ತರಕಾರಿ ಬೆಲೆ ದಿಢೀರ್ ಕುಸಿತ: ರೈತರಿಂದ ಪ್ರತಿಭಟನೆ
ಮೈಸೂರು

ತರಕಾರಿ ಬೆಲೆ ದಿಢೀರ್ ಕುಸಿತ: ರೈತರಿಂದ ಪ್ರತಿಭಟನೆ

November 5, 2018

ಮೈಸೂರು: ತರಕಾರಿ ಬೆಲೆ ದಿಢೀರ್ ಕುಸಿತ ವಾದ ಹಿನ್ನೆಲೆಯಲ್ಲಿ ಭಾನುವಾರ ರೈತರು ಬಂಡಿಪಾಳ್ಯದಲ್ಲಿರುವ ಎಪಿಎಂಸಿಯ ಉಪಕಚೇರಿಯ ಬಳಿ ರೈತರು ನೆಲಕ್ಕೆ ತರಕಾರಿ ಸುರಿದು ಪ್ರತಿಭಟನೆ ನಡೆಸಿದರು.

ಮೈಸೂರು ತಾಲೂಕು ಸೇರಿದಂತೆ ವಿವಿಧೆಡೆಗಳಿಂದ ಭಾನುವಾರ ತಾವು ಬೆಳೆದಿದ್ದ ತರಕಾರಿಗಳನ್ನು ಮಾರಾಟ ಮಾಡಲು ತಂದಿದ್ದ ನೂರಾರು ರೈತರು ಬೆಲೆ ಕುಸಿತದಿಂದ ಕಂಗೆಟ್ಟು ಪ್ರತಿಭಟನೆ ನಡೆಸಿದರು. ಕಳೆದ ಮೂರು ದಿನದ ಹಿಂದೆ ಇದ್ದ ಬೆಲೆಗೂ ಇಂದು ನಿಗದಿಯಾದ ಬೆಲೆಗೂ ಶೇ.50ರಿಂದ 60ರಷ್ಟು ಕಡಿಮೆಯಾಗಿದ್ದರಿಂದ ರೊಚ್ಚಿಗೆದ್ದ ರೈತರು ಎಪಿಎಂಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಎಪಿಎಂಸಿ ಮಾರುಕಟ್ಟೆಗೆ ಭಾನುವಾರ ಬೀನ್ಸ್, ಟಮೋಟೊ, ಗೆಡ್ಡೆಕೋಸು, ಹೂಕೋಸು, ಸೌತೇಕಾಯಿ, ಪಡವಲಕಾಯಿ, ಸೋರೆ ಕಾಯಿ, ಕುಂಬಳಕಾಯಿ ಸೇರಿದಂತೆ ವಿವಿಧ ತರಕಾರಿಗಳನ್ನು ತಂದು ಮಾರಾಟಕ್ಕೆ ಮುಂದಾದ ರೈತರಿಗೆ ಭಾರಿ ನಿರಾಸೆಯುಂಟಾಯಿತು.

ಗುರುವಾರ, ಶುಕ್ರವಾರ ಇದ್ದ ಬೆಲೆಗಿಂತ ಅರ್ಧದಷ್ಟು ಬೆಲೆ ನಿಗದಿ ಮಾಡಿದ್ದರಿಂದ ಕಂಗೆಟ್ಟ ರೈತರು ಎಪಿಎಂಸಿ ಉಪ ಕಚೇರಿಗೆ ತೆರಳಿ ತಮ್ಮ ಅಳಲು ತೋಡಿಕೊಳ್ಳಲಾರಂಭಿಸಿದರು. ಆದರೆ ಸಂಬಂಧಪಟ್ಟವರು ಸ್ಪಂದಿಸದ ಕಾರಣ ರೊಚ್ಚಿಗೆದ್ದ ರೈತರು ಪ್ರತಿ ಭಟನೆ ಆರಂಭಿಸಿದರು. ದಳ್ಳಾಳಿಗಳು ಹಾಗೂ ಎಪಿಎಂಸಿ ಅಧಿಕಾರಿ ಗಳು ಮತ್ತು ಪ್ರತಿನಿಧಿಗಳು ಶಾಮೀಲಾಗಿ ರೈತರನ್ನು ಶೋಷಿಸುತ್ತಿ ದ್ದಾರೆ. ರೈತರು ಬೆಳೆದ ತರಕಾರಿಗಳಿಗೆ ಉದ್ದೇಶಪೂರ್ವಕವಾಗಿ ಕಡಿಮೆ ಬೆಲೆ ನಿಗದಿ ಮಾಡಲಾಗಿದೆ. ಮಾರುಕಟ್ಟೆಯ ಅಧಿಕಾರಿಗಳು ದಳ್ಳಾಳಿ ಗಳ ಮಾತನ್ನು ಕೇಳಿ ಬೆಲೆ ನಿಗದಿ ಮಾಡುತ್ತಿದ್ದಾರೆ. ಇದರಿಂದ ಬೆಳೆದ ಖರ್ಚಿಗಿಂತ ಸಾಗಾಟದ ವೆಚ್ಚವನ್ನು ಭರಿಸಲಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಎಪಿಎಂಸಿಯಲ್ಲಿ ದಳ್ಳಾಳಿಗಳ ಹಾವಳಿ ಮಿತಿ ಮೀರುತ್ತಿದೆ ಎಂದು ಪ್ರತಿಭಟನಾಕಾರರು

ಆರೋಪಿಸಿದರು. ಶುಕ್ರವಾರ ಒಂದು ಕೆಜಿ ಬೀನ್ಸ್‍ಗೆ 22 ರೂ. ಇತ್ತು. ಭಾನುವಾರ 15 ರೂ. ನಿಗದಿಯಾಗಿದೆ. ಗುಂಡು ಬದನೆಕಾಯಿಗೆ 17 ರೂ.ನಿಂದ 10 ರೂ.ಗೆ, ಪಡವಲಕಾಯಿ 20 ರೂ.ನಿಂದ 12 ರೂ.ಗೆ, ಸೌತೆಕಾಯಿ 14 ರೂ.ನಿಂದ 5 ರೂ.ಗೆ, ಹಸಿ ಮೆಣಸಿನ ಕಾಯಿ 20 ರೂ.ನಿಂದ 15 ರೂ.ಗೆ, ಚೊಟ್ಟು ಬೀನ್ಸ್ ಬೆಲೆ 30 ರೂ.ನಿಂದ 12 ರೂ.ಗೆ ಕುಸಿದಿದೆ. ಟಮೋಟೊ ಮಾರುಕಟ್ಟೆಯಲ್ಲಿ 10ರಿಂದ 12 ರೂ.ಗೆ ಮಾರಾಟವಾಗುತ್ತಿದ್ದರೆ, ಎಪಿಎಂಸಿಯಲ್ಲಿ ಕೆಜಿಗೆ 1, 2 ರೂ. ನಿಗದಿ ಮಾಡಲಾಗಿದೆ ಎಂದು ದೂರಿದರು.

ಮಾರುಕಟ್ಟೆಯಲ್ಲಿ ರೈತರ ಬೆಳೆಗೆ ಬೆಲೆ ನಿಗದಿಗೊಳಿಸಿದ ನಂತರ ಅವರಿಗೆ ದೊರೆತ ಬೆಲೆಯ ಚೀಟಿಯನ್ನು ನೀಡುತ್ತಾರೆ. ಮಾರುಕಟ್ಟೆಯಿಂದ ನೀಡುವ ಅಧಿಕೃತ ಬಿಲ್ ನೀಡದೆ, ಯಾವುದೋ ನಖಲಿ ಬಿಲ್ ನೀಡಿ ರೈತರನ್ನು ವಂಚಿಸುತ್ತಿದ್ದಾರೆ. ಅಲ್ಲದೆ ಕಮಿಷನ್ ಪಡೆದು ರೈತರನ್ನು ವಂಚಿಸುತ್ತಿದ್ದಾರೆ. 1000 ಕೆಜಿಗೆ 100 ರೂ. ಕಮಿಷನ್ ಪಡೆಯುತ್ತಾರೆ. ಸೂಕ್ತ ಬೆಲೆ ಸಿಗದೆ ಕಂಗಾಲಾಗಿರುವ ರೈತರಿಂದ ದುಬಾರಿ ಕಮಿಷನ್ ಪಡೆದು ಮತ್ತಷ್ಟು ಸಂಕಷ್ಟಕ್ಕೆ ದೂಡಲಾಗುತ್ತಿದೆ. ಕೂಡಲೆ ಜಿಲ್ಲಾ ಉಸ್ತುವಾರಿ ಸಚಿವರು ಮದ್ಯ ಪ್ರವೇಶಿಸಿ ರೈತರ ಹಿತ ಕಾಪಾಡಬೇಕು. ಮಿತಿ ಮೀರುತ್ತಿರುವ ದಳ್ಳಾಳಿಗಳ ಹಾವಳಿಯನ್ನು ನಿಯಂತ್ರಿಸಬೇಕು ಎಂದು ಪ್ರತಿಭಟನಾ ಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಹಲವಾರು ರೈತರು ಪಾಲ್ಗೊಂಡಿದ್ದರು.

Translate »