ಹೈವೇ ಸರ್ಕಲ್ ಎಲಿಫೆಂಟ್ ಕಾರಂಜಿ ಮತ್ತೆ ಧ್ವಂಸ
ಮೈಸೂರು

ಹೈವೇ ಸರ್ಕಲ್ ಎಲಿಫೆಂಟ್ ಕಾರಂಜಿ ಮತ್ತೆ ಧ್ವಂಸ

September 13, 2018

ಮೈಸೂರು: ಬ್ರಿಗೇಡ್ ಗ್ರೂಪ್‍ನಿಂದ ನಿರ್ಮಿಸಿ, ಕೆಲ ಕಾಲ ನಿರ್ವಹಣೆ ಮಾಡುತ್ತಿದ್ದ ಮೈಸೂರಿನ ಹೈವೇ ಸರ್ಕಲ್ ಎಂದೇ ಹೆಸರುವಾಸಿಯಾಗಿರುವ ಮೌಲನಾ ಅಬ್ದುಲ್ ಕಲಾಂ ಅಜಾದ್ ಸರ್ಕಲ್‍ನ ಸುಂದರ ಎಲಿಫೆಂಟ್ ಕಾರಂಜಿಯನ್ನು ಮಂಗಳವಾರ ರಾತ್ರಿ ಮತ್ತೆ ಧ್ವಂಸಗೊಳಿಸಲಾಗಿದೆ.

ಮೈಸೂರಿನ ಸೌಂದರ್ಯಕ್ಕೆ ಒತ್ತಾಸೆ ಯಾಗಿದ್ದ, ನಾಲ್ಕೂ ಕಡೆಗಳಲ್ಲಿ ಆನೆ ಮುಖ ದಾಕೃತಿ ಹೊಂದಿದ ಕಾರಂಜಿ ಕಲಾಕೃತಿಯಲ್ಲಿ ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಪೋಸ್ಟರ್ ಅಂಟಿಸಿ, ಬಂಟಿಂಗ್‍ಗಳನ್ನು ಕಟ್ಟುವ ಮೂಲಕ ಅದರ ಅಂದ ಕೆಡಿಸುತ್ತಿದ್ದವು. ಆದರೆ ಇದೀಗ ಎಲಿಫೆಂಟ್ ಕಾರಂಜಿ ಮೇಲಿನ ಹೂವಿನಾ ಕಾರದ ಕಲಾಕೃತಿ ಮುರಿದು ಬೀಳಿಸಿದ್ದು, ಉತ್ತರ ದಿಕ್ಕಿನ ಒಂದು ಆನೆ ಮುಖದಾ ಕೃತಿಯೂ ಕಳಚಿ ಬಿದ್ದಿದೆ.

ಮಂಗಳವಾರ ಸರಿರಾತ್ರಿ ಯಾರೋ ಕಾರಂಜಿ ಕಲಾಕೃತಿ ಮೇಲೇರಿ ವಿದ್ಯುದೀಪಾಲಂಕಾರಕ್ಕೆ ಮುಂದಾಗಿದ್ದಾರೆ. ಆ ವ್ಯಕ್ತಿಯ ಭಾರದಿಂದ ಆನೆ ಮುಖದಾಕೃತಿ ಕಳಚಿದ್ದು, ಕೈಲಿ ಹಿಡಿದಿದ್ಧ ಹೂವಿನಾಕಾರದ ಕಲಾಕೃತಿ ಸಹ ನೆಲಕ್ಕುರುಳಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸಮೀಪ ದಲ್ಲೇ ಇರುವ ಬ್ರಿಗೇಡ್ ಗ್ರೂಪ್‍ಗೆ ಸೇರಿದ ಗ್ರಾಂಡ್ ಮಕ್ರ್ಯೂರ್ ಹೋಟೆಲ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಮಂಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಇನ್‍ಸ್ಪೆಕ್ಟರ್ ಅನ್ಸರ್ ಅಲಿ ಹಾಗೂ ಸಿಬ್ಬಂದಿ, ಮಹಜರು ಮಾಡಿದರು.

ವಿರೂಪಗೊಂಡಿರುವ ಕಲಾಕೃತಿ ಉತ್ತರ ಭಾಗ ಎನ್.ಆರ್. ಪೊಲೀಸ್ ಠಾಣಾ ಸರಹದ್ದಿಗೆ ಬರುತ್ತದೆಯಂತೆ. ಹಾಗಾಗಿ ತಾವು ನರಸಿಂಹರಾಜ ಪೊಲೀಸ್ ಠಾಣೆಗೆ ಪ್ರತಿಮೆ ಧ್ವಂಸಗೊಳಿಸಿರುವ ಬಗ್ಗೆ ಲಿಖಿತ ದೂರು ನೀಡುತ್ತಿದ್ದೇವೆ ಎಂದು ಗ್ರಾಂಡ್ ಮಕ್ರ್ಯೂರ್ ಹೋಟೆಲಿನ ವ್ಯವಸ್ಥಾಪಕ (ಮಾನವ ಸಂಪನ್ಮೂಲ) ಶಶಿಕಿರಣ್ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಕಳೆದ 6 ತಿಂಗಳ ಹಿಂದಷ್ಟೇ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಂಜಿಯ ಕಬ್ಬಿಣದ ಗ್ರಿಲ್ ಜಖಂಗೊಂಡಿತ್ತು. ಅದೃಷ್ಟ ವಶಾತ್ ಕಲಾಕೃತಿಗೆ ತೊಂದರೆಯಾಗಿರ ಲಿಲ್ಲ. ಆಗ ನಾವೇ ಗ್ರಿಲ್ ಅನ್ನು ರಿಪೇರಿ ಮಾಡಿಸಿದ್ದೆವು. ಇದೀಗ ಸರ್ಕಲ್‍ನ ವಿಶಿಷ್ಟ ಕಲಾಕೃತಿಯನ್ನೇ ಧ್ವಂಸಗೊಳಿಸಿರುವುದು ವಿಪರ್ಯಾಸ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ನಗರಪಾಲಿಕೆ ಹಾಗೂ ಸಂಬಂಧ ಪಟ್ಟವರಿಗೆ ಹೇಳಿದರೂ ಯಾರೂ ಸರಿಯಾಗಿ ಸ್ಪಂದಿಸದ ಕಾರಣ ಕಡೆಗೆ ನಾವೇ ರಿಪೇರಿ ಮಾಡಿಸಬೇಕಾಯಿತು. ಪ್ರಕರಣದ ಸಂಬಂಧ ಕೇಸು ದಾಖಲಿಸಲಾಗಲಿಲ್ಲ ಎಂದು ಶಶಿ ಕಿರಣ್ `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಘಟನೆ ಕುರಿತು `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿದ ಬ್ರಿಗೇಡ್ ಗ್ರೂಪ್ ಮೈಸೂರು ಶಾಖೆ ಮುಖ್ಯಸ್ಥ ಬಿ.ಆರ್. ಸುಚೇಂದ್ರ, ಮಹಾನಗರಪಾಲಿಕೆ ಅನುಮತಿಯಂತೆ ಬ್ರಿಗೇಡ್ ಗ್ರೂಪ್‍ನಿಂದ ಸದರಿ ಸರ್ಕಲ್ ಅಂದವಾಗಿ ಅಭಿವೃದ್ಧಿ ಮಾಡಿ, ನಂತರ 11 ತಿಂಗಳು ನಾವೇ ನಿರ್ವಹಣೆ ಮಾಡಿದೆವು. ನಂತರ ಪಾಲಿಕೆ ನಿರ್ವಹಣೆ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿತ್ತು. ಆದರೆ ನಗರಪಾಲಿಕೆ ತನ್ನ ನಿಯಮಾವಳಿಯನ್ನು ತಾನೇ ಪಾಲಿಸಲಿಲ್ಲ ಎಂದರು.

ಪಾಲಿಕೆ ಅಥವಾ ಬ್ರಿಗೇಡ್ ಮಾತ್ರವಲ್ಲ ಸಾರ್ವಜನಿಕ ಆಸ್ತಿ ಪಾಸ್ತಿ, ನಿರ್ಮಾಣವನ್ನು ರಕ್ಷಿಸಿ ನಿರ್ವಹಿಸುವ ಮೂಲಕ ನಗರದ ಸೌಂದರ್ಯ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಅಲ್ಲವೇ ಎಂದು ಸುಚೇಂದ್ರ ಪ್ರಶ್ನಿಸಿದರು.

ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಬ್ರಿಗೇಡ್ ಗ್ರೂಪ್ ವಿಶೇಷ ಕಲಾಕೃತಿಯೊಂದಿಗೆ ಹೈವೇ ಸರ್ಕಲ್‍ನಲ್ಲಿ ಎಲಿಫೆಂಟ್ ಕಾರಂಜಿ ಅಭಿವೃದ್ಧಿಪಡಿಸಿತ್ತು. 2016ರಿಂದ 2017ರ ವರೆಗೆ ಬ್ರಿಗೇಡ್ ಗ್ರೂಪ್ ನಿರ್ವಹಣೆ ಮಾಡಿತು. ಸ್ಥಳೀಯ ಸಂಸ್ಥೆ, ನಂತರ ಅದನ್ನು ನಿರ್ವಹಣೆ ಮಾಡುವ ಮೂಲಕ ಮೈಸೂರಿನ ಪಾರಂ ಪರಿಕ ಸೌಂದರ್ಯವನ್ನು ಕಾಪಾಡಬೇಕಾಗಿತ್ತು.

ಈ ಹಿಂದೆ ಎಲಿಫೆಂಟ್ ಕಾರಂಜಿ ಕಲಾ ಕೃತಿ ಮೇಲೆ ಪೋಸ್ಟರ್ ಅಂಟಿಸಿ, ಬಂಟಿಂಗ್ಸ್ ಕಟ್ಟಿ ವಿರೂಪಗೊಳಿಸಿದಾಗ ‘ಮೈಸೂರು ಮಿತ್ರ’ ಪ್ರಧಾನ ಸಂಪಾದಕರಾದ ಕೆ.ಬಿ.ಗಣಪತಿ ಯವರು ಲೇಖನದ ಮೂಲಕ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದಿದ್ದರು. ಇದಕ್ಕೆ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದ ಮೈಸೂರು ಮಹಾನಗರಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿ, ಪಾಲಿಕೆ, ಮೈಸೂರಿನ ಸೌಂದರ್ಯ ಕಾಪಾಡಲು ಬದ್ಧವಾಗಿದೆ. ವೃತ್ತಗಳ ಸಂರಕ್ಷಣೆಗೂ ವಿಶೇಷ ಗಮನ ಹರಿಸಲಿದೆ ಎಂದಿದ್ದರು.

ಮಾತ್ರವಲ್ಲ 1981ರ ಸಾರ್ವಜನಿಕ ಸ್ಥಳ ವಿರೂಪ ತಡೆ ಕಾಯ್ದೆಯಡಿ ವೃತ್ತ ವಿರೂಪ ಗೊಳಿಸುವ ವ್ಯಕ್ತಿ, ಸಂಘ-ಸಂಸ್ಥೆಗಳ ವಿರುದ್ಧ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಹೇಳಿದ್ದರು. ಆದರೆ ಈ ವೃತ್ತ ವಿರೂಪಗೊಳಿಸಿದ ಬಗ್ಗೆ ಇದನ್ನು ಅಭಿವೃದ್ಧಿ ಪಡಿಸಿದವರಾಗಲೀ, ನಗರ ಪಾಲಿಕೆಯಾಗಲೀ, ಈವರೆಗೆ ಅಂತಹ ಯಾವುದೇ ಪ್ರಕರಣ ವನ್ನು ಯಾವ ಪೊಲೀಸ್ ಠಾಣೆಯಲ್ಲೂ ದಾಖಲಿಸಿಲ್ಲ ಎಂಬುದು ಗಮನಾರ್ಹ ಸಂಗತಿ. ಹಾಗಾಗಿಯೇ ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡುವಂತಹ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿದೆ. ಇದರಿಂದ ಸಾರ್ವಜನಿಕ ಆಸ್ತಿ ರಕ್ಷಿಸುವ ಬದ್ಧತೆ ನಮ್ಮ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗಿಲ್ಲ ಎಂಬುದು ದಿಟವಾಗುತ್ತದೆ.

Translate »