ಮೈಸೂರಲ್ಲಿ ಜಿಲ್ಲಾಡಳಿತದಿಂದ ಗಾಂಧಿ ಜಯಂತಿ ಆಚರಣೆ
ಮೈಸೂರು

ಮೈಸೂರಲ್ಲಿ ಜಿಲ್ಲಾಡಳಿತದಿಂದ ಗಾಂಧಿ ಜಯಂತಿ ಆಚರಣೆ

October 3, 2018

ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸಂದರ್ಭದಲ್ಲಿ ದೇಶ ವಿದೇಶಗಳಿಂದ ಲಕ್ಷಾಂತರ ಜನರು ಮೈಸೂರಿಗೆ ಬರುವ ಹಿನ್ನೆಲೆಯಲ್ಲಿ ಮೈಸೂರು ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಅಗತ್ಯವಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಇಂದಿಲ್ಲಿ ಹೇಳಿದರು.

ಮಹಾತ್ಮ ಗಾಂಧಿಯವರ 150ನೇ ಜಯಂತಿ ಅಂಗವಾಗಿ ಮೈಸೂರಿನ ಶ್ರೀರಂಗಾಚಾರ್ಲು ಪುರಭವನದಲ್ಲಿ ಮೈಸೂರು ಜಿಲ್ಲಾಡಳಿತ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಯೋಜಿಸಿದ್ದ ಪ್ರಾರ್ಥನಾ ಸಭೆಯಲ್ಲಿ ಮೊದಲಿಗೆ ಗಾಂಧಿ ಚೌಕದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಪುರಭವನದಲ್ಲಿ ಸ್ವಚ್ಛತೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ ನಂತರ ಮಾತನಾಡಿದರು.

ಮೈಸೂರಿನ ಸ್ವಚ್ಛತೆ ಮತ್ತು ಪರಿಸರವನ್ನು ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗಾಂಧೀಜಿಯವರ ಆಶಯವಾದ ಸ್ವಚ್ಛತೆಗೆ ನಾವೆಲ್ಲರೂ ಒತ್ತು ನೀಡೋಣ. ಪ್ರತಿಜ್ಞೆ ಸ್ವೀಕರಿಸಿದಂತೆ ಸ್ವಚ್ಛತೆಗೆ ಪ್ರಯತ್ನಿಸೋಣ. ಗಾಂಧಿಯವರ ಜೀವನ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ ಎಂದು ತಿಳಿಸಿದರು.

ಸಚಿವರು ಇದೇ ಸಂದರ್ಭದಲ್ಲಿ ಅಂಚೆ ಲಕೋಟೆ, ಕರ್ನಾಟಕ, ಜನಪದ ಪುಸ್ತಕ ಬಿಡುಗಡೆ ಮಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಹಾತ್ಮ ಗಾಂಧಿಯವರ ಜೀವನ ಮತ್ತು ಹೋರಾಟ ಕುರಿತು ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು.

ಶಾಸಕ ತನ್ವೀರ್‍ಸೇಠ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನಯೀಮಾ ಸುಲ್ತಾನಾ, ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂತಿವ್ರತಾನಂದಜೀ ಮಹಾರಾಜ್, ಬಾರ್ತಲೋಮಿಯಾ ಚರ್ಚ್‍ನ ಫಾದರ್ ಗಿಲ್ಬರ್ಟ್, ಸಾರಸಾನಂದ ಭಂತೇಜಿ, ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಜಿಪಂ ಸಿಇಓ ಕೆ.ಜ್ಯೋತಿ, ಮೈಸೂರು ಮಹಾನಗರಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್‍ಕುಮಾರ್ ಜೈನ್ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Translate »