ಕೆ ಬೆದರಿಕೆ ಹಾಕಿ ಅಧಿಕಾರ ಪಡೆಯಬಹುದೆಂದು ಲೆಕ್ಕಾಚಾರ ಹಾಕಿದ್ದ ಕಾಂಗ್ರೆಸ್ ಶಾಸಕರ್ಯಾರಿಗೂ ಮಂತ್ರಿ ಸ್ಥಾನ ದಕ್ಕಲಿಲ್ಲ. ಇದೇ ಸಂದರ್ಭದಲ್ಲಿ ರಾಮಲಿಂಗಾ ರೆಡ್ಡಿ, ಎಚ್.ಕೆ.ಪಾಟೀಲ್, ಶಾಮನೂರು ಶಿವಶಂಕರಪ್ಪ, ರೋಷನ್ ಬೇಗ್, ಎಂ. ಕೃಷ್ಣಪ್ಪ ಸೇರಿದಂತೆ ಹಿರಿಯ ಕಾಂಗ್ರೆಸ್ಸಿಗರು ಮತ್ತು ಘಟಾನುಘಟಿಗಳಿಗೆ ವರಿಷ್ಠರು ಅವಕಾಶ ನೀಡಿಲ್ಲ. ಪಂಚ ರಾಜ್ಯಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಮೇಲುಗೈ ಸಾಧಿಸಿದ ಬೆನ್ನಲ್ಲೇ ಕರ್ನಾಟಕ ಮಂತ್ರಿಮಂಡಲ ಪುನರ್ ರಚನೆಗೂ ಅವಕಾಶ ನೀಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸರ್ಕಾರ ಉರುಳಿಸುವ ಮತ್ತು ಭಿನ್ನಮತಕ್ಕೆ ಎಡೆ ಮಾಡಿದ್ದ ಸದಸ್ಯರಿಗೆ ಸೊಪ್ಪು ಹಾಕದೆ, ಅಧಿಕಾರದ ಅವಕಾಶವನ್ನೂ ನೀಡದೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಸಚಿವ ಆಕಾಂಕ್ಷಿಗಳಾಗಿದ್ದ 20ಕ್ಕೂ ಹೆಚ್ಚು ಶಾಸಕರಿಗೆ ನಿಗಮ-ಮಂಡಳಿ ಸೇರಿದಂತೆ ವಿವಿಧ ಹುದ್ದೆಗಳನ್ನು ಕಲ್ಪಿಸಿ, ಮೈತ್ರಿ ಸರ್ಕಾರವನ್ನು ಮತ್ತಷ್ಟು ಗಟ್ಟಿ ಮಾಡಿದ್ದಾರೆ. ವಿಧಾನಮಂಡಲದ ಅಧಿವೇಶನ ಪೂರ್ಣಗೊಳ್ಳುತ್ತಿದ್ದಂತೆ ರಾಜ್ಯ ನಾಯಕರು ನಿನ್ನೆ ದೆಹಲಿಯಲ್ಲಿ ರಾಹುಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಲ್ಲದೆ, ಪುನರ್ ರಚನೆಗೆ ಒಪ್ಪಿಗೆ ಪಡೆದು ಯಾರಿಗೆ ಯಾವ ಖಾತೆ, ನಿಗಮ- ಮಂಡಳಿಗಳಿಗೆ ಯಾರು ಎಂಬ ಪಟ್ಟಿಗೂ ಹಸಿರು ನಿಶಾನೆ ಪಡೆದುಕೊಂಡಿದ್ದರು. ಕಾಂಗ್ರೆಸ್ ನಾಯಕರ ಸಲಹೆಯಂತೆ ಮುಖ್ಯಮಂತ್ರಿ ಅವರು ಇಂದು ಬೆಳಿಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ ಮಂತ್ರಿಮಂಡಲಕ್ಕೆ ಸೇರ್ಪಡೆಗೊಳ್ಳುವವರ ಪಟ್ಟಿ ಜೊತೆಯಲ್ಲೇ ಸಂಪುಟದಿಂದ ಕೈಬಿಡುವವರ ಪಟ್ಟಿಯನ್ನೂ ನೀಡಿ ಸಂಜೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಮುಹೂರ್ತವನ್ನೂ ನಿಗದಿಪಡಿಸಿದರು.

30ಕ್ಕೂ ಹೆಚ್ಚು ಶಾಸಕರಿಗೆ ವಿವಿಧ ಅಧಿಕಾರ ಗದ್ದುಗೆ
ಬೆಂಗಳೂರು: ಮಂತ್ರಿಮಂಡಲ ವಿಸ್ತರಣೆ ಜೊತೆಗೆ ನಿಗಮ-ಮಂಡಳಿ, ಸಂಸದೀಯ ಕಾರ್ಯದರ್ಶಿ ಸೇರಿದಂತೆ 30ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರಿಗೆ ವಿವಿಧ ರಾಜಕೀಯ ಹುದ್ದೆಗಳನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿದ್ದಾರೆ. ಕಾಂಗ್ರೆಸ್ ವರಿಷ್ಠರ ಸಲಹೆಯಂತೆ 19 ನಿಗಮ-ಮಂಡಳಿಗಳು, 9 ಸಂಸದೀಯ ಕಾರ್ಯದರ್ಶಿ ಗಳು, ದೆಹಲಿ ಪ್ರತಿನಿಧಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಕೆಲವರು ಸಂಪುಟ ಸೇರಲು ಕಾತುರರಾಗಿದ್ದರು, ಅಂತಹವರಿಗೆ ಮಂತ್ರಿ ಸ್ಥಾನ ದೊರೆಯದ ಕಾರಣ ಇತರ ಹುದ್ದೆಗಳನ್ನು ಪಕ್ಷ ಕಲ್ಪಿಸುವುದರ ಮೂಲಕ ಮೈತ್ರಿ ಸರ್ಕಾರವನ್ನು
ಗಟ್ಟಿ ಮಾಡುವ ಪ್ರಯತ್ನ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವತಿಯಿಂದ 80 ಸದಸ್ಯರು ಆಯ್ಕೆಗೊಂಡಿದ್ದರು, ಅವರಲ್ಲಿ 48 ಮಂದಿಗೆ ಮಂತ್ರಿಗಿರಿ ಸೇರಿದಂತೆ ವಿವಿಧ ರಾಜಕೀಯ ಹುದ್ದೆ ನೀಡಿದ್ದಾರೆ. ಸದಾ ವಿವಾದದಲ್ಲಿದ್ದು, ಮಹಿಳಾ ಅಧ್ಯಕ್ಷ ಸ್ಥಾನ ತೊರೆದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮೈಸೂರು ಮಿನರಲ್ಸ್ ಅಧ್ಯಕ್ಷ ಸ್ಥಾನ ದೊರೆತಿದೆ.

ಪಕ್ಷದ ಹಿರಿಯ ನಾಯಕ ವಿ.ಮುನಿಯಪ್ಪ ಅವರನ್ನು ರಾಜಕೀಯ ಕಾರ್ಯ ದರ್ಶಿಯನ್ನಾಗಿ ನೇಮಕ ಮಾಡಿದ್ದರೆ, ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಪುತ್ರ ಡಾ. ಅಜಯ್ ಸಿಂಗ್ ಅವರಿಗೆ ದೆಹಲಿಯಲ್ಲಿ ರಾಜ್ಯದ ವಿಶೇಷ ಪ್ರತಿನಿಧಿ ಯಾಗಿ, ಇನ್ನೊಬ್ಬ ನಾಯಕ ಶರಣಬಸಪ್ಪ ದರ್ಶನಾಪುರ ಅವರಿಗೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಹುದ್ದೆ ಲಭ್ಯವಾಗಿದೆ. ಸಂಸದೀಯ ಕಾರ್ಯದರ್ಶಿಗಳಾಗಿ ಅಂಜಲಿ ನಿಂಬಾಳ್ಕರ್, ರೂಪಾ ಶಶಿಧರ್, ರಾಘವೇಂದ್ರ ಹಿಟ್ನಾಳ್, ಎಂ.ಎ.ಗೋಪಾಲಸ್ವಾಮಿ, ದುರ್ಗಪ್ಪ ಹುಲಗೇರಿ, ಮಹಾಂತೇಶ್ ಕೌಜಲಗಿ, ಅಬ್ದುಲ್ ಜಬ್ಬಾರ್, ಐವಾನ್ ಡಿಸೋಜ, ಕೆ.ಗೋವಿಂದರಾಜ್ ಅವರಿಗೆ ಅಧಿಕಾರ ನೀಡಲಾಗಿದೆ. ಎಸ್.ಟಿ.ಸೋಮಶೇಖರ್ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಡಾ. ಕೆ.ಸುಧಾಕರ್ ಅವರಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಮುನಿರತ್ನ ಅವರಿಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ವಹಿಸಲಾಗಿದೆ. ಕರ್ನಾಟಕ ಭೂಸೇನಾ ನಿಗಮಕ್ಕೆ ಬಿ.ಕೆ.ಸಂಗಮೇಶ್ವರ್, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ಆರ್.ನರೇಂದ್ರ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮಕ್ಕೆ ಬಿ.ನಾರಾಯಣ ರಾವ್ ನೇಮಕವಾಗಿದ್ದಾರೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ಟಿ.ವೆಂಕಟರಮಣಯ್ಯ, ಕರ್ನಾಟಕ ರಾಜ್ಯ ಉಗ್ರಾಣ ನಿಗಮಕ್ಕೆ ಡಾ. ಉಮೇಶ್ ಜಿ.ಜಾದವ್, ಹಟ್ಟಿ ಚಿನ್ನದ ಗಣಿ ಸಂಸ್ಥೆಗೆ ಟಿ.ರಘುಮೂರ್ತಿ, ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮಕ್ಕೆ ಎಸ್.ಎನ್.ಸುಬ್ಬಾರೆಡ್ಡಿ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಯಶವಂತರಾಯ್‍ಗೌಡ ವಿ.ಪಾಟೀಲ್, ಕರ್ನಾಟಕ ಮಾರ್ಜಕ ನಿಗಮಕ್ಕೆ ಬಿ.ಎ.ಬಸವ ರಾಜ್, ಕಿಯೋನಿಕ್ಸ್ ಸಂಸ್ಥೆಗೆ ಬಿ.ಶಿವಣ್ಣ, ಡಾ ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಎಸ್.ಎನ್.ನಾರಾಯಣಸ್ವಾಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ವಾಯುವ್ಯ ರಸ್ತೆ ಸಾರಿಗೆ ನಿಗಮಕ್ಕೆ ಶಿವರಾಮ್ ಎಂ.ಹೆಬ್ಬಾರ್, ಬಿಎಂಆರ್‍ಟಿಸಿಗೆ ಎನ್.ಎ.ಹ್ಯಾರೀಸ್, ಕರ್ನಾಟಕ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಬಿ.ಎಸ್.ಸುರೇಶ್, ಮಲೆನಾಡು ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಟಿ.ಡಿ.ರಾಜೇಗೌಡ ನೇಮಕಗೊಂಡಿದ್ದಾರೆ.

ಜನರ ಆಶೀರ್ವಾದವಿದ್ದರೆ ಮತ್ತೊಮ್ಮೆ ಸಿಎಂ ಆಗುತ್ತೇನೆ

ಚಿಕ್ಕೋಡಿ, ಡಿ. 22- ರಾಜ್ಯದ ಜನತೆ ಆಶೀರ್ವಾದ ಇದ್ದರೆ ಇನ್ನೊಂದು ಬಾರಿ ಮುಖ್ಯಮಂತ್ರಿಯಾಗಿ ಜನರ ಸೇವೆ ಮಾಡು ತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರು ಚ್ಚರಿಸಿದ್ದಾರೆ. ತಾಲೂಕಿನ ನಾಗರಮುನ್ನೋಳಿಯಲ್ಲಿ ನಡೆದ ಕನಕದಾಸ ಜಯಂತಿಯಲ್ಲಿ ಮಾತನಾಡಿದ ಅವರು, ಗುಲಾಮಗಿರಿ ವಿರುದ್ಧ ಹೋರಾಟ ಮಾಡಿದ ನಾಯಕರನ್ನು ಸ್ಮರಣೆ ಮಾಡಬೇಕಾ ಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಸಂಗೊಳ್ಳಿ ರಾಯಣ್ಣ ಪ್ರಾಧಿಕಾರ ರಚನೆ ಮಾಡಿ ಹೆಚ್ಚಿನ ಅನುದಾನ ನೀಡಿದ್ದೆ ಎಂದರು. ಅಲ್ಲದೆ ಸಾಮಾಜಿಕ ನ್ಯಾಯದ ಪರವಾಗಿ ಯಾರು ಇದ್ದಾರೆ ಅವರನ್ನು ರಾಜಕೀಯವಾಗಿ ಬೆಂಬಲಿಸುವಂತೆ ಮನವಿ ಮಾಡಿದರು. ಮಹಾನ್ ನಾಯಕರ ಜಯಂತಿ ಆಚರಣೆಗೆ ರಾಜಕೀಯ ಬಳಕೆ ಮಾಡಿಕೊಳ್ಳಬಾರದು. ಟಿಪ್ಪು ಜಯಂತಿ ಆಚರಣೆ ಮಾಡಿದರೆ ಹಿಂದೂ ಧರ್ಮದ ವಿರೋಧಿ ಎಂದು ಬಿಂಬಿಸುತ್ತಾರೆ. ಅದು ತಪ್ಪು. ಸಾಮಾಜಿಕ ಕೆಳ ಸ್ತರದ ಜನರು ಸಮಾಜದ ಮುಖ್ಯ ವಾಹಿನಿಗೆ ಬರಲು ನಾನು ಹಲವಾರು ಸಾಮಾಜಿಕ ಕಾರ್ಯಕ್ರಮ ನೀಡಿದ್ದೇನೆ ಎಂದರು.

Translate »