ಕುರುಬಾರಹಳ್ಳಿ ಸರ್ವೆ ನಂ.4, ಆಲನಹಳ್ಳಿ ಸರ್ವೆ ನಂ.41ರ ವಿವಾದ ಮುಡಾ ಬಡಾವಣೆಗಳ `ಬಿ’ ಖರಾಬಿನಿಂದ ಕೈಬಿಡುವ ಸಂಬಂಧ ಫೆ.25ರೊಳಗೆ ಸರ್ಕಾರಿ ಆದೇಶ
ಮೈಸೂರು

ಕುರುಬಾರಹಳ್ಳಿ ಸರ್ವೆ ನಂ.4, ಆಲನಹಳ್ಳಿ ಸರ್ವೆ ನಂ.41ರ ವಿವಾದ ಮುಡಾ ಬಡಾವಣೆಗಳ `ಬಿ’ ಖರಾಬಿನಿಂದ ಕೈಬಿಡುವ ಸಂಬಂಧ ಫೆ.25ರೊಳಗೆ ಸರ್ಕಾರಿ ಆದೇಶ

February 10, 2019

ಮೈಸೂರು: ಮೈಸೂರಿನ ಕುರುಬಾರ ಹಳ್ಳಿ ಸರ್ವೆ ನಂ.4, ಆಲನಹಳ್ಳಿ ಸರ್ವೆ ನಂ.41ರ ವ್ಯಾಪ್ತಿಯಲ್ಲಿ ಬರುವ ಮುಡಾ ನಿರ್ಮಾಣದ ವಿವಿಧ ಬಡಾವಣೆಗಳ `ಬಿ’ ಖರಾಬು ವಿವಾದಕ್ಕೆ ಸದ್ಯದಲ್ಲೇ ತೆರೆ ಬೀಳಲಿದೆ. ಸಿದ್ದಾರ್ಥ ಬಡಾವಣೆ, ಕೆ.ಸಿ.ಬಡಾವಣೆ, ಜೆ.ಸಿ.ಬಡಾವಣೆ, ಕುರುಬಾರ ಹಳ್ಳಿ ಗ್ರಾಮ ಮತ್ತು ಆದಾಯ ತೆರಿಗೆ ಬಡಾವಣೆಗಳನ್ನು ಬಿ-ಖರಾಬಿನಿಂದ ಕೈಬಿಡುವ ಸಂಬಂಧ ಫೆ. 25ರೊಳಗೆ ಸರ್ಕಾರಿ ಆದೇಶ ಹೊರ ಬೀಳಲಿದೆ. ಇದು ಸಂತೋಷದ ವಿಚಾರ ಎಂದು ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್ ಇಂದಿಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸರ್ವೆ ನಂ.4 ಮತ್ತು ಆಲನಹಳ್ಳಿ ಸರ್ವೆ ನಂ.41ರಲ್ಲಿ 1900 ಎಕರೆ ಪ್ರದೇಶ ಬಿ-ಖರಾಬು (ಸರ್ಕಾರಿ ಜಾಗ) ಎಂದು ಸರ್ಕಾರದ ಸೂಚನೆ ಯಂತೆ ಮೈಸೂರು ಜಿಲ್ಲಾಧಿಕಾರಿಗಳು ಆದೇಶ ಹೊರ ಡಿಸಿದ್ದರಿಂದ ವಿವಾದವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಹಿಂದಿನ ಪ್ರಾದೇಶಿಕ ಆಯುಕ್ತರಾಗಿದ್ದ ಎಂ.ವಿ.ಜಯಂತಿ ಸಾವಿರ ಪುಟಗಳ ವಿಸ್ತøತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಕರ್ನಾಟಕದ ವಿವಿಧ ನ್ಯಾಯಾಲಯಗಳಲ್ಲಿ ಈ ಸರ್ವೆ ನಂಬರ್‍ಗಳ ಭೂಮಿಗೆ ಸಂಬಂಧಿಸಿದಂತೆ ವ್ಯಾಜ್ಯಗಳಿವೆ. 1950ರ ಕರಾರಿನಂತೆ ಕುರುಬಾರಹಳ್ಳಿ ಸರ್ವೆ ನಂ.4 ಮತ್ತು ಆಲನಹಳ್ಳಿ ಸರ್ವೆ ನಂ. 41ರಲ್ಲಿ 1412 ಎಕರೆ ಆಸ್ತಿ ಮಹಾರಾಜರಿಗೆ ಸೇರಿದ್ದು ಎಂಬ ಬಗ್ಗೆ ವಿವಾದಗಳು ಉದ್ಭವಿಸಿತ್ತು. ಆದರೆ ಸರ್ಕಾರ ಇದು ಸರ್ಕಾರಿ ಆಸ್ತಿ (ಬಿ ಖರಾಬು) ಎಂದು ಪ್ರತಿಪಾದಿಸಿತ್ತು.

ಆದರೆ, 1968ರಿಂದ ಇಲ್ಲಿಯವರೆಗೆ ಹಿಂದೆ ಸಿಐಟಿಬಿ, ಇಂದಿನ ಮುಡಾ ವಿವಿಧ ಕಾನೂನಿನ ಅಡಿಯಲ್ಲಿ ತಾವೇ ನಿರ್ಮಿಸಿದ ಬಡಾವಣೆಗಳ ನಿವೇಶನದಾರರು ಮತ್ತು ಮನೆಗಳ ಮಾಲೀಕರಿಗೆ ಖಾತೆಗಳ ವರ್ಗಾವಣೆ, ಟೈಟಲ್ ಡೀಡ್, ನಕ್ಷೆ ಅನುಮೋದನೆ ಇನ್ನಿತರೆ ದಾಖಲೆ ವಿಲೆಗೆ ಸಂಬಂಧಪಟ್ಟಂತೆ ಮುಂದೆ ಯಾವುದೇ ಕ್ರಮ ಗಳನ್ನು ಕೈಗೊಳ್ಳಬಾರದು ಮತ್ತು ಯಥಾಸ್ಥಿತಿ ಮುಂದು ವರಿಸುವಂತೆ ಆದೇಶಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ದಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಳು ಈಗಾಗಲೇ ಸರ್ಕಾರದ ಅಧೀನ ಸಂಸ್ಥೆಗಳಿಂದ ಬಡಾವಣೆಗಳು ಅಭಿವೃದ್ಧಿಯಾಗಿರುವ ಪ್ರದೇಶಗಳನ್ನು ಬಿ-ಖರಾಬಿನಿಂದ ಹೊರಗಿಡಲು ಕ್ರಮ ಕೈಗೊಳ್ಳಲು ಮೈಸೂರು ಜಿಲ್ಲಾಧಿಕಾರಿಗಳಿಗೆ 24-8-2016 ರಂದು ಆದೇಶ ನೀಡಿದ್ದರು.

ಮೈಸೂರು ಜಿಲ್ಲಾಧಿಕಾರಿಗಳ ವರದಿಗಳಂತೆ ಸರ್ಕಾರವು ವಿವಿಧ ನ್ಯಾಯಾಲಯ ಗಳಲ್ಲಿರುವ ದಾವೆಗಳು, ನ್ಯಾಯಾಧೀಕರಣದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು, ಸಿದ್ದಾರ್ಥ ಬಡಾವಣೆ, ಕೆ.ಸಿ.ಬಡಾವಣೆ, ಜೆ.ಸಿ.ಬಡಾವಣೆ, ಕುರುಬಾರಹಳ್ಳಿ ಗ್ರಾಮ ಠಾಣಾ ಮತ್ತು ಆದಾಯ ತೆರಿಗೆ ಬಡಾವಣೆಗಳ ಪ್ರದೇಶವನ್ನು ಬಿ-ಖರಾಬಿನಿಂದ ಹೊರಗಿಡಲು ರಾಜ್ಯದ ಅಡ್ವೋಕೆಟ್ ಜನರಲ್ ಅವರು ಸಕಾರಾತ್ಮಕವಾಗಿ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ. ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಅಡ್ವೋಕೇಟ್ ಜನರಲ್ ತಮ್ಮ ಅಭಿಪ್ರಾಯವನ್ನು ಕೋರ್ಟ್‍ಗೆ ನೀಡಿದ್ದು, ಇನ್ನೆರಡು ಪ್ರಕರಣ ಬಾಕಿ ಇದೆ. ಅದಕ್ಕೂ ಸಕಾರಾತ್ಮಕ ಅಭಿಪ್ರಾಯ ಸಲ್ಲಿಸುವ ಭರವಸೆಯನ್ನು ನೀಡಿದ್ದಾರೆ. ಇದು ಶ್ಲಾಘನೀಯ. ಇದಾದ ನಂತರ ಫೆ. 25ರೊಳಗೆ ಸರ್ಕಾರ ಆದೇಶ ಹೊರಡಿಸಲು ನಿರ್ಧರಿಸಿದೆ. ಬಹಳ ದಿನಗಳ ಸಮಸ್ಯೆಗೆ ಇದರಿಂದ ಪರಿಹಾರ ದೊರೆತಂತಾಗುತ್ತದೆ ಎಂದು ರಾಮದಾಸ್ ಸಮಾಧಾನ ವ್ಯಕ್ತಪಡಿಸಿದರು.

ಇಷ್ಟು ಬಡಾವಣೆUಳು ಬಿ-ಖರಾಬಿನಿಂದ ಹೊರಬಂದರೆ ಯಾರಾದರೂ ತಮ್ಮ ಮನೆ, ನಿವೇಶನಗಳನ್ನು ಮಾರಾಟ ಮಾಡಬಹುದು, ಟೈಟಲ್ ಡೀಡ್ ಪಡೆಯಲು ಅವಕಾಶ ಸಿಕ್ಕಂತಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡುತ್ತಿರುವ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸುವುದಾಗಿ ಹೇಳಿದರು.

ಈ ಮಧ್ಯೆ `ಬಿ’ ಖರಾಬಿನಿಂದ ಮುಡಾ ಬಡಾವಣೆಗಳನ್ನು ಕೈಬಿಡುವ ಸರ್ಕಾರಿ ಆದೇಶ ತಕ್ಷಣ ಹೊರಡಿಸಬೇಕೆಂದು ಆಗ್ರಹಿಸಿ ಕುರುಬಾರಹಳ್ಳಿ ಸರ್ವೇ ನಂ. 4 ಹಾಗೂ ಆಲನಹಳ್ಳಿ ಸರ್ವೇ ನಂ. 41ರ ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಫೆ. 11 ರಂದು `ಬೆಂಗಳೂರು ಚಲೋ’ ಹಮ್ಮಿಕೊಳ್ಳಲಾಗಿದೆ.

Translate »