ಕಸಾಪ ಅಧ್ಯಕ್ಷರಾಗಿ  ಬಿ.ಎಂ. ರವೀಶ್ ಪದಗ್ರಹಣ
ಹಾಸನ

ಕಸಾಪ ಅಧ್ಯಕ್ಷರಾಗಿ ಬಿ.ಎಂ. ರವೀಶ್ ಪದಗ್ರಹಣ

December 23, 2018

ಬೇಲೂರು: ಬೇಲೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಈ ಹಿಂದಿನ ಅಧ್ಯಕ್ಷರಾಗಿದ್ದ ಹೆಚ್.ಎಂ.ದಯಾನಂದ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪತ್ರಕರ್ತ ಬಿ.ಎಂ.ರವೀಶ್ ನೇಮಕವಾಗಿದ್ದು, ಶನಿವಾರ ತಾಲೂಕಿನ ಹಲ್ಮಿಡಿ ಗ್ರಾಮದ ಕನ್ನಡ ಶಿಲಾ ಶಾಸನ ಪ್ರತಿಕೃತಿ ಮಂಟಪದ ಆವರಣದಲ್ಲಿ ಹಿಂದಿನ ಅಧ್ಯಕ್ಷ ಹೆಚ್.ಎಂ.ದಯಾನಂದ್ ನೂತನ ಅಧ್ಯಕ್ಷರಾದ ಬಿ.ಎಂ.ರವೀಶ್‍ರವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಪದಗ್ರಹಣ ಸಮಾರಂಭದ ಉದ್ಘಾಟನೆ ನಡೆಸಿ ಮಾತನಾಡಿದ ಶಾಸಕ ಕೆ.ಎಸ್. ಲಿಂಗೇಶ್, ನೂತನ ಅಧ್ಯಕ್ಷರ ಪದಗ್ರಹಣ ಬೇಲೂರು ಪಟ್ಟಣದಲ್ಲಿ ನಡೆಸುವ ಅವಕಾಶವಿತ್ತು. ಆದರೆ ಕನ್ನಡಕ್ಕೆ ಶಿಲಾ ಶಾಸನ ನೀಡಿದ ಹಲ್ಮಿಡಿ ಗ್ರಾಮದಲ್ಲಿ ಪದಗ್ರಹಣ ಹಮ್ಮಿಕೊಂಡಿದ್ದು ನಿಜಕ್ಕೂ ಔಚಿತ್ಯದಿಂದ ಕೂಡಿದೆ. ಇದರಿಂದ ನೂತನ ಅಧ್ಯಕ್ಷರಾದ ಬಿ.ಎಂ.ರವೀಶ್ ಅವರಿಗೆ ಸಾಹಿತ್ಯದ ಮೇಲಿನ ಅಭಿಮಾನ ವ್ಯಕ್ತವಾಗುತ್ತದೆ ಎಂದರು. ಹಲ್ಮಿಡಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ನಾನು ಪರಿಷತ್ ಜೊತೆಯಲ್ಲಿ ಕೆಲಸ ಮಾಡಲಾಗುತ್ತದೆ. ಈಗಾಗಲೇ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹೆಚ್.ಬಿ.ಮದನ್‍ಗೌಡ ಈ ಗ್ರಾಮದ ಅಭಿವೃದ್ಧಿಗೆ ನೀಲಿ ನಕ್ಷೆ ತಯಾರು ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ನಾನು ಸರ್ಕಾರದ ಬಳಿ ಹೆಚ್ಚಿನ ಅನುದಾನ ನೀಡಲು ಸಂಪೂರ್ಣ ಬದ್ಧವಾಗಿದ್ದು, ಹಲ್ಮಿಡಿ ಶಾಸನದಿಂದ ಮಾತ್ರ ಕನ್ನಡಿಗರಿಗೆ ಶಾಸ್ತ್ರೀಯ ಸ್ಥಾನಮಾನ ನೀಡಲು ಸಾಧ್ಯವಾಯಿತು ಎಂದರು.
ಹಲ್ಮಿಡಿ ಶಾಸನ ಗ್ರಾಮ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ.ಮದನ್‍ಗೌಡ ಮಾತನಾಡಿ, 2002ರಲ್ಲಿ ನಾನು ಜಿಲ್ಲಾ ಕಸಾಪ ಅಧ್ಯಕ್ಷರಾದ ಸಂದರ್ಭದಲ್ಲಿ ಪತ್ರಕರ್ತ ಬಿ.ಎಂ.ರವೀಶ್

ಅವರಿಗೆ ಬೇಲೂರು ತಾಲೂಕು ಅಧ್ಯಕ್ಷರಾಗಿ ನೇಮಕ ಮಾಡಿದ ಪತ್ರ ಕಳಿಸಿದ್ದೆ. ಆದರೆ ಅವರು ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿ ಅನಂತರಾಜೇ ಅರಸು ಅವರನ್ನು ಅಧ್ಯಕ್ಷರಾಗಿ ಮಾಡಿದ್ದಾರೆ. ಸಾಹಿತ್ಯ ತೇರು ಎಳೆಯುವ ಸಂದರ್ಭದಲ್ಲಿ ಜಾತಿ ಧರ್ಮ ವರ್ಗ ಭೇದ ವಿಲ್ಲದೆ ಎಳೆಯಬೇಕಿದೆ. ಇದರಿಂದ ನೂತನ ಅಧ್ಯಕ್ಷ ಬಿ.ಎಂ.ರವೀಶ್ ತಮ್ಮ ಅವಧಿ ಯಲ್ಲಿ ಉತ್ತಮ ಕೆಲಸಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.

ನಿಕಟಪೂರ್ವ ಅಧ್ಯಕ್ಷ ಹೆಚ್.ಎಂ.ದಯಾನಂದ್ ಮಾತನಾಡಿ, ಕಳೆದ ಎರಡು ವರ್ಷದ ನನ್ನ ಅಧಿಕಾರ ಅವಧಿಯಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ ಹಾಗೂ ಕಾರ್ಯಾಗಾರ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಲು ಸರ್ವರೂ ಸಹಕಾರ ನೀಡಿದ್ದು, ನನ್ನ ವೈಯಕ್ತಿಕ ಇಚ್ಛೆಯಿಂದಲೇ ರಾಜೀನಾಮೆ ನೀಡಲಾಗಿದೆ ಹೊರತು ಯಾರ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದರು. ಇಂದು ನೂತನ ಅಧ್ಯಕ್ಷರಾಗಿ ಬಿ.ಎಂ.ರವೀಶ್, ಗೌರವ ಕಾರ್ಯದರ್ಶಿಯಾಗಿ ಹೆಬ್ಬಾಳು ಹಾಲಪ್ಪ, ನಿರ್ದೇಶಕರಾಗಿ ಮಂಜನಾಥ ಹಾಗೂ ಮಾಳೇಗೆರೆ ತಾರಾನಾಥ್ ಅಧಿಕಾರ ಸ್ವೀಕರಿಸಿದ್ದಾರೆ. ಮುಂದಿನ ದಿನದಲ್ಲಿ ಉತ್ತಮ ಕೆಲಸಗಳನ್ನು ಮಾಡಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಗೌರವಾಧ್ಯಕ್ಷ ರವಿ ನಾಕಲಗೂಡು, ಹೋಬಳಿ ಘಟಕದ ಅಧ್ಯಕ್ಷ ಹೆಚ್.ಪಿ.ಚನ್ನೇಗೌಡ, ಸಾಂಸ್ಕøತಿಕ ಕಾರ್ಯದರ್ಶಿ ವೈ.ಆರ್.ಮಹೇಶ್, ಮಾಜಿ ಅಧ್ಯಕ್ಷರಾದ ವೈ.ಎಸ್.ಸಿದ್ದೇಗೌಡ, ಮಂಜುನಾಥ ಶೆಟ್ಟಿ, ಗ್ರಾಮಸ್ಥರಾದ ಗುರುಸಿದ್ದೇಗೌಡ, ಗಂಗೇಗೌಡ, ಪರಮೇಶ್, ಕರವೇ ಅಧ್ಯಕ್ಷ ಚಂದ್ರ ಶೇಖರ್, ರಾಜಕುಮಾರ್ ಸಂಘದ ಅಧ್ಯಕ್ಷ ತೀರ್ಥಂಕರ್, ನಾಗೇಶ್, ಸಂಪತ್ತು, ಬಾಳೆಹಣ್ಣು ರಮೇಶ್ ಇನ್ನು ಮುಂತಾದವರು ಹಾಜರಿದ್ದರು.

Translate »