ಬೆಂಗಳೂರು: ರಾಜ್ಯದಲ್ಲಿ ಹಂದಿಜ್ವರ (ಎಚ್1ಎನ್1) ಮಹಾಮಾರಿ ದಿನ ಕಳೆದಂತೆ ತೀವ್ರಗೊಳ್ಳುತ್ತಿದ್ದು, ಮಾರಣಾಂತಿಕ ಕಾಯಿಲೆಗೆ ಕಳೆದ ಐದು ದಿನದಲ್ಲಿ ಮೈಸೂರಲ್ಲಿ ಇಬ್ಬರು ಸೇರಿ 12 ಮಂದಿ ಬಲಿಯಾಗಿರುವುದಾಗಿ ವರದಿಯಾಗಿದೆ.
ಈ ಮೂಲಕ ಪ್ರಸಕ್ತ ವರ್ಷ ಹಂದಿ ಜ್ವರ ಸೋಂಕಿಗೆ ಪ್ರಾಣ ಕಳೆದುಕೊಂಡವರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆಯ ಹಂದಿ ಜ್ವರ ಸಾವಿನ ಪ್ರಕರಣಗಳ ಅಂಕಿ ಅಂಶಗಳ ಪ್ರಕಾರ ಡಿ.20ರಿಂದ ಈಚೆಗೆ 12 ಸಾವು ಸಂಭವಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ 3, ಬಿಬಿಎಂಪಿ 1, ಬೆಂಗ ಳೂರು ನಗರ 1, ಚಿತ್ರದುರ್ಗ 1, ಶಿವಮೊಗ್ಗ 1, ದಕ್ಷಿಣ ಕನ್ನಡ 2, ಹಾಸನ 1, ಮೈಸೂರಲ್ಲಿ 2 ಸೇರಿ ಹನ್ನೆರಡು ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಎಚ್1ಎನ್1 ಸೋಂಕು ಹೊಂದಿದ್ದು, ಬೇರೆ ಬೇರೆ ಕಾಯಿಲೆಗಳ ಕಾರಣಕ್ಕೆ ಮೃತಪಟ್ಟ ವರ ಸಂಖ್ಯೆ 72ಕ್ಕೆ ಏರಿಕೆಯಾಗಿದೆ.
ಈ ಬಗ್ಗೆ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಆರೋಗ್ಯ ಇಲಾಖೆಯ ದಾಖಲೆ ಗಳಲ್ಲಿ ಡಿ.19ರಂದು ಪ್ರಸಕ್ತ ಸಾಲಿನ ಎಚ್1ಎನ್1 ಸಾವಿನ ಪ್ರಕರಣಗಳ ಸಂಖ್ಯೆ 32 ಮಾತ್ರ ಇದ್ದದ್ದು ಸತ್ಯ. ಆ ಸಂಖ್ಯೆ ಡಿ.20ಕ್ಕೆ 44ರಷ್ಟಾಗಿದೆ. ಕಳೆದ ಐದು ದಿನದಲ್ಲಿ 12 ಸಾವು ಉಂಟಾದಂತೆ ಭಾಸವಾಗು ತ್ತಿದೆ. ಆದರೆ ಆ ಒಂದೇ ದಿನದಲ್ಲಿ ಅಷ್ಟೂ ಸಾವುಗಳು ಸಂಭವಿಸಿಲ್ಲ. ಬದಲಿಗೆ ಎಚ್1ಎನ್1 ಸೋಂಕಿನಿಂದ ಮೃತಪಟ್ಟವರ ಬಗ್ಗೆ ಅಧ್ಯಯನ ನಡೆಸಿ ಮರಣದ ಕಾರಣ ತಿಳಿಸಿ ಅಂತಿಮ ಗೊಳಿಸಲು ಡೆತ್ಆಡಿಟ್ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿಯು ಡಿ.19ರಿಂದ 25ರವರೆಗೆ ಸಂಗ್ರಹಿಸಿದ್ದ 456 ರಕ್ತ ಮಾದರಿಯಲ್ಲಿ 102 ಮಂದಿಗೆ ಎಚ್1ಎನ್1 ಸೋಂಕು ಇರುವುದನ್ನು ದೃಢಪಡಿಸಿದೆ. ಜತೆಗೆ ಇದರಲ್ಲಿ 7 ಮಂದಿ ಮೃತಪಟ್ಟಿರುವುದನ್ನು ಖಚಿತಪಡಿಸಿದೆ. ಅಲ್ಲದೆ, ನ.29ರಿಂದ ಡಿ.2ರವರೆಗೆ 580 ಮಾದರಿಗಳಲ್ಲಿ 94 ಮಂದಿಗೆ ಸೋಂಕಿರುವುದು ದೃಢಪಟ್ಟಿದ್ದು, 5 ಮಂದಿ ಮೃತಪಟ್ಟಿರುವುದನ್ನು ದೃಢಪಡಿಸಿದೆ ಎಂದು ಹೇಳುತ್ತಾರೆ.
ಕಟ್ಟೆಚ್ಚರಕ್ಕೆ ಸೂಚನೆ: ಪ್ರತಿ ಬಾರಿ ಡೆತ್ ಆಡಿಟ್ ಸಮಿತಿ ಸಭೆಯಲ್ಲೂ ಎಚ್1ಎನ್1 ಮರಣ ಸಂಖ್ಯೆಯ ಹೆಚ್ಚಾಗುತ್ತಿರುವುದು ದೃಢಪಟ್ಟಿದೆ. ಹೀಗಾಗಿ ಇಲಾಖೆಯು ಕೂಡಲೇ ಕಟ್ಟೆಚ್ಚರ ವಹಿಸುವಂತೆ ಆದೇಶ ಮಾಡಿದೆ. ಸೋಂಕಿನ ಲಕ್ಷಣ ಕಂಡುಬಂದ ಕೂಡಲೇ ಕಾಯಿಲೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ಕಾಯಿಲೆಪೀಡಿತರಿಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಬೇಕು ಎಂದು ಆದೇಶ ನೀಡಿದೆ. ಕಾಯಿಲೆ ತೀವ್ರವಾಗಿ ಹರಡುತ್ತಿರುವ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಜಾಗೃತಿ ಮೂಡಿಸಬೇಕು. ರೋಗದ ಬಗ್ಗೆ ಅರಿವು ಮೂಡಿಸುವ ಶಿಬಿರಗಳನ್ನು ಏರ್ಪಡಿಸಬೇಕು. ರೋಗ ಲಕ್ಷಣಗಳು ಕಂಡು ಬಂದವರನ್ನು ಕೂಡಲೇ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ಕೊಡಿಸಬೇಕು. ಈ ಬಗ್ಗೆ ಕಾಲ ಕಾಲಕ್ಕೆ ವರದಿ ನೀಡಬೇಕು ಎಂದು ಆರೋಗ್ಯ ಇಲಾಖೆ ಆದೇಶಿಸಿದೆ.