ಅರಮನೆ ಆವರಣ ಸ್ವಚ್ಛತೆ ಮೂಲಕ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ
ಮೈಸೂರು

ಅರಮನೆ ಆವರಣ ಸ್ವಚ್ಛತೆ ಮೂಲಕ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

October 3, 2018

ಮೈಸೂರು:  ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಮಾಜಿ ಸಚಿವರೂ ಆದ ಕೆ.ಆರ್.ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಮಂಗಳವಾರ ಮೈಸೂರು ಅರಮನೆ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು.

ಗಾಂಧಿ ಹಾಗೂ ಲಾಲ್ ಬಹದ್ದೂರ್‍ಶಾಸ್ತ್ರಿ ಜಯಂತಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‍ನ ಸಂಸ್ಥಾಪನಾ ದಿನವಾದ ಇಂದು ಕೆಆರ್ ಕ್ಷೇತ್ರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಬಳಿಕ ದಸರಾ ಗಜಪಡೆಯ ಮಾವುತರು, ಕಾವಾಡಿಗಳು ಹಾಗೂ ಅವರ ಮಕ್ಕಳು ಹಾಗೂ ಬಿಜೆಪಿ ಕಾರ್ಯಕರ್ತರು ಹಾಗೂ ಕೆಆರ್ ಕ್ಷೇತ್ರದ ಬಿಜೆಪಿ ಪಾಲಿಕೆ ಸದಸ್ಯರೊಂದಿಗೆ ಎಸ್.ಎ.ರಾಮದಾಸ್ ಸ್ವಚ್ಛತಾ ಕಾರ್ಯ ನಡೆಸಿದರು.

ದಸರಾ ಗಜಪಡೆಯ ಬಲರಾಮ ಆನೆಗೆ ಕಬ್ಬು ಮತ್ತು ಬೆಲ್ಲವನ್ನು ನೀಡಿದ ಎಸ್.ಎ.ರಾಮದಾಸ್ ಬಳಿಕ `ಸ್ವಚ್ಛ ಭಾರತ… ಸ್ವಚ್ಛ ಮೈಸೂರು’ ಎಂಬ ಫಲಕವನ್ನು ಬಲರಾಮನಿಗೆ ನೀಡಿದರು. ಈ ವೇಳೆ ಬಲರಾಮ ತನ್ನ ಸೊಂಡಿಲಿನಿಂದ ಫಲಕ ಪ್ರದರ್ಶಿಸಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಬಳಿಕ ಸ್ವಚ್ಛತಾ ಕಾರ್ಯ ಆರಂಭಿಸಿ ಗಜಪಡೆಯ ಆವರಣಗಳನ್ನು ಶುಚಿಗೊಳಿಸಲಾಯಿತು. ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಹಲವರು ಪೊರಕೆಗಳನ್ನಿಡಿದು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗುವ ಮೂಲಕ ಸ್ವಚ್ಛತೆಯ ಮಹತ್ವ ಸಾರಿದರು.

ಮೈಸೂರು ಅರಮನೆಯು 51ನೇ ವಾರ್ಡಿನ ವ್ಯಾಪ್ತಿಗೆ ಬರಲಿದ್ದು, ಈ ವಾರ್ಡಿನ ನಗರ ಪಾಲಿಕೆ ಬಿಜೆಪಿ ಸದಸ್ಯ ಬಿ.ವಿ.ಮಂಜುನಾಥ್ ಅವರನ್ನು ಒಳಗೊಂಡಂತೆ ಕೆಆರ್ ಕ್ಷೇತ್ರದ ಬಿಜೆಪಿ ಪಾಲಿಕೆ ಸದಸ್ಯರು ಮತ್ತು ನಗರ ಪಾಲಿಕೆ ಚುನಾವಣೆಗೆ ಸ್ಪರ್ದಿಸಿದ್ದ ಅಭ್ಯರ್ಥಿಗಳು, ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ಪಾಲಿಕೆ ಸಿಬ್ಬಂದಿ ಒಟ್ಟಾಗಿ ಸ್ವಚ್ಛತಾ ಕಾರ್ಯ ನಡೆಸಿದರು. ಈ ವೇಳೆ ‘ಅಮ್ಮ ಮನೆ’ ಮಕ್ಕಳು ಸೇರಿದಂತೆ ಅನೇಕರು ಪ್ರಧಾನಿ ಮೋದಿಯವರ ಮುಖವಾಡ ಧರಿಸಿ ಸ್ವಚ್ಛತೆ ಕೆಲಸದಲ್ಲಿ ಭಾಗಿಯಾಗಿದ್ದು ಮತ್ತೊಂದು ವಿಶೇಷವಾಗಿತ್ತು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್.ಎ.ರಾಮದಾಸ್, ಗಾಂಧಿ ಮತ್ತು ಲಾಲ್ ಬಹದ್ದೂರ್‍ಶಾಸ್ತ್ರಿ ಅವರ ಜಯಂತಿ ದಿನವಾದ ಇಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಸ್ಥಾಪನೆಗೊಂಡ ಶುಭ ದಿನವೂ ಆಗಿದೆ. ಇಂತಹ ಪವಿತ್ರವಾದ ದಿನದಂದು ಸಾರ್ಥಕ ರೀತಿಯಲ್ಲಿ ಸೇವಾ ಕಾರ್ಯ ನಡೆಸಬೇಕೆಂಬ ಉದ್ದೇಶದಿಂದ ಇಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ ಎಂದರು.
ಇಂದಿನ ಸ್ವಚ್ಛತಾ ಕಾರ್ಯದ ಮೂಲಕ ಗಜಪಡೆಯೊಂದಿಗೆ ಆಗಮಿಸಿರುವ ಮಾವುತರು ಹಾಗೂ ಕಾವಾಡಿಗಳ ಮಕ್ಕಳು ಹಾಗೂ ನಾಡಿನ ಮಕ್ಕಳು ಬೆರೆತು ಕೆಲಸ ಮಾಡುವಂತಾಗಿದೆ. ಹೀಗಾಗಿ ಇದೊಂದು ಸಾಮರಸ್ಯ ಸಾರುವ ಕಾರ್ಯಕ್ರಮವೂ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ನಮ್ಮ ಪರಿಸರದಲ್ಲಿ ಸ್ವಚ್ಛ ಗಾಳಿ, ಸ್ವಚ್ಛ ನೀರು ಹಾಗೂ ಸ್ವಚ್ಛ ಪರಿಸರ ನಿರ್ಮಿಸುವ ಮೂಲಕ ಆರೋಗ್ಯಕರ ಸಮಾಜ ಕಟ್ಟಬೇಕಿದೆ ಎಂದರು.

ಕೆಆರ್ ಕ್ಷೇತ್ರದ ಬಿಜೆಪಿ ಪಾಲಿಕೆ ಸದಸ್ಯರಾದ ಎಂ.ಸಿ.ರಮೇಶ್, ಚಂಪಕಾ, ಛಾಯಾದೇವಿ, ರೂಪ, ಗೀತಾಶ್ರೀ, ಶಾರದಾಮ್ಮ, ಶಾಂತಮ್ಮ, ಸೌಮ್ಯ, ಬಿಜೆಪಿ ಯುವ ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಬಿ.ಸೋಮಶೇಖರ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಮತ್ತಿತರರು ಹಾಜರಿದ್ದರು.

ಮತ್ತೆ ಮೈಸೂರು ಸ್ವಚ್ಛತೆಯಲ್ಲಿ ನಂ.1…

ಮೈಸೂರು ನಗರ ದೇಶದ ಮೊದಲ ಸ್ವಚ್ಛ ನಗರವಾಗಿ ಹೊರಹೊಮ್ಮಿತ್ತು. ಅನಂತರದ ದಿನಗಳಲ್ಲಿ ಆ ಸ್ಥಾನ ಕೈತಪ್ಪಿತ್ತು. ಇದೀಗ ಮತ್ತೆ ದೇಶದ ಮೊದಲ ಸ್ವಚ್ಛ ನಗರವೆಂಬ ಹೆಗ್ಗಳಿಕೆಯನ್ನು ಮರಳಿ ಪಡೆಯಬೇಕಿದೆ. ಅದಕ್ಕಾಗಿ ಈಗಾಗಲೇ ಪ್ರತಿ ಭಾನುವಾರ ನಮ್ಮ ತಂಡ ಸ್ವಚ್ಛತಾ ಶ್ರಮದಾನ ನಡೆಸುತ್ತಿದ್ದು, ಗುರಿ ಮುಟ್ಟುವ ತನಕ ಈ ನಮ್ಮ ಕಾರ್ಯಕ್ರಮ ನಿಲ್ಲದು. -ಎಸ್.ಎ.ರಾಮದಾಸ್

Translate »