ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಪ್ರತಿಷ್ಠೆಯಾಗಿರುವ ಮೂರು ಲೋಕಸಭೆ, ಎರಡು ವಿಧಾನ ಸಭೆ-ಒಟ್ಟು ಐದು ಕ್ಷೇತ್ರಗಳ ಉಪಚುನಾವಣೆಗೆ ನಾಳೆ ಮತದಾನ ನಡೆಯಲಿದೆ.
ಈ ಉಪಚುನಾವಣೆಯಲ್ಲಿ ಮೇಲುಗೈ ಸಾಧಿಸಿದರೆ ಮೈತ್ರಿ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ. ಪ್ರತಿಪಕ್ಷ ಬಿಜೆಪಿ ಉಪಟಳಕ್ಕೆ ತೆರೆ ಎಳೆಯಬಹುದು ಎಂಬ ಲೆಕ್ಕಾಚಾರ ಕುಮಾರಸ್ವಾಮಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರದು. ಇನ್ನೊಂದೆಡೆ, ಉಪಚುನಾವಣೆಯಲ್ಲಿ ಮೇಲುಗೈ ಸಾಧಿಸಿದರೆ ಅಲ್ಪ ಅಂತರ ದಲ್ಲಿ ಕೈತಪ್ಪಿರುವ ಅಧಿಕಾರವನ್ನು ಮತ್ತೆ ಹಿಡಿಯಬಹುದೆಂಬ ಲೆಕ್ಕಾಚಾರ ಬಿಜೆಪಿಯದ್ದಾಗಿದೆ. ಇದಕ್ಕಾಗಿ ಉಭಯ ಪಕ್ಷಗಳ ನಾಯಕರು ಮಹತ್ವದ್ದಲ್ಲದಿದ್ದರೂ ಚುನಾ ವಣೆಯನ್ನು ಅಧಿಕಾರ ಉಳಿಸಿಕೊಳ್ಳುವ ಮತ್ತು ಉರುಳಿಸುವ ಅಸ್ತ್ರವಾಗಿ ಬಳಸಿಕೊಂಡಿ ದ್ದಾರೆ. ಮಂಡ್ಯ, ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ಕೇವಲ 5 ತಿಂಗಳ ಅವಧಿಗೆ ಮಾತ್ರ ಮತದಾರರು ತಮ್ಮ ಅಭ್ಯರ್ಥಿ ಯಾರೆಂಬುದನ್ನು ನಿರ್ಧರಿಸಲಿದ್ದಾರೆ.
ರಾಮನಗರ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಎಲ್ಲಾ ಐದು ಕ್ಷೇತ್ರಗಳಿಗೆ ನಾಳೆ ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವ ಕಾಶ ನೀಡಲಾಗಿದೆ. ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಪ್ರತಿಪಕ್ಷ ಬಿಜೆಪಿ ವತಿಯಿಂದ ಕಣಕ್ಕಿಳಿದಿರುವ ಎಲ್ಲಾ ಉಮೇದುವಾರರು ರಾಜಕೀಯ ಕುಟುಂಬ ದಿಂದ ಬಂದವರೇ ಆಗಿದ್ದಾರೆ. ಮಹತ್ವದ ಬೆಳವಣಿಗೆಯಲ್ಲಿ ರಾಮನಗರ ವಿಧಾನ ಸಭಾ ಕ್ಷೇತ್ರದ ಸ್ಪರ್ಧಾಕಣದಲ್ಲಿದ್ದ ಬಿಜೆಪಿ ಅಭ್ಯರ್ಥಿ ಮತದಾನಕ್ಕೆ ಮುನ್ನವೇ ನಿವೃತ್ತಿ ಘೋಷಿಸಿಕೊಂಡಿದ್ದರೂ ಚುನಾವಣಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಉಳಿದಿದ್ದಾರೆ.
ರಾಜಕೀಯವಾಗಿ ಪ್ರತಿಷ್ಠೆಯಾಗಿರುವ ಉಪಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅತ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಚುನಾ ವಣೆ ನಡೆಯುತ್ತಿರುವ ಏಳು ಜಿಲ್ಲೆಗಳಿಗೆ ಕೇಂದ್ರ ಪಡೆ ಮತ್ತು ಇತರೆ ಜಿಲ್ಲೆಗಳ ಪೊಲೀಸ ರನ್ನು ನಿಯೋಜಿಸಲಾಗಿದೆ. ಮತದಾನಕ್ಕೆ ಒಟ್ಟು 6,453 ಮತಗಟ್ಟೆಗಳನ್ನು ಸ್ಥಾಪಿಸ ಲಾಗಿದೆ, ಒಟ್ಟಾರೆ 54,54,275 ಮತ ದಾರರು ಮತಚಲಾವಣೆ ಹಕ್ಕು ಹೊಂದಿ ದ್ದಾರೆ. ಅಗತ್ಯ ಪ್ರಮಾಣದ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್‍ಗಳನ್ನು ಪೂರೈಸಲಾಗಿದೆ. ಸ್ಪರ್ಧಾ ಕಣದಲ್ಲಿ ಒಟ್ಟು 31 ಅಭ್ಯರ್ಥಿಗಳಿದ್ದು, ಅದರಲ್ಲಿ ಬಳ್ಳಾರಿ ಬಿಜೆಪಿ ಅಭ್ಯರ್ಥಿ ಕೆ.ಶಾಂತಾ ಹಾಗೂ ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಕಣ ದಲ್ಲಿರುವ ಮಹಿಳಾ ಅಭ್ಯರ್ಥಿಗಳು.
ನವೆಂಬರ್ 6ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟ ವಾಗಲಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಮತ ಎಣಿಕೆ ಮಂಡ್ಯದ ಸರ್ಕಾರಿ ಕಾಲೇಜಿ ನಲ್ಲಿ ನಡೆಯಲಿದ್ದು, ಶಿವಮೊಗ್ಗ ಕ್ಷೇತ್ರದ ಮತ ಎಣಿಕೆ ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜು ಆವರಣದಲ್ಲಿ, ಬಳ್ಳಾರಿ ಕ್ಷೇತ್ರದ ಮತ ಎಣಿಕೆ ಬಳ್ಳಾರಿಯಲ್ಲಿನ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜು ಆವರಣ ದಲ್ಲಿ ನಡೆಯಲಿದೆ. ರಾಮನಗರ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಹಾಗೂ ಜಮಖಂಡಿ ಕ್ಷೇತ್ರದ ಮತ ಎಣಿಕೆ ಜಮಖಂಡಿಯ ಮಿನಿ ವಿಧಾನಸೌಧದಲ್ಲಿ ನಡೆಯಲಿದೆ.
ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಸರ್ಕಾರಿ ರಜೆ
ಬೆಂಗಳೂರು: ಉಪ ಚುನಾವಣೆಯ ಮತದಾನ ನಡೆಯುತ್ತಿರುವ ಐದು ಕ್ಷೇತ್ರಗಳ ವ್ಯಾಪ್ತಿಯ ಸರ್ಕಾರಿ ನೌಕರರು ಸೇರಿದಂತೆ ಎಲ್ಲ ನೌಕರರಿಗೂ ಶನಿವಾರ ರಜೆ ಘೋಷಿಸಿ ಸರ್ಕಾರಿ ಆದೇಶ ಹೊರಡಿಸಲಾಗಿದೆ.
ಮಂಡ್ಯ, ಬಳ್ಳಾರಿ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರ, ಜಮಖಂಡಿ, ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಶನಿವಾರ ಮತದಾನ ನಡೆಯಲಿದೆ. ಈ ಕ್ಷೇತ್ರಗಳ ವ್ಯಾಪ್ತಿಯ ಶಾಲಾ-ಕಾಲೇಜು, ಅನುದಾನಿತ ಶಿಕ್ಷಣ ಸಂಸ್ಥೆ ಹಾಗೂ ಸರ್ಕಾರಿ ನೌಕರರಿಗೆ ರಜೆ ನೀಡಲಾಗಿದೆ. ಕ್ಷೇತ್ರಗಳ ವ್ಯಾಪ್ತಿ ಹೊರಗೆ ಕೆಲಸ ನಿರ್ವಹಿಸುವ ಉಪಚುನಾವಣಾ ಕ್ಷೇತ್ರಗಳಲ್ಲಿನ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೂ ರಜೆ ನೀಡಲಾಗಿದೆ ಎಂದು ಸಚಿವಾಲಯ ಪ್ರಕಟಣೆ ತಿಳಿಸಿದೆ.