ಮೈಸೂರು: ಐಟಿಬಿ ಮತ್ತು ಮುಡಾದಿಂದ ಅಭಿವೃದ್ಧಿಪಡಿಸಿರುವ ಕುರುಬಾರಹಳ್ಳಿ ಸರ್ವೆ ನಂಬರ್ 4 ಮತ್ತು ಆಲನಹಳ್ಳಿ ಸರ್ವೆ ನಂಬರ್ 41ರ ಬಡಾವಣೆಗಳನ್ನು ‘ಬಿ’ ಖರಾಬು ವರ್ಗದಿಂದ ಕೈಬಿಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ, ನಿವಾಸಿಗಳು ಫೆಬ್ರವರಿ 11ರಂದು ‘ಬೆಂಗಳೂರು ಚಲೋ’ ಚಳವಳಿ ನಡೆಸಲು ನಿರ್ಧರಿಸಿದ್ದಾರೆ.
ಅಂದು ಬಸ್ಸುಗಳಲ್ಲಿ ಬೆಂಗಳೂರಿಗೆ ತೆರಳಲಿರುವ ಸುಮಾರು ಒಂದು ಸಾವಿರ ಮಂದಿ ನಿವಾಸಿಗಳು ಅಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ತ.ಮ.ವಿಜಯಭಾಸ್ಕರ್, ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ, ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಕಂದಾಯ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆ ಕಾರ್ಯ ದರ್ಶಿಗಳನ್ನು ಭೇಟಿ ಮಾಡಿ ತಮಗಾಗುತ್ತಿರುವ ಸಮಸ್ಯೆಗಳನ್ನು ವಿವರಿಸುವರು. ಮೈಸೂರಿನ ಸಿದ್ದಾರ್ಥ ಹೋಟೆಲಿನಲ್ಲಿ ಈ ಬಗ್ಗೆ ಇಂದು ಸಭೆ ನಡೆಸಿದ ಬಡಾವಣೆ ನಿವಾಸಿಗಳು ಫೆ.11ರಂದು ಬೆಂಗಳೂರು ಚಲೋ ಚಳವಳಿ ನಡೆಸುವ ಬಗ್ಗೆ ನಿರ್ಧಾರ ಕೈಗೊಂಡರು. ನಂತರ ಸುದ್ದಿಗೋಷ್ಠಿಯಲ್ಲಿ
ಈ ವಿಷಯ ತಿಳಿಸಿದ ಬಿಜೆಪಿ ರಾಷ್ಟ್ರೀಯ ಕೌನ್ಸಿಲ್ ಸದಸ್ಯ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಈ ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಪಿ.ಮಂಜುನಾಥ, ‘ಬಿ’ ಖರಾಬು ವರ್ಗದಿಂದ ಸಾವಿರಾರು ಮಂದಿ ಮೂರು ದಶಕದಿಂದ ನೆಲೆಸಿರುವ ಈ ಬಡಾವಣೆಗಳನ್ನು ಕೈಬಿಡು ವಂತೆ ತಾವು ಹಲವು ವರ್ಷಗಳಿಂದ ಹೋರಾಟ ನಡೆಸಿದರೂ, ರಾಜ್ಯ ಸರ್ಕಾರ ತಮ್ಮ ಸಮಸ್ಯೆ ಬಗೆಹರಿಸಲು ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದರು.
2018ರ ಸೆಪ್ಟೆಂಬರ್ 17ರಂದು ಮುಖ್ಯಮಂತ್ರಿಗಳ ಕಚೇರಿಯಿಂದ ಮುಡಾ ಕಮಿಷ್ನರ್‍ಗೆ ಬಂದಿರುವ ಪತ್ರ(ಸಂಖ್ಯೆ ಸಿಎಂ/52430/ಆರ್‍ಇಪಿ-ಂಇ/2018)ದಲ್ಲಿ ಸಿದ್ದಾರ್ಥನಗರ, ಆಲನಹಳ್ಳಿ, ಕೆ.ಸಿ.ನಗರ, ಜೆ.ಸಿ.ನಗರ ಮತ್ತು ಆದಾಯ ತೆರಿಗೆ ಬಡಾವಣೆಗಳನ್ನು ‘ಬಿ’ ಖರಾಬಿನಿಂದ ಕೈಬಿಡುವಂತೆ ಕಳೆದ ಸಿದ್ದರಾಮಯ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ನಿರ್ಧಾರದಂತೆ ಮುಂದಿನ ಕ್ರಮ ಕೈಗೊಳ್ಳುವಂತೆ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಅಧಿಕಾರಿಗಳು ಕ್ರಮ ವಹಿಸಿಲ್ಲ ಎಂದೂ ಮಂಜುನಾಥ ಆರೋಪಿಸಿದರು. ಇತ್ತೀಚೆಗಷ್ಟೇ ಮೈಸೂರಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡಿ ಮನವಿ ಪತ್ರ ನೀಡಿ ‘ಬಿ’ ಖರಾಬಿನಿಂದ ತೆರವುಗೊಳಿಸುವಂತೆ ಬೇಡಿಕೊಂಡಿದ್ದೆವು. ಪೂರಕವಾಗಿ ಸ್ಪಂದಿಸಿದ್ದ ಮುಖ್ಯಮಂತ್ರಿಗಳು ನೀಡಿದ ಭರವಸೆಯನ್ನೂ ಈಡೇರಿಸದಿರುವುದು ದುರದೃಷ್ಟಕರ ಎಂದೂ ಇದೇ ವೇಳೆ ನುಡಿದರು. 1970ರ ದಶಕದಲ್ಲಿ ಅಂದಿನ ಸಿಐಟಿಬಿಯಿಂದ ನಿವೇಶನಗಳನ್ನು ಖರೀದಿಸಿ ಕೆಲವರು ಮನೆ ನಿರ್ಮಿಸಿದ್ದಾರೆ. ಆದರೆ ಈಗ ಖಾತೆ-ಕಂದಾಯ, ಮಾರಾಟ, ಸಿಆರ್, ನಕ್ಷೆ ಅನುಮೋದನೆ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಿ ರುವುದರಿಂದ ಸುಮಾರು 25 ಸಾವಿರ ಮಂದಿ ನಿವಾಸಿಗಳು ತೊಂದರೆಗೆ ಸಿಲುಕಿದ್ದಾರೆ ಎಂದೂ ಮಂಜುನಾಥ ನಿವಾಸಿಗಳು ಅನುಭವಿಸುತ್ತಿರುವ ಯಾತನೆಯನ್ನು ಹೇಳಿಕೊಂಡರು. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಅತೀ ಶೀಘ್ರ ಸರ್ಕಾರ ಈ ಸಮಸ್ಯೆಯನ್ನು ಇತ್ಯರ್ಥಗೊಳಿಸಬೇಕು ಎಂದು ಆಗ್ರಹಿಸಿ ಬೆಂಗಳೂರು ಚಲೋ ವೇಳೆ ಮನವಿ ಮಾಡಿಕೊಳ್ಳಲಾಗುವುದು.
ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ತಾವೂ ಸದನದಲ್ಲಿ ಸ್ಪೀಕರ್ ಅನುಮತಿ ಪಡೆದು ಕುರುಬಾರಹಳ್ಳಿ ಸರ್ವೆ ನಂಬರ್ ವಿವಾದದ ಬಗ್ಗೆ ಪ್ರಸ್ತಾಪಿಸಿ, ಗಮನ ಸೆಳೆಯುತ್ತೇನೆ ಎಂದರು. ಮಾಜಿ ಶಾಸಕ ವಾಸು, ವಕೀಲ ಹರೀಶ್‍ಕುಮಾರ್ ಹೆಗ್ಡೆ, ಕಾರ್ಪೊರೇಟರ್ ರೂಪಾ, ಹೋಟೆಲ್ ಉದ್ಯಮಿ ಪಿ.ವಿ.ಗಿರಿ, ಎಸ್‍ಪಿ ಮಹೇಶ್ ಸಹ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.