ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ, ಮಧ್ಯಮ ವರ್ಗದವರು, ರೈತರು, ಮಹಿಳೆಯರು, ಅಸಂಘಟಿತ ವಲಯದ ಶ್ರಮಿಕರ ಓಲೈಕೆಗೆ 5 ವರ್ಷಗಳ ಆಡಳಿತದ ಕೊನೆಯ ಓವರ್‍ನಲ್ಲಿ ಭರ್ಜರಿ ಸಿಕ್ಸರ್‍ಗಳನ್ನೇ ಸಿಡಿಸಿದೆ.
ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಿಸುವಂತೆ ಬಹಳ ಕಾಲದಿಂದ ಕೇಳುತ್ತಲೇ ಇದ್ದ ಮಧ್ಯಮ ವರ್ಗದವರಿಗೆ ಭರಪೂರ ಕೊಡುಗೆಯನ್ನೇ ನೀಡಲಾಗಿದೆ. ಅರುಣ್ ಜೇಟ್ಲಿ ಅವರಿಗೆ ಬದಲಿಯಾಗಿ ತಾತ್ಕಾಲಿಕವಾಗಿ ಕೇಂದ್ರ ಹಣಕಾಸು ಹೊಣೆ ಹೊತ್ತಿರುವ ಪಿಯೂಷ್ ಗೋಯಲ್ ಅವರು ಶುಕ್ರವಾರ ಮಂಡಿಸಿದ ಈ ಮಧ್ಯಂತರ ಬಜೆಟ್‍ನಲ್ಲಿ ಕೃಷಿ ಕ್ಷೇತ್ರ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲದೆ, ನವೋದ್ಯಮಗಳು, ರಕ್ಷಣಾ ಕ್ಷೇತ್ರ, ರೈಲ್ವೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಎಂನರೇಗಾ ಯೋಜನೆಗಾಗಿ ಈ ವರ್ಷ 60,000 ಕೋಟಿ ರೂ. ಮೀಸಲಿಡಲಾಗಿದೆ. ದೇಶದ ರಕ್ಷಣಾ ಕ್ಷೇತ್ರದ ಬಜೆಟ್ ಗಾತ್ರವನ್ನು ಇದೇ ಮೊದಲ ಬಾರಿಗೆ 3 ಲಕ್ಷ ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ. ರೈಲ್ವೆಗೆ ಒಟ್ಟು 64,587 ಕೋಟಿ ರೂ. ಹೂಡಿಕೆಯ ಮೂಲಕ ಸಹಕಾರ ನೀಡಲಾಗಿದೆ. 5 ವರ್ಷಗಳಲ್ಲಿ 1 ಲಕ್ಷ ಹಳ್ಳಿಗಳಿಗೆ ಸಂಪರ್ಕ ಕ್ರಾಂತಿ ಮೂಲಕ ಡಿಜಿಟಲ್ ವಿಲೇಜ್ ರೂಪಿ ಸುವ ಭರವಸೆ ನೀಡಲಾಗಿದೆ. ಮಹಿಳೆಯರ ಭದ್ರತೆ ಗೆಂದೇ 1,330 ಕೋಟಿ ರೂ. ಮೀಸಲಿಡಲಾಗಿದೆ.
ಆದಾಯ ತೆರಿಗೆ: ಆದಾಯ ತೆರಿಗೆ ವಿನಾಯಿತಿ ಮಿತಿ ಯನ್ನು 2.5 ಲಕ್ಷ ರೂ.ಗಳಿಂದ
5 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ. ವಾರ್ಷಿಕ 5 ಲಕ್ಷದವರೆಗಿನ ಆದಾಯ ಹೊಂದಿದ ಮಧ್ಯಮ ವರ್ಗದವರಿಗೆ ಸಂಪೂರ್ಣ ತೆರಿಗೆ ವಿನಾಯಿತಿ ದೊರೆಯಲಿದೆ ಎಂದು ಪಿಯೂಷ್ ಗೋಯಲ್ ಘೋಷಿಸಿದ್ದಾರೆ. ಪ್ರಾವಿಡೆಂಟ್ ಫಂಡ್‍ಗಳಲ್ಲಿ ಹಾಗೂ ನಿಗದಿತ ಷೇರುಗಳ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿದರೆ ಆದಾಯ ತೆರಿಗೆ ಕಟ್ಟುವ ದೇಶದ ನಾಗರಿಕರ ಒಟ್ಟು ಆದಾಯ 6.5 ಲಕ್ಷ ರೂ. ವರೆಗೆ ಹೊಂದಿದವರು ಯಾವುದೇ ತೆರಿಗೆ ಕಟ್ಟಬೇಕಿಲ್ಲ ಎಂದೂ ಘೋಷಿಸಲಾಗಿದೆ.
ಹೂಡಿಕೆ ವಿನಾಯ್ತಿ: ಇನ್ನು, ಪ್ರಾವಿಡೆಂಟ್ ಫಂಡ್‍ಗಳಲ್ಲಿ ಹಾಗೂ ನಿಗದಿತ ಷೇರುಗಳ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿದರೆ ಹಾಗೂ ವಿಮೆ, ನಿರ್ದಿಷ್ಟ ಉಳಿತಾಯ ಯೋಜನೆಗಳಿಗೆ ಆದಾಯ ತೆರಿಗೆ ಕಟ್ಟುವ ದೇಶದ ನಾಗರಿಕರ ಒಟ್ಟು ಆದಾಯ 6.5 ಲಕ್ಷ ರೂ. ವರೆಗೆ ಇದ್ದರೆ ಸಂಪೂರ್ಣ ತೆರಿಗೆ ವಿನಾಯಿತಿ ದೊರೆಯಲಿದೆ. ಈ ಮೂಲಕ, ಮಧ್ಯಮ ವರ್ಗದವರು 6.5 ಲಕ್ಷ ರೂ. ವರೆಗೆ ತೆರಿಗೆ ಕಟ್ಟಬೇಕಿಲ್ಲ ಎಂದು ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿದೆ. ‘’ಮಧ್ಯಮ ವರ್ಗದ ತೆರಿಗೆದಾರರ ಗಮನದಲ್ಲಿಟ್ಟುಕೊಂಡು ಆ ವರ್ಗದ ತೆರಿಗೆ ಹೊರೆಯನ್ನು ಇಳಿಕೆ ಮಾಡುತ್ತಿದ್ದೇನೆ’’ ಎಂದು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಹೇಳಿದರು. ಇದಕ್ಕೆ ಮಧ್ಯಮ ವರ್ಗ ಮತ್ತು ಉದ್ಯೋಗ ವಲಯದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಗೃಹ ಸಾಲ: ಗೃಹ ಸಾಲಕ್ಕೆ ಪಾವತಿಸುವ ಎರಡು ಲಕ್ಷ ರೂ.ವರೆಗಿನ ಬಡ್ಡಿಗೂ ಆದಾಯ ತೆರಿಗೆ ವಿನಾಯ್ತಿ ಪಡೆಯಬಹುದಾಗಿದೆ. ಶಿಕ್ಷಣ ಸಾಲ, ರಾಷ್ಟ್ರೀಯ ಪಿಂಚಣಿ ಯೋಜನೆ, ಮೆಡಿಕಲ್ ಇನ್ಶೂರೆನ್ಸ್, ಹಿರಿಯ ನಾಗರಿಕರ ಔಷಧ ಹಾಗೂ ಮೆಡಿಕಲ್ ಸಂಪೂರ್ಣ ವೆಚ್ಚದ ಮೇಲೆ ತೆರಿಗೆ ವಿನಾಯಿತಿಯನ್ನೂ ಬಜೆಟ್‍ನಲ್ಲಿ ಕೇಂದ್ರ ಸರಕಾರ ಘೋಷಿಸಿದೆ. ಇನ್ನು, ದೇಶದ 3 ಕೋಟಿ ಮಧ್ಯಮ ವರ್ಗದವರಿಗೆ, ಸಣ್ಣ ತೆರಿಗೆದಾರರಿಗೆ ಸುಮಾರು 18,500 ತೆರಿಗೆ ಲಾಭವನ್ನು ಕೇಂದ್ರ ಬಜೆಟ್ 2019-20ರಲ್ಲಿ ಘೋಷಿಸಲಾಗಿದೆ. ಜತೆಗೆ, ಸ್ಟ್ಯಾಂಡರ್ಡ್ ಡಿಡಕ್ಷನ್ ಮೊತ್ತವನ್ನು ಸದ್ಯದ 40 ಸಾವಿರ ರೂ. ನಿಂದ 50 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ.
ಟಿಡಿಎಸ್ ಮಿತಿ ಏರಿಕೆ: ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ಠೇವಣಿಗೆ ಬರುವ ಬಡ್ಡಿಗೆ ಇದ್ದ ಟಿಡಿಎಸ್ ವಿನಾಯ್ತಿ ಮಿತಿ 10 ಸಾವಿರದಿಂದ 40 ಸಾವಿರ ರೂ.ಗಳಿಗೆ ಹೆಚ್ಚಳವಾಗಿದೆ. ಅಲ್ಲದೆ, ಮನೆ ಬಾಡಿಗೆ (ಹೆಚ್‍ಆರ್‍ಐ) ಮೇಲಿನ ತೆರಿಗೆ ವಿನಾಯಿತಿಯನ್ನು 1 ಲಕ್ಷ 80 ಸಾವಿರ ರೂ. ನಿಂದ 2 ಲಕ್ಷ 40 ಸಾವಿರಕ್ಕೆ ಹೆಚ್ಚಿಸಲಾಗಿದೆ. ಇದರಿಂದ ಸಣ್ಣ ತೆರಿಗೆದಾರರಿಗೆ ರಿಲೀಫ್ ಸಿಗಲಿದೆ.