ನಾಡು-ನುಡಿ ರಕ್ಷಣೆಗೆ ಕೈ ಜೋಡಿಸಿ: ಜಿಟಿಡಿ ಕರೆ
ಮೈಸೂರು

ನಾಡು-ನುಡಿ ರಕ್ಷಣೆಗೆ ಕೈ ಜೋಡಿಸಿ: ಜಿಟಿಡಿ ಕರೆ

November 3, 2018

ಮೈಸೂರು: ಕರುನಾಡನ್ನು ಕಟ್ಟುವುದಕ್ಕೆ ಶ್ರಮಿಸಿದ ಅನೇಕ ಹಿರಿಯ ಸಾಹಿತಿಗಳನ್ನು ಸ್ಮರಿಸುವುದರೊಂದಿಗೆ ನಾಡು, ನುಡಿ ಸಂರಕ್ಷಣೆಯೊಂದಿಗೆ ಸುಭದ್ರ ನಾಡಿನ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಕರೆ ನೀಡಿದ್ದಾರೆ.

ಮೈಸೂರು ಅರಮನೆಯ ಉತ್ತರ ದ್ವಾರ ದಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಾಲಯ ಮುಂಭಾಗದ ಆವರಣದಲ್ಲಿ ಗುರುವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಹಾಗೂ ರಾಜ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ನಾಡಿಗೆ, ಐತಿಹಾಸಿಕ ಮಹತ್ವವಿದ್ದು, ಅನೇಕ ಸಂಸ್ಕೃತ ಪ್ರಾಚೀನ ಕೃತಿಗಳಲ್ಲಿ ಕನ್ನಡ ನಾಡಿನ ಬಗ್ಗೆ ಉಲ್ಲೇಖಿಸಲಾಗಿದೆ. ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಪರಭಾಷಾ ಪ್ರಭಾವಗಳ ನಡುವೆಯೂ ಕನ್ನಡ ಭಾಷೆ-ಸಾಹಿತ್ಯದ ಪ್ರಭಾವ ಇಂದಿಗೂ ಜೀವಂತವಾಗಿದೆ ಎಂದು ವಿಶ್ಲೇಷಿಸಿದರು.

ಅನೇಕ ಶ್ರೇಷ್ಠ ಕವಿಗಳು ಕನ್ನಡ ಸಾಹಿತ್ಯ ವನ್ನು ಶ್ರೀಮಂತಗೊಳಿಸಿದ್ದು, ಕನ್ನಡ ನಾಡಿನ ಸಂಸ್ಕೃತಿ, ಮಾನವೀಯತೆ, ಧೈರ್ಯ, ಸಾಹಸ, ಸೇವೆ ಸೇರಿದಂತೆ ಇನ್ನಿತರ ಮೌಲ್ಯ ಗಳನ್ನು ತಮ್ಮ ಕೃತಿಗಳಲ್ಲಿ ಬಿಂಬಿಸಿದ್ದಾರೆ. ಈ ನೆಲದಲ್ಲಿ ಆಳ್ವಿಕೆ ನಡೆಸಿದ ಅನೇಕ ಅರ ಸರು ನಾಡು-ನುಡಿಯ ಅಭಿವೃದ್ಧಿಗೆ ಹೊಸ ಭಾಷ್ಯವನ್ನು ಬರೆದಿದ್ದಾರೆ. ಕನ್ನಡದ ಹಬ್ಬ ದಲ್ಲಿ ಹಳ್ಳಿ ಹಳ್ಳಿಯ ಸಾಮಾನ್ಯ ಜನರು ಭಾಗಿಯಾಗಿ ನಾಡು-ನುಡಿಯ ಏಳಿಗೆಗೆ ಶ್ರಮಿಸಬೇಕು. ಯುವಜನತೆಗೆ ಕನ್ನಡ ಭಾಷೆ, ಸಾಹಿತ್ಯ, ಜನಪದ, ಒಗಟಿನ ಪರಿಚಯ ಮಾಡಿಸಿ, ಕನ್ನಡಿಗರೆಲ್ಲರೂ ಒಂದು ಎಂಬ ಭಾವನೆ ಮೂಡಿಸಬೇಕು. ಆ ಮೂಲಕ ಎಲ್ಲೆಡೆ ಕನ್ನಡದ ಕಂಪನ್ನು ಪಸರಿಸಿ, ಕನ್ನ ಡದ ಕೀರ್ತಿ ಪತಾಕೆ ಹಾರಿಸಬೇಕು ಎಂದು ಸಲಹೆ ನೀಡಿದರು.

ಭುವನೇಶ್ವರಿಗೆ ಪೂಜೆ: ಕನ್ನಡ ರಾಜ್ಯೋ ತ್ಸವ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಚಿವ ಜಿ.ಟಿ.ದೇವೇಗೌಡ ಹಾಗೂ ಇನ್ನಿತ ರರು ಅರಮನೆ ಆವರಣದಲ್ಲಿರುವ ತಾಯಿ ಭುವನೇಶ್ವರಿ ದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ವೇದಿಕೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಭುವನೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕನ್ನಡಾಂಬೆಗೆ ನಮನ ಸಲ್ಲಿಸಿದರು. ಧ್ವಜಾರೋಹಣ ಸಂದರ್ಭದಲ್ಲಿ ಪೊಲೀಸ್ ಬ್ಯಾಂಡ್ ಸಿಬ್ಬಂದಿ ರಾಷ್ಟ್ರಗೀತೆ ನುಡಿಸಿದರೆ, ಹಂಸಿಣಿ ಮತ್ತು ತಂಡದವರು ನಾಡ ಗೀತೆಯನ್ನು ಪ್ರಸ್ತುತ ಪಡಿಸಿದರು.

ಕಲಾತಂಡಗಳ ಮೆರಗು: ರಾಜ್ಯೋತ್ಸವ ಹಿನ್ನೆಲೆಯಲ್ಲಿ ನಡೆದ ತಾಯಿ ಭುವನೇಶ್ವರಿ ದೇವಿಯ ಪುತ್ಥಳಿ ಮೆರವಣಿಗೆ ಕಾರ್ಯ ಕ್ರಮದ ಮೆರಗನ್ನು ಹೆಚ್ಚಿಸಿತು. ನಂದಿಧ್ವಜ, ವೀರಭದ್ರ ಕುಣಿತ, ಡೊಳ್ಳು ಕುಣಿತ, ನಾದ ಸ್ವರ, ಪೂಜಾ ಕುಣಿತ ಹಾಗೂ ಕಂಸಾಳೆ ತಂಡಗಳು, ಭುವನೇಶ್ವರಿ ದೇವಿ ಮೂರ್ತಿಯನ್ನು ಹೊತ್ತ ಅಲಂಕೃತ ತೆರೆದ ವಾಹನ, ವಿಜಯನಗರ ಸಾಮ್ರಾಜ್ಯದ ದರ್ಬಾರ್ ನೆನಪಿಸುವ ಸ್ಥಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು.

ಬಣ್ಣ ಬಣ್ಣದ ಹೂವುಗಳಿಂದ ಅಲಂಕಾರ ಮಾಡಿದ್ದ ನಗರ ಸಾರಿಗೆ ಸಂಸ್ಥೆಯ ಬಸ್ಸೊಂದು ಮೆರವಣಿಯೊಂ ದಿಗೆ ನಗರ ಬಸ್ ನಿಲ್ದಾಣದವರೆಗೂ ಸಾಗಿ ಗಮನ ಸೆಳೆಯಿತಲ್ಲದೆ ನೋಡುಗರ ಮೆಚ್ಚುಗೆ ಗಳಿಸಿತು. ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಹೊರಟ ಮೆರವಣಿಗೆ ಕೆ.ಆರ್.ವೃತ್ತ, ಸಯ್ಯಾಜಿ ರಾವ್ ರಸ್ತೆ, ಕೆ.ಆರ್. ಆಸ್ಪತ್ರೆ ವೃತ್ತ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮಾರ್ಗದಲ್ಲಿ ಸಾಗಿ ಪುರಭವನದ ಆವರಣ ತಲುಪಿತು.

ಸಮಾರಂಭದಲ್ಲಿ ಶಾಸಕರಾದ ಎಸ್.ಎ. ರಾಮದಾಸ್, ತನ್ವೀರ್ ಸೇಠ್, ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಉಪ ವಿಭಾಗಾಧಿಕಾರಿ ಶಿವೇಗೌಡ, ನಗರ ಪೊಲೀಸ್ ಆಯುಕ್ತ ಡಾ. ಎ.ಸುಬ್ರಹ್ಮಣ್ಯೇಶ್ವರ ರಾವ್, ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್, ತಹಶೀಲ್ದಾರ್ ಟಿ. ರಮೇಶ್‍ಬಾಬು, ಕನ್ನಡಪರ ಹೋರಾಟಗಾರ ರಾದ ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Translate »