ಮಹಜರ್ ವೇಳೆ ಅಂಬಿಕಾ ಹೈಡ್ರಾಮಾ
ಮೈಸೂರು

ಮಹಜರ್ ವೇಳೆ ಅಂಬಿಕಾ ಹೈಡ್ರಾಮಾ

December 22, 2018

ಹನೂರು: ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಬೆರೆಸಿ 16 ಮಂದಿ ಸಾವಿಗೆ ಕಾರಣರಾದ ನಾಲ್ವರು ಆರೋಪಿಗಳನ್ನು ಪೊಲೀಸರು ಇಂದು ವಿವಿಧೆಡೆಗೆ ಕರೆದೊಯ್ದು, ಮಹಜರ್ ನಡೆಸಿದರು. ಪ್ರಮುಖ ಆರೋಪಿಯಾದ ಇಮ್ಮಡಿ ಮಹದೇವಸ್ವಾಮಿ ವಿಚಾರಣೆ ವೇಳೆಯಲ್ಲಿ ಮತ್ತು ಆತನ ಪ್ರೇಯಸಿ ಅಂಬಿಕಾ ತನ್ನ ಮನೆಯ ಮಹಜರ್ ವೇಳೆಯಲ್ಲಿ ಹೈ ಡ್ರಾಮಾ ನಡೆಸಿದರು.

ಡಿವೈಎಸ್‍ಪಿ ಪುಟ್ಟಮಾದಯ್ಯ ನೇತೃತ್ವದ ತಂಡ ಇಂದು ಆರೋಪಿಗಳಾದ ಅಂಬಿಕಾ, ಅಕೆಯ ಪತಿ ಮಾದೇಶ ಮತ್ತು ದೊಡ್ಡಯ್ಯ ಅವರುಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಸುಳವಾಡಿಗೆ ಕರೆದೊಯ್ದರು. ಈ ಆರೋಪಿಗಳನ್ನು ಹೊತ್ತೊಯ್ದ ವ್ಯಾನ್‍ನ ಕಿಟಕಿಗಳಿಗೆ ಆರೋಪಿಗಳು ಕಾಣದಂತೆ ಬಟ್ಟೆಯಿಂದ ಪರದೆ ಅಳವಡಿಸಲಾಗಿತ್ತು. ಸುಳವಾಡಿಯಲ್ಲಿ ಅಂಬಿಕಾ ಮನೆಗೆ ಮೂವರು ಆರೋಪಿಗಳನ್ನೂ ಪೊಲೀಸರು ಕರೆದೊಯ್ದು ಮಹಜರ್ ನಡೆಸಿ ಹಿಂತಿರುಗುತ್ತಿದ್ದಾಗ ಮಹಡಿ ಮೆಟ್ಟಿಲು ಇಳಿಯುತ್ತಿದ್ದಂತೆಯೇ `ಪೊಲೀಸರು ಮೋಸ ಮಾಡ್ತಾ ಇದ್ದಾರೆ. ನನ್ನ ಮನೆ ಬಾಗಿಲು ತೆಗೆಸಿ ಅವರೇ ವಿಷದ ಬಾಟಲ್ ಇಟ್ಟಿದ್ದಾರೆ. ಅನ್ಯಾಯ ಮಾಡ್ತಿದ್ದಾರೆ ಸಾರ್! ಇದನ್ನ ಸಿಬಿಐಗೆ ಕೊಡ್ಬೇಕು ಸಾರ್’ ಎಂದು ಅಂಬಿಕಾ ಮಾಧ್ಯಮದವರನ್ನು ಉದ್ದೇಶಿಸಿ ಕಿರುಚಾಡುತ್ತಾ ಹೈ ಡ್ರಾಮಾ ಸೃಷ್ಟಿಸಿದರು.

ಈ ವೇಳೆ ಮಹಿಳಾ ಪೊಲೀಸರು `ಡ್ರಾಮಾ ಮಾಡಬೇಡ, ನಡಿ’ ಎಂದು ಹೇಳುತ್ತಾ ಆಕೆಯನ್ನು ವ್ಯಾನ್‍ಗೆ ಎಳೆದೊಯ್ದರು. ಇತ್ತ ರಾಮಾಪುರ ಪೊಲೀಸ್ ಠಾಣೆಯಲ್ಲಿ ಬೆಳಿಗ್ಗೆ `ನಾನು ಸ್ನಾನ ಮಾಡದೇ ತಿಂಡಿ ಮಾಡುವುದಿಲ್ಲಾ’ ಎಂದು ಇಮ್ಮಡಿ ಮಹದೇವಸ್ವಾಮಿ ಚಂಡಿ ಹಿಡಿದಿದ್ದ. ಆನಂತರ ವಿಚಾರಣೆ ವೇಳೆ ತನಗೆ ಎದೆನೋವು ಬಂದಿದೆ ಎಂದು ಒದ್ದಾಡುತ್ತಾ ನಾಟಕವಾಡಿದ. ಈ ಸಂದರ್ಭದಲ್ಲಿ ಪೊಲೀಸ್ ಠಾಣೆ ಮುಂಭಾಗದಲ್ಲೇ ನಿಲ್ಲಿಸಿದ್ದ ಆಂಬ್ಯುಲೆನ್ಸ್‍ನಲ್ಲಿದ್ದ ವೈದ್ಯರನ್ನು ಪೊಲೀಸರು ಕರೆಸಿದರು. ಇಮ್ಮಡಿ ಮಹದೇವಸ್ವಾಮಿಯನ್ನು ಪರೀಕ್ಷಿಸಿದ ವೈದ್ಯರು, ಆತ ಆರೋಗ್ಯವಾಗಿದ್ದಾನೆ ಎಂದು ಹೇಳಿದ ನಂತರ ಪೊಲೀಸರು ವಿಚಾರಣೆ ಮುಂದುವರೆಸಿದರು. ಸಂಜೆ 4.30ರ ವೇಳೆಗೆ ನಾಲ್ವರು ಆರೋಪಿಗಳನ್ನು ಯಲಚಿಕಟ್ಟೆ ಮಠಕ್ಕೆ ಕರೆದೊಯ್ದ ಪೊಲೀಸರು, ಮಹಜರ್ ನಡೆಸಿದರು. ಈ ಸ್ಥಳದಲ್ಲೇ ಪ್ರಸಾದಕ್ಕೆ ವಿಷ ಬೆರೆಸುವ ಸಂಚು ನಡೆದಿತ್ತು ಎಂದು ಹೇಳಲಾಗಿದೆ.

Translate »