ಬೆಂಗಳೂರು: ರಾಜ್ಯದ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಪಕ್ಷಗಳು ಮೇಲುಗೈ ಸಾಧಿಸಲಿದ್ದು, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಜಯಗಳಿಸಲಿದ್ದಾರೆ ಎಂದು ಗುಪ್ತಚರ ಇಲಾಖೆಯು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ವರದಿ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.
ಮಂಡ್ಯ ಲೋಕಸಭೆ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ನಿರಾಯಾಸವಾಗಿ ಗೆಲುವು ಸಾಧಿಸಲಿದೆ. ಅದೇ ರೀತಿ ಬಳ್ಳಾರಿ ಲೋಕಸಭೆ ಮತ್ತು ಜಮ ಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದ್ದು, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಬಿಜೆಪಿ ಅಭ್ಯರ್ಥಿ, ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಯಡಿಯೂರಪ್ಪ ಅವರು ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಶಿವಮೊಗ್ಗ ಕ್ಷೇತ್ರದ ಸಂಸದ ಸ್ಥಾನಕ್ಕೆ ಮತ್ತು ಶ್ರೀರಾಮುಲು ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಳ್ಳಾರಿ ಕ್ಷೇತ್ರದ ಸಂಸದ ಸ್ಥಾನಕ್ಕೆ, ಸಿ.ಎಸ್. ಪುಟ್ಟರಾಜು ಶಾಸಕರಾಗಿ ಆಯ್ಕೆಯಾದ ಕಾರಣ ಮಂಡ್ಯ ಲೋಕಸಭೆ ಕ್ಷೇತ್ರದ ಸಂಸದ ಸ್ಥಾನಕ್ಕೆ ಹಾಗೂ ಹೆಚ್.ಡಿ.ಕುಮಾರಸ್ವಾಮಿಯವರು 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಕಾರಣ ರಾಮನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಜಮಖಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿದ್ದುನ್ಯಾಮೇಗೌಡ ಅಪ ಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಆ ಕ್ಷೇತ್ರಕ್ಕೆ ಉಪ ಚುನಾವಣೆ ಶುಕ್ರವಾರ ನಡೆದಿತ್ತು.
ಈ ಉಪ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿ ಎದುರಿಸಿದ್ದವು. ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಶ್ರೀರಾಮುಲು ಅವರ ಸಹೋದರಿ ಮಾಜಿ ಸಂಸದೆ ಶಾಂತ ಅವರು ಸ್ಪರ್ಧಿಸಿದ್ದರೆ, ಕಾಂಗ್ರೆಸ್‍ನಿಂದ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಸ್ಪರ್ಧಿಸಿದ್ದರು. ಈ ಕ್ಷೇತ್ರದಲ್ಲಿ ಉಗ್ರಪ್ಪ ಗೆಲುವು ಸಾಧಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘ ವೇಂದ್ರ ಬಿಜೆಪಿಯಿಂದ ಸ್ಪರ್ಧಿಸಿದ್ದರೆ, ಮೈತ್ರಿ ಪಕ್ಷಗಳ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಸ್ಪರ್ಧಿಸಿದ್ದು, ಈ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನಡೆದಿದೆ. ಅಂತಿಮವಾಗಿ ರಾಘವೇಂದ್ರ ಅವರು ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಬಹುದು ಎಂದು ವರದಿ ಹೇಳಿದೆ.
ರಾಮನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಅವರು ಚುನಾವಣೆಗೆ 2 ದಿನಗಳ ಮುನ್ನ ಸ್ಪರ್ಧೆಯಿಂದ ಹಿಂದೆ ಸರಿದು ಕಾಂಗ್ರೆಸ್ ಸೇರಿರುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ನಿರಾಯಾಸವಾಗಿ ಗೆಲುವು ಸಾಧಿಸಲಿದ್ದಾರೆ. ಅದೇ ರೀತಿ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್‍ನ ಭದ್ರಕೋಟೆಯಾಗಿದ್ದು, ಆ ಪಕ್ಷದ ಜೊತೆ ಕಾಂಗ್ರೆಸ್ ಸಹ ಕೈಜೋಡಿಸಿರುವುದರಿಂದ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಅವರು ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ವಿರುದ್ಧ ಗೆಲುವು ಸಾಧಿಸಲಿದ್ದಾರೆ.
ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ ಮತ್ತು ಕಾಂಗ್ರೆಸ್‍ನ ಆನಂದ್ ನ್ಯಾಮೇಗೌಡ ವಿರುದ್ಧ ತೀವ್ರ ಪೈಪೋಟಿ ನಡೆದಿದ್ದರೂ, ಅಂತಿಮವಾಗಿ ಆನಂದ್ ನ್ಯಾಮೇಗೌಡ ಗೆಲುವು ಸಾಧಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಒಟ್ಟಾರೆ ಈ ಉಪಚುನಾವಣೆ ಪರಿಣಾಮವಾಗಿ ಬಿಜೆಪಿ ಒಂದು ಸಂಸದ ಸ್ಥಾನವನ್ನು ಕಳೆದುಕೊಂಡರೆ, ಕಾಂಗ್ರೆಸ್‍ನ ವಿ.ಎಸ್.ಉಗ್ರಪ್ಪ ಸಂಸತ್ ಪ್ರವೇಶಿಸಲಿದ್ದಾರೆ. ಮಂಡ್ಯ ಮತ್ತು ರಾಮನಗರವನ್ನು ಜೆಡಿಎಸ್ ಉಳಿಸಿಕೊಂಡರೆ, ಜಮಖಂಡಿ ಕ್ಷೇತ್ರವನ್ನು ಕಾಂಗ್ರೆಸ್ ಉಳಿಸಿಕೊಳ್ಳಲಿದೆ ಎಂದು ವರದಿ ತಿಳಿಸಿದ್ದು, ಮತ ಎಣಿಕೆ ಕಾರ್ಯ ಮಂಗಳ ವಾರ ನಡೆಯಲಿದ್ದು, ಅಂದು ಸ್ಪಷ್ಟ ಚಿತ್ರಣ ದೊರೆಯಲಿದೆ.