ಮೈಸೂರು:ನ್ಯಾಯಾಲಯದ ಆದೇಶದಂತೆ ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ಖಾಸಗಿ ಭೂಮಿಯಲ್ಲಿ ತಲೆಯೆತ್ತಿದ್ದ ತಾತ್ಕಾಲಿಕ ಶೆಡ್ ಗಳನ್ನು ಪೊಲೀಸ್ ಬಿಗಿ ಬಂದೋಬಸ್ತ್‍ನಲ್ಲಿ ನ್ಯಾಯಾಲಯ ಸಿಬ್ಬಂದಿ ಶುಕ್ರವಾರ ತೆರವುಗೊಳಿಸಿದರು.
ಇಲ್ಲಿನ ವಾಟರ್ ಟ್ಯಾಂಕ್ ಸಮೀಪದ ದೊಡ್ಡ ತಮ್ಮಯ್ಯ ವೃತ್ತದ ಬಳಿಯ ಖಾಲಿ ನಿವೇಶನದಲ್ಲಿ ಶೆಡ್ ಮಾದರಿಯಲ್ಲಿ ನಿರ್ಮಿಸಿದ್ದ ಅಂಗಡಿ-ಮುಂಗಟ್ಟುಗಳನ್ನು ತೆರವುಗೊಳಿಸಲಾಯಿತು.
ಸದರಿ ನಿವೇಶನದ ಮಾಲೀಕತ್ವಕ್ಕೆ ಸಂಬಂಧಿಸಿ ದಂತೆ 2011ರಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದ ಪುಟ್ಟಲಕ್ಷ್ಮಿ ಹಾಗೂ ಕುಂಬಾರಕೊಪ್ಪಲಿನ ದೇವಣ್ಣ ಈ ಇಬ್ಬರ ನಡುವೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆದು ಅಂತಿಮವಾಗಿ ಪಾಲಹಳ್ಳಿ ಗ್ರಾಮದ ಪುಟ್ಟಲಕ್ಷ್ಮಿ ಪರವಾಗಿ ನ್ಯಾಯಾ ಲಯ ತೀರ್ಪು ನೀಡಿದೆ.
ಮೈಸೂರು 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾ ಧೀಶರ ಆದೇಶದಂತೆ ಭೂಮಿಯನ್ನು ಪುಟ್ಟಲಕ್ಷ್ಮೀ ಅವರ ಸ್ವಾಧೀನಕ್ಕೊಪ್ಪಿಸುವ ಸಲುವಾಗಿ ನ್ಯಾಯಾ ಲಯದ ಅಮಿನ್ ಟಿ.ಜಿ.ಶ್ರೀಪತಿ ನೇತೃತ್ವದ ಸಿಬ್ಬಂದಿ ತಂಡ ತೆರವು ಕಾರ್ಯಾಚರಣೆ ನಡೆಸಿತು. 13 ಗುಂಟೆಯ ಜಾಗದಲ್ಲಿ ತಲೆ ಎತ್ತಿದ್ದ ಅಂಗಡಿ-ಮುಂಗಟ್ಟುಗಳ ಶೆಡ್‍ಗಳನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸಲಾಯಿತು. ನಿವೇಶನದಲ್ಲಿ ನಿರ್ಮಿಸಲಾಗಿದ್ದ ಚಹಾ ಅಂಗಡಿ, ದಿನಸಿ ಅಂಗಡಿ ಸೇರಿದಂತೆ 16ಕ್ಕೂ ಹೆಚ್ಚು ವಿವಿಧ ರೀತಿಯ ಚಿಲ್ಲರೆ ಅಂಗಡಿಗಳನ್ನು ತೆರವುಗೊಳಿಸಿ, ತಡೆಗೋಡೆಯನ್ನು ಸಹ ನಿರ್ಮಿಸಲಾಯಿತು. ಈ ಮುನ್ನವೇ ತೆರವು ಕಾರ್ಯಾಚರಣೆ ನಡೆಯುವ ಬಗ್ಗೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಅಂಗಡಿ-ಮುಂಗಟ್ಟಿನವರು ಸರಕುಗಳನ್ನು ಈ ಮೊದಲೇ ಖಾಲಿ ಮಾಡಿಕೊಂಡಿದ್ದರು.
ಭಾರೀ ಬಂದೋಬಸ್ತ್: ಭಾರೀ ಪೊಲೀಸ್ ಬಂದೋ ಬಸ್ತ್‍ನಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಎನ್‍ಆರ್ ಉಪವಿಭಾಗದ ಎಸಿಪಿ ಸಿ.ಗೋಪಾಲ್, ವಿಜಯನಗರ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಬಿ.ಜಿ. ಕುಮಾರ್ ಅವರ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಒದಗಿಸಲಾಗಿತ್ತು. ಜೊತೆಗೆ ವಿವಿಧ ಠಾಣೆಗಳ ಪೊಲೀಸ್ ಸಿಬ್ಬಂದಿಯನ್ನೂ ಸ್ಥಳಕ್ಕೆ ನಿಯೋಜಿಸಿ ಬಂದೋಬಸ್ತ್ ಒದಗಿಸಲಾಗಿತ್ತು.
ಕೆಲಕಾಲ ಸಂಚಾರ ನಿರ್ಬಂಧ: ಸದರಿ ನಿವೇಶನವು ಹೈಟೆನ್ಷನ್ ಡಬಲ್ ರಸ್ತೆಯಲ್ಲಿದ್ದು, ನಿವೇಶನದ ಬಳಿಯಲ್ಲಿ ರಸ್ತೆ ಸಂಚಾರ ನಿರ್ಬಂಧಿಸಿ ಶೆಡ್‍ಗಳ ಬಿಡಿ ಭಾಗಗಳ ಲಾರಿಗಳಲ್ಲಿ ಸಾಗಿಸಲು ಅನುಕೂಲ ಮಾಡಿ ಕೊಡಲಾಯಿತು. ಈ ಮಾರ್ಗದಲ್ಲಿ ಬಂದ ಸಾರ್ವ ಜನಿಕರು ಇದರಿಂದ ಕೆಲಕಾಲ ಸುಗಮವಾಗಿ ಸಾಗಲಾಗದೇ ಪರದಾಡಬೇಕಾಯಿತು. ಅಲ್ಲದೆ, ತೆರವು ಕಾರ್ಯಾಚರಣೆ ವೀಕ್ಷಿಸಲು ಸ್ಥಳದಲ್ಲಿ ಭಾರೀ ಜನ ಸಂದಣಿಯೇ ಜಮಾಯಿಸಿತ್ತು. ಬುಧವಾರವಷ್ಟೇ ವಿಜಯನಗರದ 4ನೇ ಹಂತದಲ್ಲಿ ಪಾದಚಾರಿ ಮಾರ್ಗ ದಲ್ಲಿ ತಲೆ ಎತ್ತಿದ್ದ ಅನಧಿಕೃತ ಪೆಟ್ಟಿಗೆ ಅಂಗಡಿಗಳನ್ನು ಮುಡಾ ಅಧಿಕಾರಿಗಳು ತೆರವುಗೊಳಿಸಿದ್ದರು. ಕೆಲ ಸಾರ್ವಜನಿಕರು ಇದು ಕೂಡ ಮುಡಾದಿಂದ ನಡೆ ಯುತ್ತಿರುವ ಕಾರ್ಯಾಚರಣೆ ಎಂದು ಭಾವಿಸಿದರೆ, ಈ ಮಾರ್ಗದಲ್ಲಿ ಬಂದ ದ್ವಿಚಕ್ರ ಸವಾರರಲ್ಲಿ, ಹೆಲ್ಮೆಟ್ ಧರಿಸದವರು ಪೊಲೀಸರು ನೆರೆದಿದ್ದನ್ನು ಕಂಡು ಬಂದ ದಾರಿಯಲ್ಲೇ ಹಿಂತಿರುಗಿದ ಬೆಳೆವಣಿಗೆಯೂ ಆಯಿತು.