ಹೈವೇ ವೃತ್ತದಲ್ಲಿ ಎಲಿಫೆಂಟ್ ಕಾರಂಜಿ ಪುನರ್ ನಿರ್ಮಾಣ
ಮೈಸೂರು

ಹೈವೇ ವೃತ್ತದಲ್ಲಿ ಎಲಿಫೆಂಟ್ ಕಾರಂಜಿ ಪುನರ್ ನಿರ್ಮಾಣ

October 3, 2018

ಮೈಸೂರು:  ಎಲಿಫೆಂಟ್ ಕಾರಂಜಿ ಪುನರ್ ನಿರ್ಮಾಣದಿಂದ ಮೈಸೂರಿನ ಹೈವೇ ವೃತ್ತ ಮತ್ತೆ ಅಂದಗಟ್ಟಿದೆ. ಕಿಡಿಗೇಡಿಗಳಿಂದ ನೆಲಕ್ಕುರುಳಿದ್ದ ವಿಶಿಷ್ಟ ಕಾರಂಜಿ, ಪುನಃ ತಲೆ ಎತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ನೆಲ್ಸನ್ ಮಂಡೇಲಾ ರಸ್ತೆ ಹಾಗೂ ಸಯ್ಯಾಜಿ ರಾವ್ ರಸ್ತೆ ಕೂಡುವ ಸ್ಥಳದಲ್ಲಿರುವ ಮೌಲನಾ ಅಬ್ದುಲ್ ಕಲಾಂ ಆಜಾದ್ ವೃತ್ತ, ಹೈವೇ ವೃತ್ತವೆಂದೇ ಹೆಸರುವಾಸಿ ಯಾಗಿದೆ. ಕಳಾಹೀನವಾಗಿದ್ದ ವೃತ್ತದಲ್ಲಿ ಬ್ರಿಗೇಡ್ ಗ್ರೂಪ್ ವತಿಯಿಂದ ಸುಂದರವಾದ ಎಲಿಫೆಂಟ್ ಕಾರಂಜಿಯನ್ನು ನಿರ್ಮಿಸಿ, ಒಟ್ಟು 25 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಗೊಳಿಸಲಾಗಿತ್ತು.

2016ರಲ್ಲಿ ನಿರ್ಮಾಣ ವಾಗಿದ್ದ ಕಾರಂಜಿಯನ್ನು ಒಂದು ವರ್ಷ ಗಳ ಕಾಲ ಬ್ರಿಗೇಡ್ ಗ್ರೂಪ್, ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಿತ್ತು. ಆದರೆ ಕಳೆದ ಸೆ.12ರಂದು ಯಾರೋ ಕಿಡಿಗೇಡಿಗಳು ಎಲಿಫೆಂಟ್ ಕಾರಂಜಿಗೆ ವಿದ್ಯುತ್ ದೀಪಾಲಂಕಾರ ಮಾಡಲು ಅದರ ಮೇಲೆ ಹತ್ತಿದಾಗ ಕಲಾಕೃತಿ ಮುರಿದು ಬಿದ್ದಿತ್ತು. ಆನೆ ಮುಖದಾಕೃತಿ ಕಳಚಿದ್ದ ಲ್ಲದೆ, ಕೈಲಿ ಹಿಡಿದಿದ್ಧ ಹೂವಿನಾಕಾರದ ಕಲಾಕೃತಿ ಸಹ ನೆಲಕ್ಕುರುಳಿತ್ತು. ವೃತ್ತದ ಸಮೀಪದಲ್ಲೇ ಇರುವ ಬ್ರಿಗೇಡ್ ಗ್ರೂಪ್‍ಗೆ ಸೇರಿದ ಗ್ರಾಂಡ್ ಮಕ್ರ್ಯೂರ್ ಹೋಟೆಲ್ ಸಿಬ್ಬಂದಿಗೆ ವಿಷಯ ತಿಳಿದು, ಮಂಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಮಂಡಿ ಠಾಣೆ ಪೊಲೀಸರು ಮಹಜರು ಮಾಡಿದ್ದರು. ಆದರೆ ವಿರೂಪಗೊಂಡಿದ್ದ ಕಲಾಕೃತಿ ಯಿದ್ದ ಉತ್ತರ ಭಾಗ ನರಸಿಂಹರಾಜ ಪೆÇಲೀಸ್ ಠಾಣಾ ಸರಹದ್ದಿನಲ್ಲಿರು ವುದರಿಂದ ಈ ಸಂಬಂಧ ಸದರಿ ಠಾಣೆಗೆ ದೂರು ನೀಡಲಾಗಿತ್ತು.

ಬ್ರಿಗೇಡ್‍ನಿಂದಲೇ ಪುನರ್ ನಿರ್ಮಾಣ: ಅಲ್ಲದೆ ವಿಷಯ ತಿಳಿದ ನಗರಪಾಲಿಕೆ ಆಯುಕ್ತ ಕೆ.ಹೆಚ್. ಜಗದೀಶ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಬಳಿಕ ಬ್ರಿಗೇಡ್ ಗ್ರೂಪ್‍ನವರನ್ನು ಸಂಪರ್ಕಿಸಿ, ಎಲಿಫೆಂಟ್ ಕಾರಂಜಿಯನ್ನು ಪುನರ್ ನಿರ್ಮಾಣ ಮಾಡುವಂತೆ ಮನವಿ ಮಾಡಿ ದ್ದರು. ಈ ಬಗ್ಗೆ ಉದಾರತೆ ತೋರಿದ ಬ್ರಿಗೇಡ್ ಗ್ರೂಪ್, ಕಾರಂಜಿ ಪುನರ್ ನಿರ್ಮಾಣಕ್ಕೆ ಒಪ್ಪಿ, ಮೈಸೂರಿನವರೇ ಆದ ಕಲಾವಿದ ಶೇಷಾದ್ರಿ ಅವರಿಗೆ ಟೆಂಡರ್ ನೀಡಿ, 20 ದಿನಗಳ ಕಾಲಾವಕಾಶ ನೀಡ ಲಾಗಿತ್ತು. ಸುಮಾರು 3.20 ಲಕ್ಷ ರೂ. ವೆಚ್ಚದಲ್ಲಿ ಕೈಗೊಂಡಿದ್ದ ಎಲಿಫೆಂಟ್ ಕಾರಂಜಿ ಪುನರ್ ನಿರ್ಮಾಣ ಕಾಮಗಾರಿ ಅ.5ಕ್ಕೆ ಪೂರ್ಣಗೊಳ್ಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಕಲಾವಿದ ಶೇಷಾದ್ರಿ ತಂಡ, ಮೂರು ದಿನ ಮುಂಚಿತವಾಗಿಯೇ ಕೆಲಸ ಮುಗಿಸಿದ್ದಾರೆ. ಹಿಂದೆ ಇದ್ದ ಮಾದರಿಯಲ್ಲೇ ಎಲಿಫೆಂಟ್ ಕಾರಂಜಿ ಪುಟಿದೆದ್ದು, ಹೈವೇ ವೃತ್ತಕ್ಕೆ ಮೆರುಗು ತಂದಿದೆ. ಕಾಮಗಾರಿ ಪೂರ್ಣಗೊಂಡ ವಿಷಯ ತಿಳಿದ ನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಅಧಿಕಾರಿ ಗಳ ತಂಡದೊಂದಿಗೆ ಮಂಗಳವಾರ ರಾತ್ರಿ ಭೇಟಿ ನೀಡಿ, ಪರಿಶೀಲಿಸಿದರಲ್ಲದೆ, ಬ್ರಿಗೇಡ್ ಗ್ರೂಪ್‍ಗೆ ಅಭಿನಂದನೆ ಸಲ್ಲಿಸಿದರು.

ಮುಂದಾದರೂ ಎಚ್ಚರವಿರಲಿ: ಜಂಬೂ ಸವಾರಿ ಸಾಗುವ ಮಾರ್ಗದಲ್ಲಿರುವ ಹೈವೇ ವೃತ್ತದಲ್ಲಿ ಬ್ರಿಗೇಡ್ ಗ್ರೂಪ್‍ನವರು ನಿರ್ಮಿಸಿದ್ದ ಅಂದವಾದ ಎಲಿಫೆಂಟ್ ಕಾರಂಜಿ, ಕ್ಷಣಾರ್ಧದಲ್ಲಿ ಕಿಡಿಗೇಡಿಗಳಿಂದ ನೆಲಕ್ಕುರುಳಿತ್ತು. ನಮಗೇಕೆಂದು ಸುಮ್ಮನಿರದೆ ಪುನರ್ ನಿರ್ಮಾಣ ಮಾಡುವ ಮೂಲಕ ಬ್ರಿಗೇಡ್ ಗ್ರೂಪ್ ಉದಾರತೆ ತೋರಿದೆ. 6 ತಿಂಗಳ ಹಿಂದೆಯೂ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಂಜಿಯ ಕಬ್ಬಿಣದ ಗ್ರಿಲ್ ಜಖಂಗೊಂಡಿತ್ತು. ನಗರ ಪಾಲಿಕೆ ಯಾವುದೇ ಕ್ರಮ ಕೈಗೊಳ್ಳದ ಕಾರಣ, ಆಗಲೂ ಬ್ರಿಗೇಡ್ ಗ್ರೂಪ್‍ನವರೇ ಗ್ರಿಲ್ ಅನ್ನು ರಿಪೇರಿ ಮಾಡಿಸಿದ್ದರು.

ಅಲ್ಲದೆ ಎಲಿಫೆಂಟ್ ಕಾರಂಜಿ ಕಲಾಕೃತಿ ಮೇಲೆ  ಪೋಸ್ಟರ್ ಅಂಟಿಸಿ, ಬಂಟಿಂಗ್ಸ್ ಕಟ್ಟಿ ವಿರೂಪಗೊಳಿಸಲಾಗಿತ್ತು. ಆಗ ‘ಮೈಸೂರು ಮಿತ್ರ’ ಪ್ರಧಾನ ಸಂಪಾದಕರಾದ ಕೆ.ಬಿ.ಗಣಪತಿಯವರು ಲೇಖನದ ಮೂಲಕ ಚಾಟಿ ಬೀಸಿ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದಿದ್ದರು. ಇದಕ್ಕೆ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದ ನಗರ ಪಾಲಿಕೆ ಅಧಿಕಾರಿಗಳು, ಮೈಸೂರು ಸೌಂದರ್ಯ ಕಾಪಾಡುವುದರ ಜೊತೆಗೆ ವೃತ್ತಗಳ ಸಂರಕ್ಷಣೆಗೂ ವಿಶೇಷ ಗಮನ ಹರಿಸುವುದಾಗಿ ತಿಳಿಸಿದ್ದರು. ಅಲ್ಲದೆ ಎಲಿಫೆಂಟ್ ಕಾರಂಜಿ ಧ್ವಂಸಗೊಳಿಸಿದ್ದರ ಬಗ್ಗೆ ಬರೆದ ಲೇಖನದಲ್ಲೂ `ಊರಿಗೆ ಊರೇ ನಾಶವಾದರೂ ಸರ್ಕಾರಿ ಶ್ಯಾನುಬೋಗನಿಗೆ ಏನು ನಷ್ಟ’ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯವೈಖರಿಯನ್ನು ತೀಕ್ಷ್ಣವಾಗಿಯೇ ಪ್ರಶ್ನಿಸಿದ್ದರು.

ಮುಂದಾದರೂ ನಗರ ಪಾಲಿಕೆ ಕಟ್ಟೆಚ್ಚರ ವಹಿಸಬೇಕಿದೆ. ಮತ್ತೆ ಕಳೆಗಟ್ಟಿರುವ ಹೈವೇ ವೃತ್ತದ ಎಲಿಫೆಂಟ್ ಕಾರಂಜಿಯನ್ನು ಸಂರಕ್ಷಿಸಿಕೊಳ್ಳಬೇಕಿದೆ. ಇಲ್ಲಿ ಭಾರೀ ವಾಹನಗಳೂ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುವುದರಿಂದ ವೃತ್ತಕ್ಕೆ ಯಾವುದೇ ಹಾನಿಯಾಗದಂತೆ ಕ್ರಮ ಕೈಗೊಳ್ಳಬೇಕು. ರಾತ್ರಿ ವೇಳೆ ವಾಹನ ಚಾಲಕರಿಗೆ ಎಚ್ಚರಿಕೆ ನೀಡುವಂತೆ ವೃತ್ತದ ಸುತ್ತಲಿನ ಗ್ರಿಲ್‍ಗೆ ಲೈಟ್ ಅಳವಡಿಸಬೇಕು. ಮೈಸೂರು ಪಾರಂಪರಿಕ ನಗರ ಎಂದು ಬೀಗಿದರೆ ಸಾಲದು. ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು. ಪಾರಂಪರಿಕತೆಗೆ ಧಕ್ಕೆ ತರುವಂತಹ ಕೃತ್ಯಗಳು ಮುಂದುವರಿಯಲು ಅವಕಾಶ ನೀಡಬಾರದು. ಹೀಗೆ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಿದವರ ವಿರುದ್ಧ 1981ರ ಸಾರ್ವಜನಿಕ ಸ್ಥಳ ವಿರೂಪ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಿಸಿ ಮುಟ್ಟಿಸಬೇಕು. ಹಾಗೆಯೇ ಸಾರ್ವಜನಿಕ ಆಸ್ತಿ ಪಾಸ್ತಿಯನ್ನು ಹಾಳು ಮಾಡದಂತೆ, ಉಳಿಸಿಕೊಳ್ಳುವ ಅರಿವು ಪ್ರತಿಯೊಬ್ಬರಲ್ಲೂ ಜಾಗೃತವಾಗಬೇಕಿದೆ.

Translate »