ಮೈಸೂರು: ಕೇಂದ್ರದ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಬುಧವಾರ ಮೈಸೂರಿಗೆ ಭೇಟಿ ನೀಡಿದ್ದರು.ವಿಶೇಷ ವಿಮಾನದಲ್ಲಿ ಇಂದು ಮಧ್ಯಾಹ್ನ ಆಗಮಿಸಿದ್ದ ಸಚಿವರನ್ನು ಸಂಸದ ಪ್ರತಾಪ್ ಸಿಂಹ ಹಾಗೂ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪುಷ್ಪಗುಚ್ಛ ನೀಡುವ ಮೂಲಕ ಬರಮಾಡಿಕೊಂಡರು. ಶಾಸಕ ಎಸ್.ಎ. ರಾಮದಾಸ್, ಬಿಜೆಪಿ ರಾಜ್ಯ ಕಾರ್ಯ ದರ್ಶಿ ಎಂ.ರಾಜೇಂದ್ರ, ಡಿವಿಷನಲ್ ರೈಲ್ವೆ ಮ್ಯಾನೇಜರ್ ಅಪರ್ಣ ಗರ್ಗ್, ಮುಡಾ ಕಮೀಷ್ನರ್ ಪಿ.ಎಸ್.ಕಾಂತರಾಜು ಹಾಗೂ ಇತರರು ಈ ಸಂದರ್ಭ ಹಾಜರಿದ್ದು, ಸಚಿವ ರನ್ನು ಬರಮಾಡಿಕೊಂಡರು. ನಂತರ ಗೋಯಲ್ ಅವರು ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಮಧ್ಯಾಹ್ನ ಮಂಡ ಕಳ್ಳಿ ವಿಮಾನ ನಿಲ್ದಾಣದಲ್ಲಿ ಸಂಸದರು ಹಾಗೂ ರೈಲ್ವೆ ಅಧಿಕಾರಿಗಳೊಂದಿಗೆ ಕೆಲ ಸಮಯ ಚರ್ಚಿಸಿದ ನಂತರ ಹಿಂದಿರುಗಿದರು.