ಬಾಯಲ್ಲಿ ಮಾತ್ರ ಸುಂದರ ನಗರ, ಕಂಡಕಂಡಲ್ಲಿ ತಲೆಯೆತ್ತುತ್ತಿರುವ ಗೂಡಂಗಡಿ, ಬೀದಿಬದಿ ವ್ಯಾಪಾರ
ಮೈಸೂರು

ಬಾಯಲ್ಲಿ ಮಾತ್ರ ಸುಂದರ ನಗರ, ಕಂಡಕಂಡಲ್ಲಿ ತಲೆಯೆತ್ತುತ್ತಿರುವ ಗೂಡಂಗಡಿ, ಬೀದಿಬದಿ ವ್ಯಾಪಾರ

November 4, 2018

ಮೈಸೂರು: ಮೈಸೂರಿನ ವಿಜಯನಗರದಲ್ಲಿರುವ ಕೃಷ್ಣ ದೇವರಾಯ ವೃತ್ತ ಬೀದಿಬದಿ ವ್ಯಾಪಾರಿ ತಾಣವಾಗಿರುವುದು ವಿಷಾದನೀಯ. ಸುಂದರ ನಗರಿ ಮೈಸೂರಿನಲ್ಲಿ ಫುಟ್‍ಪಾತ್‍ಗಳೇ ಪ್ರಮುಖ ವ್ಯಾಪಾರಿ ಸ್ಥಳ. ಅದೆಷ್ಟು ಬಾರಿ ಫುಟ್‍ಪಾತ್ ಗೂಡಂಗಡಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ನಗರಪಾಲಿಕೆಯಲ್ಲೂ ಲೆಕ್ಕವಿಲ್ಲ?. ಆದರೂ ಫುಟ್‍ಪಾತ್‍ಗಳು ಪಾದಚಾರಿಗಳಿಗೆ ಮುಕ್ತವಾಗಿಲ್ಲ. ಹಾಗೆಯೇ ಬೀದಿ ಬದಿ ವ್ಯಾಪಾರವನ್ನೇ ಜೀವನಕ್ಕೆ ನೆಚ್ಚಿಕೊಂಡಿ ರುವ ಬಡ ವ್ಯಾಪಾರಿಗಳಿಗೂ ಸೂಕ್ತ ನೆಲೆ ಸಿಕ್ಕಿಲ್ಲ.

ಆದ್ದರಿಂದ ಒಂದೆಡೆ ತೆರವಾದರೆ ಮತ್ತೊಂದೆಡೆ ಗೂಡಂಗಡಿಗಳು, ತಳ್ಳುಗಾಡಿ ಗಳು ಕಾಣಿಸಿಕೊಳ್ಳುತ್ತಿವೆ. ಇದೊಂದು ಮುಗಿಯದ ಕತೆ-ವ್ಯಥೆಯಂತಾಗಿದೆ. ಇದೀಗ ಮಹನೀಯರ ಪ್ರತಿಮೆಗಳ ಬಳಿಗೂ ಆವರಿಸಿರುವುದು ಸಾರ್ವಜನಿಕರ ಆಕ್ರೋಶ ಹೆಚ್ಚಿಸಿದೆ.
ಅಂತೆಯೇ ವಿಜಯನಗರ ಹೈಟೆನ್ಷನ್ ಮಾರ್ಗದಡಿ ಫಾಸ್ಟ್ ಪುಡ್, ಪಾನಿಪುರಿ, ಗೋಬಿ ಮಂಚೂರಿ ಹೀಗೆ ಎಲ್ಲಾ ಚಾಟ್ಸ್‍ಗಳ ವ್ಯಾಪಾರ ಮುಂದುವರಿದಿದೆ. ನೆತ್ತಿ ಮೇಲೆ ಅಪಾಯವಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಸಾಲಾಗಿ ಗಾಡಿಗಳನ್ನು ನಿಲ್ಲಿಸಿಕೊಂಡಿರುವ ವ್ಯಾಪಾರಿಗಳಿಗಾಗಲೀ, ಅಲ್ಲಿಗೆ ಹೋಗುವ ಗ್ರಾಹಕರಿಗಾಗಲೀ ಅಪಾಯದ ಅರಿವಿಲ್ಲ. ಸಾರ್ವಜನಿಕ ಸೇವೆಯಲ್ಲಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಇದೊಂದು ಸಮಸ್ಯೆಯೇ ಅಲ್ಲ. ಹೈಟೆನ್ಷನ್ ಮಾರ್ಗದಡಿ ಮಾತ್ರವಲ್ಲದೆ, ಆಸುಪಾಸಿನ ಫುಟ್‍ಪಾತ್‍ಗಳಲ್ಲೂ ವ್ಯಾಪಾರ ಅವ್ಯಾಹತ ವಾಗಿ ಬೆಳೆದಿದೆ.

ಇದನ್ನು ನಿರ್ಲಕ್ಷಿಸಿದ ಪರಿಣಾಮ ಕೃಷ್ಣದೇವರಾಯ ವೃತ್ತಕ್ಕೂ ವ್ಯಾಪಿಸಿದೆ. ಕೃಷ್ಣ ದೇವರಾಯ ಪ್ರತಿಮೆ ಎದುರಿಗೆ ಫುಟ್‍ಪಾತ್‍ನಲ್ಲಿ ಸಂಜೆಯಾದರೆ ಚಾಟ್ಸ್ ಹಾಗೂ ಫಾಸ್ಟ್‍ಫುಡ್ ಅಂಗಡಿಗಳು ಸಾಲಾಗಿ ನಿಲ್ಲುತ್ತವೆ. ಗ್ರಾಹಕರು ತಮ್ಮ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಿರುತ್ತಾರೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗುವುದಷ್ಟೇ ಅಲ್ಲದೆ ವಾಯು ವಿಹಾರದ ನಡುವೆ ವೃತ್ತದ ಬಳಿ ವಿಶ್ರಾಂತಿ ಪಡೆಯುತ್ತಿದ್ದವರಿಗೂ ತೊಂದರೆಯಾಗಿದೆ. ಮಹನಿಯರ ಪ್ರತಿಮೆ ಹಾಗೂ ಅವರ ಸ್ಮರಣಾರ್ಥ ವೃತ್ತ ನಿರ್ಮಿಸಿದರಷ್ಟೇ ಸಾಲದು, ಅದನ್ನು ಸಂರಕ್ಷಿಸಿಕೊಳ್ಳಬೇಕು. ನೆಮ್ಮದಿ ತಾಣವಾಗಿ ಅಭಿವೃದ್ಧಿಪಡಿಸಬೇಕು. ಘನತೆ, ಶ್ರೇಷ್ಟತೆಯನ್ನು ಕಾಯ್ದುಕೊಳ್ಳಬೇಕು. ಆದರೆ ಕೃಷ್ಣ ದೇವರಾಯ ವೃತ್ತ ವ್ಯಾಪಾರ ಕೇಂದ್ರವಾಗು ತ್ತಿದೆ. ಫಾಸ್ಟ್‍ಫುಡ್, ಚಾಟ್ಸ್ ಅಂಗಡಿಗಳು ನೆಲೆಯೂರಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರ ಜೊತೆಗೆ ವೃತ್ತದ ಅಂದವೂ ಹಾಳಾಗುತ್ತದೆ. ಎಲ್ಲೆಂದರಲ್ಲಿ ತ್ಯಾಜ್ಯದ ರಾಶಿ ಬಿದ್ದು, ಸ್ವಚ್ಛತೆ ಕಣ್ಮರೆ ಯಾಗುತ್ತದೆ. ಮುಂದೊಂದು ದಿನ ವೃತ್ತಕ್ಕೂ ಹಾನಿಯಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಜೀವನಕ್ಕಾಗಿ ಬೀದಿ ಬದಿ ವ್ಯಾಪಾರ ನಂಬಿರುವವರಿಗೆ ಸೂಕ್ತ ನೆಲೆ ಕಲ್ಪಿಸಿಕೊಡಬೇಕು. ಆದರೆ ದಿನೇ ದಿನೆ ತಳ್ಳುಗಾಡಿಗಳ ಸಂಖ್ಯೆ ಹೆಚ್ಚುತ್ತಿದೆ. ಆರಂಭದಲ್ಲಿ ವಾಟರ್ ಟ್ಯಾಂಕ್ ರಸ್ತೆ ಫುಟ್‍ಪಾತ್‍ನಲ್ಲಿ ನಾಲ್ಕೈದು ಗಾಡಿಗಳಿದ್ದವು. ಅಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದ ಕಾರಣ ಅವರನ್ನು ತೆರವುಗೊಳಿಸಲಾಯಿತು.

ಬಳಿಕ ಪಕ್ಕದಲ್ಲೇ ಹೈಟೆನ್ಷನ್ ಲೇನ್ ಕೆಳಭಾಗದಲ್ಲಿ ವ್ಯಾಪಾರ ಆರಂಭಿಸಿದರು. ಅಲ್ಲಿಂದಲೂ ತೆರವು ಮಾಡುವ ಪ್ರಯತ್ನ ಒಂದೆರಡು ಬಾರಿ ನಡೆಯಿತು. ಆದರೆ ಪರ್ಯಾಯ ವ್ಯವಸ್ಥೆಯಿಲ್ಲದ ಕಾರಣ ವ್ಯಾಪಾರಿಗಳು ಅಲ್ಲಿಯೇ ಮುಂದುವರಿಸಿದರು. ಈಗ ಚಾಟ್ಸ್ ಅಂಗಡಿಗಳ ಸಂಖ್ಯೆ ಹೆಚ್ಚಾಗಿದೆ. ಪರಿಣಾಮ ಕೃಷ್ಣ ದೇವರಾಯ ವೃತ್ತವೂ ವ್ಯಾಪಾರಿ ತಾಣವಾಗಿ ಬದಲಾಗುತ್ತಿದೆ.

ವೃತ್ತವನ್ನು ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ನಗರ ಪಾಲಿಕೆ ಕೂಡಲೇ ಕ್ರಮ ಕೈಗೊಳ್ಳಬೇಕು. ಜೊತೆಗೆ ಸಂಕಷ್ಟದಲ್ಲಿರುವ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Translate »