ಅದೃಷ್ಟದಾಟದಲ್ಲಿ ‘ಕೈ’ಗೊಲಿದ ಮೈಸೂರು ಎಪಿಎಂಸಿ ಅಧ್ಯಕ್ಷ ಸ್ಥಾನ
ಮೈಸೂರು

ಅದೃಷ್ಟದಾಟದಲ್ಲಿ ‘ಕೈ’ಗೊಲಿದ ಮೈಸೂರು ಎಪಿಎಂಸಿ ಅಧ್ಯಕ್ಷ ಸ್ಥಾನ

October 28, 2018

ಮೈಸೂರು: ದೋಸ್ತಿ ಪಕ್ಷಗಳಿಗೆ ಪ್ರತಿಷ್ಟೆಯಾಗಿ, ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರಿನ ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾ ವಣೆಯಲ್ಲಿ ಲಾಟರಿ ಮೂಲಕ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿದೆ. ಜೆಡಿಎಸ್ ಉಪಾಧ್ಯಕ್ಷ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ.

ಮೈಸೂರು-ನಂಜನಗೂಡು ಮುಖ್ಯರಸ್ತೆಯ ಬಂಡಿಪಾಳ್ಯದಲ್ಲಿರುವ ಎಪಿಎಂಸಿ ಕಚೇರಿಯಲ್ಲಿ ತಹಶೀಲ್ದಾರ್ ಟಿ.ರಮೇಶ್ ಬಾಬು ಸಮ್ಮುಖದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಪ್ರಭುಸ್ವಾಮಿ ಎಪಿಎಂಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದರೆ, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಜವರಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡೂ ಸ್ಥಾನವನ್ನು ಸುಲಭವಾಗಿ ತನ್ನ ಮಡಿಲಿಗೆ ಹಾಕಿಕೊಳ್ಳುವುದಕ್ಕೆ ಜೆಡಿಎಸ್‍ಗೆ ಸಂಖ್ಯಾಬಲದಿಂದಾಗಿ ಅವಕಾಶವಿದ್ದರೂ ಅಧ್ಯಕ್ಷ ಸ್ಥಾನ ಅದೃಷ್ಟದಾಟದಲ್ಲಿ ಕೈತಪ್ಪಿದೆ. ಜೆಡಿಎಸ್ 7 ಹಾಗೂ ಕಾಂಗ್ರೆಸ್ 6 ಸದಸ್ಯರ ಬಲ ಹೊಂದಿವೆ. ಇಂದು ನಿಯೋಜನೆಗೊಂಡ ಮೂವರು ನಾಮನಿರ್ದೇಶಿತರಲ್ಲಿ ಎರಡು ಸ್ಥಾನ ಜೆಡಿಎಸ್‍ಗೆ, ಒಂದು ಸ್ಥಾನ ಕಾಂಗ್ರೆಸ್‍ಗೆ ಒಲಿದಿತ್ತು. ಇದರಿಂದ ಜೆಡಿಎಸ್ ಬಲ 9ಕ್ಕೆ ಹಾಗೂ ಕಾಂಗ್ರೆಸ್ ಸದಸ್ಯರ ಬಲ 7ಕ್ಕೆ ಹೆಚ್ಚಿತ್ತು. ಕಾಂಗ್ರೆಸ್‍ಗಿಂತ ಎರಡು ಸ್ಥಾನ ಗಳು ಹೆಚ್ಚಿಗೆ ಇದ್ದ ಕಾರಣ ಎರಡೂ ಸ್ಥಾನ ಗಳಿಗೂ ಜೆಡಿಎಸ್ ಅಭ್ಯರ್ಥಿಗಳ ಗೆಲುವು ನಿರಾಳ ಎಂದೇ ಭಾವಿಸಲಾಗಿತ್ತು. ಆದರೆ ಜೆಡಿಎಸ್ ಸದಸ್ಯರೊಬ್ಬರು ಮತದಾನದ ವೇಳೆ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬ ಲಿಸಿದ್ದರಿಂದ ಎರಡು ಪಕ್ಷಗಳ ಅಭ್ಯರ್ಥಿ ಗಳೂ ಸಮಬಲ ಸಾಧಿಸಿದರು.

ಲಾಟರಿಯಲ್ಲಿ ಕಾಂಗ್ರೆಸ್‍ಗೆ ಒಲಿದ ಅದೃಷ್ಟ: ಕಾಂಗ್ರೆಸ್‍ಗಿಂತ ಎರಡು ಸದಸ್ಯರು ಹೆಚ್ಚಾಗಿದ್ದರಿಂದ ನಮ್ಮ ಪಕ್ಷಕ್ಕೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಒಲಿಯುವುದು ಖಚಿತ ಎಂದು ಇಂದು ಬೆಳಗ್ಗಿನಿಂದಲೇ ಜೆಡಿಎಸ್ ಮುಖಂಡರು ಸಂಭ್ರಮದಲ್ಲಿದ್ದರು. ಆದರೆ ಚುನಾವಣೆಯ ವೇಳೆ ಓರ್ವ ಸದಸ್ಯ ಜೆಡಿಎಸ್‍ಗೆ ಕೈ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ಮತದಾನ ಮಾಡಿದ್ದರಿಂದ ಜೆಡಿಎಸ್‍ಗೆ ಹಿನ್ನಡೆಯಾಯಿತು. ಆದರೆ ಲಾಟರಿ ಮೂಲಕವಾದರೂ ಜೆಡಿಎಸ್ ಅಭ್ಯರ್ಥಿಗೆ ವಿಜಯಮಾಲೆ ಒಲಿಯಬಹುದು ಎಂದು ಕುತೂಹಲದಿಂದ ಹಾತೊರೆಯುತ್ತಿದ್ದ ಜೆಡಿಎಸ್ ಮುಖಂಡರಿಗೆ ಕೊನೆಗೆ ಸೋಲಾಯಿತು. ಅಂತಿಮವಾಗಿ ಲಾಟರಿ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಪ್ರಭುಸ್ವಾಮಿ ಅವರಿಗೆ ಜಯ ಲಭಿಸಿತು.

ಉಪಾಧ್ಯಕ್ಷ ಆಯ್ಕೆ: ಇಂದು ಬೆಳಿಗ್ಗೆ ಎಪಿಎಂಸಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ, ಹಾಲಿ ಎಪಿಎಂಸಿ ಅಧ್ಯಕ್ಷ ಎಸ್.ಸಿದ್ದೇಗೌಡ(ಮಾವಿನಹಳ್ಳಿ), ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕೆ.ಪ್ರಭುಸ್ವಾಮಿ ಉಮೇದುವಾರಿಕೆ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‍ನಿಂದ ಜವರಪ್ಪ, ಕಾಂಗ್ರೆಸ್‍ನಿಂದ ಸಾವಿತ್ರಮ್ಮ ನಾಮಪತ್ರ ಸಲ್ಲಿಸಿದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳಿಗೂ ತಲಾ 8 ಮತ ಚಲಾವಣೆಯಾದರೆ, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಜವರಪ್ಪ ಅವರಿಗೆ 9 ಮತ ಹಾಗೂ ಕಾಂಗ್ರೆಸ್‍ನ ಸಾವಿತ್ರಮ್ಮ ಅವರಿಗೆ 7 ಮತ ಚಲಾವಣೆಯಾದವು. ಎರಡು ಮತ ಹೆಚ್ಚಾಗಿ ಪಡೆದ ಜವರಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾದರು.

Translate »