ಲೋಕಸಭೆ ಚುನಾವಣೆಗೆ ಬಿಜೆಪಿ ಪೂರ್ವ ತಯಾರಿ ತಿಂಗಳಾಂತ್ಯಕ್ಕೆ ರಾಜ್ಯಕ್ಕೆ ಅಮಿತ್ ಶಾ
ಮೈಸೂರು

ಲೋಕಸಭೆ ಚುನಾವಣೆಗೆ ಬಿಜೆಪಿ ಪೂರ್ವ ತಯಾರಿ ತಿಂಗಳಾಂತ್ಯಕ್ಕೆ ರಾಜ್ಯಕ್ಕೆ ಅಮಿತ್ ಶಾ

October 3, 2018

ಬೆಂಗಳೂರು: ಲೋಕಸಭೆ ಚುನಾವಣೆ ಪೂರ್ವ ಸಿದ್ಧತೆ ಕುರಿತಂತೆ ಸ್ಥಳೀಯ ನಾಯಕರ ಜತೆ ಚರ್ಚಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಿಂಗಳಾಂತ್ಯಕ್ಕೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ಮೊದಲ ವಾರದಲ್ಲೇ ರಾಜ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತಾದರೂ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಕಾರಣ ತಿಂಗಳಾಂತ್ಯಕ್ಕೆ ರಾಜ್ಯಕ್ಕೆ ಭೇಟಿ ನೀಡಿ ಚುನಾವಣೆಯಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಅಮಿತ್ ಶಾ ಆಗಮಿಸುವ ಸಂದರ್ಭದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಸಂಸದರು, ರಾಜ್ಯಸಭೆ ಸದಸ್ಯರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ಪದಾಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕೆಂದು ಸೂಚಿಸಲಾಗಿದೆ.

ವಿಧಾನಸಭೆ ಚುನಾವಣೆ ನಂತರ ಮೊದಲ ಬಾರಿಗೆ ಅಮಿತ್ ಶಾ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಚಟುವಟಿಕೆಗಳು ಆಗಲೇ ಬಿರುಸುಗೊಂಡಿವೆ.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಪಡೆದರೂ ಸರ್ಕಾರ ರಚನೆ ಮಾಡಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಬಿಬಿಎಂಪಿ ಮೇಯರ್ ಚುನಾವಣೆಯಲ್ಲೂ ಪಕ್ಷ ಹಿನ್ನಡೆ ಸಾಧಿಸಿತ್ತು. ಇದು ಒಂದು ರೀತಿ ಪಕ್ಷದಲ್ಲಿ ಎಲ್ಲರಿಗೂ ಬೇಸರ ಉಂಟು ಮಾಡಿತ್ತು.

ಇದೀಗ ನಾಯಕರಿಗೆ ಚೇತರಿಕೆ ನೀಡಲು ಶಾ ಆಗಮಿಸುತ್ತಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 20 ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಪಣತೊಟ್ಟಿರುವ ಕಮಲ ಪಡೆಗೆ ಅಮಿತ್ ಶಾ ಕೆಲವು ಟಾಸ್ಕ್‍ಗಳನ್ನು ನೀಡಲಿದ್ದಾರೆ.

ಯಾವ ಅಭ್ಯರ್ಥಿ ಈ ಟಾಸ್ಕ್‍ಗಳನ್ನು ಪೂರ್ಣಗೊಳಿಸುತ್ತಾರೋ ಅಂತಹವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಇದಲ್ಲದೆ ಹಿಂದಿನ 17 ಸಂಸದರ ಕಾರ್ಯವೈಖರಿ ಕುರಿತಂತೆ ಪರಾಮರ್ಶೆ ನಡೆಯಲಿದೆ. ಕೇಂದ್ರ ಸರ್ಕಾರದ ಯೋಜನೆಗಳು ಎಷ್ಟರ ಮಟ್ಟಿಗೆ ಅನುಷ್ಠಾನವಾಗಿವೆ. ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ನೀಡಲಾಗಿದೆಯೇ? ಕೇಂದ್ರದ ಅನುದಾನವನ್ನು ಎಷ್ಟರ ಮಟ್ಟಿಗೆ ಸದುಪಯೋಗಪಡಿಸಿಕೊಳ್ಳಲಾಗಿದೆ? ಸಂಸದರು ಕ್ಷೇತ್ರದಲ್ಲಿ ಹೊಂದಿರುವ ಜನಸಂಪರ್ಕ ಸೇರಿದಂತೆ ಹಲವು ಮಾನದಂಡಗಳ ಮೂಲಕವೇ ಟಿಕೆಟ್ ಖಾತರಿಪಡಿಸಲಿದ್ದಾರೆ.

ಹಲವು ಸಂಸದರಿಗೆ ಟಿಕೆಟ್ ನೀಡಬಾರದು ಎಂದು ರಾಜ್ಯದ ಕೆಲ ಮುಖಂಡರು ಮನವಿ ಮಾಡಿದ್ದಾರೆ. ಕೆಲವು ಸಂಸದರು ಕ್ಷೇತ್ರದಲ್ಲಿ ಜನರ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿಲ್ಲ. ಇಂತಹವರಿಗೆ ಟಿಕೆಟ್ ನೀಡಿದರೂ ಸೋಲು ಕಟ್ಟಿಟ್ಟ ಬುತ್ತಿ ಎಂದು ಈಗಾಗಲೇ ಸಂಘ ಪರಿವಾರದ ಕೆಲ ನಾಯಕರು ರಾಷ್ಟ್ರೀಯ ನಾಯಕರಿಗೆ ವರದಿ ನೀಡಿದ್ದಾರೆ ಎನ್ನಲಾಗುತ್ತಿದೆ.

Translate »