ಇಂದು ಸಂಪುಟ ಪುನರ್ರಚನೆ
ಮೈಸೂರು

ಇಂದು ಸಂಪುಟ ಪುನರ್ರಚನೆ

December 22, 2018

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದು ತಮ್ಮ ಸಂಪುಟವನ್ನು ಪುನರ್ ರಚನೆ ಮಾಡಲಿದ್ದಾರೆ. ಸಮ್ಮಿಶ್ರ ಸರ್ಕಾರದ ಪಾಲು ದಾರ ಪಕ್ಷವಾದ ಕಾಂಗ್ರೆಸ್ ಹಾಲಿ ಸಂಪುಟದಲ್ಲಿನ ಇಬ್ಬರನ್ನು ಕೈಬಿಟ್ಟು ನಂತರ ತನ್ನ ಪಾಲಿನ 6 ಇಲ್ಲವೇ 8 ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದು, ಇಂದು ಸಂಜೆ 5.30ಕ್ಕೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ನಿನ್ನೆ ದೆಹಲಿಗೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಸಚಿವ ಸಂಪುಟ ಸೇರುವವರ ಪಟ್ಟಿಗೆ ಅನುಮೋದನೆ ಪಡೆದು ಕೊಂಡಿದ್ದಾರೆ. ಹಾಲಿ ಸಂಪುಟದಿಂದ ಪೌರಾಡಳಿತ ಹಾಗೂ ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿ ಹೊಳಿ ಹಾಗೂ ಅರಣ್ಯ ಸಚಿವ ಶಂಕರ್ ಅವರನ್ನು ಕೈಬಿಟ್ಟು ಖಾಲಿ ಇರುವ 6 ಸ್ಥಾನಗಳ ಜೊತೆಗೆ ಈ 2 ಸ್ಥಾನವೂ ಸೇರಿದಂತೆ ಒಟ್ಟು 8 ಸ್ಥಾನಗಳನ್ನು ತುಂಬುವ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಡ ಹಾಕಿದ್ದಾರೆ.

ಆದರೆ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇ ಶ್ವರ್ ಮತ್ತು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ 2 ಸ್ಥಾನಗಳನ್ನು ಉಳಿಸಿಕೊಳ್ಳುವ ಬಗ್ಗೆ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಹೊಸದಾಗಿ ಸಂಪುಟಕ್ಕೆ ಸೇರ್ಪಡೆ ಗೊಳ್ಳುವವರಲ್ಲಿ ಸತೀಶ್ ಜಾರಕಿಹೊಳಿ (ಬೆಳಗಾವಿ), ಸಿ.ಎಸ್.ಶಿವಳ್ಳಿ (ಧಾರ ವಾಡ), ಎಂಟಿಬಿ ನಾಗ ರಾಜ್ (ಬೆಂಗಳೂರು ನಗರ ಜಿಲ್ಲೆ), ತುಕರಾಂ (ಬಳ್ಳಾರಿ), ರಹೀಂ ಖಾನ್ (ಬೀದರ್), ವೀರಶೈವ ಲಿಂಗಾಯತರ ಕೋಟಾದಿಂದ ಎಂ.ಬಿ.ಪಾಟೀಲ್ (ವಿಜಯಪುರ) ಇಲ್ಲವೇ ಬಿ.ಸಿ.ಪಾಟೀಲ್ (ಹಾವೇರಿ) ಹೆಸರು ಕೇಳಿ ಬರುತ್ತಿದೆ. ಒಂದು ವೇಳೆ 8 ಸ್ಥಾನಗಳನ್ನು ಭರ್ತಿ ಮಾಡು ವುದಾದರೆ ರೂಪಾ ಶಶಿಧರ್ (ಕೋಲಾರ), ಆರ್.ಬಿ. ತಿಮ್ಮಾಪುರ (ಬಾಗಲಕೋಟೆ) ಸಂಪುಟ ಸೇರಲಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಾಲಿನ ಸಚಿವರ ಖಾತೆಗಳಲ್ಲಿ ಮಹತ್ವದ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಆದರೆ, ಜೆಡಿಎಸ್ ಖಾಲಿ ಇರುವ ತನ್ನ ಪಾಲಿನ 2 ಸ್ಥಾನಗಳನ್ನು ಭರ್ತಿ ಮಾಡದಿರಲು ನಿರ್ಧರಿಸಿದೆ.

ಸಚಿವ ಸಂಪುಟದ ಒಟ್ಟು 34 ಸಚಿವ ಸ್ಥಾನಗಳ ಪೈಕಿ 4 ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಪಾಲಿನ 2 ಹಾಗೂ ಕಾಂಗ್ರೆಸ್‍ನ 2 ಒಟ್ಟು 4 ಸ್ಥಾನಗಳನ್ನು ಭರ್ತಿ ಮಾಡಬಾರದೆಂಬ ಉದ್ದೇಶವನ್ನೂ ಹೊಂದಿದ್ದಾರೆ. ಸಚಿವ ಸಂಪುಟ ಪುನರ್ ರಚನೆ ಜೊತೆಗೆ ರಾಜಕೀಯ ಕಾರ್ಯದರ್ಶಿ, ಸಂಸದೀಯ ಕಾರ್ಯದರ್ಶಿಗಳು ಹಾಗೂ ತಮ್ಮ ಪಾಲಿನ 20 ನಿಗಮ ಮಂಡಳಿಗಳಿಗೆ ಹೆಸರುಗಳ ಅಂತಿಮ ಪಟ್ಟಿಗೂ ರಾಹುಲ್ ಗಾಂಧಿಯವರಿಂದ ಅನುಮೋದನೆ ಪಡೆದಿದ್ದಾರೆ. ರಾಜಕೀಯ ಕಾರ್ಯದರ್ಶಿಗಳಾಗಿ ಮಾಜಿ ಸಚಿವ ವಿ.ಮುನಿಯಪ್ಪ (ಚಿಕ್ಕಬಳ್ಳಾಪುರ), ದೆಹಲಿ ಪ್ರತಿನಿಧಿಯಾಗಿ ದಿವಂಗತ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ಅಜಯ್ ಸಿಂಗ್ ನೇಮಕಗೊಳ್ಳುವುದು ಖಚಿತವಾಗಿದೆ.

ನಾಳೆ ದೆಹಲಿಯಿಂದ ವಾಪಸ್ಸಾದ ನಂತರ ತಮ್ಮ ಪಾಲಿನ ಖಾಲಿ ಇರುವ ಸಚಿವ ಸ್ಥಾನಗಳ ಭರ್ತಿಗೆ ಹೆಸರುಗಳ ಪಟ್ಟಿಯನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನೀಡಲಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ತನ್ನ ಪಾಲಿನ ಸಚಿವ ಸ್ಥಾನವನ್ನು ಪೂರ್ಣ ಪ್ರಮಾಣದಲ್ಲಿ ತುಂಬಬೇಕೇ? ಇಲ್ಲ ಖಾಲಿ ಬಿಟ್ಟುಕೊಳ್ಳಬೇಕೇ ಎಂಬುದರ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ನಾಳೆ ಮಧ್ಯಾಹ್ನದ ವೇಳೆಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ತದ ನಂತರ ಪ್ರಮಾಣ ವಚನಕ್ಕೆ ಸಿದ್ಧತೆಗಳು ನಡೆಯಲಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.

Translate »