ಮೈಸೂರಲ್ಲೀಗ `ಮಾಗಿ ಉತ್ಸವ’
ಮೈಸೂರು

ಮೈಸೂರಲ್ಲೀಗ `ಮಾಗಿ ಉತ್ಸವ’

December 23, 2018

ಮೈಸೂರು:  ವಿವಿಧ ಬಣ್ಣದ ಹೂವುಗಳಿಂದ ಸಿಂಗಾರಗೊಂಡಿರುವ ಲಲಿತ ಮಹಲ್ ಅರಮನೆ, ವಿರಾಜಮಾನರಾಗಿ ನಿಂತಿರುವ ರಾಜ ಶ್ರೀ ಜಯಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಪುತ್ಥಳಿ, ಶಿವ ಲಿಂಗಕ್ಕೆ ನಮಸ್ಕರಿಸುತ್ತಿರುವ ಆನೆ ಮತ್ತು ನಂದಿ ಮಾದರಿಗಳು ಸೇರಿದಂತೆ ಮತ್ತಿತರೆ ದೃಶ್ಯಗಳು ಹೂವಿನಿಂದ ಮೈದಳೆದಿದ್ದು, ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಿದೆ. ಇದು ಕಂಡು ಬಂದಿದ್ದು ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಅಂಗವಾಗಿ ಮಾಗಿ ಉತ್ಸವ ಶೀರ್ಷಿಕೆಯಡಿ ಅರಮನೆ ಆವರಣ ದಲ್ಲಿ ಆಯೋಜಿರುವ ಫಲಪುಷ್ಪ ಪ್ರದರ್ಶನದಲ್ಲಿ.

ಇಂದಿನಿಂದ ಡಿ.31ರವರೆಗೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಇಂದಿನಿಂದ ಮಾಗಿ ಉತ್ಸವ ಆರಂಭವಾಗಿದ್ದು, 10 ದಿನಗಳ ಕಾಲ ಪ್ಯಾರಾಮೋಟರ್, ಫಲಪುಷ್ಪ ಪ್ರದರ್ಶನ, ಕೇಕ್ ಉತ್ಸವ, ಓಪನ್ ಚಾಲೆಂಜ್ ಚಿತ್ರೋತ್ಸವ, ಮೈಸೂರು ಬರ್ಡ್ ಫೆಸ್ಟಿವಲ್, ಪಾರಂಪರಿಕ ನಡಿಗೆ, ಚಿತ್ರಸಂತೆ-ಹಸಿರು ಸಂತೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾ ಗಿದ್ದು, ಮೈಸೂರಿನ ಜನತೆ, ಪ್ರವಾಸಿಗರು ವೀಕ್ಷಿಸಿ ಕಣ್ತುಂಬಿಕೊಳ್ಳಬೇಕು. ಯಾಂತ್ರಿಕ ಬದುಕಿನ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಮನರಂಜನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಆಯೋ ಜಿಸಿರುವುದು ಸಂತೋಷದ ವಿಷಯ. ಇಂತಹ ಉತ್ಸವಗಳು ನಿರಂತರವಾಗಿ ವರ್ಷ ಪೂರ್ತಿ ನಡೆಯಬೇಕು ಎಂದರು. ಚಳಿಗಾಲದ ಅಧಿವೇ ಶನ ಕುರಿತು ಪ್ರತಿಕ್ರಿಯಿಸಿ, ಮುಖ್ಯಮಂತ್ರಿಯ ವರ ವರ್ತನೆಗೆ 2 ದಿನಗಳ ಅಧಿವೇಶನ ಹಾಳಾಯಿತು. ಈ ಅಧಿವೇಶನದಿಂದ ಮೈಸೂರು, ಉತ್ತರ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಾಗ ಲಿಲ್ಲ. ನಾನು ಮೈಸೂರಿನ ಸಮಸ್ಯೆಗಳಾದ ಕೆ.ಆರ್. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇಲ್ಲದಿರುವ ಬಗ್ಗೆ, ಕುಸಿದಿರುವ ಕೆ.ಆರ್.ಮಾರ್ಕೆಟ್, ಲ್ಯಾನ್ಸ್‍ಡೌನ್ ಕಟ್ಟಡಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದೆ. ಆದರೆ, ಸದನದಲ್ಲಿ ಅವಕಾಶವನ್ನೇ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜನಾರ್ದನ್, ಅರಮನೆ ಮಂಡಳಿ ಉಪನಿರ್ದೇ ಶಕ ಟಿ.ಎಸ್.ಸುಬ್ರಹ್ಮಣ್ಯ, ವಾರ್ತಾ ಮತ್ತು ಸಾರ್ವ ಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇ ಶಕ ಆರ್.ರಾಜು ಮತ್ತಿತರರು ಉಪಸ್ಥಿತರಿದ್ದರು.

ಫಲಪುಷ್ಪ ಪ್ರದರ್ಶನದಲ್ಲಿ ಏನೇನಿದೆ: ಫಲಪುಷ್ಪ ಪ್ರದರ್ಶನದಲ್ಲಿ 20,000 ವಿಭಿನ್ನ ರೀತಿಯ ಅಲಂ ಕಾರಿಕ ಹೂವಿನ ಕುಂಡಗಳು, ಬೋನ್ಸಾಯ್ ಗಿಡಗಳು, ಅಂದಾಜು 4 ಲಕ್ಷ ಅಲಂಕಾರಿಕ ಹೂವು ಗಳಿಂದ ಹಾಗೂ ಊಟಿ ಕಟ್ ಫ್ಲವರ್‍ಗಳಿಂದÀ ಅಲಂಕರಿಸಲಾಗಿದೆ. ಲಲಿತ ಮಹಲ್ ಅರಮನೆ ಯನ್ನು ಹೋಲುವ ಮಾದರಿಯ ವಿನ್ಯಾಸವನ್ನು ವಿವಿಧ ಅಲಂಕಾರಿಕ ಹೂವುಗಳಿಂದ (70x10x21) ಅಡಿ ಅಳತೆಯಲ್ಲಿ ಅಲಂಕರಿಸಲಾಗಿದೆ. ಜತೆಗೆ ಶ್ರೀ ಜಯಚಾಮರಾಜ ಒಡೆಯರ್ ಅವರ 100ನೇ ವರ್ಷದ ಜಯಂತೋತ್ಸವದ ಅಂಗವಾಗಿ ಆಕೃತಿ ಯನ್ನು ಹೂವಿನಿಂದ ನಿರ್ಮಿಸಿದ್ದು, ಎಲ್ಲರ ಕಣ್ಮನ ಸೆಳೆಯುತ್ತಿದೆ. ದಸರಾ ಆಚರಣೆಗೆ ಬರುವ ಗಜ ಪಡೆಯ ಮಾದರಿಯನ್ನು (9 ಅಡಿ ಎತ್ತರದಲ್ಲಿ) ಪಿಂಗ್ ಪಾಂಗ್ ಹೂವಿನಿಂದ ಅಲಂಕರಿಸಲಾಗಿದೆ. ನಾಡಿನ ಸಂಸ್ಕøತಿಯನ್ನು ಬಿಂಬಿಸುವ ಇಬ್ಬರು ಜಟ್ಟಿಗಳ ಕಾಳಗ ಮತ್ತು ಓರ್ವ ತೀರ್ಪುಗಾರರು ಇರುವ ಮಾದರಿ ಚಿತ್ರಗಳ ಮಾದರಿ, ಶಿವಲಿಂಗಕ್ಕೆ ನಮಸ್ಕರಿಸುತ್ತಿರುವ ಆನೆ ಮತ್ತು ನಂದಿ ಬಸವ ಮಾದರಿಗಳನ್ನು ಹೂವು ಮತ್ತು ಪಿಂಗ್ ಪಾಂಗ್ ಹೂವುಗಳಿಂದ ಆಲಂಕರಿಸಲಾಗಿದೆ. ಜತೆಗೆ ಮಕ್ಕಳ ಆಕರ್ಷಣೆಗಾಗಿ 6×5 ಅಡಿ ಅಳತೆಯ ಕೀಲು ಕುದುರೆ, 6 ಅಡಿ ಅಳತೆಯ ಸೈಕಲ್ ತುಳಿಯುತ್ತಿರುವ ಅಳಿಲು ಚಿತ್ರದ ಮಾದರಿಯನ್ನು ಬಣ್ಣ-ಬಣ್ಣದ ಹೂವುಗಳಿಂದ ಅಲಂಕರಿಸಲಾಗಿದೆ. 5×12 ಅಡಿ ಎತ್ತರದ ಮಿ. ಬೀನ್ ವ್ಯಕ್ತಿಯ ಚಿತ್ರದ ಮಾದರಿ, 20x8x9 ಅಡಿ ಎತ್ತರದ ಬಾಹುಬಲಿ ಭಾಗ-2 ಚಿತ್ರದ ಮಾದರಿಯ ಹಡಗು, 13×8 ಅಡಿ ಅಳತೆಯ ವಿಂಟೇಜ್ ಕಾರು, ಕುಳಿತ ಭಂಗಿಯಲ್ಲಿರುವ 2 ನವಿಲುಗಳು, 2 ಪ್ರವೇಶ ದ್ವಾರಗಳು, ಪ್ರಾಣಿ ಸಂಗ್ರಹಾಲಯವನ್ನು ಹೋಲುವ ರೀತಿ ನವಿಲು-ಅನಕೊಂಡ-ಜಿಂಕೆ-ಹುಲಿ-ಮರಿ ಆನೆ-ಜಿóೀಬ್ರಾ ಸೇರಿದಂತೆ ವಿವಿಧ ರೀತಿಯ ಪ್ರಾಣಿಗಳು, ವರಹಾ ಸ್ವಾಮಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ 273×13 ಅಡಿ ಅಳತೆಯ ವರ್ಟಿಕಲ್ ಗಾರ್ಡನ್ ಮಧ್ಯಭಾಗದಲ್ಲಿ ಮಹಾರಾಜರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಾದರಿ ಚಿತ್ರವನ್ನು ಅಲಂಕಾರಿಕ ಹೂವು/ಎಲೆ ಜಾತಿಯ ಗಿಡಗಳಿಂದ ಅಲಂಕರಿಸುವ ಮೂಲಕ ವೀಕ್ಷಕರನ್ನು ತಮ್ಮತ್ತ ಸೆಳೆಯುತ್ತಿವೆ.

ಛಾಯಚಿತ್ರ ಮತ್ತು ವೀಡಿಯೋ ಪ್ರದರ್ಶನ: ಅರಮನೆಗೆ ಸಂಬಂಧಿಸಿದ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, `ದಸರಾ ಅಂದು-ಇಂದು’ ಶೀರ್ಷಿಕೆಯಡಿ ಪ್ರಾಚ್ಯವಸ್ತು ಪರಂಪರೆ ಇಲಾಖೆ ಸಹಯೋಗದೊಂದಿಗೆ ಹಾಗೂ ವಿಶ್ವ-ವಿಖ್ಯಾತ ನಾಡಹಬ್ಬವಾದ ಹಿಂದಿನ ಮೈಸೂರು ದಸರಾ, ಹಳೆಯ ದಸರಾವನ್ನು ನೆನಪಿಸುವಂತೆ ಮಾಡಲಾಗಿದೆ. ಜತೆಗೆ ಸಾಕ್ಷ್ಯಚಿತ್ರಣವನ್ನು ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಆಗಮಿಸುವ ಪ್ರವಾಸಿಗರು ಪರದೆ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

ದಸರಾ ನೆನಪಿಸಿದ ಬೊಂಬೆ ಮನೆ: ದಸರಾ ಮಹೋತ್ಸವದ ನವರಾತ್ರಿ ಸಂದರ್ಭದಲ್ಲಿ ಮನೆಗಳಲ್ಲಿ ಪ್ರದರ್ಶಿಸುವ ಬೊಂಬೆಗಳನ್ನು 5 ರಿಂದ 6 ಬ್ಲಾಕ್‍ಗಳಲ್ಲಿ ಪ್ರವಾಸಿಗರು ವೀಕ್ಷಿಸಲು ಅವಕಾಶ ಮಾಡಲಾಗಿದೆ. ಮೈಸೂರಿನವರೇ ಆದ ಜಯಶ್ರೀ ನಾಗಪ್ರಸಾದ್-`ದೇವಿ ವೈಭವ’, ಅನ್ನಪೂರ್ಣ ಗೋಪಾಲಕೃಷ್ಣ-`ವಿಷ್ಣು ದರ್ಶನ’, ಗೀತಾ ಶ್ರೀಹರಿ-`ಕೃಷ್ಣಲೀಲಾಮೃತ’, ಹೆಚ್.ಲೀಲಾವತಿ-`ಶ್ರೀರಾಮಾಯಣ ದರ್ಶನಂ’, ಮಂಜುಳಾ ವೆಂಕಟೇಶ್‍ಮೂರ್ತಿ-`ಶಿವಮಯಮಿದಂ ಜಗತ್’, ಶ್ರೀರಂಗಪಟ್ಟಣದ ಮಂಗಳಾ ಕೃಷ್ಣಭಟ್-`ಶ್ರೀನಿವಾಸ ವೈಭವ’ದ ಶೀರ್ಷಿಕೆಯಡಿ ಗೊಂಬೆ ಪ್ರದರ್ಶಿಸಲಾಗಿದೆ.

ಎಲ್ಲೆಲ್ಲೂ ಸೆಲ್ಫಿ: ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ ಕೂಡಲೇ ನೂರಾರು ಮಂದಿ ಪ್ರವಾಸಿಗರು ತಮಗಿಷ್ಟವಾದ ಮಾದರಿಗಳ ಬಳಿ ನಿಂತು ಸೆಲ್ಪಿ ಕ್ಲಿಕ್ಕಿಸಿಕೊಂಡರು.
ಗಿಡ ವಿತರಣೆ: ಫಲಪುಷ್ಪ ಪ್ರದರ್ಶನ ವೀಕ್ಷಿಸಿದ 300ಕ್ಕೂ ಹೆಚ್ಚು ಮಂದಿಗೆ ಅಲವೆರಾ, ಕೃಷ್ಣ ತುಳಸಿ, ಮಲ್ಲಿಗೆ ಗಿಡಗಳನ್ನು ವಿತರಿಸಲಾಯಿತು. ನಾಳೆ(ಡಿ.23) ಯಿಂದ 50 ಮಂದಿಗೆ ವಿತರಿಸಲಾಗುತ್ತದೆ. ಸಂಗೀತದ ಝಲಕ್: ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಡಿ.28ರಿಂದ 30ರವರೆಗೆ ಸಂಜೆ 7ರಿಂದ 9ರವರೆಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಡಿ.28ರಂದು ಅಜಯ್ ವಾರಿಯರ್ ತಂಡದವರಿಂದ ಸಂಗೀತ ಸಂಭ್ರಮ, ಡಿ.29ರಂದು ಕೊಳಲುವಾದಕ ಪ್ರವೀಣ್ ಗೋಡ್ಖಿಂಡಿ ತಂಡದಿಂದ ಫ್ಯೂಷನ್ ಸಂಗೀತ, ಡಿ.30ರಂದು ಗಾಯಕ ವಿಜಯಪ್ರಕಾಶ್ ತಂಡದಿಂದ ಸುಮಧುರ ಕನ್ನಡಗೀತೆಗಳ ಸಂಗೀತ ಸಂಜೆ ನಡೆಯಲಿದೆ. ಡಿ.31ರಂದು ರಾತ್ರಿ 11ರಿಂದ 12ರವರೆಗೆÀ ಪೊಲೀಸ್ ಬ್ಯಾಂಡ್ ವಾದನ ನಡೆಯಲಿದೆ. ಮೈಸೂರು ಅರಮನೆ ಮಂಡಳಿ ವತಿಯಿಂದ ಹೊಸ ವರ್ಷಾಚರಣೆಯಿಂದಾಗಿ ಡಿ.31ರ ಮಧ್ಯರಾತ್ರಿ 12ರಿಂದ 12.15ರವರೆಗೆ ಬಣ್ಣಗಳ ಚಿತ್ತಾರಗಳಿಂದ ಕೂಡಿದ ಪಟಾಕಿ ಸಿಡಿಸಲಾಗುತ್ತದೆ.

ಮಕ್ಕಳ ವಾಸ್ತವ್ಯದ ವ್ಯವಸ್ಥೆಗೆ ಸೂಚನೆ: ಯಾದಗಿರಿ ಜಿಲ್ಲೆ ಹೆಡಗಿಮದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಮೈಸೂರಿಗೆ ಪ್ರವಾಸ ಬಂದಿದ್ದ ಮಕ್ಕಳು ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸುತ್ತಿದ್ದರು. ಈ ವೇಳೆ ಮಕ್ಕಳನ್ನು ನೋಡಿದ ಸಚಿವ ಸಾ.ರಾ.ಮಹೇಶ್, ಎಲ್ಲಿಂದ ಬಂದಿದ್ದೀರಿ? ಎಲ್ಲಿ ತಂಗಿದ್ದೀರಿ? ಎಂದು ಪ್ರಶ್ನಿಸಿದರು. ಈ ವೇಳೆ ಶಿಕ್ಷಕರೊಬ್ಬರು ನಂಜನಗೂಡಿನಲ್ಲಿ ವಾಸ್ತವ್ಯ ಹೂಡಬೇಕೆಂದಿದ್ದೇವೆ ಎಂದರು. ಆಗ ಸಚಿವರು, ನಂಜನಗೂಡಿನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿಸುವಂತೆ ಅಪ್ತ ಕಾರ್ಯದರ್ಶಿಗೆ ಸೂಚಿಸಿದರು.

ಸಚಿವ ಸಾರಾ ಪ್ರತಿಕ್ರಿಯೆ: ಸಚಿವ ಸಂಪುಟ ವಿಸ್ತರಣೆ ಗೊಂದಲ ಕುರಿತು ಪ್ರತಿಕ್ರಿಯಿಸಿದ ಸಚಿವರು, ಸಚಿವ ಸಂಪುಟ ವಿಸ್ತರಣೆ ಮಾಡುವಾಗ ಅಸಮಾಧಾನ ಸಹಜ. ಈ ಕುರಿತು ಆ ಪಕ್ಷದ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.ಸಚಿವ ಸಂಪುಟ ಕಗ್ಗಂಟಿನಿಂದ ಬಿಜೆಪಿಗೆ ವರದಾನವಾಗುತ್ತದೆಯೇ ಎಂಬ ಪ್ರಶ್ನೆಗೆ, ಯಾವ ವರದಾನವೂ ಆಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು. ಜೆಡಿಎಸ್‍ಗೆ 10 ನಿಗಮ ಮಂಡಳಿ ಇವೆಯಲ್ಲ ಎಂಬ ಮಾತಿಗೆ, ನಮ್ಮಲ್ಲಿ ಅಷ್ಟು ಒತ್ತಡವಿಲ್ಲ. ಸರಿಯಾದ ಸಮಯದಲ್ಲಿ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

Translate »