ಮೈಸೂರು ರೈಲ್ವೆಯಿಂದ `ಗಾಂಧಿ ವನ’
ಮೈಸೂರು

ಮೈಸೂರು ರೈಲ್ವೆಯಿಂದ `ಗಾಂಧಿ ವನ’

October 3, 2019

ಮೈಸೂರು, ಅ.2(ಆರ್‍ಕೆಬಿ)-ಮಹಾತ್ಮ ಗಾಂಧಿಯವರ 150ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮೈಸೂರು ರೈಲ್ವೆ ವಿಭಾ ಗವು 3 ಎಕರೆ ಪ್ರದೇಶ ಹೊಂದಿರುವ ಪರಿಸರ ಉದ್ಯಾನವನ ವನ್ನು ನಿರ್ಮಿಸಿದ್ದು, ಅದಕ್ಕೆ `ಗಾಂಧಿ ವನ’ ಎಂದು ಹೆಸರಿಸಿದೆ. ಅದರ ಉದ್ಘಾಟನೆಯನ್ನು ಸಂಸದ ಪ್ರತಾಪಸಿಂಹ ಬುಧವಾರ ನೆರವೇರಿಸಿದರು. ರೈಲ್ವೆ ಆಟದ ಮೈದಾನ ಮತ್ತು ವಾಣಿ ವಿಲಾಸ ನೀರು ಸರಬರಾಜು ಮಂಡಳಿ ನಡುವೆ ಬಳಕೆಯಾಗದೆ ಕಸದ ತೊಟ್ಟಿಯಂತೆ ಬಿದ್ದಿದ್ದ ನಿವೇಶನವನ್ನು ಹಸಿರು ಪ್ರದೇಶವಾಗಿ ಪರಿವರ್ತಿಸಲು ನಿರ್ಧರಿಸಿದ್ದ ರೈಲ್ವೆ ಅಧಿಕಾರಿಗಳು, ಇಲ್ಲಿದ್ದ ಸಾವಿರ ಕೆ.ಜಿ.ಯಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಿ, 3.2 ಎಕರೆ ಖಾಲಿ ಜಾಗದಲ್ಲಿ ಪರಿಸರ ಉದ್ಯಾನವನವಾಗಿ ಅಭಿವೃದ್ಧಿಪಡಿಸಿದ್ದಾರೆ. ಅಲ್ಲಿ ಹೊಸದಾಗಿ ನಿರ್ಮಿಸಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಂಸದ ಪ್ರತಾಪ ಸಿಂಹ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸ್ವಚ್ಛತೆಯೇ ಸೇವೆ’ ಪ್ರತಿಜ್ಞೆ ಬೋಧಿಸಿದರು.

ಈ ವೇಳೆ ಮಾತನಾಡಿದ ಅವರು, ಇತ್ತೀಚೆಗೆ ಕೈಗೊಂಡ ಮೈಸೂರು ರೈಲ್ವೆ ನಿಲ್ದಾಣ ಅಭಿವೃದ್ಧಿಯೊಂದಿಗೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ಸ್ವಚ್ಛತೆಯಲ್ಲಿ ನೈರುತ್ಯ ರೈಲ್ವೆ ಮೈಸೂರು ವಿಭಾಗವು ಮುಂಚೂಣಿಯಲ್ಲಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಅಪರ್ಣ ಗರ್ಗ್ ಅವರ ಪ್ರಯತ್ನವನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ 6ನೇ ಪ್ಲಾಟ್‍ಫಾರ್ಮ್‍ನಲ್ಲಿ ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಾಟಲಿಗಳನ್ನು ಪುಡಿ ಮಾಡುವ ಯಂತ್ರ ವನ್ನು ಸಹ ಸ್ಥಾಪಿಸಲಾಯಿತು. ಮೈಸೂರು ನಿಲ್ದಾಣ ಸೇರಿದಂತೆ ಮೈಸೂರು ವಿಭಾಗದ ನ್ಯೂ ಗೂಡ್ಸ್ ಟರ್ಮಿನಲ್, ಅರಸೀಕೆರೆ ಮತ್ತು ಹಾಸನದಲ್ಲಿ ತಲಾ 5 ಲಕ್ಷ ರೂ. ವೆಚ್ಚದಲ್ಲಿ ಹಳಿಯ ಪಕ್ಕದ ನರ್ಸರಿಗಳನ್ನು ಅಭಿವೃದ್ಧಿಪಡಿಸಿದೆ. ಸ್ವಚ್ಛತೆಯೇ ಸೇವೆ ಅಡಿಯಲ್ಲಿ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯದ ಸ್ವಯಂ ಸೇವಕರು, ರೈಲ್ವೆ ಸಿಬ್ಬಂದಿ ಶ್ರಮದಾನ ನಡೆಸಿ ನಿಲ್ದಾಣದ ಆವರಣ ಮತ್ತು ವಾಹನ ನಿಲ್ದಾಣವನ್ನು ಸ್ವಚ್ಛಗೊಳಿಸಿದರು. ಇದಕ್ಕೂ ಮುನ್ನ ಮೈಸೂರು ರೈಲ್ವೆ ಸಿಬ್ಬಂದಿ, ರೈಲ್ವೆ ಆಸ್ಪತ್ರೆ, ಶಾಲಾ ಮಕ್ಕಳು ಸೇರಿ ದಂತೆ ನೂರಾರು ಮಂದಿ ಆಕಾಶವಾಣಿ ವೃತ್ತದಿಂದ ವಾಣಿ ವಿಲಾಸ ನೀರು ಸರಬರಾಜು ಕೇಂದ್ರದವರೆಗೆ ಮಾನವ ಸರಪಳಿ ನಿರ್ಮಿ ಸುವ ಮೂಲಕ `ಸ್ವಚ್ಛತೆಯೇ ಸೇವೆ’ ಕುರಿತು ಜನಜಾಗೃತಿ ಮೂಡಿ ಸಿದರು. ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧ ಅರಿವು ಮೂಡಿಸಿದರು.

Translate »