ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಗೆ ಮೈಸೂರಲ್ಲಿ ಅದ್ಧೂರಿ ಅಭಿನಂದನೆ
ಮೈಸೂರು

ಡಾ. ಡಿ.ವೀರೇಂದ್ರ ಹೆಗ್ಗಡೆಯವರಿಗೆ ಮೈಸೂರಲ್ಲಿ ಅದ್ಧೂರಿ ಅಭಿನಂದನೆ

November 3, 2018
  • ವಿವಿಧ  ಸಂಘ-ಸಂಸ್ಥೆಗಳಿಂದಲೂ ಗೌರವ ಸಮರ್ಪಣೆ
  • ಧರ್ಮಸ್ಥಳ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ, ವಿವಿಧ ಕೇಂದ್ರಗಳಲ್ಲಿ  ಸೇವೆ ಕಲ್ಪಿಸುವ ಕ್ಷೇತ್ರ
  • 93 ಕೆರೆಗಳ ಅಭಿವೃದ್ಧಿಗೆ ಯೋಜನೆ

ಮೈಸೂರು: -ಪ್ರಸಿದ್ಧ ಶ್ರೀ ಕ್ಷೇತ್ರ ಧರ್ಮಸ್ಥಳದ ಪಟ್ಟಾಧಿಕಾರಿ ಯಾಗಿ 50 ವರ್ಷ ಸಂದ ಹಿನ್ನೆಲೆಯಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನ ದಲ್ಲಿ ಅಪಾರ ಸಂಖ್ಯೆಯ ಭಕ್ತರ ಸಮ್ಮುಖ ದಲ್ಲಿ ಶುಕ್ರವಾರ ಧರ್ಮಾಧಿಕಾರಿ ಪದ್ಮ ವಿಭೂಷಣ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಅದ್ಧೂರಿ ಯಾಗಿ ಅಭಿನಂದಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮೈಸೂರು ನಗರದ ಮಹಾ ಜನ ತೆಯ ಸಹಭಾಗಿತ್ವದಲ್ಲಿ ರಚಿಸಲಾಗಿದ್ದ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಅಧಿಕಾರ ವಹಿಸಿ ಕೊಂಡು 50 ವರ್ಷ ಯಶಸ್ವಿಯಾಗಿ ಪೂರೈ ಸಿರುವ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಅಭಿನಂದನಾ ಸಮಿತಿಯೊಂದಿಗೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಗೌರವ ಸಮರ್ಪಿಸಿದರು. ಕಾರ್ಯಕ್ರಮದ ಹಿನ್ನೆಲೆ ಯಲ್ಲಿ ಮಹಾರಾಜ ಕಾಲೇಜು ಮೈದಾನದ ಪ್ರವೇಶ ದ್ವಾರದಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು.

ಪೂಜಾಕುಣಿತ, ವೀರಗಾಸೆ ಕುಣಿತ, ಮಂಗಳ ವಾಧ್ಯ, ಚಂಡೆಮದ್ದಳೆಯೊಂದಿಗೆ ನೂರೊಂದು ಕಳಸ ಹೊತ್ತ ಮಹಿಳೆಯರು ಡಾ.ವೀರೇಂದ್ರ ಹೆಗ್ಗಡೆ ಹಾಗೂ ಗಾವಡಗೆರೆಯ  ಗುರು ಲಿಂಗ ಜಂಗಮದೇವ ಮಠದ ಶ್ರೀ ನಟ ರಾಜ ಸ್ವಾಮೀಜಿ ಅವರನ್ನು ವೇದಿಕೆಗೆ ಮೆರ ವಣಿಗೆಯಲ್ಲಿ ಕರೆದೊಯ್ಯಲಾಯಿತು. ವೇದಿಕೆಗೆ ಧರ್ಮಾಧಿಕಾರಿಗಳು ಆಗಮಿಸುತ್ತಿದ್ದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ಹಾಗೂ ಧರ್ಮಸ್ಥಳ ಮಹಿಳಾ ಸ್ವಸಹಾಯ ಸಂಘ ಗಳ ಸದಸ್ಯರು ಎದ್ದು ನಿಂತು ಭಕ್ತಿಪೂರ್ವಕ ವಾಗಿ ನಮಿಸಿದರು.

ವಿಧಾನ ಪರಿಷತ್ ಸದಸ್ಯರೂ ಆದ ಸಂದೇಶ್ ನಾಗರಾಜ್, ಪ್ರಮತಿ ಶಾಲೆ ಅಧ್ಯಕ್ಷ ಹೆಚ್.ವಿ.ರಾಜೀವ್ ನೇತೃತ್ವದ ಅಭಿನಂದನಾ ಸಮಿತಿಯ ವತಿಯಿಂದ ಸಚಿವರುಗಳಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಎಲ್.ನಾಗೇಂದ್ರ, ಸಂಸದ ಪ್ರತಾಪ ಸಿಂಹ, ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಸೇರಿದಂತೆ ಇನ್ನಿತರರು  ಡಾ.ಡಿ.ವೀರೇಂದ್ರ ಹೆಗಡೆ ಅವರಿಗೆ ಮೈಸೂರು ಪೇಟ, ಶಲ್ಯ, ಫಲತಾಂಬೂಲ ಮತ್ತು  ಗಣಪತಿ ವಿಗ್ರಹ ನೀಡಿ ಸನ್ಮಾನಿಸಿ ಗೌರವಿಸಿದರು.

ಅಭಿನಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಡಾ.ಡಿ.ವೀರೇಂದ್ರ ಹೆಗಡೆ ಅವರು, ಧರ್ಮಸ್ಥಳ ಶ್ರೀ ಕ್ಷೇತ್ರ ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೆ ಶಿಕ್ಷಣ, ಕೃಷಿ, ಮಹಿಳಾ ಸಬಲೀಕರಣ ಹಾಗೂ ಸ್ವಾವಲಂಬನೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ನೀಡುತ್ತಾ ಬಂದಿದೆ. ಕೃಷಿ ಕ್ಷೇತ್ರದಲ್ಲಿ ರೈತರ ಏಳಿಗೆಗೆ ಆದ್ಯತೆ ನೀಡಲಾಗುತ್ತಿದೆ. ಈ ನಡುವೆ ವಿವಿಧ ಕಾರಣದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಆತ್ಮಹತ್ಯೆಗೆ ಶರಣಾಗುವ ರೈತ ಕ್ಷಮೆಗೆ ಅರ್ಹನಲ್ಲ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಬಗ್ಗೆ ಚಿಂತನೆ ಮಾಡಬಾರದು. ದೃಢ ವಿಶ್ವಾಸದಿಂದ ಬದುಕು ನಡೆಸಬೇಕು. ಈಗಾಗಲೇ ಧರ್ಮಸ್ಥಳ ಶ್ರೀ ಕ್ಷೇತ್ರದ ವತಿಯಿಂದ 93 ಕೆರೆಗಳನ್ನು ಅಭಿವೃದ್ಧಿಪಡಿಸಲು ಕಾರ್ಯಕ್ರಮ ರೂಪಿಸಿದ್ದೇವೆ. ಪ್ರಗತಿ ರಕ್ಷಾ ಕವಚ ಯೋಜನೆಯಡಿ ಸಾಲಕ್ಕೆ ಎಲ್‍ಐಸಿಯಿಂದ ವಿಮೆ ಮಾಡಿಸಲಾಗುತ್ತಿದೆ ಎಂದರು.

ಮೈಸೂರಿನ ಪಾಲು 350 ಕೋಟಿ: ಮೈಸೂರು ಜಿಲ್ಲೆಯಲ್ಲಿ ಧರ್ಮಸ್ಥಳ ಸಂಘದ ಮಹಿಳಾ ಸದಸ್ಯರು 10 ರೂ.ಗಳಂತೆ 51 ಕೋಟಿ ರೂ ಉಳಿತಾಯ ಮಾಡಿದ್ದಾರೆ. ಇದುವರೆಗೆ ರಾಜ್ಯದಲ್ಲಿ 12 ಸಾವಿರ ಕೋಟಿ ರೂ.ಗಳ ಉಳಿತಾಯವಾಗಿದೆ. ಇದರೊಂದಿಗೆ ಸಂಸ್ಥೆಯ ವತಿಯಿಂದ  ರಾಜ್ಯಕ್ಕೆ 10 ಸಾವಿರ ಕೋಟಿ ರೂ.ಗಳ ಯೋಜನೆ ಕೊಟ್ಟಿದ್ದೇವೆ. ಅದರಲ್ಲಿಯೂ ಮೈಸೂರಿಗೆ 350 ಕೋಟಿ ರೂ ಗಳ ಯೋಜನೆ ನೀಡಿದ್ದೇವೆ ಎಂದು ಹೇಳಿದರು.

ನಮ್ಮೊಳಗಿನ ದೇವರು ಮತ್ತು ರಾಕ್ಷಸರು: ನಮ್ಮೊಳಗೆ ದೇವರು ಮತ್ತು ರಾಕ್ಷಸ ಇಬ್ಬರೂ ಇದ್ದಾರೆ. ನಮ್ಮೊಳಗಿನ ಎಡಭಾಗದಲ್ಲಿರುವ ರಾಕ್ಷಸರು ಏಯ್ ಬಿಟ್ಟು ಬಿಡು ಇದೆಲ್ಲ ಅನ್ನುತ್ತದೆ. ಅದೇ ಬಲಭಾಗದಲ್ಲಿರುವ ದೇವತೆಗಳು ಜನಪರವಾದ ಕಾರ್ಯಕ್ರಮ ಮಾಡುವಂತೆ ಉತ್ಸಾಹ ತುಂಬುತ್ತದೆ. ಶ್ರೀ ಕ್ಷೇತ್ರದ ಪರಂಪರೆಯನ್ನು ಮುನ್ನಡೆಸಲು ಅನೇಕ ಕಾರ್ಯಕ್ರಮಗಳನ್ನು ಸರಿಯಾದ ಸಮಯಕ್ಕೆ ಮಾಡುತ್ತಿದ್ದೇನೆ. ಐವತ್ತು ವರ್ಷಗಳ ಹಿಂದೆ ಮೈಸೂರು ಧಾರಾಳತನಕ್ಕೆ ಹೆಸರುವಾಸಿಯಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಊಟ, ಬಟ್ಟೆಗೂ ಕಷ್ಟವಿದ್ದವು. ಸ್ವಾತಂತ್ರ್ಯ ನಂತರ ದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಈಗ ಆ ಕಷ್ಟಗಳಿಲ್ಲ. ಸರ್ಕಾರ ರೂಪಿಸುವ ಕಾರ್ಯಕ್ರಮಗಳನ್ನು ಜನ ಸೋಮಾರಿತನ ಬಿಟ್ಟು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ವ ಸಹಾಯ ಸಂಘದ ಪ್ರತಿನಿಧಿಗಳು ಪ್ರಗತಿಯ ಗುರಿ ಇಟ್ಟುಕೊಳ್ಳಬೇಕು. ಮಹಿಳೆಯರು ಮಕ್ಕಳ ಶಿಕ್ಷಣ, ಸ್ವಚ್ಛತೆ, ಸೀರೆ, ಒಡವೆ ಕೊಳ್ಳುವ ಉತ್ತಮ ಬದುಕು ನಡೆಸುವ ಕನಸು ಕಾಣಬೇಕು. ಗ್ರಾಮ ವಿಕಾಸದ ಗುರಿಯೂ ಇರಬೇಕು. ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಸದ್ವಿನಿಯೋಗ ಮಾಡಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು. ಹಬ್ಬ ಅಂದರೆ ಇವತ್ತು ಖರೀದಿ ಮಾಡುವುದು ಎಂಬಂತಾಗಿದೆ. ಪತ್ರಿಕೆಗಳಲ್ಲಿ ಯಾವ ಮಾದರಿಯ ಹೊಸ ಹೊಸ ವಸ್ತುಗಳು ಬಂದಿವೆ ಎಂಬ ಜಾಹೀರಾತುಗಳೇ ರಾರಾಜಿಸುತ್ತಿವೆ. ಹಬ್ಬ ಮನೋರಂಜನೆಯೂ ಅಲ್ಲ. ಕಷ್ಟಗಳ ದೂರ ಮಾಡಿ ಬದುಕಿನಲ್ಲಿ ಸಂತೋಷ, ನೆಮ್ಮದಿ ಮತ್ತು ಆರೋಗ್ಯ ಕೊಡುವಂತೆ ಪ್ರಾರ್ಥಿಸಲು ಹಬ್ಬಗಳನ್ನು ಮಾಡುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸಮಾರಂಭ ಉದ್ಘಾಟಿಸಿದರು. ಸಚಿವ ಸಾ.ರಾ.ಮಹೇಶ್ ಜಂಟಿ ಬಾಧ್ಯತಾ ಸಂಘಗಳಿಗೆ ಪ್ರಗತಿನಿಧಿ ಮಂಜೂರಾತಿ ಪತ್ರ ನೀಡಿದರು.  ಸಂಸದ ಪ್ರತಾಪ್ ಸಿಂಹ ನೂತನ ಒಕ್ಕೂಟಗಳಿಗೆ ಜವಾಬ್ದಾರಿ ಹಸ್ತಾಂತರ ಮಾಡಿದರು. ಎಲ್.ನಾಗೇಂದ್ರ ಅವರು ಹಾಲು ಉತ್ಪಾದಕರ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದರು. ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ ಸೋಲಾರ್ ಘಟಕಗಳಿಗೆ ಅನುದಾನ ವಿತರಿಸಿದರು. ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಬೆಂಗಳೂರಿನ ಯುಬಿಐ ಫೀಲ್ಡ್ ಜನರಲ್ ಮ್ಯಾನೇಜರ್ ಎಸ್.ಎನ್.ಕೌಶಿಕ್, ಬಿಜೆಪಿ ಮುಖಂಡ ಎಚ್.ವಿ.ರಾಜೀವ್ ಮುಂತಾದವರು ಉಪಸ್ಥಿತರಿದ್ದರು.

Translate »