ಮೈಸೂರು,ಸೆ.23(ಪಿಎಂ)- ರೀ ವಿಶ್ವನಾಥ್, ನನ್ನ ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದಲ್ಲಿ ಒಂದೇ ಒಂದೂ ಕಪ್ಪು ಚುಕ್ಕೆ ಸಾಬೀತು ಮಾಡಿ. ಮರು ಕ್ಷಣವೇ ರಾಜ ಕೀಯ ಹಾಗೂ ಸಾರ್ವಜನಿಕ ಜೀವನ ದಿಂದ ನಿವೃತ್ತಿಯಾಗುತ್ತೇನೆ ಎಂದು ವಾಗ್ದಾಳಿ ನಡೆಸುವ ಮೂಲಕ ಮಾಜಿ ಸಚಿವರೂ ಆದ ಶಾಸಕ ಸಾ.ರಾ.ಮಹೇಶ್, ಅನರ್ಹ ಶಾಸಕ ಎ.ಹೆಚ್.ವಿಶ್ವನಾಥ್ ವಿರುದ್ಧ ಗುಡುಗಿದ್ದಾರೆ.
ಭಾನುವಾರವಷ್ಟೇ ಎ.ಹೆಚ್.ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ ಸಾ.ರಾ.ಮಹೇಶ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಸೋಮವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿ ನಡೆ ಸಿದ ಸಾ.ರಾ.ಮಹೇಶ್, ನೀವು (ವಿಶ್ವನಾಥ್) ನಿಜವಾಗಲೂ ಪ್ರಾಮಾಣಿಕರಾಗಿದ್ದರೆ ಈ ನವರಾತ್ರಿ ಸಂದರ್ಭದಲ್ಲೇ ಚಾಮುಂಡಿ ಬೆಟ್ಟಕ್ಕೆ ಬಂದು ಪ್ರಮಾಣ ಮಾಡಿ ಎಂದು ಸವಾಲು ಹಾಕಿದರು. ತಾವು ಪ್ರಾಮಾಣಿಕರು, ನಿಷ್ಠಾವಂತರು ಎಂದು ಸಂವಿಧಾನದ ಮೇಲೆ ಆಣೆ ಮಾಡುತ್ತೇನೆ. ಪತ್ರಕರ್ತರ ಭವನಕ್ಕೆ ಬರಲಿ ಎಂದಿದ್ದಾರೆ. ಈಗಾಗಲೇ ಶಾಸಕರಾಗಿ ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದೀರಲ್ಲ. ಅದರಂತೆ ನೀವು ನಡೆದಿದ್ದೀರಾ? `ಬಿ ಫಾರಂ’ ಕೊಟ್ಟ ಪಕ್ಷಕ್ಕೆ ನಿಷ್ಠೆ ತೋರಿದ್ದೀರಾ? ನಿಮ್ಮನ್ನು ಆಯ್ಕೆ ಮಾಡಿದ ಜನಕ್ಕೆ ನೀವು ಕೊಟ್ಟ ಕೊಡುಗೆ ಏನು? ಎಂದು ಪ್ರಶ್ನಿಸಿದರು.
ಮೈತ್ರಿ ಸರ್ಕಾರದ ಸಂದರ್ಭದಲ್ಲಿ ನೀವು ಅಪೇಕ್ಷಿಸಿದ ಕಾನೂನುಬಾಹಿರ ಕೆಲಸ ಗಳನ್ನು ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ನಾನು ಕೆಟ್ಟವನಾದನೇ? `25 ಲಕ್ಷ ಹಣ ತೆಗೆದುಕೊಂಡಿದ್ದೇನೆ. ಇದೊಂದು ವರ್ಗಾ ವಣೆ ಮಾಡಿಸಿಕೊಡಪ್ಪ’ ಎಂದು ನೀವು ನನ್ನ ಬಳಿ ಕೇಳಿರಲಿಲ್ಲವೇ? ನಮ್ಮ ತಂದೆ ಜಮೀನ್ದಾರರೆಂದು ನೀವು ಹೇಳಿಕೊಂಡಿ ದ್ದೀರಿ, ನಿಮ್ಮ ತಂದೆಗೆ 4 ಎಕರೆ ಜಮೀನು ಇತ್ತೆಂದು ನನಗೂ ಗೊತ್ತಿದೆ. ಆದರೆ ನಮ್ಮ ತಂದೆ ಶಿಕ್ಷಕರು. ಅವರು ನಮಗೆ ಸಂಸ್ಕಾರ ಕಲಿಸಿದ್ದಾರೆ. ಅದಕ್ಕಾಗಿ ಸುಮ್ಮನಿದ್ದೆ. ನಾನು ನಿಮಗಿಂತ ಏಕವಚನದಲ್ಲಿ ಮಾತನಾಡ ಬಲ್ಲೆ ಎಂದು ಕಿಡಿಕಾರಿದರು.
ನನ್ನನ್ನು ಯಾರು ಖರೀದಿ ಮಾಡಿದ್ದು ಎಂದು ಪ್ರಶ್ನೆ ಮಾಡಿದ್ದೀರಲ್ಲಾ? ನನ್ನ ಫಾರಂ ಹೌಸ್ ನಲ್ಲಿ ನೀವು ಮಾತನಾಡಿದ್ದು ಮರೆತು ಹೋಯಿತೇ? ಕ್ಷೇತ್ರಕ್ಕೆ ಸಾ.ರಾ. ಮಹೇಶ್ ಕೊಡುಗೆ ಏನೂ ಇಲ್ಲವೆಂದು ಹೇಳಿದ್ದೀರಿ. ನಿಮಗೆ ನೆನಪಿರಲಿ, ಕೆಆರ್ ನಗರ ವಿಧಾನ ಸಭಾ ಕ್ಷೇತ್ರಕ್ಕೆ 900 ಕೋಟಿ 37 ಲಕ್ಷ ರೂ.ಗಳ ಅನುದಾನ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ಕುಮಾರಸ್ವಾಮಿ ಯವರ ಮೈತ್ರಿ ಸರ್ಕಾರದಲ್ಲಿ ಸಾಲಿಗ್ರಾಮ ತಾಲೂಕು ಕೇಂದ್ರವಾಗಿ ಘೋಷಣೆ ಯಾಗಿದೆ. ಆದರೆ ಈ ಪೈಕಿ ಪುರಸಭೆ ಹಾಗೂ ಗ್ರಾಮೀಣ ಪ್ರದೇಶದ ರಸ್ತೆ ಕಾಮಗಾರಿಯನ್ನು ಇಂದಿನ ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಇದಕ್ಕೇನು ಹೇಳುತ್ತೀರಿ? ಎಂದು ಪ್ರಶ್ನಿಸಿದರು.
ನಿಮ್ಮ ಮೊದಲ ಚುನಾವಣೆಯನ್ನು ಯಾವ ಪಾಪದ ಹಣದಲ್ಲಿ ಎದುರಿಸಿದ್ದೀರಿ ಎಂಬು ದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ. ನಿಮ್ಮನ್ನು ಹೆಚ್.ವಿಶ್ವನಾಥ್ ಎನ್ನುವ ಬದಲು ಹುಚ್ ವಿಶ್ವನಾಥ್ ಎನ್ನುವುದೇ ಲೇಸು. ನೀವು ಹೋಗುವುದಲ್ಲದೇ (ಮುಂಬೈಗೆ) ನಮ್ಮ ಪಕ್ಷದ ಇನ್ನಿಬ್ಬರನ್ನು ಕರೆದುಕೊಂಡು ಹೋಗಿ ಹಾಳು ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು. ಮಾಜಿ ಮೇಯರ್ ಎಂ.ಜೆ.ರವಿಕುಮಾರ್, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ರವಿಚಂದ್ರೇಗೌಡ ಗೋಷ್ಠಿಯಲ್ಲಿದ್ದರು.