ಚಾಮುಂಡಿಬೆಟ್ಟ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ
ಮೈಸೂರು

ಚಾಮುಂಡಿಬೆಟ್ಟ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ

September 24, 2019

ಮೈಸೂರು,ಸೆ.23(ಆರ್‍ಕೆ)- ದಶಕಗಳ ಚಾಮುಂಡಿ ಬೆಟ್ಟ ಗ್ರಾಮಸ್ಥರ ಬೇಡಿಕೆ ಅಂತೂ ಸಾಕಾರಗೊಳ್ಳು ತ್ತಿದೆ. ಪ್ರತಿದಿನ ಸಾವಿರಾರು ಮಂದಿ ಭಕ್ತಾದಿಗಳು ಹಾಗೂ ಪ್ರವಾಸಿಗರು ಭೇಟಿ ನೀಡುವ ನಾಡಿನ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಾನವೂ ಆದ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ವಿದೆ. ಹಲವು ಸರ್ಕಾರ ಬಂದು ಹೋದರೂ, ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇ ಗೌಡ ಈ ಗಂಭೀರ ವಿಷಯವನ್ನು ದಸರಾ ಉದ್ಘಾ ಟನಾ ಸಮಾರಂಭದಲ್ಲಿ ಪ್ರಸ್ತಾಪಿಸಿ ತಕ್ಷಣವೇ ಕುಡಿ ಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸ ಬೇಕೆಂಬ ಒತ್ತಾಯ ಮಾಡಿದ್ದರು. ಈ ಹಿಂದೆ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಸಕ್ತಿ ತೋರಿ, ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ ಕರ್ನಾ ಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಮೈಸೂರು ನಗರದಿಂದ ಚಾಮುಂಡಿ ಬೆಟ್ಟಕ್ಕೆ ಕುಡಿಯುವ ನೀರು ಸರಬರಾಜಿಗೆ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರದ ಅನುಮೋದನೆ ಪಡೆದು ಈಗ ಅನುಷ್ಠಾನಗೊಳಿಸುತ್ತಿದ್ದಾರೆ.

2050ನೇ ವರ್ಷದ ಜನಸಂಖ್ಯೆ ದೂರದೃಷ್ಟಿಯಿಂದ ನೀರಿನ ಅಗತ್ಯತೆಯನ್ನು ಗಮನದಲ್ಲಿರಿಸಿಕೊಂಡು ಮಂಡ ಳಿಯ ಅಧಿಕಾರಿಗಳು 6.95 ಕೋಟಿ ರೂ. ವೆಚ್ಚದಲ್ಲಿ ಚಾಮುಂಡಿಬೆಟ್ಟಕ್ಕೆ ಕಾವೇರಿ ಕುಡಿಯುವ ನೀರು ಪೂರೈ ಸುವ ಶಾಶ್ವತ ಯೋಜನೆಯನ್ನು ಅನುಷ್ಠಾನಗೊಳಿಸು ತ್ತಿದೆ. ಪ್ರಸ್ತುತ ಪ್ರತೀದಿನ ಬೆಟ್ಟಕ್ಕೆ 5ರಿಂದ 6 ಲಕ್ಷ ಲೀಟರ್ ನೀರು ಸರಬರಾಜಾಗುತ್ತಿದೆ. ಬೆಟ್ಟಕ್ಕೆ ಬರುವ ಪ್ರವಾಸಿ ಗರು, ಅಲ್ಲಿನ ನಿವಾಸಿಗಳು, ದಾಸೋಹ ಭವನ ಹಾಗೂ ಅತಿಥಿ ಗೃಹಗಳಿಗೆ ಇಷ್ಟು ಕಡಿಮೆ ಪ್ರಮಾಣದ ನೀರು ಸಾಲದಾಗಿರುವುದರಿಂದ ಚಾಮುಂಡಿಬೆಟ್ಟದಲ್ಲಿ ನೀರಿಗೆ ಹಾಹಾಕಾರ ತಲೆದೋರಿದ್ದನ್ನು ಇಲ್ಲಿ ಸ್ಮರಿಸಬಹುದು.

ಮೈಸೂರು ಮಹಾನಗರ ಪಾಲಿಕೆಯ ನೀರು ಸರಬ ರಾಜು ಸಂಪರ್ಕ ಜಾಲದಿಂದ ಚಾಮುಂಡಿಬೆಟ್ಟದ ಪಾದ (ಮೆಟ್ಟಿಲು)ದ ಬಳಿಯಲ್ಲಿ ನಿರ್ಮಿಸಿರುವ ನೆಲ ಮಟ್ಟದ ಜಲ ಸಂಗ್ರಹಾಗಾರದಲ್ಲಿ ಶೇಖರಣೆ ಮಾಡಿ ಅಲ್ಲಿಂದ ಕೊಳವೆ ಮಾರ್ಗದ ಮೂಲಕ ಚಾಮುಂಡಿ ಬೆಟ್ಟದಲ್ಲಿ ನಿರ್ಮಿಸಿರುವ ಟ್ಯಾಂಕಿಗೆ ನೀರನ್ನು ಪಂಪ್ ಮಾಡಲಾಗುವುದು. ಅದಕ್ಕಾಗಿ ಪಾದದ ಬಳಿ ಪಂಪ್ ಹೌಸ್ ಅನ್ನೂ ನಿರ್ಮಿಸಿ ಈಗಾಗಲೇ ಯಂತ್ರೋಪಕರಣ ಗಳು, ಜನರೇಟರ್‍ಗಳನ್ನು ಅಳವಡಿಸಲಾಗಿದೆ. ಪಾದ ದಿಂದ ಬೆಟ್ಟದ ಅರಣ್ಯದಲ್ಲಿ ಒಂದು ಅಡಿ ಒಳವ್ಯಾಸದ ಕಾಂಕ್ರಿಟ್ ಕೊಳವೆಗಳನ್ನು ಅಳವಡಿಸುವ ಕಾಮಗಾರಿ ತೀವ್ರಗತಿಯಿಂದ ನಡೆಯುತ್ತಿದೆ.

ಪ್ರಸ್ತುತ ಇರುವ 11 ಕೆವಿ ಸಾಮಥ್ರ್ಯದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಅನ್ನು 100 ಕೆವಿಗೆ ಮೇಲ್ದರ್ಜೆಗೇರಿ ಸಲಾಗಿದೆ. ರೇಸ್‍ಕೋರ್ಸ್ ಬಳಿಯಿಂದ ಚಾಮುಂಡಿ ಬೆಟ್ಟದವರೆಗೆ ಕೊಳವೆ ಮಾರ್ಗದ ಕೆಲಸ ಪ್ರಗತಿಯ ಲ್ಲಿದೆ. ಬೆಟ್ಟದ ಮಧ್ಯೆ ಅರಣ್ಯ ಪ್ರದೇಶದಲ್ಲಿ ಕೊಳವೆ ಅಳವಡಿಸಲು ಕಲ್ಲು ಬಂಡೆ, ಗಿಡ-ಗಂಟಿಗಳು ಇರುವುದರಿಂದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲ. ಮೇಲಾಗಿ ಸಂಪರ್ಕ ರಸ್ತೆ ಇಲ್ಲದೆ ಪರಿತಪಿಸುವಂತಾಗಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಚಾಮುಂಡಿಬೆಟ್ಟದ ಪಾದದ ಬಳಿ ಸ್ಥಳ ಪರಿಶೀಲನೆಗೆಂದು ಹೋಗಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ನೀರು ಸರಬರಾಜು ಕಾಮಗಾರಿ ಯನ್ನು ನವೆಂಬರ್ ಒಳಗಾಗಿ ಪೂರ್ಣಗೊಳಿಸು ವಂತೆ ನಿರ್ದೇಶನ ನೀಡಿದ್ದರು. ಈವರೆಗೆ ಸರ್ಕಾರ 4.78 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಉಳಿದ 2.17 ಕೋಟಿ ರೂ. ಹಣವನ್ನು ಶ್ರೀ ಚಾಮುಂ ಡೇಶ್ವರಿ ದೇವಸ್ಥಾನದಿಂದ ಧಾರ್ಮಿಕ ದತ್ತಿ ಇಲಾಖೆಯು ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Translate »