ಟಾಂಗಾವಾಲಾಗಳಿಗೆ ರಾಜಪರಂಪರೆ ಬಿಂಬಿಸುವ ಸಮವಸ್ತ್ರ ವಿತರಣೆಗೆ ನಿರ್ಧಾರ
ಮೈಸೂರು

ಟಾಂಗಾವಾಲಾಗಳಿಗೆ ರಾಜಪರಂಪರೆ ಬಿಂಬಿಸುವ ಸಮವಸ್ತ್ರ ವಿತರಣೆಗೆ ನಿರ್ಧಾರ

September 23, 2018

ಮೈಸೂರು:  ಈ ಬಾರಿಯ ದಸರಾ ಮಹೋತ್ಸವದ ದಿನಗಳಲ್ಲಿ ರಾಜ ಪರಂಪರೆ ಬಿಂಬಿಸುವ ಪೇಟ, ಉಡುಪು ಧರಿಸಿ ಟಾಂಗಾವಾಲಾಗಳು ಗತಕಾಲದ ರಾಜ ವೈಭವವನ್ನು ಅನಾವರಣ ಮಾಡಲಿದ್ದಾರೆ.

ಮೈಸೂರು ಶಾ ಪಸಂದ್ ಟಾಂಗಾ ಸಂಘದ ಆಯ್ದ 50 ಮಂದಿ ಟಾಂಗಾವಾಲಾಗಳಿಗೆ ರಾಜ ಪರಂಪರೆ ಬಿಂಬಿಸುವ ತಲಾ ಎರಡು ಜೊತೆ ಸಮವಸ್ತ್ರ ನೀಡಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಪ್ರತಿ ದಸರಾ ವೇಳೆ ಟಾಂಗಾವಾಲಾ ಗಳಿಗೆ ರಾಜ ಪ್ರಭುತ್ವದ ಶೈಲಿಯ ಸಮವಸ್ತ್ರಗಳನ್ನು ನೀಡಲಾಗುತ್ತಿತ್ತು. ಅರಮನೆ ಆವರಣದಲ್ಲಿ ಪೂಜಾ ಸಮಯದಲ್ಲಿ ಈ ಟಾಂಗಾಗಳು ಸಾಲಾಗಿ ನಿಲ್ಲುವ ಮೂಲಕ ರಾಜರ ಕಾಲದ ಸಂಸ್ಕøತಿ ಕಳೆಗಟ್ಟುತ್ತಿತ್ತು.

ಆ ಮೂಲಕ ನವರಾತ್ರಿ ದಿನಗಳಲ್ಲಿ ಟಾಂಗಾಗಳ ಸದ್ದಿನಲ್ಲಿ ರಾಜಮಹಾರಾಜರ ದಿನಗಳು ಅನಾವರಣ ಆಗುತ್ತಿದ್ದವು. ಆದರೆ ಕೆಲ ವರ್ಷಗಳಿಂದ ಸಮವಸ್ತ್ರ ನೀಡುವ ಪರಿಪಾಠವನ್ನು ಕೈಬಿಡಲಾಗಿತ್ತು. ಈ ಬಗ್ಗೆ ‘ಮೈಸೂರು ಮಿತ್ರ’ ಸೆ.17ರ ಸಂಚಿಕೆಯಲ್ಲಿ ‘ತೆರೆಮರೆಗೆ ಸರಿಯುತ್ತಿದೆ ಬದುಕಿನ ಜಟಕಾ ಬಂಡಿ’ ಶೀರ್ಷಿಕೆಯಡಿ ಪ್ರಕಟಗೊಂಡಿದ್ದ ವಿಶೇಷ ವರದಿಯಲ್ಲಿ ಬೆಳಕು ಚೆಲ್ಲಲಾಗಿತ್ತು. ಇದೀಗ ಈ ದಸರಾದಲ್ಲಿ ಸಮವಸ್ತ್ರ ನೀಡಲು ಪ್ರವಾಸೋದ್ಯಮ ಇಲಾಖೆ ಕ್ರಮ ಕೈಗೊಂಡಿದೆ.

ಈ ಸಂಬಂಧ ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಹೆಚ್.ಪಿ.ಜನಾರ್ಧನ್, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಅವರ ನಿರ್ದೇಶನದಂತೆ ರಾಜ ಪರಂಪರೆ ಶೈಲಿಯ ಸಮವಸ್ತ್ರಗಳನ್ನು ಆಯ್ದ 50 ಮಂದಿ ಟಾಂಗಾವಾಲಾಗಳಿಗೆ ನೀಡಲಾಗುತ್ತಿದೆ. ಪೇಟ ಒಳಗೊಂಡಂತೆ ಎರಡು ಜೊತೆ ಸಮವಸ್ತ್ರ ನೀಡುತ್ತಿದ್ದು, ದಸರಾ ಉತ್ಸವಕ್ಕೆ ಮುನ್ನ ಸಚಿವ ಸಾ.ರಾ.ಮಹೇಶ್ ಅವರಿಂದ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಗೌರವ ಧನ ಅನುಮಾನ: ಈ ಹಿಂದಿನ ದಸರಾ ಉತ್ಸವ ಸಂದರ್ಭದಲ್ಲಿ ಟಾಂಗಾ ವಾಲಾಗಳಿಗೆ ಸಮವಸ್ತ್ರದೊಂದಿಗೆ 10 ದಿನಕ್ಕೆ ತಲಾ ಸಾವಿರ ರೂ. ಗೌರವ ಧನ ನೀಡಲಾಗುತ್ತಿತ್ತು. ದಸರಾ ಮಹೋತ್ಸವದ ಪ್ರವಾಸೋದ್ಯಮ ಉಪಸಮಿತಿ ಇದರ ಉಸ್ತುವಾರಿ ನೋಡಿಕೊಳ್ಳುತ್ತಿತ್ತು. ಈಗ ಈ ಉಪ ಸಮಿತಿಯೂ ಇಲ್ಲವಾಗಿದ್ದು, ಕಳೆದ ಐದಾರು ವರ್ಷಗಳಿಂದ ಗೌರವಧನ ಹಾಗೂ ಸಮವಸ್ತ್ರ ಎರಡಕ್ಕೂ ತಡೆಬಿದ್ದಿತ್ತು. ಈ ದಸ ರಾಕ್ಕೆ ಸಮವಸ್ತ್ರ ನೀಡಲು ಪ್ರವಾಸೋದ್ಯಮ ಇಲಾಖೆ ಕ್ರಮ ವಹಿಸಿದೆ. ಆದರೆ ಗೌರವಧನ ಸಂಬಂಧ ಜಿಲ್ಲಾಡಳಿತ ಸೇರಿದಂತೆ ಸಂಬಂಧಿಸಿದವರು ಯಾವ ಕ್ರಮ ಕೈಗೊಳ್ಳುವರು ಎಂಬುದನ್ನು ಕಾದು ನೋಡಬೇಕಿದೆ.

Translate »