ಮೈಸೂರು: ನಾಡಹಬ್ಬ ಬಂತೆಂದರೆ ಸಾಂಸ್ಕೃತಿಕ ನಗರಿ ಕಳೆ ಕಟ್ಟುತ್ತದೆ. ವಿವಿಧೆಡೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು, ದೀಪಾಲಂಕಾರ ಮೆರಗು ನೀಡಿದರೆ, ವಿವಿಧೆಡೆಗಳಿಂದ ಆಗಮಿಸಿರುವ ನಾನಾ ರೀತಿಯ ಆಟಿಕೆಗಳ ಮಾರಾಟಗಾರರು ಹಬ್ಬದ ವೈಭವವನ್ನು ಮತ್ತಷ್ಟು ಹೆಚ್ಚಿಸುತ್ತಿದ್ದಾರೆ.
ಪ್ರತಿ ವರ್ಷ ನವರಾತ್ರಿಯ ಹಿನ್ನೆಲೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಸ್ಥಳಗಳು, ಜನದಟ್ಟಣೆ ಇರುವ ರಸ್ತೆಗಳಲ್ಲಿ ಬಲೂನು, ಪೀಪಿ, ಮುಖವಾಡ, ಆಟಿಕೆಗಳು, ಹೇರ್ ಬ್ಯಾಂಡ್, ಕೈ ಬಂದಿ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡಲೆಂದು ದೂರ ದೂರದ ಊರುಗಳಿಂದ ವ್ಯಾಪಾರಿಗಳು ಆಗಮಿಸಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಮಹಾರಾಷ್ಟ್ರದ ಸೊಲ್ಲಾಪುರ, ಕಲ್ಬುರ್ಗಿ ಸೇರಿದಂತೆ ವಿವಿಧೆಡೆಗಳಿಂದ ಆಟಿಕೆಗಳು, ಬಲೂನು, ಮುಖವಾಡ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡಲು ನೂರಾರು ಮಂದಿ ಆಗಮಿಸಿದ್ದಾರೆ. ಕಲ್ಬುರ್ಗಿಯಿಂದ 500ಕ್ಕೂ ಹೆಚ್ಚು ಮಂದಿ ವ್ಯಾಪಾರಿಗಳು ಮೈಸೂರಿಗೆ ಲಗ್ಗೆ ಇಟ್ಟಿದ್ದರೆ, ಸೊಲ್ಲಾಪುರದಿಂದ 250ಕ್ಕೂ ಹೆಚ್ಚು ಮಂದಿ ಮೈಸೂರಿಗೆ ಬಂದಿದ್ದಾರೆ. ಮಹಿಳೆಯರು, ಮಕ್ಕಳು, ಯುವಕರು, ವಯಸ್ಕರು ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ಆಟಿಕೆಗಳ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಾರಿ ಬಲೂನಿನ ಒಳಗೆ ಬಣ್ಣ ಬಣ್ಣದ ಎಲ್ಇಡಿ ಲೈಟ್ ಅಳವಡಿಸಿರುವ ಬೆಲೂನನ್ನು ಮಾರಾಟಕ್ಕೆ ತರಲಾಗಿದ್ದು, ಭರ್ಜರಿ ವ್ಯಾಪಾರಿ ಮಾಡುತ್ತಿದ್ದಾರೆ. ಮೈಸೂರಿನ ವಿವಿಧ ರಸ್ತೆಗಳಲ್ಲಿ ಟೆಂಟ್ ಹಾಕಿಕೊಂಡು ವಾಸಿಸುತ್ತಿರುವ ಈ ವ್ಯಾಪಾರಿಗಳು ಬೆಳಗ್ಗೆ 11 ಗಂಟೆಯ ನಂತರವಷ್ಟೆ ವ್ಯಾಪಾರಕ್ಕೆ ನಗರದ ಹೃದಯ ಭಾಗಕ್ಕೆ ಆಗಮಿಸುತ್ತಾರೆ.
ಅರಮನೆ, ವಸ್ತುಪ್ರದರ್ಶನ, ಆಹಾರ ಮೇಳ, ಯುವ ದಸರಾ, ಪುಸ್ತಕ ಮೇಳ, ಮಹಿಳಾ ದಸರಾ, ರೈತ ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಈ ವ್ಯಾಪಾರಿಗಳು ತಮ್ಮ ತಮ್ಮ ವಸ್ತುಗಳನ್ನು ಮಾರಾಟ ಮತ್ತು ಪ್ರದರ್ಶನ ಮಾಡಿ ಗಮನ ಸೆಳೆಯುತ್ತಿದ್ದಾರೆ.