ಮೈಸೂರಿನ ಪಾರಂಪರಿಕ ಕಟ್ಟಡಗಳ ಪರಿಚಯ  ಮಾಡಿಕೊಟ್ಟ `ಪಾರಂಪರಿಕ ಸೈಕಲ್ ಸವಾರಿ’
ಮೈಸೂರು

ಮೈಸೂರಿನ ಪಾರಂಪರಿಕ ಕಟ್ಟಡಗಳ ಪರಿಚಯ  ಮಾಡಿಕೊಟ್ಟ `ಪಾರಂಪರಿಕ ಸೈಕಲ್ ಸವಾರಿ’

October 13, 2018

ಮೈಸೂರು: ಮೈಸೂರಿನ ಪಾರಂಪರಿಕ ಕಟ್ಟಡಗಳ ಪರಿಚಯ ಮಾಡಿಕೊಡುವ ಉದ್ದೇಶದಿಂದ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಶುಕ್ರವಾರ ಮೈಸೂರಿನಲ್ಲಿ ಆಯೋಜಿಸಿದ್ದ ಪಾರಂಪರಿಕ ಸೈಕಲ್ ಸವಾರಿಯಲ್ಲಿ ವಿವಿಧ ವಯೋಮಾನದ 200ಕ್ಕೂ ಹೆಚ್ಚು ಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ಮೈಸೂರು ಪೇಟ ಧರಿಸಿದ್ದ ಎಲ್ಲಾ ಸೈಕಲ್ ಸವಾರರೂ ರಂಗಾಚಾರ್ಲು ಪುರಭವನದಿಂದ ಚಾಮ ರಾಜ ಒಡೆಯರ್ ವೃತ್ತ, ಅಂಬಾವಿಲಾಸ ಅರಮನೆ, ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಲ್ಯಾನ್ಸ್ ಡೌನ್ ಕಟ್ಟಡ, ಜಗನ್ಮೋಹನ ಅರಮನೆ, ಪರಕಾಲ ಮಠ, ಶೇಷಾದ್ರಿ ಹೌಸ್, ಪದ್ಮಾಲಯ, ಚಾಮುಂಡಿ ಅತಿಥಿ ಗೃಹ, ಪ್ರಾಚ್ಯ ವಿದ್ಯಾಸೌಧ, ಕ್ರಾಫರ್ಡ್ ಹಾಲ್, ಜಿಲ್ಲಾಧಿಕಾರಿ ಕಚೇರಿ, ಮಹಾರಾಜ ಕಾಲೇಜು, ಮೆಟ್ರೊ ಪೋಲ್ ವೃತ್ತ, ರೈಲ್ವೆ ನಿಲ್ದಾಣದ ಮೂಲಕ ಮೈಸೂರು ಮೆಡಿಕಲ್ ಕಾಲೇಜುವರೆಗೆ ಸೈಕಲ್ ಸವಾರಿ ನಡೆಸಿ, ಪಾರಂಪರಿಕ ಕಟ್ಟಡಗಳ ಪರಿಚಯ ಸಾರಿದರು.

ಇದರೊಂದಿಗೆ ಟಾಂಗಾದಲ್ಲಿ ಕಟ್ಟಲಾಗಿದ್ದ ಧ್ವನಿ ವರ್ಧಕದಲ್ಲಿ ಮೈಸೂರಿನ ಪಾರಂಪರಿಕ ಕಟ್ಟಡಗಳ ಬಗ್ಗೆ ಪರಿಚಯ ಮಾಡಿಕೊಡಲಾಗುತ್ತಿತ್ತು. ಸೈಕಲ್ ಸವಾರಿಯಲ್ಲಿ ಹಲವರು ಸ್ವಂತ ಸೈಕಲ್‍ನಲ್ಲಿ ಭಾಗ ವಹಿಸಿದ್ದರೆ, ಇನ್ನು ಹಲವರು ಟ್ರಿಣ್ ಟ್ರಿಣ್ ಸೈಕಲ್‍ನಲ್ಲಿ ಸವಾರಿಯಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಪ್ರವಾ ಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಟ್ರಿಣ್ ಟ್ರಿಣ್ ಸೈಕಲ್ ಏರಿ ಪುರಭವನದಿಂದ ಚಾಮರಾಜ ವೃತ್ತದವರೆಗೆ ಸವಾರಿ ಮಾಡುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಜಿಪಂ ಸಿಇಓ ಕೆ.ಜ್ಯೋತಿ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್, ಮೈಸೂರು ಮಹಾನಗರಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ಪರಂಪರೆ ಇಲಾಖೆ ಉಪನಿರ್ದೇಶಕಿ ನಿರ್ಮಲಾ ಮಠಪತಿ ಇನ್ನಿತರರು ಪಾಲ್ಗೊಂಡಿದ್ದರು.

Translate »