ಆಪರೇಷನ್ ಕಮಲ ಆಡಿಯೋ ನಕಲಿ ಎಂದು ಸಾಬೀತಾದ್ರೆ ರಾಜಕೀಯ ನಿವೃತ್ತಿ
ಮೈಸೂರು

ಆಪರೇಷನ್ ಕಮಲ ಆಡಿಯೋ ನಕಲಿ ಎಂದು ಸಾಬೀತಾದ್ರೆ ರಾಜಕೀಯ ನಿವೃತ್ತಿ

February 10, 2019

ಬೆಂಗಳೂರು: ಬಿಜೆಪಿ ನಾಯಕರು ನಮ್ಮ ಶಾಸಕರಿಗೆ ಆಮಿಷ ಒಡ್ಡುತ್ತಿರುವುದಕ್ಕೆ ಸಂಬಂಧಿಸಿದಂತೆ ನಾನು ಬಿಡುಗಡೆ ಮಾಡಿರುವ ಆಡಿಯೋ ನಕಲಿ ಎಂದು ಸಾಬೀತಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಶನಿವಾರ ಮತ್ತೆ ಪ್ರಮಾಣ ಮಾಡಿದ್ದಾರೆ.

ಇಂದು ಧರ್ಮಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬಜೆಟ್‍ಗೂ ಮುನ್ನ ಬಿಡುಗಡೆ ಮಾಡಿದ್ದ ಆಡಿಯೋದಲ್ಲಿರೋದು ಬಿ.ಎಸ್. ಯಡಿಯೂರಪ್ಪ ಅವರ ಧ್ವನಿಯೇ ಆಗಿದೆ. ಒಂದು ವೇಳೆ ಈ ವಿಚಾರ ಸಾಬೀತಾಗದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಶಪಥ ಮಾಡಿದರು. ಆಡಿಯೋದಲ್ಲಿರುವುದು ತಮ್ಮ ಧ್ವನಿ ಎಂಬುದನ್ನು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಯಡಿಯೂರಪ್ಪ ಅವರು ಹೇಳಿದ್ದಾರೆ. ಆದರೆ ಆ ಧ್ವನಿ ತಮ್ಮದ್ದಲ್ಲ ಎಂದು ಅವರು ಸಾಬೀತು ಪಡಿಸಲಿ. ಆಗ ಅವರ ಬದಲಿಗೆ ನಾನೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿಎಂ ಪ್ರತಿ ಸವಾಲು ಹಾಕಿದರು.

ನಾನು ಹಿಂದೆ ಸಿನಿಮಾ ನಿರ್ಮಾಪಕ ಆಗಿದ್ದು ನಿಜ. ಆದರೆ ಇಂತ ಆಡಿಯೋ ಸೃಷ್ಟಿಸುವ ಅವಶ್ಯಕತೆ ಇಲ್ಲ. ಸಾಮಾನ್ಯ ಜ್ಞಾನ ಇರುವವರಿಗೂ ಆ ಆಡಿಯೋದಲ್ಲಿ ರುವ ಧ್ವನಿ ಯಾರದ್ದು ಎಂಬುದು ಗೊತ್ತಾಗುತ್ತಿದೆ ಎಂದರು.

ನಾನು ಆಡಿಯೋ ಮಾಡಿಸಿಲ್ಲ. ಕಾರ್ಯಕರ್ತರು ಆಡಿಯೋ ಮಾಡಿದ್ದಾರೆ. ಬಿಎಸ್‍ವೈ ಪುತ್ರ, ಯೋಗೇಶ್ವರ್ ಹಾಗೂ ಅಶ್ವಥ್ ನಾರಾಯಣ ಈ ಆಪರೇಷನ್ ಸೂತ್ರ ಧಾರರಾಗಿದ್ದಾರೆ. ಆ ಆಡಿಯೋದಲ್ಲಿ ಇರೋದು ಯಡಿಯೂರಪ್ಪ ಅವರ ವಾಯ್ಸೇ ಆಗಿದೆ ಎಂದು ಮತ್ತೊಮ್ಮೆ ಹೆಚ್‍ಡಿಕೆ ಸ್ಪಷ್ಟಪಡಿಸಿದ್ದಾರೆ. ರೆಸಾರ್ಟ್ ಹಾಗೂ ಔತಣ ಕೂಟ ರಾಜಕೀಯದ ನಂತರ ಈಗ ಆಡಿಯೋ-ವಿಡಿಯೋ ರಾಜಕೀಯ ಆರಂಭವಾಗಿದ್ದು, ಹೆಚ್‍ಡಿಕೆ ಬಿಡುಗಡೆ ಗೊಳಿಸಿದ್ದ ಆಡಿಯೋ ಸಾಬೀತಾದ್ರೆ ನಾನು ರಾಜಕೀಯ ದಿಂದ ನಿವೃತ್ತಿ ಪಡೆಯುತ್ತೇನೆ ಎಂದು ನಿನ್ನೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರೆ, ಇಂದು ಆ ಆಡಿಯೋ ಸತ್ಯ ಎಂದು ಸಾಬೀತಾಗದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿಎಂ ಹೇಳಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

Translate »