ರಾಹು-ಕೇತುಗಳ್ಯಾರೆಂದು ಸಿದ್ದರಾಮಯ್ಯ ಅವರನ್ನೇ ಕೇಳಿ ಮಾಧ್ಯಮಕ್ಕೆ ಜಿಟಿಡಿ ಪ್ರತಿಕ್ರಿಯೆ
ಮೈಸೂರು

ರಾಹು-ಕೇತುಗಳ್ಯಾರೆಂದು ಸಿದ್ದರಾಮಯ್ಯ ಅವರನ್ನೇ ಕೇಳಿ ಮಾಧ್ಯಮಕ್ಕೆ ಜಿಟಿಡಿ ಪ್ರತಿಕ್ರಿಯೆ

October 3, 2018

ಮೈಸೂರು:  ರಾಹು-ಕೇತು, ಶನಿಗಳೆಲ್ಲಾ ಸೇರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿದವು ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್ಚು ಪ್ರತಿಕ್ರಿಯಿಸಲು ನಿರಾಕರಿಸಿದ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ರಾಹು-ಕೇತುಗಳು ಯಾರೆಂಬುದನ್ನು ಅವರನ್ನೇ ಕೇಳಿ ಎಂದಿದ್ದಾರೆ.

ಮೈಸೂರು ಅರಮನೆ ಆವರಣದಲ್ಲಿ ಮಂಗಳವಾರ ಸಿದ್ಧಾರ್ಥನಗರ ಸವಿತಾ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಕೇಶಾಲಂಕಾರ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹು-ಕೇತುಗಳು ಯಾರೆಂಬುದನ್ನು ಸಿದ್ದರಾಮಯ್ಯ ಅವರನ್ನೇ ಕೇಳಿ ಎಂದರು. ಮೈತ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಸಂಬಂಧ ಪ್ರತಿಕ್ರಿಯಿಸಿದ ಅವರು, ನನ್ನ ಖಾತೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಉನ್ನತ ಶಿಕ್ಷಣ ಖಾತೆಯನ್ನು ಸಮರ್ಥವಾಗಿ ನಿಭಾಯಿಸಲಿದ್ದೇನೆ. ಬೇರೆಯವರ ಖಾತೆಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದರು.

ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮೈಸೂರು ಎಂದರೆ ಹೆಚ್ಚಿನ ಪ್ರೀತಿ ಇದೆ ಎಂದ ಅವರು, ದಸರಾ ಉಪಸಮಿತಿಗಳಿಗೆ ಅಧಿಕಾರೇತರ ಪದಾಧಿಕಾರಿಗಳು ಮತ್ತು ಸದಸ್ಯರನ್ನು ನೇಮಕ ಮಾಡಲು ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ. ಹೀಗಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸಲು ಇನ್ನಷ್ಟು ಸಮಯ ಬೇಕಾಗುತ್ತದೆ. ಇದನ್ನು ಹೊರತುಪಡಿಸಿ ದಸರಾ ಪೂರ್ವ ಸಿದ್ದತಾ ಕಾರ್ಯಗಳು ಭರಸದಿಂದ ಸಾಗಿವೆ ಎಂದು ಹೇಳಿದರು.

ಕೇಶಾಲಂಕರದ ಸೇವೆ: ಮೈಸೂರು ದಸರಾ ಮಹೋತ್ಸವಕ್ಕಾಗಿ ಅರಮನೆಯಲ್ಲಿ ಬೀಡುಬಿಟ್ಟಿರುವ ಗಜಪಡೆಯ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಅರಮನೆ ಆವರಣದಲ್ಲಿ ಉಚಿತ ಕೇಶಾಲಂಕಾರದ ಸೇವೆಯನ್ನು ಸಿದ್ಧಾರ್ಥನಗರ ಸವಿತಾ ಸಮಾಜದ ವತಿಯಿಂದ ನೀಡಲಾಯಿತು.

ಈ ಸೇವಾ ಕಾರ್ಯಕ್ರಮದ ಉದ್ಘಾಟನೆಯನ್ನು ಸಚಿವ ಜಿ.ಟಿ.ದೇವೇಗೌಡ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಸವಿತಾ ಸಮಾಜದಿಂದ ಸ್ವಯಂ ಪ್ರೇರಿತವಾಗಿ ಕೇಶ ಮುಂಡನಾ ಕಾರ್ಯ ನಡೆಸುತ್ತಿದ್ದಾರೆ. ಇದು ಅವರಲ್ಲಿರುವ ದಸರಾ ಮಹೋತ್ಸವದ ಮೇಲಿನ ಪ್ರೀತಿಯನ್ನು ಅನಾವರಣಗೊಳಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದೇ ವೇಳೆ `2ಎ’ ವರ್ಗದಲ್ಲಿರುವ ಸವಿತಾ ಸಮಾಜವನ್ನು ಪರಿಶಿಷ್ಟ ಜಾತಿ ಇಲ್ಲವೇ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಕ್ರಮ ಕೈಗೊಳ್ಳುವಂತೆ ಸವಿತಾ ಸಮಾಜದ ಮುಖಂಡು ಸಚಿವರಲ್ಲಿ ಮೌಖಿಕ ಮನವಿ ಮಾಡಿದರು. ಜಿಪಂ ಸದಸ್ಯ ಮಾದೇಗೌಡ, ಮೈಸೂರು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಎ.ಎಂ.ನಾಗರಾಜು, ಸಿದ್ಧಾರ್ಥನಗರ ಸವಿತಾ ಸಮಾಜದ ಅಧ್ಯಕ್ಷ ಎಂ.ರಾಮು ಮತ್ತಿತರರು ಹಾಜರಿದ್ದರು.

Translate »