ಎಲಿಫೆಂಟ್ ಕಾರಂಜಿ ಬ್ರಿಗೇಡ್ ಗ್ರೂಪ್‍ನಿಂದಲೇ ಅ.5ರೊಳಗೆ ಪುನರ್ ನಿರ್ಮಾಣ
ಮೈಸೂರು

ಎಲಿಫೆಂಟ್ ಕಾರಂಜಿ ಬ್ರಿಗೇಡ್ ಗ್ರೂಪ್‍ನಿಂದಲೇ ಅ.5ರೊಳಗೆ ಪುನರ್ ನಿರ್ಮಾಣ

September 23, 2018

ಮೈಸೂರು: ಕಿಡಿಗೇಡಿಗಳ ಕೃತ್ಯಕ್ಕೆ ಧ್ವಂಸವಾಗಿದ್ದ ಹೈವೇ ಸರ್ಕಲ್‍ನ ಎಲಿಫೆಂಟ್ ಕಾರಂಜಿ ದಸರಾ ವೇಳೆಗೆ ಮತ್ತೆ ತಲೆ ಎತ್ತಲಿದೆ.

ಬ್ರಿಗೇಡ್ ಗ್ರೂಪ್‍ನಿಂದ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ವಿಶೇಷ ಕಲಾಕೃತಿ ಎಲಿಫೆಂಟ್ ಕಾರಂಜಿಯನ್ನು ಬನ್ನಿಮಂಟಪದ ಹೈವೇ ವೃತ್ತದಲ್ಲಿ ನಿರ್ಮಿಸಿ, ನಿರ್ವಹಣೆಯನ್ನು ಆರಂಭದಲ್ಲಿ ಅವರೇ ಮಾಡುತ್ತಿದ್ದರು. ಆದರೆ, ಸೆ.12ರಂದು ಯಾರೋ ಕಿಡಿಗೇಡಿ ಗಳು ಎಲಿಫೆಂಟ್ ಕಾರಂಜಿಗೆ ದೀಪಾಲಂ ಕಾರ ಮಾಡಲು ಅದರ ಮೇಲೆ ಹತ್ತಿದಾಗ ಕಲಾಕೃತಿ ಮುರಿದು ಬಿದ್ದಿತ್ತು. ಕಲಾಕೃತಿ ಮೇಲಿನ ಅಲಂಕಾರಿಕ ತಟ್ಟೆ, ಕಾರಂಜಿ ಅಲ್ಲದೆ ಉತ್ತರ ದಿಕ್ಕಿನ ಒಂದು ಆನೆ ಮುಖದ ಆಕೃತಿಗೆ ಹಾನಿಯಾಗಿತ್ತು.

ವಿಷಯ ತಿಳಿದ ನಗರಪಾಲಿಕೆ ಆಯುಕ್ತ ಕೆ.ಹೆಚ್. ಜಗದೀಶ್, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಬ್ರಿಗೇಡ್ ಗ್ರೂಪ್‍ನವರನ್ನು ಸಂಪರ್ಕಿಸಿ, ಪುನರ್ ನಿರ್ಮಾಣ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬ್ರಿಗೇಡ್ ಗ್ರೂಪ್ ಮತ್ತೆ ಸುಮಾರು 3.20 ಲಕ್ಷ ರೂ.ವೆಚ್ಚದಲ್ಲಿ ಎಲಿಫೆಂಟ್ ಕಾರಂಜಿ ಪುನರ್ ನಿರ್ಮಾಣ ಮಾಡುತ್ತಿದ್ದು, ಮೈಸೂರಿನ ಕಲಾವಿದ ಶೇಷಾದ್ರಿ ಎಂಬುವರಿಗೆ 20 ದಿನಗಳ ಕಾಲಾವಕಾಶ ನೀಡಿ ಟೆಂಡರ್ ನೀಡಿದ್ದಾರೆ. ಈಗಾಗಲೇ ಶೇಷಾದ್ರಿ ಅವರು ದ್ವಂಸಗೊಂಡಿದ್ದ ಎಲಿಫೆಂಟ್ ಕಾರಂಜಿ ಅವಶೇಷ ತೆರವುಗೊಳಿಸಿದ್ದು, ದಸರಾ ವೇಳೆಗೆ ಅಂದರೆ ಅ.5ರೊಳಗೆ ಎಲಿಫೆಂಟ್ ಕಾರಂಜಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ದಸರಾಕ್ಕೆ ವೃತ್ತ ವಿದ್ಯುತ್ ದೀಪಗಳಿಂದ ಜಗಮಗಿಸಲಿದೆ.

Translate »