ತಿರುಪತಿಯಲ್ಲಿ ಹೆಚ್1ಎನ್1: ಯಾತ್ರಾರ್ಥಿ ಬಲಿ
ಮೈಸೂರು

ತಿರುಪತಿಯಲ್ಲಿ ಹೆಚ್1ಎನ್1: ಯಾತ್ರಾರ್ಥಿ ಬಲಿ

October 3, 2018

ತಿರುಪತಿ: ಭಕ್ತಾದಿಗಳಿಂದ ಕಿಕ್ಕಿರಿದಿರುವ ತಿರುಪತಿಯಲ್ಲಿ ಹಂದಿ ಜ್ವರದ (ಎಚ್1ಎನ್1) ಮೂರು ಪ್ರಕರಣಗಳು ವರದಿಯಾಗಿದ್ದು, ರೋಗದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮೃತ ಪಟ್ಟಿದ್ದಾರೆ. ಇದರಿಂದ ಯಾತ್ರಿಗಳ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಸೋಮವಾರ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಟೆಲಿಕಾನ್ಫರೆನ್ಸ್ ನಡೆಸಿ ಪರಿಸ್ಥಿತಿ ಅವ ಲೋಕಿಸಿರುವ ಚಿತ್ತೂರು ಜಿಲ್ಲಾಧಿಕಾರಿ ಪಿ.ಎಸ್.ಪ್ರದ್ಯುಮ್ನ ಅವರು, ”ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ,” ಎಂದು ಹೇಳಿದ್ದಾರೆ.

ತಿರುಪತಿಯ ವೆಂಕಟೇಶ್ವರ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಶ್ರೀರಾಮ ನಾರಾಯಣ ಆಸ್ಪತ್ರೆಗಳಲ್ಲಿ ಹಂದಿಜ್ವರ ಲಕ್ಷಣಗಳಿರುವ ರೋಗಿಗಳಿಗೆ ಚಿಕಿತ್ಸೆ ನೀಡಲೆಂದು ವಿಶೇಷ ವಾರ್ಡ್‍ಗಳ ವ್ಯವಸ್ಥೆ ಮಾಡಲಾಗಿದೆ. ವಿಮಾನ ನಿಲ್ದಾಣ, ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ವ್ಯಾಪಕವಾಗಿ ಮುಖಗವಸು ಹಂಚ ಲಾಗುತ್ತಿದೆ. ತಮಿಳುನಾಡಿನ ಜನರು ಪವಿತ್ರ ಎಂದು ಭಾವಿಸುವ `ಪುರಟ್ಟಾಸಿ ಮಾಸಂ’ ಆರಂಭವಾಗಿರುವ ಹಿನ್ನೆಲೆಯಲ್ಲಿ ತಿರು ಮಲಕ್ಕೆ ಪ್ರತಿದಿನ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ ಒಂದು ಲಕ್ಷ ದಾಟಿದೆ ಎಂದು ಮೂಲಗಳು ತಿಳಿಸಿವೆ.

ತಹಶೀಲ್ದಾರ್ ಸಾವು: ಈ ಮಧ್ಯೆ, ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲೂ ಗುಡಾ ಲೂರಿನ ತಹಶೀಲ್ದಾರ್ ಅಬ್ದುಲ್ ರೆಹ್ಮಾನ್ ಹಂದಿ ಜ್ವರಕ್ಕೆ ಸೋಮವಾರ ಬಲಿಯಾಗಿದ್ದಾರೆ. ಕಳೆದ 2 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

Translate »