ಹಿಂಗಾರು, ಮುಂಗಾರು ವೈಫಲ್ಯ: ರಾಜ್ಯದ 156 ತಾಲೂಕಿನಲ್ಲಿ ಬರ
ಮೈಸೂರು

ಹಿಂಗಾರು, ಮುಂಗಾರು ವೈಫಲ್ಯ: ರಾಜ್ಯದ 156 ತಾಲೂಕಿನಲ್ಲಿ ಬರ

December 27, 2018

ಬೆಂಗಳೂರು: ಮುಂಗಾರು, ಹಿಂಗಾರು ಮಳೆ ವೈಫಲ್ಯ ದಿಂದ 20 ಸಾವಿರ ಕೋಟಿ ರೂ.ಗೂ ಹೆಚ್ಚು ಬೆಳೆ ನಷ್ಟವಾಗಿದ್ದು, ಮತ್ತೆ ಐವತ್ತಾರು ತಾಲೂಕುಗಳನ್ನು ಹೊಸದಾಗಿ ಬರ ಪೀಡಿತ ಎಂದು ರಾಜ್ಯ ಸರ್ಕಾರ ಇಂದಿಲ್ಲಿ ಘೋಷಣೆ ಮಾಡಿದೆ.

ಈ ಹಿಂದೆ ಮುಂಗಾರು ವೈಫಲ್ಯದಿಂದ ಹಳೇ ಮೈಸೂರು ಮಧ್ಯ ಕರ್ನಾಟಕ ಭಾಗದ ನೂರು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿತ್ತು. ಇದೀಗ ಉತ್ತರ ಕರ್ನಾಟಕ ಭಾಗದಲ್ಲಿ ಹಿಂಗಾರು ಮಳೆ ಸಂಪೂರ್ಣ ವಾಗಿ ಕೈಕೊಟ್ಟಿರುವು ದರಿಂದ ರಾಜ್ಯದಲ್ಲಿ ಒಟ್ಟಾರೆ 20 ತಾಲೂಕು ಗಳನ್ನು ಹೊರತುಪಡಿಸಿ, ಉಳಿದೆಲ್ಲ 156 ತಾಲೂಕುಗಳು ಬರಕ್ಕೆ ಸಿಲುಕಿವೆ. ಮುಂಗಾರಿನಿಂದ ಅತಿವೃಷ್ಟಿಗೆ ಒಳಗಾಗಿದ್ದ, ಕೊಡಗು, ಶಿವಮೊಗ್ಗ, ಉಡುಪಿ, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ಕೆಲವು ತಾಲೂಕುಗಳು ಬರ ಪೀಡಿತ. ಸಚಿವ ಸಂಪುಟದ ಉಪಸಮಿತಿ ಸಭೆಯ ನಂತರ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಈ ತಾಲೂಕುಗಳಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಪ್ರತಿ ತಾಲೂಕಿಗೆ ಐವತ್ತು ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಘೋಷಿತಗೊಂಡ ನೂರು ತಾಲೂಕುಗಳಿಗೆ ಮೊದಲ ಕಂತಿನಲ್ಲಿ ಐವತ್ತು ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು. ಅದು ಸೇರಿ ಇದೀಗ ತಲಾ ಒಂದು ಕೋಟಿ ರೂ. ಆಗುತ್ತದೆ.

ಬರ ಪರಿಹಾರ ಕಾರ್ಯಕ್ಕೆಂದು ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 2434 ಕೋಟಿ ರೂಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು. ಈ ಮಧ್ಯೆ ಬರಪೀಡಿತ ತಾಲೂಕುಗಳು ಎಂದು ಪರಿಗಣಿಸುವಾಗ ಈ ತಾಲೂಕುಗಳ ಪೈಕಿ ಕೆಲವು ಸಾಧಾರಣ ಬರಪೀಡಿತ ಹಾಗೂ ತೀವ್ರ ಬರಪೀಡಿತ ತಾಲೂಕುಗಳು ಎಂದು ಪರಿಗಣಿತವಾಗುತ್ತವೆ. ಆದರೆ ಶೇಕಡಾ ಮೂವತ್ಮೂರರಿಂದ ಐವತ್ತರಷ್ಟು ಬೆಳೆ ನಷ್ಟ ಅನುಭವಿಸುತ್ತಿರುವ ರೈತರನ್ನೂ ಪರಿಹಾರದ ಮಾರ್ಗಸೂಚಿಯ ಅಡಿ ತರಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.ಅಗತ್ಯ ಬಿದ್ದರೆ ದಿಲ್ಲಿಗೆ ನಿಯೋಗ ತೆಗೆದುಕೊಂಡು ಹೋಗಿ ಒತ್ತಾಯ ಮಾಡಲಾಗುವುದು ಎಂದರು.

ಕೊಡಗು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಹಾನಿಯಾಗಿದೆ. ಹಾನಿಗೊಳಗಾದ ಜಿಲ್ಲೆಗಳ ರೈತರಿಗೆ ಮುನ್ನೂರು ಕೋಟಿ ರೂ.ಗಳಿಗೂ ಹೆಚ್ಚಿನ ಪರಿಹಾರ ನೀಡಲಾಗುವುದು ಮತ್ತು ಇನ್ನೂರು ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಸೇತುವೆ ದುರಸ್ತಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ನೀಡಲಾಗುವುದು.

Translate »