ಮೈಸೂರು: ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಉಪ ವಿಭಾಗಾಧಿಕಾರಿ ಕಚೇರಿ ಬುಧವಾರ ಅಕ್ಷರಶಃ ಜನಜಾತ್ರೆಯಂತಾಗಿತ್ತು. ಗ್ರೀನ್ ಬಡ್ಸ್ ಸಂಸ್ಥೆಯ ಅಧಿಕ ಬಡ್ಡಿ ಆಮಿಷಕ್ಕೆ ಒಳಗಾಗಿ ಕಷ್ಟಾರ್ಜಿತ ಹಣವನ್ನೆಲ್ಲಾ ಠೇವಣಿ ಇರಿಸಿ ಕಳೆದುಕೊಂಡಿರುವ ರಾಜ್ಯದ ವಿವಿಧೆಡೆಯ ಸಾವಿರಾರು ಹೂಡಿಕೆದಾರರು ತಮ್ಮ ಹಣ ವಾಪಸ್ ಕೊಡಿಸುವಂತೆ ಮನವಿ ಸಲ್ಲಿಸಲು ಉಪ ವಿಭಾಗಾಧಿಕಾರಿ ಹೆಚ್.ಎನ್. ಶಿವೇಗೌಡರ ಕಚೇರಿಗೆ ಮುಗಿಬಿದ್ದಿದ್ದರು. ಕಳೆದೊಂದು ತಿಂಗಳಿಂದ ಹೂಡಿಕೆ ವಾಪಸ್ ಕೋರಿ ಮನವಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಈವರೆಗೆ 1.18 ಲಕ್ಷ ಠೇವಣಿ ಬಾಂಡ್‍ಗಳು ಸಲ್ಲಿಕೆಯಾಗಿವೆ. ಬುಧವಾರ ಒಂದೇ ದಿನ 20 ಸಾವಿರಕ್ಕೂ ಅಧಿಕ ಮನವಿ ಪತ್ರಗಳು ಸಲ್ಲಿಕೆಯಾಗಿವೆ.
ಹೂಡಿಕೆ ಮಾಡಿದ ಹಣ ವಾಪಸ್ ಕೊಡಿಸು ವಂತೆ ಕೋರಿ ಮನವಿ ಪತ್ರದೊಂದಿಗೆ ಠೇವಣಿ ಬಾಂಡ್ ಪ್ರತಿಯನ್ನು ಉಪ ವಿಭಾಗಾಧಿಕಾರಿ ಕಚೇರಿಗೆ ಸಲ್ಲಿಸುತ್ತಿ ದ್ದಾರೆ. ಮನವಿ ಪತ್ರ ಸಲ್ಲಿಸಲು ಡಿ.27 ಕಡೆ ದಿನವಾಗಿದ್ದು, 1.50 ಲಕ್ಷದವರೆಗೂ ಬಾಂಡ್‍ಗಳು ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಗ್ರೀನ್ ಬಡ್ಸ್‍ನ ಠೇವಣಿ ವಂಚನೆ ಪ್ರಕರಣದ ಗಾತ್ರ ಇದರಿಂದ ತಿಳಿದುಬರುತ್ತದೆ. ರಾಜ್ಯದ ಉತ್ತರ ತುದಿಯ ಬೀದರ್‍ನಿಂದ ಆರಂಭಿಸಿ ವಿಜಯಪುರ, ಕಲಬುರಗಿ, ಬಳ್ಳಾರಿ, ಶಿವಮೊಗ್ಗ, ಧಾರವಾಡ, ಮೈಸೂರು, ಬೆಂಗಳೂರು, ಹಾಸನ, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರ ಸಾವಿರ ಸಂಖ್ಯೆಯ ಹೂಡಿಕೆದಾರರು ಗ್ರೀನ್ ಬಡ್ಸ್‍ನಿಂದ ತಮ್ಮ ಇಡುಗಂಟು ವಾಪಸ್ ಪಡೆಯುವ ಕೊನೆಯ ಯತ್ನವಾಗಿ ಮೈಸೂರಿಗೆ ಧಾವಿಸುತ್ತಿದ್ದಾರೆ. ಮಹಿಳೆಯರು, ವೃದ್ಧರು ಸೇರಿದಂತೆ ನೊಂದು ಬಸವಳಿದ ಸಾವಿರಾರು ಹೂಡಿಕೆದಾರರು ಉರಿಬಿಸಿಲನ್ನೂ ಲೆಕ್ಕಿಸದೇ ಉಪ ವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಠೇವಣಿ ಬಾಂಡ್‍ನ ನಕಲು ಪ್ರತಿ, ಮನವಿಪತ್ರ ಕೈಯಲ್ಲಿ ಹಿಡಿದು ಸಾಲುಗಟ್ಟಿದ್ದರು. ಬುಧವಾರ 1500ಕ್ಕೂ ಹೆಚ್ಚು ಠೇವಣಿದಾರರು ಗಂಟೆಗಟ್ಟಲೆ ಕಾದಿದ್ದು 20 ಸಾವಿರ ಬಾಂಡ್ ಪ್ರತಿಗಳೊಂದಿಗೆ ಅರ್ಜಿ ಸಲ್ಲಿಸಿದರು.
ಇದಕ್ಕೂ ಮುನ್ನ: ರಾಜ್ಯದಾದ್ಯಂತ ಲಕ್ಷಾಂತರ ಹೂಡಿಕೆದಾರರಿಂದ ಕೋಟ್ಯಾಂತರ ರೂ.ಗಳಷ್ಟು ಹೂಡಿಕೆ ಸಂಗ್ರಹಿಸಿದ ಬಳಿಕ ಕಚೇರಿಗೆ ಬೀಗ ಹಾಕಿದ ಗ್ರೀನ್ ಬಡ್ಸ್ ಸಂಸ್ಥೆ ವಿರುದ್ಧ ಕಳೆದ 3 ವರ್ಷಗಳಿಂದ ಠೇವಣಿದಾರರು ಸತತ ಹೋರಾಟ ನಡೆಸುತ್ತಿದ್ದಾರೆ. ತಮ್ಮ ಠೇವಣಿ ಹಣವನ್ನು ವಾಪಸ್ ಪಡೆಯಲು ಪರದಾಡುತ್ತಿದ್ದಾರೆ. ನ್ಯಾಯಾಲಯದ ಮೊರೆ ಸಹ ಹೋಗಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಈ ಹಿಂದಿನ ಉಪ ವಿಭಾಗಾಧಿಕಾರಿಗಳು ಗ್ರೀನ್ ಬಡ್ಸ್ ಸಂಸ್ಥೆಯು ರಾಜ್ಯದ ವಿವಿಧೆಡೆ ಬೇನಾಮಿ ಹೆಸರಿನಲ್ಲಿ ಮಾಡಿರುವ ಆಸ್ತಿಯನ್ನು ಪತ್ತೆ ಹಚ್ಚಿದ್ದರು. ಠೇವಣಿದಾರರ ಹೂಡಿಕೆಯನ್ನು ವಾಪಸ್ ಕೊಡಿಸು ವುದಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆಯನ್ನೂ ಆರಂಭಿ ಸಿದ್ದರು. ಈ ಹಿನ್ನೆಲೆಯಲ್ಲಿ ಗ್ರೀನ್ ಬಡ್ಸ್ ಸಂಸ್ಥೆ ಯಲ್ಲಿ ಹೂಡಿಕೆ ಮಾಡಿದವರು ತಮ್ಮ ಠೇವಣಿಗೆ ಸಂಬಂಧಿಸಿದ ಬಾಂಡ್‍ನ ಜೆರಾಕ್ಸ್ ಪ್ರತಿ ಸಮೇತ ಹೂಡಿಕೆ ವಾಪಸ್‍ಗೆ ಮನವಿ ಪತ್ರ ಸಲ್ಲಿಸುವಂತೆ ಸೂಚಿಸಲಾಗಿತ್ತು. ಅದಕ್ಕಾಗಿ ನ.27ರಿಂದ ಡಿ.27ರ ವರೆಗೆ ಸಮಯಾವಕಾಶವನ್ನೂ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಮೈಸೂರು ಉಪ ವಿಭಾಗಾಧಿ ಕಾರಿ ಹೆಚ್.ಎನ್.ಶಿವೇಗೌಡ ಅವರ ಕಚೇರಿಯು ಕಳೆದು ಕೆಲವು ದಿನಗಳಿಂದ ಗ್ರೀನ್ಸ್ ಬಡ್ಸ್ ಹೂಡಿಕೆ ದಾರರಿಂದ ತುಂಬಿ ತುಳುಕುತ್ತಿದೆ. ಹೂಡಿಕೆದಾರರಷ್ಟೇ ಅಲ್ಲ, ಕಮಿಷನ್ ಆಸೆಗೆ ಠೇವಣಿ ಸಂಗ್ರಹಿಸಿಕೊಟ್ಟಿದ್ದ ಗ್ರೀನ್ಸ್ ಬಡ್ಸ್ ಸಂಸ್ಥೆಯ ಏಜೆಂಟರೂ ಸಹ ನೂರಾರು ಅರ್ಜಿ, ಬಾಂಡ್ ಪ್ರತಿಗಳನ್ನು ಹಿಡಿದುಕೊಂಡು ಬಂದಿದ್ದರು. ಒಬ್ಬೊಬ್ಬರೂ 10ರಿಂದ 150 ಅರ್ಜಿ ಗಳವರೆಗೂ ತಂದಿದ್ದರು. ಅರ್ಜಿ ಸ್ವೀಕರಿಸಲು ಎಸಿ ಕಚೇರಿಯಲ್ಲಿ 10ಕ್ಕೂ ಹೆಚ್ಚು ಕೌಂಟರ್‍ಗಳನ್ನು ತೆರೆಯ ಲಾಗಿತ್ತು. ದೂರದ ಊರುಗಳಿಂದ ಬಂದಿರುವ ನೂರಾರು ಮಹಿಳೆಯರು, ಯುವತಿಯರು, ವೃದ್ಧರÀು 2-3 ದಿನಗಳಿಂದ ಮೈಸೂರಿನಲ್ಲೇ ಉಳಿದಿದ್ದರು. ಬುಧವಾರ ಅರ್ಜಿ ಸಲ್ಲಿಸಿದವರು ನಿಟ್ಟುಸಿರುಬಿಟ್ಟರು. ಇನ್ನೂ ಸಾಕಷ್ಟು ಮಂದಿ ಬಾಂಡ್ ನಕಲು ಪ್ರತಿ ಸಲ್ಲಿಸಲು ಕಾದಿದ್ದಾರೆ.
ಮತ್ತಷ್ಟು ಖರ್ಚು: ದೂರದ ಜಿಲ್ಲೆಗಳಿಂದ ಬಂದಿರುವ ಏಜೆಂಟರು, ಠೇವಣಿದಾರರು, ಪ್ರಯಾಣ ವೆಚ್ಚದ ಜತೆಗೆ ಮೈಸೂರಿನಲ್ಲಿ 2-3 ದಿನ ತಂಗಲು, ಊಟ-ತಿಂಡಿಗೆ, ಬಾಂಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಜೆರಾಕ್ಸ್ ಎಂದು ಸಾಕಷ್ಟು ಹಣ ವೆಚ್ಚ ಮಾಡಬೇಕಾಗಿ ಬಂದಿದ್ದಕ್ಕೆ `ಮೈಸೂರು ಮಿತ್ರ’ನ ಬಳಿ ಅಳಲು ತೋಡಿಕೊಂಡರು.
ಶೌಚಾಲಯವಿಲ್ಲದೇ ಪರದಾಟ: ಠೇವಣಿದಾರರು ಹಣ ಹಿಂದಿರುಗಿಸುವಂತೆ ಒತ್ತಾಯಿಸುತ್ತಿರುವುದರಿಂದ ಕಂಗೆಟ್ಟಿರುವ ನೂರಾರು ಏಜೆಂಟರು ರಾಜ್ಯ ಸರ್ಕಾರ ನೀಡಿದ ಭರವಸೆಯನ್ನೇ ನಂಬಿ ಭಾರೀ ನಿರೀಕ್ಷೆಯೊಂದಿಗೆ ವಿವಿಧ ಜಿಲ್ಲೆಗಳಿಂದ ಮೈಸೂರಿಗೆ ಆಗಮಿಸಿದ್ದಾರೆ. ಇವರಲ್ಲಿ ಮಹಿಳೆಯರ ಸಂಕಷ್ಟ ಮಾತ್ರ ಹೇಳತೀರದ್ದಾಗಿತ್ತು. ಸಕ್ಕರೆ ಖಾಯಿಲೆ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲÀುತ್ತಿದ್ದ ಮಹಿಳೆಯರು ಎಸಿ ಕಚೇರಿ ಸುತ್ತಮುತ್ತ ಶೌಚಾಲಯ ಸೌಕರ್ಯವಿಲ್ಲದೇ ಇಡೀ ದಿನ ಪರದಾಡಿದರು. ಡಿಸಿ ಕಚೇರಿ ಬಳಿ ಸಾರ್ವಜನಿಕ ಶೌಚಾಲಯವಿದ್ದರೂ ಅದಕ್ಕೆ ಬೀಗ ಹಾಕಲಾಗಿತ್ತು. ಶೌಚಾಲಯದ ಬಾಗಿಲು ತೆಗೆಸುವಂತೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಬಳಿ ಹಲವು ಮಹಿಳೆಯರು ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಈ ಸಮಸ್ಯೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರ ಗಮನಕ್ಕೆ ಬಂದ ಬಳಿಕವಷ್ಟೇ ಬಗೆಹರಿಯಿತು. ಡಿಸಿ ಸೂಚನೆ ನಂತರ ಶೌಚಾಲಯದ ಬೀಗ ತೆಗೆಯಲಾಯಿತು.