ಇಂದಿನ ಬಹುತೇಕ ರಾಜಕಾರಣಿಗಳಿಗೆ ಗಾಂಧೀಜಿ ನೆನಪೇ ಇಲ್ಲ
ಮೈಸೂರು

ಇಂದಿನ ಬಹುತೇಕ ರಾಜಕಾರಣಿಗಳಿಗೆ ಗಾಂಧೀಜಿ ನೆನಪೇ ಇಲ್ಲ

October 3, 2018

ಮೈಸೂರು:  ಮೈಸೂರು ಜಿಲ್ಲೆ ಮತ್ತು ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಮಂಗಳವಾರ ಮಹಾತ್ಮ ಗಾಂಧೀಯವರ 150ನೇ ಜಯಂತಿ ಆಚರಿಸಲಾಯಿತು.

ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಭವನದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಯಂತಿ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಡಾ.ಎಂ.ಜಿ.ಕೃಷ್ಣಮೂರ್ತಿ ರಾಷ್ಟ್ರದ ಧ್ವಜಾರೋಹಣ ನೆರವೇರಿಸಿ ಗಾಂಧಿ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಇಂದಿನ ರಾಜಕಾರಣಿಗಳಲ್ಲಿ ಬಹುತೇಕರಿಗೆ ಗಾಂಧೀಜಿ ನೆನಪೇ ಇಲ್ಲವಾಗಿದೆ. ಸ್ವಾತಂತ್ರೋತ್ತರ ಭಾರತದಲ್ಲಿ ಹುಟ್ಟಿದ ಇವರಿಗೆ ಗಾಂಧಿಯವರ ಸ್ವಾತಂತ್ರ್ಯ ಚಳುವಳಿ ಹಾಗೂ ಅವರ ತತ್ವಗಳ ಮಹತ್ವದ ಬಗ್ಗೆ ಅರಿವಿಲ್ಲ. ಸ್ವಾತಂತ್ರ್ಯ ಹೋರಾಟಗಾರರನ್ನು ಕೇವಲ ಆಗಸ್ಟ್ 15, ಜನವರಿ 26 ಹಾಗೂ ಅಕ್ಟೋಬರ್ 2ರಂದು ನೆಪ ಮಾತ್ರಕ್ಕೆ ನೆನೆಪು ಮಾಡಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ಗಾಂಧೀಜಿಯವರ ಜೀವನ, ಆದರ್ಶ, ಹೋರಾಟ ಹಾಗೂ ಅವರು ದೇಶಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಶಾಲಾ-ಕಾಲೇಜುಗಳ ಪಠ್ಯಕ್ರಮದಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ಗಾಂಧಿಯವರು ತಮ್ಮ ಆಶ್ರಮದಲ್ಲಿ ದಲಿತರಿಗೆ ಪ್ರವೇಶ ನೀಡಿ ಅವರಿಂದಲೇ ಅಡುಗೆ ಮಾಡಿಸಿಕೊಂಡು ಊಟ ಮಾಡುತ್ತಿದ್ದರು. ಆ ಮೂಲಕ ಅಸ್ಪøಶ್ಯತೆ ನಿವಾರಣೆಗೆ ಮುಂದಾಗಿದ್ದರು ಎಂದರು.

ಗಾಂಧಿಯವರ ತತ್ವಗಳಿಗೆ ಆದ್ಯತೆ ನೀಡದ ಹಿನ್ನೆಲೆಯಲ್ಲಿ ಭಾರತೀಯ ಸಂಸ್ಕೃತಿ ನಮ್ಮ ಸಮಾಜ ಕಣ್ಮರೆಯಾಗುತ್ತಿದೆ. ಪ್ರತಿಭಾನ್ವಿತರು ಅವಕಾಶಗಳಿಂದ ವಂಚಿತರಾಗಿ ಉದ್ಯೋಗ ಅರಸಿ ವಿದೇಶಗಳತ್ತ ಮುಖ ಮಾಡಿದ್ದಾರೆ. ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿದ್ದು, ಅವಿಭಕ್ತ ಕುಟುಂಬಗಳು ಇಲ್ಲವಾಗುತ್ತಿವೆ. ಆ ಮೂಲಕ ಭಾರತೀಯ ಸಂಸ್ಕೃತಿಯಿಂದ ನಮ್ಮ ಸಮಾಜ ಹೊರ ನಡೆಯುತ್ತಿದೆ ಎಂದು ವಿಷಾದಿಸಿದರು.

ಗಾಂಧಿ ಚಿಂತನೆ ಒಂದಾದರೂ ಇರಲಿ: ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ 95 ವರ್ಷದ ಲಕ್ಷ್ಮೀನರಸಿಂಹಯ್ಯ (ಜಿಎಲ್‍ಎನ್ ಅಯ್ಯ), ಗಾಂಧೀಜಿಯವರ ಎಲ್ಲಾ ತತ್ವಗಳನ್ನು ಅಳವಡಿಸಿಕೊಂಡಿಲ್ಲವಾದರೂ ಅವರ ಸರಳ ಮತ್ತು ಸತ್ಯ ಎಂಬುದಕ್ಕೆ ಬದ್ಧವಾಗಿ ಜೀವನದೂಡಿದ್ದೇನೆ. ಹೀಗಾಗಿ ಗಾಂಧೀಜಿಯವರ ಒಂದೆರಡು ಚಿಂತನೆಗಳನ್ನಾದರೂ ಪ್ರತಿಯೊಬ್ಬರೂ ಅನುಸರಿಸಿದರೆ ಉತ್ತಮ ಸಮಾಜ ನಿರ್ಮಾಣ ಆಗಲಿದೆ ಎಂದು ನುಡಿದರು.
ನಾನು ಮೈಸೂರಿನ ನಿವಾಸಿಯಾಗಿದ್ದು, 1942ರಲ್ಲಿ ನಡೆದ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿ ಸಂದರ್ಭದಲ್ಲಿ ನಾನು ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಳ್ಳಲು ಆರಂಭಿಸಿದೆ. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಮುಂಬೈನಲ್ಲಿ ವೃತ್ತಿ ಜೀವನ ಆರಂಭಿಸಿದ್ದೆ. ಈ ವೇಳೆಯಲ್ಲೂ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗುತ್ತಿದ್ದೆ. 1947ರ ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ಲಭಿಸಿದಾಗ ಮುಂಬೈನಲ್ಲೇ ಇದ್ದೆ. ಅಂದು ಸ್ವಾತಂತ್ರ್ಯ ಹೋರಾಟಗಾರರು ಪ್ರತಿಯೊಬ್ಬರಲ್ಲೂ ಅಂದುಕೊಂಡಿದ್ದನ್ನು ಸಾಧಿಸಿದ ಭಾವನೆಯೊಂದಿಗೆ ಸಂಭ್ರಮ ಮನೆ ಮಾಡಿತ್ತು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ಸ್ವಾತಂತ್ರ್ಯ ಹೋರಾಟಗಾರರಾದ ಆರ್.ರಂಗಶೆಟ್ಟಿ, ಅಶೋಕ ನಾರಾಯಣ್, ಲಿಂಗಯ್ಯ, ಟಿ.ಪುಟ್ಟಣ್ಣಯ್ಯ, ಚನ್ನಬಸಪ್ಪ, ನಿವೃತ್ತ ಪ್ರಾಧ್ಯಾಪಕಿ ಶಶಿಕಲಾ, ಸ್ವಾತಂತ್ರ್ಯ ಹೋರಾಟಗಾರರ ಸಂಘದ ಕಚೇರಿ ವ್ಯವಸ್ಥಾಪಕ ರವಿ ಮತ್ತಿತರರು ಹಾಜರಿದ್ದರು.

Translate »